ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Kanakapura murder: ಪ್ರೇಯಸಿಯನ್ನು ಗುಂಡಿಟ್ಟು ಕೊಂದು ತೋಟದಲ್ಲಿ ಹೂತುಹಾಕಿದ ಯುವಕ!

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಕೆಂಪಲನಾಥ ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರೀತಿಸಿದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಸಂಶಯಗೊಂಡ ಯುವಕ, ಆಕೆಯನ್ನು ನಾಡಬಂದೂಕಿನಿಂದ ಗುಂಡಿಕ್ಕಿ ಹತ್ಯೆ ಮಾಡಿ, ಶವವನ್ನು ತೋಟದಲ್ಲಿ ಹೂತುಹಾಕಿದ್ದಾನೆ.

ಪ್ರೇಯಸಿಯನ್ನು ಕೊಂದು ತೋಟದಲ್ಲಿ ಹೂತುಹಾಕಿದ ಯುವಕ!

-

Prabhakara R
Prabhakara R Jul 17, 2026 7:46 PM

ರಾಮನಗರ: ಬಂಟ್ವಾಳದ ಬಸ್ ಸ್ಟ್ಯಾಂಡ್‌ನಲ್ಲಿ ಹಾಡಹಗಲೇ ಯುವತಿಯ ಭೀಕರ ಕೊಲೆ ಮಾಡಿದ ಪ್ರಕರಣ ಮಾಸುವ ಮುನ್ನವೇ ರಾಮನಗರ ಜಿಲ್ಲೆಯಲ್ಲಿ ಅಂತಹುದೇ ಆಘಾತಕಾರಿ ಘಟನೆಯೊಂದು ನಡೆದಿದೆ. ಕನಕಪುರದಲ್ಲಿ (Kanakapura murder) 16 ವರ್ಷದ ಹುಡುಗಿಯನ್ನು ಯುವಕನೊಬ್ಬ ಗುಂಡಿಕ್ಕಿ ಕೊಂದು, ತೋಟದಲ್ಲಿ ಹೂತು ಹಾಕಿರುವುದು ಬೆಳಕಿಗೆ ಬಂದಿದೆ.

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಕೆಂಪಲನಾಥ ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರೀತಿಸಿದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಸಂಶಯಗೊಂಡ ಯುವಕ, ಆಕೆಯನ್ನು ನಾಡಬಂದೂಕಿನಿಂದ ಗುಂಡಿಕ್ಕಿ ಹತ್ಯೆ ಮಾಡಿ, ಶವವನ್ನು ತೋಟದಲ್ಲಿ ಹೂತುಹಾಕಿದ್ದಾನೆ.

ಸಾತನೂರು ಹೋಬಳಿಯ ಕುರುಬಳ್ಳಿ ಗ್ರಾಮದ ನಿವಾಸಿಯಾದ 16 ವರ್ಷದ ಬಾಲಕಿ ಪ್ರಾರ್ಥನ ಮೃತ ದುರ್ದೈವಿ. ಅದೇ ಗ್ರಾಮದ ಸುರೇಶ್ ಎಂಬಾತನ ಜತೆ ಪ್ರಾರ್ಥನ ಪ್ರೀತಿಯಲ್ಲಿದ್ದಳು ಎನ್ನಲಾಗಿದೆ. ಕಳೆದ ಒಂದು ವಾರದ ಹಿಂದೆ ಸುರೇಶ್, ಪ್ರಾರ್ಥನಾಳನ್ನು ಮನೆಯಿಂದ ಕರೆದುಕೊಂಡು ಹೋಗಿದ್ದನು.

ಕೊಲೆಗೆ ಕಾರಣವೇನು?

ಆರೋಪಿ ಸುರೇಶ್ ಮತ್ತು ಪ್ರಾರ್ಥನ ಕೆಂಪಲನಾಥ ಗ್ರಾಮದ ತೋಟವೊಂದರಲ್ಲಿದ್ದರು. ಪ್ರಾರ್ಥನ ಬೇರೊಬ್ಬ ಯುವಕನಿಗೆ ಮೊಬೈಲ್‌ನಲ್ಲಿ ಮೆಸೇಜ್ ಮಾಡುತ್ತಿದ್ದಳು ಎಂಬ ಅನುಮಾನ ಸುರೇಶ್‌ಗೆ ಬಂದಿತ್ತು. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದ್ದು, ಇದರಿಂದ ಆಕ್ರೋಶಗೊಂಡ ಸುರೇಶ್, ಮನೆಯಲ್ಲಿದ್ದ ನಾಡಬಂದೂಕನ್ನು ತೆಗೆದು ಅಪ್ರಾಪ್ತ ಪ್ರಾರ್ಥನಾಳಿಗೆ ಗುಂಡು ಹಾರಿಸಿದ್ದಾನೆ. ಗುಂಡು ತಗುಲಿ ಪ್ರಾರ್ಥನ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಹತ್ಯೆಯ ನಂತರ ಗಾಬರಿಗೊಂಡ ಆರೋಪಿ ಸುರೇಶ್, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಪ್ರಾರ್ಥನಾಳ ಶವವನ್ನು ತೋಟದಲ್ಲೇ ಗುಂಡಿ ತೋಡಿ ಹೂತುಹಾಕಿದ್ದಾನೆ. ಯುವತಿ ನಾಪತ್ತೆಯಾದ ಬಗ್ಗೆ ದೂರು ದಾಖಲಾದ ಬೆನ್ನಲ್ಲೇ ತನಿಖೆ ಕೈಗೆತ್ತಿಕೊಂಡ ಕೋಡಿಹಳ್ಳಿ ಪೊಲೀಸರು, ಆರೋಪಿ ಸುರೇಶನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಭೀಕರ ಸತ್ಯ ಹೊರಬಂದಿದೆ.

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯನ್ನು ಕೊಂದಿದ್ದ ಚೇತನ್‌ ಅರೆಸ್ಟ್‌; ಇಲಿಪಾಷಾಣ ಸೇವಿಸಿದ್ದರಿಂದ ಆಸ್ಪತ್ರೆಗೆ ದಾಖಲು

ಸದ್ಯ ಆರೋಪಿ ಸುರೇಶ್ ಪೊಲೀಸರ ಅತಿಥಿಯಾಗಿದ್ದಾನೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೋಮವಾರ ಮೃತದೇಹವನ್ನು ತಹಸೀಲ್ದಾರ್ ಸಮ್ಮುಖದಲ್ಲಿ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.