H D Kumaraswamy: ರೈತರಿಗೆ ಕೊಡಲು ದುಡ್ಡಿಲ್ಲ; ಭಾರತ್ ಜೋಡೋ ಸಂಘಗಳಿಗೆ ₹1 ಸಾವಿರ ಕೋಟಿ!!: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ
ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು; ಕಷ್ಟಪಟ್ಟು ರೈತರು ತೆರಿಗೆ ಕಟ್ಟುತ್ತಿದ್ದಾರೆ. ಅದರ ಜೊತೆಗೆ ಗ್ಯಾರಂಟಿಗಳನ್ನು ಕೊಟ್ಟ ಹಾಗೆ ಕೊಟ್ಟು ವಿಪರೀತ ತೆರಿಗೆಯ ಮೇಲೆ ತೆರಿಗೆ ವಿಧಿಸಿ, ಹತೋಟಿ ಮೀರಿದ ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಿ ಸಾರ್ವಜನಿಕ ರನ್ನು ಅಮಾನವೀಯವಾಗಿ ಸುಲಿಗೆ ಮಾಡಲಾಗುತ್ತಿದೆ. ಈ ಹಣವನ್ನು ಕಾಂಗ್ರೆಸ್ ಸರ್ಕಾರ ಮನಸೋ ಇಚ್ಛೆ ಪೋಲು ಮಾಡುತ್ತಿದೆ ಎಂದು ಪ್ರಹಾರ ನಡೆಸಿದರು.
-
ಮೈಸೂರು: ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದ್ದು, ಸಾರ್ವಜನಿಕರು ಕಟ್ಟುವ ತೆರಿಗೆ ಹಣವನ್ನು ಕೇವಲ ತಮ್ಮ ಪಕ್ಷದ ಕಾರ್ಯಕರ್ತರನ್ನು ಪೋಷಿಸಲು ಮತ್ತು ಗ್ಯಾರಂಟಿ ಯೋಜನೆ(Guarantee Scheme)ಗಳ ಭ್ರಮೆ ಹುಟ್ಟಿಸಲು ಭಾರಿ ಪ್ರಮಾಣದಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ(H D Kumaraswamy) ತೀವ್ರ ವಾಗ್ದಾಳಿ ನಡೆಸಿದರು.
ಮೈಸೂರು ವಿಮಾನ ನಿಲ್ದಾಣ(Mysore Airport)ದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು, ಕಷ್ಟಪಟ್ಟು ರೈತರು ತೆರಿಗೆ ಕಟ್ಟುತ್ತಿದ್ದಾರೆ. ಅದರ ಜೊತೆಗೆ ಗ್ಯಾರಂಟಿಗಳನ್ನು ಕೊಟ್ಟ ಹಾಗೆ ಕೊಟ್ಟು ವಿಪರೀತ ತೆರಿಗೆಯ ಮೇಲೆ ತೆರಿಗೆ ವಿಧಿಸಿ, ಹತೋಟಿ ಮೀರಿದ ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಿ ಸಾರ್ವಜನಿಕರನ್ನು ಅಮಾನವೀಯವಾಗಿ ಸುಲಿಗೆ ಮಾಡಲಾಗುತ್ತಿದೆ. ಈ ಹಣವನ್ನು ಕಾಂಗ್ರೆಸ್ ಸರ್ಕಾರ ಮನಸೋಇಚ್ಛೆ ಪೋಲು ಮಾಡುತ್ತಿದೆ ಎಂದು ಪ್ರಹಾರ ನಡೆಸಿದರು.
ರಾಜ್ಯದ ಜನರು ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಸರ್ಕಾರದಲ್ಲಿ ಅಭಿವೃದ್ಧಿಪರ ಯೋಜನೆಗಳು ಸಂಪೂರ್ಣ ಕುಂಠಿತವಾಗಿವೆ. ಸಾರ್ವಜನಿಕರ ತೆರಿಗೆ ಹಣವನ್ನು ಕಂಡಕಂಡಲ್ಲಿ ಪೋಲು ಮಾಡಲಾಗುತ್ತಿದೆ. 'ಭಾರತ್ ಜೋಡೋ'(Bharath Jodo) ಸಂಘಗಳ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರತಿ ಪಂಚಾಯತ್ ಮತ್ತು ವಾರ್ಡ್ ಮಟ್ಟದಲ್ಲಿ ತಲಾ ₹10 ಲಕ್ಷ ಅನುದಾನ ಘೋಷಿಸುವ ಅಗತ್ಯವೇನಿತ್ತು? ಎಂದು ಅವರು ಪ್ರಶ್ನಿಸಿದರು.
ರಾಜ್ಯವು ತೀವ್ರ ಬರಗಾಲ ಎದುರಿಸುತ್ತಿದೆ. ಅನೇಕ ಭಾಗಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯಲು ನೀರು ಕೂಡ ಸಿಗುತ್ತಿಲ್ಲ. ಮೇವಿಗೆ ಹಾಹಾಕಾರ ಶುರುವಾಗಿದೆ. ಈ ಸರ್ಕಾರದಲ್ಲಿ ಹಣವಿಲ್ಲ ಎಂಬು ದು ಅದರ ಕಾರ್ಯ ವೈಖರಿಯನ್ನು ನೋಡಿದರೆ ಅರ್ಥವಾಗುತ್ತಿದೆ. ಆದರೆ ಕಾರ್ಯಕರ್ತರನ್ನು ಸಾಕಲು ಜನರನ್ನೇ ಸುಲಿಗೆ ಮಾಡಿ ಹಣ ಸಂಗ್ರಹ ಮಾಡಲಾಗುತ್ತಿದೆ ಎಂದು ದೂರಿದರು.
ರಸ್ತೆ, ಕುಡಿಯುವ ನೀರು, ಚರಂಡಿ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಕೊಡಿ ಎಂದು ಶಾಸಕರು ಬೇಡಿಕೊಂಡರೂ ಸರ್ಕಾರ ಕೊಡುತ್ತಿಲ್ಲ. ಆದರೆ ಭಾರತ ಜೋಡೋ ಸಂಘಗಳಿಗೆ ಕೊಡಲು ಸರ್ಕಾರದಲ್ಲಿ ಹಣವಿದೆ! ಇದೆಂತಹ ವಿಪರ್ಯಾಸ ಎಂದು ಸಚಿವರು ಪ್ರಶ್ನಿಸಿದರು.
ಸಾರ್ವಜನಿಕರ ತೆರಿಗೆ ಹಣವನ್ನು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ ಸಚಿವ ಕುಮಾರಸ್ವಾಮಿ(Minister Kumaraswamy) ಅವರು; ಸುಮಾರು ₹1 ಸಾವಿರ ಕೋಟಿ ಮೊತ್ತವನ್ನು ಭಾರತ್ ಜೋಡೋ ಸಂಘಗಳಿಗೆ ಸುರಿದು ಪೋಲು ಮಾಡುವುದು ಎಷ್ಟು ಸರಿ? ಎಂದು ಅವರು ಖಾರವಾಗಿ ಕೇಳಿದರು.
ಬರಗಾಲ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲ: ರಾಜ್ಯವು ಅತ್ಯಂತ ಭೀಕರ ಬರಗಾಲ ಎದುರಿಸುತ್ತಿರುವ ಈ ಸಂಕಷ್ಟದ ಸಮಯದಲ್ಲಿ ಸರ್ಕಾರದ ಆದ್ಯತೆಗಳು ಸಂಪೂರ್ಣವಾಗಿ ಹಾದಿ ತಪ್ಪಿವೆ ಎಂಬುದನ್ನು ಅಂಕಿ-ಅಂಶಗಳ ಸಮೇತ ಸಚಿವರು ಬಿಚ್ಚಿಟ್ಟರು.
ಪ್ರಧಾನಮಂತ್ರಿಗಳು ರಾಜ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ NDRF ನಿಯಮಾವಳಿಗಳ ಅಡಿಯಲ್ಲಿ ₹22 ಸಾವಿರ ಕೋಟಿಗಳ ಬರ ಪರಿಹಾರ ನಿಧಿಗಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಬರ ನಿರ್ವಹಣೆಗೆ ದುಡ್ಡಿನ ಕೊರತೆ ಇದೆ ಎಂದು ಸಬೂಬು ಹೇಳುವ ರಾಜ್ಯ ಸರ್ಕಾರವು, ಸುಮಾರು 500 ರಿಂದ 600 ವಿವಿಧ ನಿಗಮ-ಮಂಡಳಿಗಳಿಗೆ ತಮ್ಮದೇ ಪಕ್ಷದ ಕಾರ್ಯಕರ್ತರನ್ನು ನಿರ್ದೇಶಕರನ್ನಾಗಿ ನೇಮಿಸುವ ಮೂಲಕ ದುಂದುವೆಚ್ಚದ ರಾಜಕೀಯ ಪುನರ್ವಸತಿಗೆ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆ(Guarantee Scheme)ಗಳ ಹೆಸರಿನಲ್ಲಿ ಜನಸಾಮಾನ್ಯರ ಬದುಕಿಗೆ ಆರ್ಥಿಕ ಶಕ್ತಿ ತುಂಬುವ ಭ್ರಮೆ ಹುಟ್ಟಿಸಿ, ಪರೋಕ್ಷವಾಗಿ ಅವರ ಮೇಲೆಯೇ ಭಾರೀ ಆರ್ಥಿಕ ಹೊರೆ ಹೇರಲಾಗುತ್ತಿದೆ ಎಂದ ಅವರು; 'ಉಚಿತ ಬಸ್ ಪ್ರಯಾಣ'ದ ಗ್ಯಾರಂಟಿ ಯೋಜನೆಯ ಬಗ್ಗೆ ಪ್ರಸ್ತಾಪಿಸಿ, ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ಗಣನೀಯವಾಗಿ ಏರಿಕೆ ಮಾಡಲಾಗುತ್ತಿದೆ ಎಂದು ದೂರಿದರು.
ಕಳೆದ ವರ್ಷ ಶೇ.33-34 ರಷ್ಟಿದ್ದ ಬಸ್ ದರ ಏರಿಕೆ, ಈ ಬಾರಿ ಶೇ.35-40ವರೆಗೆ ತಲುಪಿದ್ದು, ಜನಸಾಮಾನ್ಯರಿಗೆ ಭಾರೀ ಕಂಟಕವಾಗಿ ಪರಿಣಮಿಸಿದೆ. ಪರಿಣಾಮವಾಗಿ, ರಾಜ್ಯ ಸಾರಿಗೆ ಇಲಾಖೆಯ ನಾಲ್ಕು ನಿಗಮಗಳು ಆರ್ಥಿಕ ನಿರ್ವಹಣೆಯ ಕೊರತೆಯಿಂದಾಗಿ ಅಂದಾಜು ₹9,500 ದಿಂದ ₹10 ಸಾವಿರ ಕೋಟಿಗಳ ಬೃಹತ್ ಸಾಲದ ಸುಳಿಗೆ ಸಿಲುಕಿವೆ ಎಂಬ ವಾಸ್ತವವನ್ನು ಸಚಿವರು ಬಯಲಿಗೆ ತಂದರು.
ತನಿಖಾ ಸಂಸ್ಥೆಗಳ ದಿಕ್ಕುತಪ್ಪಿಸುವ ಯತ್ನ: ವಿರೋಧ ಪಕ್ಷಗಳು ಮಾಡುವ ಗಂಭೀರ ಟೀಕೆ ಗಳನ್ನು ಸರ್ಕಾರ ಅತ್ಯಂತ ಹಗುರವಾಗಿ ಪರಿಗಣಿಸುತ್ತಿದ್ದು, ಭ್ರಷ್ಟಾಚಾರದ ಆರೋಪಗಳಿಗೆ ಸ್ಪಷ್ಟವಾದ ಉತ್ತರ ನೀಡುವ ನೈತಿಕತೆಯನ್ನು ಕಳೆದುಕೊಂಡಿದೆ ಎಂದು ಸಚಿವರು ಗುಡುಗಿದರು.
ಕೆಪಿಎಸ್ಸಿ (KPSC) ಮತ್ತು ಇತರ ಇಲಾಖೆಗಳಲ್ಲಿ ನಡೆದಿರುವ ನೇಮಕಾತಿ ಅಕ್ರಮಗಳ ಕುರಿತು ಜಾರಿ ನಿರ್ದೇಶನಾಲಯ (ED) ಈಗಾಗಲೇ ಆರೋಪ ಪಟ್ಟಿ ಸಲ್ಲಿಸಿದ್ದರೂ, ಸಿಐಡಿ (CID) ತನಿಖೆಯ ನೆಪವೊಡ್ಡಿ ಪ್ರಕರಣಗಳನ್ನು ಮುಚ್ಚಿ ಹಾಕುವ ಹಾಗೂ ತನಿಖೆಯನ್ನು ದಿಕ್ಕುತಪ್ಪಿಸುವ ವ್ಯವಸ್ಥಿತ ಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು.
ರಾಜ್ಯದ ಪ್ರತಿಭಾವಂತ ಯುವಕ- ಯುವತಿಯರ ಭವಿಷ್ಯದ ಜೊತೆ ಈ ಸರ್ಕಾರ ಚೆಲ್ಲಾಟವಾಡು ತ್ತಿದೆ ಹಾಗೂ ಸಾರ್ವಜನಿಕವಾಗಿ ಕೇಳಲಾಗುತ್ತಿರುವ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರಿಸದೆ ಸರ್ಕಾರ ಮೌನ ವಹಿಸಿದೆ ಎಂದು ಕಿಡಿಕಾರಿದರು.
ದಲಿತ ನಾಯಕತ್ವ ಮತ್ತು ರಾಜಕೀಯ ತಾರತಮ್ಯ: ಕಾಂಗ್ರೆಸ್ ಪಕ್ಷದಲ್ಲಿ ದಲಿತ ಸಮುದಾಯದ ನಾಯಕರಿಗೆ ಸಿಗುತ್ತಿರುವ ಸ್ಥಾನಮಾನ ಕೇವಲ ತೋರಿಕೆಯದ್ದಾಗಿದೆ ಎಂದು ಕಟುವಾಗಿ ಟೀಕಿಸಿದ ಸಚಿವರು; ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ದಶಕಗಳೇ ಕಳೆದರೂ ದಲಿತರಿಗೆ ಒಮ್ಮೆಯೂ ಮುಖ್ಯಮಂತ್ರಿ ಸ್ಥಾನ ನೀಡದೆ ವಂಚಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಲಿತರನ್ನು ಕೇವಲ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆಯೇ ಹೊರತು, ಅವರಿಗೆ ನೈಜ ಗೌರವ ನೀಡುವ ಇಚ್ಛಾಶಕ್ತಿ ಈ ಸರ್ಕಾರಕ್ಕೆ ಇಲ್ಲ. ನವದೆಹಲಿಯಲ್ಲಿ ನಡೆದ ಸೋನಿಯಾ ಗಾಂಧಿ (Sonia Gandhi) ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಿಂದುಳಿದ ನಾಯಕ ಸಿದ್ದರಾಮಯ್ಯ(Siddaramaiah) ಅವರನ್ನು 6ನೇ ಸಾಲಿನಲ್ಲಿ ಕೂರಿಸುವ ಮೂಲಕ ಹಿಂದುಳಿದ ನಾಯಕತ್ವವನ್ನು ನಿರ್ಲಕ್ಷಿಸಿ ಅವರಿಗೆ ಬಹಿರಂಗವಾಗಿ ಅಗೌರವ ತೋರಲಾಗಿದೆ ಎಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.
ಹಿರಿಯೂರು ಅಭ್ಯರ್ಥಿ ವಿಚಾರದಲ್ಲಿ ಪ್ರತಿಷ್ಠೆ ಇಲ್ಲ: ಹಿರಿಯೂರು ವಿಧಾನಸಭೆ ಉಪ ಚುನಾವಣೆ(Hiriyur Assembly By-election)ಗೆ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಬಗ್ಗೆ ಎರಡು ಪಕ್ಷಗಳ ನಾಯಕರು ತಮ್ಮ ತಮ್ಮ ಪ್ರತಿಷ್ಠೆಯನ್ನು ಪಕ್ಕಕ್ಕಿಟ್ಟು ಕಾಂಗ್ರೆಸ್ ಪಕ್ಷವನ್ನು ಸೋಲಿಸಲೇಬೇಕು ಎನ್ನುವ ದೃಢ ಸಂಕಲ್ಪದಿಂದ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತೇವೆ ಎಂದು ಸಚಿವ ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು; ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂದು ನಮ್ಮ ಪಕ್ಷದ ಕಾರ್ಯಕರ್ತರು ಹೇಳುತ್ತಿದ್ದಾರೆ. ಅದೇ ರೀತಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸ ಬೇಕೆಂಬ ಅಭಿಪ್ರಾಯ ಅವರಲ್ಲಿಯೂ ಇದೆ. ಇದನ್ನು ತಪ್ಪು ಎನ್ನಲಾಗುವುದಿಲ್ಲ. ನಾಯಕರೆಲ್ಲರೂ ಸೇರಿ ಕುಳಿತು ಚರ್ಚಿಸಿ ಬಹುಮತದ ನಿರ್ಧಾರಕ್ಕೆ ಬರುತ್ತೇವೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಬೇಕು ಎಂಬುದೇ ಮೈತ್ರಿ ಪಕ್ಷಗಳ ಗುರಿಯಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧ ಜನ ವಿರೋಧಿ ಅಲೆ ಎದ್ದಿದೆ. ಬೆಂಗಳೂರು ನಗರ ಮಾತ್ರವಲ್ಲದೆ ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಸರ್ಕಾರದ ವಿರುದ್ಧ ಜನರು ತೀವ್ರ ಆಕ್ರೋಶಗೊಂಡಿದ್ದಾರೆ. ಬೆಲೆ ಏರಿಕೆ, ತೆರಿಗೆ ವಿಧಿಸುವಿಕೆ ಸೇರಿದಂತೆ ಪ್ರತಿಯೊಂದು ಅಗತ್ಯಕ್ಕೂ ಜನರನ್ನು ಸುಲಿಗೆ ಮಾಡುವು ದನ್ನೇ ಸರ್ಕಾರ ನಿತ್ಯ ಕಾಯಕ ಮಾಡಿಕೊಂಡಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಾಡಿನ ಜನರು ಬುದ್ಧಿ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು
ಕಾಂಗ್ರೆಸ್ ಭ್ರಮೆಯಲ್ಲಿದೆ. ಮೈತ್ರಿಯ ಹೊಲದ ಬಗ್ಗೆ ಲಘುವಾಗಿ ಮಾತಾಡುತ್ತಿದೆ. ಈಗಾಗಲೇ ವಿಧಾನ ಪರಿಷತ್ ಚುನಾವಣೆಯಲ್ಲಿ ಮೈತ್ರಿಕೂಟ ಸ್ಪಷ್ಟ ಉತ್ತರ ನೀಡಿದೆ. ಬಹುಶಃ ಕಾಂಗ್ರೆಸ್ ಪಕ್ಷಕ್ಕೆ ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ನಶಿಸಿದೆ ಎನ್ನುವುದು ನನ್ನ ಅಭಿಪ್ರಾಯ ಎಂದರು ಸಚಿವರು.