Malur poll votes Recount: ನಾಳೆ ಮಾಲೂರು ಕ್ಷೇತ್ರದ ಮರು ಮತ ಎಣಿಕೆ ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆಯಲಿ: ಛಲವಾದಿ ನಾರಾಯಣಸ್ವಾಮಿ ಆಗ್ರಹ
Malur Assembly Constituency: ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಹಿನ್ನೆಲೆಯಲ್ಲಿ ಸೋಮವಾರ ಕೋಲಾರದ ಜಿಲ್ಲಾಧಿಕಾರಿಗಳನ್ನು ಬಿಜೆಪಿ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಹಳ ಕಡಿಮೆ ಅಂತರದಲ್ಲಿ ಅಭ್ಯರ್ಥಿ ಸೋಲು- ಗೆಲುವು ಆಗಿದೆ. ಯಾವುದೇ ಎಣಿಕೆ ನಡೆಯುವಾಗ ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆಯುತ್ತದೆ. ಇಡೀ ರಾಜ್ಯದ ಇತರ ಕ್ಷೇತ್ರಗಳ ಕ್ಯಾಮೆರಾ ದಾಖಲಾತಿ ಇದೆ. ಆದರೆ, ಮಾಲೂರಿನದು ಯಾಕೆ ಇಲ್ಲ ಎಂದು ಪ್ರಶ್ನಿಸಿದ್ದಾರೆ.
ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆಯನ್ನು ನಿಷ್ಪಕ್ಷಪಾತವಾಗಿ ಮಾಡಬೇಕು ಎಂದು ಕೋಲಾರ ಡಿಸಿಗೆ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ಬಿಜೆಪಿ ನಿಯೋಗ ಮನವಿ ಸಲ್ಲಿಸಿತು. -
ಕೋಲಾರ, ನ.10: ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ನಾಳೆ (ನ.11) ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ (Malur poll votes Recount) ಕೋಲಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯಲಿದೆ. ನಿಷ್ಪಕ್ಷಪಾತ ಮತ್ತು ನ್ಯಾಯಯುತವಾಗಿ ಮತ ಮರು ಎಣಿಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಡಿಸಿಗೆ ಮನವಿ ಸಲ್ಲಿಸಿರುವುದಾಗಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ತಿಳಿಸಿದ್ದಾರೆ.
ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆಯ ಕುರಿತು ಸೋಮವಾರ ಕೋಲಾರದ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಬಿಜೆಪಿ ನಿಯೋಗ ಮನವಿ ಸಲ್ಲಿಸಿದೆ. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಹಳ ಕಡಿಮೆ ಅಂತರದಲ್ಲಿ ಅಭ್ಯರ್ಥಿ ಸೋಲು- ಗೆಲುವು ಆಗಿದೆ. ಆ ಸಂದರ್ಭದಲ್ಲಿ ಕೆಲವರ ಮಧ್ಯಪ್ರವೇಶದ ಕಾರಣದಿಂದ ನಮ್ಮ ಅಭ್ಯರ್ಥಿ ಸೋತಿದ್ದು, ಮರು ಎಣಿಕೆ ಮಾಡಿರಲಿಲ್ಲ ಎಂದು ಹೇಳಿದರು.
ಕೊನೆ ಕ್ಷಣದಲ್ಲಿ ನಮ್ಮ ಏಜೆಂಟರನ್ನು ಒತ್ತಾಯದಿಂದ ಹೊರದಬ್ಬಿದ್ದರು. ಈ ಎಲ್ಲ ಕಾರಣದಿಂದ ನಮಗೂ ಅನುಮಾನ ಇತ್ತು. ಅದರಿಂದ ಕೋರ್ಟಿಗೆ ಹೋಗಿದ್ದು, ಆದೇಶ ಬಂದಿದೆ. ಬಳಿಕ ಸುಪ್ರೀಂ ಕೋರ್ಟಿಗೂ ಹೋಗಿದೆ ಎಂದು ವಿವರಿಸಿದರು. ಯಾವುದೇ ಎಣಿಕೆ ನಡೆಯುವಾಗ ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆಯುತ್ತದೆ. ಇಡೀ ರಾಜ್ಯದ ಇತರ ಕ್ಷೇತ್ರಗಳ ಕ್ಯಾಮೆರಾ ದಾಖಲಾತಿ ಇದೆ. ಆದರೆ, ಮಾಲೂರಿನದು ಯಾಕೆ ಇಲ್ಲ ಎಂದು ಪ್ರಶ್ನಿಸಿದರು.
ಮತಗಳು ಹೊಂದಾಣಿಕೆ ಆಗುತ್ತಿಲ್ಲ ಎಂಬ ಆಕ್ಷೇಪವಿದೆ. ಇದು ಕೂಡ ಅನುಮಾನಕ್ಕೆ ಕಾರಣ ಎಂದ ಅವರು, ನಿಷ್ಪಕ್ಷಪಾತ ಮತ್ತು ನ್ಯಾಯಯುತವಾಗಿ ಎಲ್ಲವನ್ನೂ ಎಣಿಕೆ ಮಾಡುವುದಾಗಿ ಜಿಲ್ಲಾಧಿಕಾರಿಗಳೂ ಒಪ್ಪಿದ್ದಾರೆ ಎಂದು ತಿಳಿಸಿದರು. ಇಡೀ ದೇಶದಲ್ಲಿ ಏನಾಗುತ್ತಿದೆ? ಕಾಂಗ್ರೆಸ್ ಏನು ಮಾಡುತ್ತಿದೆ? ಅದೆಲ್ಲ ನಮಗೂ ಗೊತ್ತಿದೆ ಎಂದು ಹೇಳಿದರು. ಇದು ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆಯಬೇಕೆಂದು ತಿಳಿಸಿದ್ದೇವೆ. ಒತ್ತಡ ಹಾಕುವವರನ್ನು ದೂರ ಇಡಲು ಕೋರಿರುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಎಸ್, ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥ ನಾರಾಯಣ್, ಮಾಲೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಜುನಾಥ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಚಲಪತಿ ಉಪಸ್ಥಿತರಿದ್ದರು.
ಈ ಸುದ್ದಿಯನ್ನೂ ಓದಿ | Bengaluru Central Jail: ಕೈದಿಗಳಿಗೆ ರಾಜಾತಿಥ್ಯ ಪ್ರಕರಣ: ತನಿಖೆಗೆ ಸಮಿತಿ ರಚನೆ, ಎಎಸ್ಪಿ- ಸೂಪರಿಂಟೆಂಡೆಂಟ್ ಅಮಾನತು
ಕೋರ್ಟ್ ಆದೇಶದ ಹಿನ್ನೆಲೆ ಮರು ಮತ ಎಣಿಕೆ
ಮಾಲೂರು ವಿಧಾನಸಭಾ ಕ್ಷೇತ್ರದ ಮತಗಳ ಮರು ಎಣಿಕೆ ಮಂಗಳವಾರ ನಡೆಯಲಿದೆ. ಕ್ಷೇತ್ರದ ಮತಗಳನ್ನು ಮರು ಎಣಿಕೆ ಮಾಡಬೇಕೆಂದು ಹೈಕೋರ್ಟ್ ಆದೇಶ ನೀಡಿತ್ತು. ಆ ಆದೇಶವನ್ನು ಸುಪ್ರೀಂಕೋರ್ಟ್ ಕೂಡ ಎತ್ತಿ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ನಾಳೆ ಮಾಲೂರು ಕ್ಷೇತ್ರದ ಮತಗಳನ್ನು ಮರು ಎಣಿಕೆ ಮಾಡಲು ಕೋಲಾರ ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ. ಕೋಲಾರದ ಟಮಕದಲ್ಲಿರುವ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಮತಗಳ ಮರು ಎಣಿಕೆ ನಡೆಯಲಿದೆ.
ಮರು ಮತಎಣಿಕೆಗೆ ಉಪವಿಭಾಗಾಧಿಕಾರಿ ಡಾ.ಎಚ್.ಪಿ.ಎಸ್. ಮೈತ್ರಿ ಅವರನ್ನು ಚುನಾವಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಇನ್ನು ಕೋಲಾರ, ಬಂಗಾರಪೇಟೆ, ಶ್ರೀನಿವಾಸಪುರ, ಮುಳಬಾಗಿಲು ತಹಸೀಲ್ದಾರ್‌ಗಳನ್ನು ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳಾಗಿ ನೇಮಿಸಲಾಗಿದೆ. ಜಿಲ್ಲಾಧಿಕಾರಿ ಎಂ.ಆರ್.ರವಿ ಸಿದ್ದತೆಗಳನ್ನು ಪರಿಶೀಲಿಸಿದ್ದಾರೆ.
ಇನ್ನೂ ಮರು ಮತ ಎಣಿಕೆಗೆ ಚುನಾವಣಾ ವೀಕ್ಷಕರಾಗಿ ಉತ್ತರ ಪ್ರದೇಶದ ಐಎಎಸ್ ಅಧಿಕಾರಿ ಪ್ರಭು ನಾರಾಯಣ್ ಸಿಂಗ್ ಅವರನ್ನು ಚುನಾವಣಾ ಆಯೋಗ ನೇಮಿಸಿದೆ. ಮತಗಳಲ್ಲಿ 1,650 ಕ್ಕೂ ಹೆಚ್ಚು ಅಂಚೆ ಮತಗಳಿದ್ದು, ನಾಲ್ಕು ಟೇಬಲ್‌ಗಳಲ್ಲಿ ಅಂಚೆ ಮತಗಳನ್ನು ಎಣಿಕೆ ಮಾಡಲಾಗುತ್ತದೆ. ಪ್ರತಿ ಟೇಬಲ್‌ನಲ್ಲೂ 500 ಅಂಚೆ ಮತಗಳನ್ನು ಎಣಿಕೆ ಮಾಡಲಾಗುತ್ತದೆ. ಪ್ರತಿ ಟೇಬಲ್‌ಗೂ ಓರ್ವ ತಹಸೀಲ್ದಾರ್‌ರನ್ನು ನೇಮಿಸಲಾಗಿದೆ.
ಇವಿಎಂ ಮತಗಳನ್ನು 14 ಟೇಬಲ್ ಗಳಲ್ಲಿ ಎಣಿಕೆ ಮಾಡಲಾಗುತ್ತದೆ. ಪ್ರತಿ ಟೇಬಲ್‌ಗೆ ಓರ್ವ ಕೌಂಟಿಂಗ್ ಸೂಪರ್ ವೈಸರ್ ಮತ್ತು ಸಹಾಯಕ ಸಿಬ್ಬಂದಿ ಇರುತ್ತಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ.ನಂಜೇಗೌಡ 248 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೌಡ ವಿರುದ್ಧ ಗೆದ್ದಿದ್ದರು. ಆದರೇ, ಮತ ಎಣಿಕೆಯಲ್ಲಿ ಲೋಪವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಹೈಕೋರ್ಟ್ ಮರು ಮತ ಎಣಿಕೆಗೆ ಆದೇಶ ನೀಡಿತ್ತು.
ಈ ಸುದ್ದಿಯನ್ನೂ ಓದಿ | Pralhad Joshi: ರಾಹುಲ್ ಗಾಂಧಿ ಮಾಲೂರು ವಿಧಾನಸಭಾ ಕ್ಷೇತ್ರದ ಬಗ್ಗೆ ಏಕೆ ಮಾತನಾಡಲ್ಲ? ಜೋಶಿ ಪ್ರಶ್ನೆ
ಹೈಕೋರ್ಟ್ ಆದೇಶವನ್ನು ಹಾಲಿ ಶಾಸಕ ಕೆ.ವೈ.ನಂಜೇಗೌಡ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಸುಪ್ರೀಂಕೋರ್ಟ್, ಶಾಸಕ ಸ್ಥಾನದಿಂದ ನಂಜೇಗೌಡರ ಆಯ್ಕೆ ಅಸಿಂಧುಗೊಳಿಸಿದ್ದ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು. ಆದರೆ, ಸುಪ್ರೀಂಕೋರ್ಟ್ ಕೂಡ ಮತಗಳ ಮರು ಎಣಿಕೆ ನಡೆಯಬೇಕೆಂದು ಆದೇಶ ನೀಡಿತ್ತು.