MLC H. Vishwanath: ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಹಿರಿಯ ರಾಜಕಾರಣಿ ಎಚ್.ವಿಶ್ವನಾಥ್
ನಾನು ಹಲವು ಬಾರಿ ಚುನಾವಣೆ ಎದುರಿಸಿದಾಗ ಜನರೇ ಹಣ ನೀಡಿ ಆಶೀರ್ವಾದ ಮಾಡಿದ್ದರು. ಈಗ ಹಣ ನೀಡಿ ಚುನಾವಣೆ ಎದುರಿಸುವ ಪರಿಸ್ಥಿತಿ ಇದೆ. ಹೀಗಾಗಿ ಚುನಾವಣಾ ರಾಜಕಾರಣಕ್ಕೆ ವಿದಾಯ ಹೇಳುತ್ತಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿಳಿಸಿದ್ದಾರೆ.
ಎಂಎಲ್ಸಿ ಎಚ್.ವಿಶ್ವನಾಥ್. (ಸಂಗ್ರಹ ಚಿತ್ರ) -
ಮೈಸೂರು: ರಾಜ್ಯದ ಹಿರಿಯ ರಾಜಕಾರಣಿ ಹಾಗೂ ‘ಹಳ್ಳಿಹಕ್ಕಿ’ ಎಂದೇ ಖ್ಯಾತರಾಗಿರುವ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ (MLC H. Vishwanath) ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿರುವ ಅವರು, ಈಗ ಹಣ ನೀಡಿ ಚುನಾವಣೆ ಎದುರಿಸುವ ಪರಿಸ್ಥಿತಿ ಇದೆ. ರಿಯಲ್ ಎಸ್ಟೇಟ್ ನಡೆಸುವವರು ನಿವೇಶನಗಳನ್ನಾದರೂ ಮಾರಾಟ ಮಾಡಿ ಚುನಾವಣೆ ಎದುರಿಸುತ್ತಾರೆ. ಆದರೆ, ನನಗೆ ಒಂದು ಮನೆ ಒಂದು ನಿವೇಶನ ಮಾತ್ರ ಇವೆ. 50 ಕೋಟಿ ಖರ್ಚು ಮಾಡಿ ಚುನಾವಣೆ ಎದುರಿಸುವಷ್ಟು ಶಕ್ತಿ ನನ್ನಲ್ಲಿ ಇಲ್ಲ ಎಂದು ತಿಳಿಸಿದ್ದಾರೆ.
ಮುಂದೆ ನಾನು ಯಾವ ಚುನಾವಣೆಗೂ ಸ್ಪರ್ಧಿಸುವುದಿಲ್ಲ. ನಾನು ಹಲವು ಬಾರಿ ಚುನಾವಣೆ ಎದುರಿಸಿದಾಗ ಜನರೇ ಹಣ ನೀಡಿ ಆಶೀರ್ವಾದ ಮಾಡಿದ್ದರು. ಈಗ ಹಣ ನೀಡಿ ಚುನಾವಣೆ ಎದುರಿಸುವ ಪರಿಸ್ಥಿತಿ ಇದೆ. ಹೀಗಾಗಿ ಚುನಾವಣಾ ರಾಜಕಾರಣಕ್ಕೆ ವಿದಾಯ ಹೇಳುತ್ತಿದ್ದೇನೆ. ಆದರೆ ರಾಜಕೀಯದಲ್ಲಿ ಇರುತ್ತೇನೆ' ಎಂದು ತಿಳಿಸಿದರು.
ಇನ್ನು ನಿವೃತ್ತಿ ಘೋಷಣೆಯ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ವಿಶ್ವನಾಥ್ ತೀವ್ರ ವಾಗ್ದಾಳಿ ನಡೆಸಿದ್ದು, ಪೋಕ್ಸೋ ಪ್ರಕರಣ ಮತ್ತು ಈ ಸಮಯದಲ್ಲಿ ನಡೆಯುತ್ತಿರುವ ಸನ್ಮಾನಗಳು ರಾಜ್ಯದ ಘನತೆಗೆ ಕಪ್ಪುಚುಕ್ಕೆಯಾಗಿ ಪರಿಣಮಿಸಿವೆ ಎಂದಿದ್ದಾರೆ. ಸರ್ಕಾರದ ನಡೆಯನ್ನು ಟೀಕಿಸಿದ ಅವರು, ಸ್ವತಃ ವಕೀಲರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೆಲ್ಲಾ ತಿಳಿಯುತ್ತಿಲ್ಲವೇ? ಎಂದು ಕಿಡಿ ಕಾರಿದರು.
ಪೋಕ್ಸೋ ನಂತಹ ಗಂಭೀರ ಆರೋಪ ಪ್ರಕರಣ ಎದುರಿಸುತ್ತಿರುವ ಸಂದರ್ಭದಲ್ಲಿ ಅಭಿಮಾನೋತ್ಸವ ಮಾಡುವುದು ಎಷ್ಟು ಸರಿ?” ಎಂದು ಮಾಜಿ ಸಿಎಂ ವಿರುದ್ಧ ಕಿಡಿಕಾರಿದ್ದಾರೆ.
ಡಿಜಿಪಿ ರಾಮಚಂದ್ರರಾವ್ ಅಮಾನತು ಆದೇಶ ರದ್ದು; ಹೊಸ ಹುದ್ದೆಗೆ ಮರು ನೇಮಕ ಮಾಡಿ ಸರ್ಕಾರ ಆದೇಶ
ಹಿರಿಯ ಪೊಲೀಸ್ ಅಧಿಕಾರಿ ರಾಮಚಂದ್ರ ರಾವ್ ಅವರ ಮೇಲಿನ ಅಮಾನತು ಆದೇಶ ರದ್ದುಗೊಳಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ವಿಶ್ವನಾಥ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಕು ಮಗಳು ರನ್ಯಾ ರಾವ್ ಚಿನ್ನಸಾಗಣೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಪರಿಣಾಮ ರಾಮಚಂದ್ರರಾವ್ ಅವರನ್ನು ಅಮಾನತು ಮಾಡಲಾಗಿತ್ತು. ಅಲ್ಲದೇ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಸಹ ಕೇಳಿಬಂದಿತ್ತು.
ನ್ಯಾಯ ಕೇಳಲು ಬಂದಿದ್ದ ಮಹಿಳೆಯ ಮೇಲೆ ರಾಮಚಂದ್ರ ರಾವ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ನೀಡಿದ ವರದಿಯಲ್ಲಿ ಆ ವಿಡಿಯೋ ರಾಮಚಂದ್ರರಾವ್ ಅವರದ್ದೇ ಎಂಬುದು ಸಾಬಿತಾದ ಕಾರಣ ಅವರನ್ನು ಸರ್ಕಾರ ಅಮಾನತು ಮಾಡಿತ್ತು. ಇದೀಗ ಏಕಾಏಕಿ ಅವರ ಮೇಲಿನ ಅಮಾನತು ಆದೇಶ ಹಿಂಪಡೆದು ಮತ್ತೆ ಕರ್ತವ್ಯಕ್ಕೆ ನಿಯೋಜಿಸಿರುವುದು ಸರಿಯಲ್ಲ. ಈ ಸರ್ಕಾರದಲ್ಲಿ ನ್ಯಾಯಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.