ಆರ್‌ಎಸ್‌ಎಸ್‌ನಿಂದ ಯಾವುದೇ ಗಲಭೆಗಳಾಗಿಲ್ಲ ಎಂದ ಪ್ರಿಯಾಂಕ್ ಖರ್ಗೆ; ಕಾರಣವನ್ನೂ ವಿವರಿಸಿದ ಗೃಹ ಸಚಿವ ಬಿಜೆಪಿಗೆ ತಿರುಗೇಟು ಕೊಟ್ಟಿದ್ದೇಗೆ?
RSS v/s Priyank Kharge: ಆರ್‌ಎಸ್‌ಎಸ್ ಶಾಖೆ ಹಾಗೂ ಪಥ ಸಂಚಲನದಲ್ಲಿ ಇದುವರೆಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ವಿಧಾನ ಪರಿಷತ್ತಿನಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಉತ್ತರಿಸಿದ್ದಾರೆ. ಇದುವರೆಗೆ ಆರ್‌ಎಸ್‌ಎಸ್ ವಿರುದ್ಧ ಕಿಡಿಕಾರುತ್ತಿದ್ದ ಅವರು ಇದ್ದಕ್ಕಿದ್ದಂತೆ ಅದ್ಯಾಕೆ ಹೀಗಡ ಹೇಳಿದರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಆ. 25: ರಾಜ್ಯದಲ್ಲಿ ಆರ್‌ಎಸ್‌ಎಸ್ (RSS) v/s ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಚರ್ಚೆ ಜೋರಾಗಿದೆ. ಆರ್‌ಎಸ್‌ಎಸ್ ಸಂಘಟನೆಯ ನೋಂದಣಿ ವಿಚಾರವಾಗಿ ಸದಾ ಕಿಡಿಕಾರುತ್ತಲೇ ಬಂದಿರುವ ಪ್ರಿಯಾಂಕ್ ಖರ್ಗೆ ಅವರಿಗೆ ಬಿಜೆಪಿ ತಿರುಗೇಟು ನೀಡುತ್ತಲೇ ಇದೆ. ಆ ಮೂಲಕ ನೋಂದಣಿ ರಾಜಕೀಯ ಜೋರಾಗಿ ಸದ್ದು ಮಾಡುತ್ತಿದೆ. ಈ ಮಧ್ಯೆ ಎಚ್ಚರಿ ಎಂಬಂತೆ ಇದುವರೆಗೆ ಆರ್‌ಎಸ್‌ಎಸ್ ವಿರುದ್ಧ ಧ್ವನಿ ಎತ್ತುತ್ತ ಬಂದಿರುವ ಪ್ರಿಯಾಂಕ್ ಖರ್ಗೆ ಇದೀಗ, ಆರ್‌ಎಸ್‌ಎಸ್ ಶಾಖೆ ಹಾಗೂ ಪಥ ಸಂಚಲನದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ವಿಧಾನ ಪರಿಷತ್ತಿನಲ್ಲಿ ಉತ್ತರಿಸಿದ್ದಾರೆ. ಸದ್ಯ ಈ ಉತ್ತರ ಭಾರಿ ಸಂಚಲನ ಸೃಷ್ಟಿಸಿದೆ. ಬಿಜೆಪಿ ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡಿದೆ.
ಪರಿಷತ್ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಛಲವಾದಿ ನಾರಾಯಣಸ್ವಾಮಿ ಚುಕ್ಕೆ ಗುರುತಿಲ್ಲದ ಪ್ರಶ್ನೆಯನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕೇಳಿದ್ದರು. ರಾಜ್ಯದಲ್ಲಿ ಆರ್‌ಎಸ್‌ಎಸ್ ವಿರುದ್ಧ ಎಷ್ಟು ಪ್ರಕರಣಗಳು ದಾಖಲಾಗಿವೆ? ಸಂಘ ಯಾವುದಾದರೂ ಗಲಭೆ ಪ್ರಕರಣದಲ್ಲಿ ಭಾಗಿಯಾಗಿದೆಯೇ? ಪಥ ಸಂಚಲನದ ಸಂದರ್ಭದಲ್ಲಿ ಯಾವುದಾದರೂ ಅಹಿತಕರ ಘಟನೆ ದಾಖಲಾಗಿದೆಯೇ? ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿರುವ ಪ್ರಿಯಾಂಕ್ ಖರ್ಗೆ, ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಒಂದೇ ವಾಕ್ಯದಲ್ಲಿ ಹೇಳಿದ್ದಾರೆ.
ಪ್ರಿಯಾಂಕ್ ಖರ್ಗೆ ಎಕ್ಸ್ ಪೋಸ್ಟ್:
ಅಸ್ತಿತ್ವದಲ್ಲೇ ಇಲ್ಲದವರ ಬಗ್ಗೆ ಪ್ರಶ್ನೆ ಕೇಳಿದರೆ "ಇಲ್ಲ" ಎನ್ನುವುದೇ ಉತ್ತರವಾಗುತ್ತದೆ!
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) August 25, 2026
ಮೂರ್ಖತನಕ್ಕೆ ಮೂರ್ತರೂಪ ತೋರಿಸಬೇಕೆಂದರೆ @BJP4Karnataka ಪಕ್ಷವನ್ನು ತೋರಿಸಿದರಾಯಿತು!
ನೋಂದಾವಣೆ ಇರದಿದ್ದರೆ, ಕಾನೂನುಬದ್ಧ ಅಸ್ತಿತ್ವ ಇರುವುದಿಲ್ಲ, ಅಸ್ತಿತ್ವ ಇರದಿದ್ದರೆ ಅದರ ಬಗ್ಗೆ ಉತ್ತರ ಕೊಡುವುದಕ್ಕೆ ಸಾದ್ಯವೂ ಇಲ್ಲ!
ಇದು ಸಾಮಾನ್ಯ… https://t.co/OaaN4vMysc
ಇದನ್ನೇ ಬಿಜೆಪಿ ಪ್ರಸ್ತಾವಿಸಿ ಕಾಂಗ್ರೆಸ್, ಪ್ರಿಯಾಂಕ್ ಖರ್ಗೆ ವಿರುದ್ಧ ಮುಗಿ ಬಿದ್ದಿದೆ. ಹಾಗಾದರೆ ಇಷ್ಟು ದಿನ ಆರ್‌ಎಸ್‌ಎಸ್ ವಿರುದ್ಧ ಮಾಡುತ್ತಿದ್ದ ಆರೋಪಗಳಿಗೆ ಆಧಾರವೇನು ಗೃಹಸಚಿವ ಪ್ರಿಯಾಂಕ್ ಖರ್ಗೆ ಅವರೇ, ಉತ್ತರಿಸಿ ಎಂದು ಪೋಸ್ಟ್ ಮಾಡಿದೆ.
ಅರೇ ಇಷ್ಟು ದಿನ ಆರ್‌ಎಸ್‌ಎಸ್ ವಿರುದ್ಧ ಕಿಡಿ ಕಾರುತ್ತಿದ್ದ ಪ್ರಿಯಾಂಕ್ ಖರ್ಗೆ ಇದ್ದಕ್ಕಿದ್ಧಂತೆ ಮೃದುವಾಗಿದ್ದೇಕೆ? ಮನಸ್ಸು ಬಸಲಾಯಿಸಿದರಾ? ಎಂದೆಲ್ಲ ನೀವೆಂದುಕೊಂಡಿದ್ದರೆ ಅದು ತಪ್ಪು ಕಲ್ಪನೆ. ಈ ಪ್ರಕರಣಕ್ಕೆ ಮತ್ತೂ ಒಂದು ಟ್ವಿಸ್ಟ್ ಇದೆ. ಅಸಲಿ ಕಹಾನಿ ಆರಂಭವಾಗೋದೆ ಇಲ್ಲಿಂದ.
ಪ್ರಿಯಾಂಕ್ ಖರ್ಗೆ ತಿರುಗೇಟು?
ಬಿಜೆಪಿ ಟ್ರೋಲ್ ಮಾಡುತ್ತಿದ್ದಂತೆ ಪ್ರಿಯಾಂಕ್ ಖರ್ಗೆ ಖಡಕ್ ಆಗಿಯೇ ತಿರುಗೇಟು ನೀಡಿದ್ದಾರೆ. ಅಸ್ತಿತ್ವದಲ್ಲೇ ಇಲ್ಲದವರ ಬಗ್ಗೆ ಪ್ರಶ್ನೆ ಕೇಳಿದರೆ "ಇಲ್ಲ" ಎನ್ನುವುದೇ ಉತ್ತರವಾಗುತ್ತದೆ ಎಂದ ಅವರು ಆರ್‌ಎಸ್‌ಎಸ್ ನೋಂದಣಿ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ʼʼಅಸ್ತಿತ್ವದಲ್ಲೇ ಇಲ್ಲದವರ ಬಗ್ಗೆ ಪ್ರಶ್ನೆ ಕೇಳಿದರೆ "ಇಲ್ಲ" ಎನ್ನುವುದೇ ಉತ್ತರವಾಗುತ್ತದೆ. ಮೂರ್ಖತನಕ್ಕೆ ಮೂರ್ತರೂಪ ತೋರಿಸಬೇಕೆಂದರೆ ಬಿಜೆಪಿ ಕರ್ನಾಟಕವನ್ನು ತೋರಿಸಿದರಾಯಿತು!ʼʼ ಎಂದು ವಂಗ್ಯವಾಡುವ ಮೂಲಕ ಪೋಸ್ಟ್ ಆರಂಭಿಸಿದ್ದಾರೆ.
ʼʼನೋಂದಾವಣೆ ಇರದಿದ್ದರೆ, ಕಾನೂನುಬದ್ಧ ಅಸ್ತಿತ್ವ ಇರುವುದಿಲ್ಲ, ಅಸ್ತಿತ್ವ ಇರದಿದ್ದರೆ ಅದರ ಬಗ್ಗೆ ಉತ್ತರ ಕೊಡುವುದಕ್ಕೆ ಸಾದ್ಯವೂ ಇಲ್ಲ! ಇದು ಸಾಮಾನ್ಯ ಜ್ಞಾನ. ಆರ್‌ಎಸ್‌ಎಸ್ ವಿರುದ್ಧ ಯಾವುದೇ ಪ್ರಕರಣಗಳಿಲ್ಲದಿರುವುದಕ್ಕೆ ಕಾರಣವೇನೆಂದರೆ, ಅದು ನೋಂದಾಯಿತ ಸಂಸ್ಥೆಯಲ್ಲ, ಅದರ ಸದಸ್ಯರಿಗೆ ಸದಸ್ಯತ್ವದ ಕಾರ್ಡ್ ಕೂಡ ನೀಡುವುದಿಲ್ಲ. ಹೀಗಾಗಿ ಅವರು ಮಾಡುವ ಯಾವುದೇ ಕೃತ್ಯಗಳಿಗೆ ವ್ಯಕ್ತಿಗತವಾಗಿ ಪ್ರಕರಣ ದಾಖಲಿಸಬೇಕಾಗುತ್ತದೆಯೇ ಹೊರತು ಸಂಸ್ಥೆಯ ಮೇಲೆ ಅಲ್ಲ, ಇಷ್ಟಕ್ಕೂ ಅದೊಂದು ಅಧಿಕೃತ ಸಂಸ್ಥೆಯೇ ಅಲ್ಲʼʼ ಎಂದಿದ್ದಾರೆ.
ಆರೆಸ್ಸೆಸ್ ಟೀಕಿಸುವುದು ಬಿಟ್ಟು ನೀವೇನು ಮಾಡಿದ್ದೀರಿ?: ಪ್ರಿಯಾಂಕ್ ಖರ್ಗೆ ವಿರುದ್ಧ ಶೋಭಾ ಕರಂದ್ಲಾಜೆ ಟೀಕೆ
ʼʼಬೆಂಗಳೂರಿನಲ್ಲಿರುವ ಕೇಶವ ಕೃಪಾ ಆರ್‌ಎಸ್‌ಎಸ್ ಹೆಸರಲ್ಲಿದೆಯೇ? ಇಲ್ಲ, ದೆಹಲಿಯ ಕೇಶವಕುಂಜ ಆರ್‌ಎಸ್‌ಎಸ್ ಹೆಸರಲ್ಲಿದೆಯೇ? ಇಲ್ಲ. ಆಸ್ತಿಗಳನ್ನು, ಅಪರಾಧಗಳನ್ನು, ಹೊಣೆಗಾರಿಕೆಯನ್ನು ಯಾವುದನ್ನೂ ತನ್ನ ಹೆಸರಿಗೆ ತೆಗೆದುಕೊಳ್ಳದೆ ನುಣುಚಿಕೊಳ್ಳುವ ತಂತ್ರವನ್ನು ಬಿಟ್ಟು ನೋಂದಣಿ ಮಾಡಿಕೊಂಡು ಲೆಕ್ಕ ಕೊಡಿ ಎಂದು ಕೇಳುತ್ತಿರುವುದು ಇದಕ್ಕಾಗಿಯೇʼʼ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಆರ್‌ಎಸ್‌ಎಸ್-ಪ್ರಿಯಾಂಕ್ ಖರ್ಗೆ ಸಮರ ಸದ್ಯಕ್ಕಂತೂ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ.
ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.