PM Narendra Modi: ಮೈಸೂರಿನಲ್ಲಿ ಮಾನವೀಯತೆ ಮೆರೆದ ಪ್ರಧಾನಿ ಮೋದಿ; ಅಸ್ವಸ್ಥಗೊಂಡ ವೃದ್ಧ ಕಾರ್ಯಕರ್ತೆಗೆ ಜ್ಯೂಸ್ ಕೊಟ್ಟು ಉಪಚಾರ
PM Modi in Mysuru: ಮೈಸೂರಿನಲ್ಲಿ ನಡೆದ ಕಾಸ್ಮೋಸ್ ಪ್ಲಾನಿಟೋರಿಯಂ ಉದ್ಘಾಟನೆ ಕಾರ್ಯಕ್ರಮದಲ್ಲಿ ನಂಜನಗೂಡು ಮೂಲದ 70 ವರ್ಷದ ಬಿಜೆಪಿ ಹಿರಿಯ ಕಾರ್ಯಕರ್ತೆಯೊಬ್ಬರು ಭಾಗವಹಿಸಿದ್ದರು. ಜನದಟ್ಟಣೆ ಹಾಗೂ ಬಿಸಿಲಿನ ತಾಪದಿಂದಾಗಿ ಅವರು ತೀವ್ರ ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿ ಬೀಳುವ ಸ್ಥಿತಿಯಲ್ಲಿದ್ದರು. ಈ ವೇಳೆ ಅವರ ಆರೋಗ್ಯ ವಿಚಾರಿಸಿ, ಜ್ಯೂಸ್ ತರಿಸಿ ಕೊಡುವ ಮೂಲಕ ಪ್ರಧಾನಿ ಮೋದಿ ಅವರು ಮಾನವೀಯತೆ ಮೆರೆದಿದ್ದಾರೆ.
-
ಮೈಸೂರು: ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು (PM Narendra Modi) ತಮ್ಮ ಸರಳತೆ ಹಾಗೂ ಮಾನವೀಯತೆಯ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಕಾಸ್ಮೋಸ್ ಪ್ಲಾನಿಟೋರಿಯಂ ಉದ್ಘಾಟನೆಗೆ ಶುಕ್ರವಾರ ಆಗಮಿಸಿದ್ದ ವೇಳೆ ಬಿಜೆಪಿಯ ಹಿರಿಯ ಮಹಿಳಾ ಕಾರ್ಯಕರ್ತೆಯೊಬ್ಬರು ಅಸ್ವಸ್ಥಗೊಂಡಿದ್ದರು. ಅವರ ಪರಿಸ್ಥಿತಿಯನ್ನು ಗಮನಿಸಿದ ಪ್ರಧಾನಿಗಳು, ಕಾರ್ಯಕರ್ತೆಗೆ ಜ್ಯೂಸ್ ತರಿಸಿ ನೀಡುವ ಮೂಲಕ ಉಪಚಾರ ಮಾಡಿರುವುದು ಸಾರ್ವಜನಿಕರ ಮೆಚ್ಚಗೆಗೆ ಪಾತ್ರವಾಗಿದೆ.
ಕಾರ್ಯಕ್ರಮದಲ್ಲಿ ಆಗಿದ್ದೇನು?
ಮೈಸೂರಿನಲ್ಲಿ ನಡೆದ ಕಾಸ್ಮೋಸ್ ಪ್ಲಾನಿಟೋರಿಯಂ ಉದ್ಘಾಟನೆ ಕಾರ್ಯಕ್ರಮದಲ್ಲಿ ನಂಜನಗೂಡು ಮೂಲದ 70 ವರ್ಷದ ಬಿಜೆಪಿ ಹಿರಿಯ ಕಾರ್ಯಕರ್ತೆ ಪ್ರೇಮಾ ಕೆ. ಎಂಬುವವರು ಭಾಗವಹಿಸಿದ್ದರು. ಜನದಟ್ಟಣೆ ಹಾಗೂ ಬಿಸಿಲಿನ ತಾಪದಿಂದಾಗಿ ಅವರು ತೀವ್ರ ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿ ಬೀಳುವ ಸ್ಥಿತಿಯಲ್ಲಿದ್ದರು. ಅದನ್ನು ಗಮನಿಸಿದ ಪ್ರಧಾನಿ ಮೋದಿ ಅವರು ಕೂಡಲೇ ಅವರ ಬಳಿ ತೆರಳಿ, ತಮ್ಮ ವೈದ್ಯಕೀಯ ತಂಡವನ್ನು ಸ್ಥಳಕ್ಕೆ ಕರೆಯಿಸಿ ತುರ್ತು ಚಿಕಿತ್ಸೆ ನೀಡುವಂತೆ ಸೂಚಿಸಿದರು.

ಈ ವೇಳೆ ಹಿರಿಯ ಮಹಿಳೆಗೆ ಜ್ಯೂಸ್ ತರಿಸಿ ನೀಡುವ ಮೂಲಕ ಅವರ ಆರೋಗ್ಯ ವಿಚಾರಿಸಿದರು. ಪ್ರೇಮಾ ಅವರು ಸುಧಾರಿಸಿಕೊಂಡ ಬಳಿಕ, 'ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ, ಯಾವುದೇ ಆತಂಕ ಬೇಡ' ಎಂದು ಧೈರ್ಯದ ಮಾತುಗಳನ್ನು ಹೇಳಿ ಪ್ರಧಾನಿಗಳು ಅಲ್ಲಿಂದ ನಿರ್ಗಮಿಸಿದರು. ಪ್ರಧಾನಿಗಳ ಕಾಳಜಿ ಮತ್ತು ಪ್ರೀತಿಯನ್ನು ಕಂಡು ಹಿರಿಯ ಕಾರ್ಯಕರ್ತೆ ಪ್ರೇಮಾ ಅವರು ಭಾವುಕರಾದರು.
ಕಾಸ್ಮೋಸ್ ತಾರಾಲಯವು ಭಾರತದ ವಿಜ್ಞಾನದ ಪಯಣದಲ್ಲಿ ಒಂದು ಹೊಸ ಅಧ್ಯಾಯ: ಪ್ರಧಾನಿ ಮೋದಿ
ಮೈಸೂರು: ದೇಶದಲ್ಲಿ ಅಧ್ಯಾತ್ಮ ಮತ್ತು ವಿಜ್ಞಾನ ಜತೆಜತೆಗೆ ಬಂದಿವೆ. ಮೈಸೂರಿನಲ್ಲಿ ಕಾಸ್ಮೋಸ್ ತಾರಾಲಯ ನಿರ್ಮಾಣವಾಗಿರುವುದು ಹೆಮ್ಮೆಯ ವಿಷಯ. ನಮ್ಮ ದೇಶದ ಯುವ ಪೀಳಿಗೆ ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದರು.
ಮೈಸೂರಿನಲ್ಲಿ ಕಾಸ್ಮೋಸ್ ತಾರಾಲಯ (COSMOS-Mysuru Planetarium) ಉದ್ಘಾಟನೆ ಕಾರ್ಯಕ್ರಮದಲ್ಲಿ ಶುಕ್ರವಾರ ಅವರು ಮಾತನಾಡಿದರು. ಎಲ್ಲರಿಗೂ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ ಅವರು, ಮೊದಲಿಗೆ ತಾಯಿ ಚಾಮುಂಡೇಶ್ವರಿಗೆ ನಮನ ಸಲ್ಲಿಸುತ್ತೇನೆ. ಕೆಲವು ದಿನಗಳ ಹಿಂದೆ ನಾನು ವಿವೇಕ ಸ್ಮಾರಕ ಉದ್ಘಾಟನೆ ಬಂದಿದ್ದೆ, ಈಗ ಕಾಸ್ಮೋಸ್ ತಾರಾಲಯ ಲೋಕಾರ್ಪಣೆಗೆ ಬಂದಿದ್ದೇನೆ. ವಿವೇಕ ಸ್ಮಾರಕ ಮತ್ತು ತಾರಾಲಯ ಈ ದೇಶದ ವೈವಿಧ್ಯತೆ ಬಿಂಬಿಸುತ್ತದೆ ಎಂದು ಹೇಳಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಮೈಸೂರು ವಿವಿ ಆರಂಭವಾಗಿತ್ತು. ಬೆಂಗಳೂರಿನಲ್ಲಿ ಐಐಎಸ್ಸಿ ಸ್ಥಾಪನೆಗೆ ಮೈಸೂರು ರಾಜಮನೆತನ ಸಹಾಯ ಮಾಡಿದೆ. ಇದೀಗ ಮೈಸೂರಿನಲ್ಲಿ ಲೋಕಾರ್ಪಣೆಯಾಗಿರುವ ಕಾಸ್ಮೋಸ್ ತಾರಾಲಯವು ಭಾರತದ ವೈಜ್ಞಾನಿಕ ಪಯಣದಲ್ಲಿ ಒಂದು ಹೊಸ ಅಧ್ಯಾಯವಾಗಿದೆ ಎಂದು ತಿಳಿಸಿದರು.
ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿಯವರು ಭಾರತದ ಖಗೋಳ ವಿಜ್ಞಾನದ ಪರಂಪರೆ ಬಗ್ಗೆ ಮಾತನಾಡುತ್ತಾ, ಆರ್ಯಭಟ, ವರಾಹಮಿಹಿರ, ಭಾಸ್ಕರಾಚಾರ್ಯ ಮತ್ತು ನೀಲಕಂಠ ಸೋಮಯಾಜಿ ಅವರಂತಹ ಪ್ರಾಚೀನ ವಿದ್ವಾಂಸರು ಇಂದಿನ ಅತ್ಯಾಧುನಿಕ ತಂತ್ರಜ್ಞಾನವಿಲ್ಲದೆ ಮಹತ್ವದ ಆವಿಷ್ಕಾರಗಳನ್ನು ಹಾಗೂ ಸಂಕೀರ್ಣ ಲೆಕ್ಕಾಚಾರಗಳನ್ನು ಮಾಡಿದ್ದರು ಎಂಬುದನ್ನು ಅವರು ಸ್ಮರಿಸಿದರು.
ಮೈಸೂರಿನ ತಾರಾಲಯವು ಸುಮಾರು 6,150 ಎಲ್ಇಡಿ ಪ್ಯಾನೆಲ್ಗಳು ಮತ್ತು 4.2 ಕೋಟಿ ಪ್ರತ್ಯೇಕ ಎಲ್ಇಡಿಗಳನ್ನು ದೀಪಗಳನ್ನು ಒಳಗೊಂಡಿರುವ 15 ಮೀಟರ್ ವ್ಯಾಸದ ಓರೆಯಾದ ಗುಮ್ಮಟವನ್ನು ಹೊಂದಿದೆ. ಇದು ಸ್ಕೈ ಥಿಯೇಟರ್, ಪ್ರದರ್ಶನ ಸಭಾಂಗಣಗಳು, ಖಗೋಳಶಾಸ್ತ್ರ ವಸ್ತುಸಂಗ್ರಹಾಲಯ ಹಾಗೂ ತರಬೇತಿ ಸೌಲಭ್ಯಗಳನ್ನು ಒಳಗೊಂಡಿದ್ದು, ಖಗೋಳಶಾಸ್ತ್ರ ಶಿಕ್ಷಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.