2026ರ ಐಪಿಎಲ್ ಪ್ಲೇಆಫ್ಸ್‌ಗಾಗಿ ಪಾಕಿಸ್ತಾನ ಪ್ರವಾಸವನ್ನು ನಿರಾಕರಿಸಿದ ಆಸ್ಟ್ರೇಲಿಯಾ ಆಟಗಾರರು!
ಆಸ್ಟ್ರೇಲಿಯಾ ತಂಡ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಪ್ರವಾಸಕ್ಕೆ ಪ್ಯಾಟ್ ಕಮಿನ್ಸ್, ಜಾಶ್ ಹೇಝಲ್‌ವುಡ್ ಹಾಗೂ ಮಿಚೆಲ್ ಸ್ಟಾರ್ಕ್ ಇಲ್ಲದೆ ತೆರಳುವ ಸಾಧ್ಯತೆ ಇದೆ. 2026ರ ಐಪಿಎಲ್ ಪ್ಲೇಆಫ್ಸ್ ಹಂತದ ವೇಳೆ ತಮ್ಮ ಫ್ರಾಂಚೈಸಿಗಳ ಪರ ಆಡಲು ಈ ಮೂವರು ಆಟಗಾರರು ಆದ್ಯತೆ ನೀಡುತ್ತಿರುವ ಹಿನ್ನೆಲೆಯಲ್ಲಿ, ಅವರು ರಾಷ್ಟ್ರೀಯ ತಂಡದ ಪ್ರವಾಸವನ್ನು ಕಳೆದುಕೊಳ್ಳಲಿದ್ದಾರೆ.
ಪಾಕಿಸ್ತಾನ ಪ್ರವಾಸವನ್ನು ತೊರೆಯಲು ಮುಂದಾದ ಆಸೀಸ್ ಆಟಗಾರರು. -
ನವದೆಹಲಿ: ಭಾರತದಲ್ಲಿ ನಡೆಯುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ತಮ್ಮ-ತಮ್ಮ ತಂಡಗಳ ಪರ ಆಡುವ ಸಲುವಾಗಿ ಆಸ್ಟ್ರೇಲಿಯಾ ತಂಡದ ಹಿರಿಯ ಆಟಗಾರರು ಮುಂಬರುವ ಪಾಕಿಸ್ತಾನ ಪ್ರವಾಸದಿಂದ (AUS vs PAK) ಹಿಂದೆ ಸರಿದಿದ್ದಾರೆಂದು ವರದಿಯಾಗಿದೆ. ಹಾಗಾಗಿ ಪಾಕಿಸ್ತಾನದಲ್ಲಿ ನಡೆಯುವ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ, ಜಾಶ್ ಹೇಝಲ್‌ವುಡ್ (Josh Hazlewood), ಪ್ಯಾಟ್ ಕಮಿನ್ಸ್ ಹಾಗೂ ಮಿಚೆಲ್ ಸ್ಟಾರ್ಕ್ ಅನಿಪಸ್ಥಿತಿಯಲ್ಲಿ ಆಡಲಿದೆ. ಹಾಗಾಗಿ ಆಸೀಸ್‌ನ ಪ್ರಮುಖ ಆಟಗಾರರು ತಮ್ಮ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಯಾಗುವುದರ ಬದಲು ಐಪಿಎಲ್ ಟೂರ್ನಿಯ ಪ್ಲೇಆಫ್ಸ್ ಅನ್ನು ಆರಿಸಿದ್ದಾರೆ.
ಮೇ 30 ರಿಂದ ಜೂನ್ 4ರವರೆಗೆ ನಡೆಯುವ ಮೂರು ಪಂದ್ಯಗಳ ಏಕದಿನ ಸರಣಿಯ ಮೂಲಕ ಆಸ್ಟ್ರೇಲಿಯಾ ತಂಡದ ಪಾಕಿಸ್ತಾನದ ವೈಟ್ ಬಾಲ್ ಪ್ರವಾಸ ಶುರುವಾಗಲಿದೆ. ಇದಾದ ಬಳಿಕ ಆಸ್ಟ್ರೇಲಿಯಾ ತಂಡ ಜೂನ್ 9 ರಂದು ಆರಂಭವಾಗುವ ಒಡಿಐ ಹಾಗೂ ಟಿ20ಐ ಸರಣಿಯನ್ನು ಆಡಲು ಬಾಂಗ್ಲಾದೇಶ ಪ್ರವಾಸವನ್ನು ಹಮ್ಮಿಕೊಳ್ಳಲಿದೆ. ಆದರೆ, ಪಾಕಿಸ್ತಾನ ಪ್ರವಾಸದ ವೇಳಾಪಟ್ಟಿಯು ಐಪಿಎಲ್ ಟೂರ್ನಿಯ ವೇಳಾಪಟ್ಟಿಗೆ ಹೊಂದಿಕೊಂಡಿದೆ. ಹಾಗಾಗಿ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ತಂಡವನ್ನು ಆಯ್ಕೆ ಮಾಡುವ ವಿಷಯದಲ್ಲಿ ಆಸ್ಟ್ರೇಲಿಯಾ ಆಯ್ಕೆದಾರರಿಗೆ ತಲೆ ನೋವು ಶುರುವಾಗಿದೆ.
LSG Vs RCB Weather Forecast: ಪ್ಲೇ ಆಫ್ ಸನಿಹದಲ್ಲಿರುವ ಆರ್‌ಸಿಬಿಯ ಇಂದಿನ ಪಂದ್ಯಕ್ಕೆ ಮಳೆ ಭೀತಿ ಇದೆಯೇ?
2026ರ ಐಪಿಎಲ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮೇ 24 ರಂದು ಅಂತ್ಯವಾಗಲಿದೆ. ಪ್ಲೇಆಫ್ಸ್ ಪಂದ್ಯಗಳು ಹಾಗೂ ಫೈನಲ್ ಪಂದ್ಯ ಮೇ 31ರ ವರೆಗೆ ನಡೆಯಲಿವೆ. ಮೇ 23 ರಂದು ಆಸ್ಟ್ರೇಲಿಯಾ ತಂಡ ಪಾಕಿಸ್ತಾನಕ್ಕೆ ಆಗಮಿಸಲಿದೆ. ಐಪಿಎಲ್ ಟೂರ್ನಿಯಲ್ಲಿ ಆಡುತ್ತಿರುವ ಆಸೀಸ್ ಆಟಗಾರರು ಪಾಕಿಸ್ತಾನ ಪ್ರವಾಸಕ್ಕೆ ಅಲಭ್ಯರಾಗಲಿದ್ದಾರೆ.
ಪ್ಯಾಟ್ ಕಮಿನ್ಸ್, ಜಾಶ್ ಹೇಝಲ್‌ವುಡ್ ಹಾಗೂ ಮಿಚೆಲ್ ಸ್ಟಾರ್ಕ್ ಅವರು ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಪ್ರವಾಸದ ಭಾಗವಾಗುವುದು ಅನುಮಾನ ಎಂದು ಕ್ರಿಕೆಟ್.ಕಾಮ್.ಎಯು ವರದಿಗಳು ತಿಳಿಸಿವೆ. ಆ ಮೂಲಕ 2026ರ ಐಪಿಎಲ್ ಟೂರ್ನಿಯ ಪ್ಲೇಆಫ್ಸ್ ಆಡಲು ಈ ಆಟಗಾರರು ಎದುರು ನೋಡುತ್ತಿದ್ದಾರೆ.
ಗಾಯದಿಂದ ಗುಣಮುಖರಾದ ಬಳಿಕ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ಯಾಟ್ ಕಮಿನ್ಸ್ ಮುನ್ನಡೆಸುತ್ತಿದ್ದಾರೆ. ಜಾಶ್ ಹೇಝಲ್‌ವುಡ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರುತ್ತಿದ್ದಾರೆ. ಗಾಯದಿಂದ ಗುಣಮುಖರಾದ ಬಳಿಕ ಮಿಚೆಲ್ ಸ್ಟಾರ್ಕ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
LSG vs RCB: ಇಂದಿನ ಪಂದ್ಯದಲ್ಲಿ ಆರ್‌ಸಿಬಿ-ಲಖನೌ ತಂಡದ ಆಟಗಾರರು ನಿರ್ಮಿಸಬಹುದಾದ ದಾಖಲೆಗಳಿವು
ಐಪಿಎಲ್ ಟೂರ್ನಿಯಲ್ಲಿ ಭಾಗವಾಗಿರುವ ಇನ್ನುಳಿದ ಆಸ್ಟ್ರೇಲಿಯಾ ಆಟಗಾರರು ಅವರವರ ತಂಡಗಳು ಲೀಗ್ ಹಂತವನ್ನು ಹೇಗೆ ಮುಗಿಸಲಿವೆ ಎಂಬುದರ ಆಧಾರದ ಮೇಲೆ ಅವರ ಪಾಕಿಸ್ತಾನ ಪ್ರವಾಸ ನಿರ್ಧಾರವಾಗಲಿದೆ. ಪಂಜಾಬ್ ಕಿಂಗ್ಸ್‌ನ ಕೂಪರ್ ಕನೋಲಿ, ಕ್ಸಿವಿಯರ್ ಬಾರ್ಲೆಟ್ ಹಾಗೂ ಬೆನ್ ದ್ವಾರಶುಯಿಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ನ ಮ್ಯಾಟ್ ಶಾರ್ಟ್ ಅವರು ಕೂಡ ಐಪಿಎಲ್ ಟೂರ್ನಿಯಲ್ಲಿದ್ದಾರೆ.
ಯಾವ ಆಸೀಸ್ ಆಟಗಾರರ ತಂಡಗಳು ಪ್ಲೇಆಫ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾದರೆ, ಆ ಆಟಗಾರರು ಪಾಕಿಸ್ತಾನ ಏಕದಿನ ಸರಣಿಗೆ ಲಭ್ಯರಾಗಲಿದ್ದಾರೆ. ಪ್ಲೇಆಫ್ಸ್ ರೇಸ್‌ನಿಂದ ಬಹುತೇಕ ಹೊರಬಿದ್ದಿರುವ ಲಖನೌ ಸೂಪರ್ ಜಯಂ ತಂಡದ ಮಿಚೆಲ್ ಮಾರ್ಷ್, ಜಾಶ್ ಇಂಗ್ಲಿಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡದ ಕ್ಯಾಮೆರಾನ್ ಗ್ರೀನ್ ಅವರು ಆಸೀಸ್ ಪರ ಆಡಬಹುದು.ಇನ್ನು ಪಾಕಿಸ್ತಾನ ಸೂಪರ್ ಲೀಗ್‌ನಿಂದ ಮರಳಿರುವ ಮಾರ್ನಸ್ ಲಾಬುಶೇನ್ ಹಾಗೂ ಆಡಂ ಝಾಂಪ, ವಿಕೆಟ್ ಕೀಪರ್ ಅಲೆಕ್ಸ್ ಕೇರಿ ಅವರು ಪಾಕಿಸ್ತಾನ ಏಕದಿನ ಸರಣಿಯಲ್ಲಿ ಆಡಬಹುದು.