Dr Rajkumar: ʻಪ್ರಚಾರಕ್ಕಾಗಿ ಮಾತಾಡುವವರ ಕಂಡು ಅಸಹ್ಯವಾಯಿತುʼ; ನಟ ಜಗ್ಗೇಶ್ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದು ಯಾರಿಗೆ?
ಡಾ. ರಾಜ್‌ಕುಮಾರ್ ಸಮಾಧಿ ಕುರಿತ ನಟ ಚೇತನ್ ಅಹಿಂಸಾ ಅವರ ವಿವಾದಾತ್ಮಕ ಹೇಳಿಕೆಗೆ ನಟ ಜಗ್ಗೇಶ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಚಿತ್ರರಂಗಕ್ಕೆ ಅಡಿಪಾಯ ಹಾಕಿದ ಸಾಧಕರ ಬಗ್ಗೆ ಪ್ರಚಾರಕ್ಕಾಗಿ ಹಗುರವಾಗಿ ಮಾತನಾಡುವುದು ಅಸಹ್ಯ ಎಂದು ಜಗ್ಗೇಶ್ ಪರೋಕ್ಷವಾಗಿ ಕಿಡಿಕಾರಿದ್ದಾರೆ.
-
ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಡಾ. ರಾಜ್‌ಕುಮಾರ್ ಅವರಿಗೆ ಎಂತಹ ದೊಡ್ಡ ಅಭಿಮಾನಿ ಎಂಬುದು ಎಲ್ಲರಿಗೂ ಗೊತ್ತಿದೆ. ಆಗಾಗ ಅಣ್ಣಾವ್ರ ಜೊತೆಗಿನ ನೆನಪುಗಳನ್ನು ಜಗ್ಗೇಶ್ ಅವರು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ರಾಜ್‌ಕುಮಾರ್ ಸಮಾಧಿ ಕುರಿತ ನಟ ಚೇತನ್ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಜಗ್ಗೇಶ್.
"ರಾಜಣ್ಣನ ಸಮಾಧಿಯ ಬಗ್ಗೆ ಒಬ್ಬ ನಟ ಆಡಿದ ಮಾತು. ಮನಸ್ಸಿಗೆ ಬಹಳ ನೋವುಂಟು ಮಾಡಿತು" ಎಂದಿರುವ ಜಗ್ಗೇಶ್, "ಒಂದು ಅಥವಾ ಎರಡು ಚಿತ್ರಕ್ಕೆ ಜಗದೇಕವೀರರಂತೆ ಮಾತಾಡಿ ಮಲೀನವಾಗೋ ಸಂಪ್ರದಾಯ ಹುಟ್ಟಿ, ಹಿರಿಯರೆಲ್ಲಾ ಮೂಖರಂತೆ ಯಾರ ತಂಟೆ ಬೇಡವೆಂದು ಉಳಿದುಬಿಟ್ಟಿದ್ದಾರೆ" ಎಂದು ಜಗ್ಗೇಶ್ ತಿರುಗೇಟು ನೀಡಿದ್ದಾರೆ.
ʻಪ್ರಿಯಾಂಕಾ ಚೋಪ್ರಾ ತಟ್ಟೆ ತೊಳೆದರೆ ದೊಡ್ಡ ಸುದ್ದಿ, ನಾನು ರಾಯರ ಮಠದಲ್ಲಿ ಕಸಗುಡಿಸಿದರೆ ಅಣಕʼ- ನಟ ಜಗ್ಗೇಶ್ ಬೇಸರ!
ಜಗ್ಗೇಶ್ ಹಂಚಿಕೊಂಡ ಪೋಸ್ಟ್‌ನಲ್ಲಿ ಏನಿದೆ?
"ಹೋದವರೆಲ್ಲಾ ಒಳ್ಳೆಯವರು ನಮ್ಮ ಹಿರಿಯರು.. ಆ ಹಿರಿಯರಲ್ಲಿ ನಮ್ಮ ತಂದೆ, ತಾಯಿ, ತಾತ, ಅಜ್ಜಿ ವಂಶದ ಪರಂಪರೆಯೇ ಸೇರಿರುತ್ತದೆ ಅಲ್ಲವೇ? ಹಿರಿಯರು ಎಂದ ಮೇಲೆ ನಮ್ಮ ಮನೆಯವರೇ ಅಲ್ಲಾ ಸಂಬಂಧಿಗಳು ಅಥವಾ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ನಮ್ಮ ವಂಶದ ಹಿರಿಯರ ಸಮ ಅಲ್ಲವೇ" ಎಂದು ಜಗ್ಗೇಶ್ ಹೇಳಿದ್ದಾರೆ.
ಇರಲು ಸೂರಿಲ್ಲಾ, ಉದರಕ್ಕೆ ತೃಪ್ತ ಆಹಾರವಿಲ್ಲಾ
"ಇದು ಹೇಳುವ ಕಾರಣ, ರಾಜಣ್ಣನ ಸಮಾಧಿಯ ಬಗ್ಗೆ ಒಬ್ಬ ನಟ ಆಡಿದ ಮಾತು. ಮನಸ್ಸಿಗೆ ಬಹಳ ನೋವುಂಟು ಮಾಡಿತು. ಆತನಿಗೆ ನನ್ನ ಕಿವಿಮಾತು, 1954ರಲ್ಲಿ ಕನ್ನಡ ಚಿತ್ರರಂಗಕ್ಕೆ ನೆಲೆ ಬೆಲೆ ಇಲ್ಲದ ಕಾಲ! ಇರಲು ಸೂರಿಲ್ಲಾ, ಉದರಕ್ಕೆ ತೃಪ್ತ ಆಹಾರವಿಲ್ಲಾ. ಅಂಥ ಸಮಯದಿಂದ ಕನ್ನಡ ಚಿತ್ರರಂಗ ಕಟ್ಟಿ ಬೆಳೆಸಿ ಅರಮನೆಯಂತೆ ಮಾಡಿ ಹೋಗಿದ್ದಾರೆ. ಇಂದು ಅದರ ಬೆಲೆ ಅರಿಯದೆ ಒಂದು ಅಥವಾ ಎರಡು ಚಿತ್ರಕ್ಕೆ ಜಗದೇಕವೀರರಂತೆ ಮಾತಾಡಿ, ಮಲೀನವಾಗೋ ಸಂಪ್ರದಾಯ ಹುಟ್ಟಿ ಹಿರಿಯರೆಲ್ಲಾ ಮೂಖರಂತೆ ಯಾರ ತಂಟೆ ಬೇಡವೆಂದು ಉಳಿದುಬಿಟ್ಟಿದ್ದಾರೆ" ಎಂದು ಜಗ್ಗೇಶ್ ಹೇಳಿದ್ದಾರೆ.
ನಟ ಜಗ್ಗೇಶ್ ಅವರ ಟ್ವೀಟ್
ಹೋದವರೆಲ್ಲಾ ಒಳ್ಳೆಯವರು ನಮ್ಮ ಹಿರಿಯರು 🙏
— ನವರಸನಾಯಕ ಜಗ್ಗೇಶ್ (@Jaggesh2) May 7, 2026
ಆ ಹಿರಿಯರಲ್ಲಿ ನಮ್ಮ ತಂದೆ ತಾಯಿ ತಾತ ಅಜ್ಜಿ ವಂಶದ ಪರಂಪರೆಯೇ ಸೇರಿರುತ್ತದೆ ಅಲ್ಲವೆ?
ಹಿರಿಯರು ಎಂದ ಮೇಲೆ ನಮ್ಮ ಮನೆಯವರೆ ಅಲ್ಲಾ ಸಂಬಂದಿಗಳು ಅಥವ ಯಾವುದೆ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ನಮ್ಮ ವಂಶದ ಹಿರಿಯರ ಸಮ ಅಲ್ಲವೆ..!!
ಇದು ಹೇಳುವ ಕಾರಣ ರಾಜಣ್ಣನ ಸಮಾಧಿಯ ಬಗ್ಗೆ ಒಬ್ಬ ನಟ ಆಡಿದ ಮಾತು… pic.twitter.com/mfnFUjsDEX
ಆ ಚಿಕ್ಕಮನಸ್ಸು ಕಂಡು ಅಸಹ್ಯವಾಯಿತು
"ಧ್ವನಿ ಎತ್ತಿದರೆ ಸರ್ಕಾರ ಬದಲಾಗುತ್ತಿತ್ತು, ಅದು ರಾಜಣ್ಣನ ತಾಕತ್ತು. ಅಂಥ ಸಾಧಕ ಹೋದಾಗ ಇಡಿ ಚಿತ್ರರಂಗ, ಸರ್ಕಾರ ಒಟ್ಟುಗೂಡಿ ಅವರ ಶ್ರಮಕ್ಕೆ ಗೌರವ ನೀಡಲು ಅವರ ಕೊನೆಯ ಚಿರನಿದ್ರೆಗೆ ಕಲಾವಿದರ ರಂಗಸ್ಥಳವನ್ನ ಪ್ರೀತಿಯ ಹಾಸಿಗೆ ಮಾಡಿ ಮಲಗಿಸಿದ್ದಾರೆ.
ಕಳೆದುಹೋದ ಸಮಯ, ವಿಷಯ, ಪ್ರಚಾರಕ್ಕಾಗಿ ಈಗ ಮಾತಾಡುವ ಚಿಕ್ಕಮನಸ್ಸು ಕಂಡು ಅಸಹ್ಯವಾಯಿತು. ಉತ್ತಮ ಚಿತ್ರಮಾಡಿ ಪ್ರೇಕ್ಷಕರ ರಂಜಿಸಿ ಹೆಸರುಮಾಡಿ (ಪ್ರೇಕ್ಷಕ ಇಷ್ಟಪಟ್ಟರೆ), ಇಲ್ಲದಿದ್ದರೆ ಗಳಿಸಿದ ಅಲ್ಪ ಹೆಸರು ಮಾಸಿ ಜೀವನ ರೋಸಿ ಹೋಗುತ್ತದೆ.. ಸರಿ ಅನ್ನಿಸಿದರೆ ಪಾಲಿಸಿ" ಎಂದಿದ್ದಾರೆ ಜಗ್ಗೇಶ್.