ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bidadi Farmers protest: ಬಿಡದಿ ಟೌನ್‌ಶಿಪ್‌ ಸರ್ವೆಗೆ ಬಂದ ಅಧಿಕಾರಿಗಳಿಗೆ ಪೊರಕೆಯಿಂದ ಹೊಡೆದು ಕಳಿಸಿದ ರೈತ ಮಹಿಳೆಯರು!

ತಕ್ಷಣ ಸರ್ವೆ ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ವಾಪಸು ಕರೆಯಿಸಿಕೊಳ್ಳಬೇಕು. ರೈತರ ಮೇಲೆ ನಡೆಸುತ್ತಿರುವ ದೌರ್ಜನ್ಯ ಕೂಡಲೇ ನಿಲ್ಲಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತ ಟಿ ಎಚ್ಚರಿಕೆ ನೀಡಿದ್ದಾರೆ.

ಬಿಡದಿಯಲ್ಲಿ ಅಧಿಕಾರಿಗಳಿಗೆ ಪೊರಕೆಯಿಂದ ಹೊಡೆದ ರೈತರು

ಬಿಡದಿ ತಾಲೂಕಿನ ಮಂಡಲಹಳ್ಳಿಯಲ್ಲಿ ಅಧಿಕಾರಿಗಳನ್ನು ಪೊರಕೆಯಿಂದ ಹೊಡೆದ ರೈತ ಮಹಿಳೆಯರು. -

Prabhakara R
Prabhakara R Jul 13, 2026 3:50 PM

ರಾಮನಗರ: ಬಿಡದಿ ಟೌನ್‌ಶಿಪ್‌ ಭೂಸ್ವಾದೀನಕ್ಕೆ ಅಂತಿಮ ಅಧಿಸೂಚನೆ ಆಗಿರುವ ಮೂರು ಹಳ್ಳಿಗಳ ಸರ್ವೆ ಮಾಡಲು ಬಂದಿದ್ದ ಅಧಿಕಾರಿಗಳಿಗೆ ರೈತ ಮಹಿಳೆಯರು ಪೊರಕೆಯಲ್ಲಿ ಹೊಡೆದು ವಾಪಸ್ ಕಳಿಸಿದ ಘಟನೆ ಬಿಡದಿ ತಾಲೂಕಿನ ಮಂಡಲಹಳ್ಳಿಯಲ್ಲಿ ಸೋಮವಾರ ನಡೆದಿದೆ. ರೈತರ ವಿರೋಧದ ನಡುವೆಯೂ ಭೂಸ್ವಾಧೀನಕ್ಕೆ ಮುಂದಾದ ಅಧಿಕಾರಿಗಳ ವಿರುದ್ಧ ರೈತ ಮಹಿಳೆಯರು (Bidadi Farmers protest) ಪೊರಕೆ ಚಳವಳಿ ನಡೆಸಿ ಆಕ್ರೋಶ ಹೊರಹಾಕಿದರು.

ಸರ್ವೆಗೆ ಬಂದ ಅಧಿಕಾರಿಗಳ ಕಾರುಗಳನ್ನು ರೈತ ಮಹಿಳೆಯರು ಸುತ್ತುವರಿದು, ಪೊರಕೆಯಿಂದ ಹೊಡೆದಿದ್ದಾರೆ. ಈ ವೇಳೆ ಅಧಿಕಾರಿಗಳ ಕಾರುಗಳಿಗೆ ಕೆಲವರು ಕಲ್ಲೆಸೆದಿದ್ದು ವಾಹನಗಳ ಗಾಜುಗಳು ಪುಡಿಪುಡಿಯಾಗಿವೆ. ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಪೊಲೀಸರನ್ನು ಲೆಕ್ಕಿಸದೇ ರೈತರು ಅಧಿಕಾರಿಗಳ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು, ರೈತರ ಬಳಿ ಬಂದು ಸಮಾಲೋಚನೆ ಮಾಡಬೇಕು. ಇಲ್ಲ ಎಂದರೆ ರಾಜ್ಯದ ಪ್ರತಿಯೊಬ್ಬ ರೈತ ಬಿಡದಿ ರೈತರ ಜೊತೆ ನಿಲ್ಲುತ್ತಾನೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತ ಟಿ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ರೈತ ಮುಖಂಡರ ಸಭೆ ಕರೆದಿದ್ದ ಶಾಸಕರು, ಆದಷ್ಟು ಬೇಗ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಬಿಡದಿ ಟೌನ್‌ಶಿಪ್ ಯೋಜನೆ ಕುರಿತ ಮುಂದಿನ ಕ್ರಮಗಳನ್ನು ನಿರ್ಧರಿಸಲಾಗುವುದು ಎಂದು ಪ್ರಕಟಿಸಿದ್ದರು. ಆದರೆ ರಾಜ್ಯ ಸರ್ಕಾರ ಹಾಗೂ ರಾಮನಗರ ಜಿಲ್ಲಾಡಳಿತ ಇಂದು ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಬೃಹತ್ ಪ್ರಮಾಣದ ಪೊಲೀಸ್ ಸರ್ಪಗಾವಲಿನಲ್ಲಿ ಬಲವಂತದ ಭೂ ಸ್ವಾಧೀನ ಪ್ರಕ್ರಿಯೆ ಮುಂದುವರೆಸುವ ಸಲುವಾಗಿ ಸರ್ವೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಕಳುಹಿಸಿದೆ. ಇದು ರೈತ ಸಮುದಾಯಕ್ಕೆ ಮಾಡಿದ ವಿಶ್ವಾಸ ದ್ರೋಹ ಹಾಗೂ ಸರ್ಕಾರಿ ಯಂತ್ರದ ಸ್ಪಷ್ಟ ದುರುಪಯೋಗ ಎಂದು ಕಿಡಿಕಾರಿದ್ದಾರೆ.



Gururaj Gantihole Column: ಬಿಡದಿ ಟೌನ್ʼಶಿಪ್‌ʼಗೆ ಬಿಡದ ಹಠ: ಬೇರೆಲ್ಲೂ ಯಾಕಿಲ್ಲ ?

ಮೊನ್ನೆ ಸಭೆಯಲ್ಲಿ ಪ್ರಕಟಿಸಿದಂತೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಿ ಹೋರಾಡುತ್ತಿರುವ ರೈತರ ಅಹವಾಲು ಆಲಿಸಬೇಕು. ತಕ್ಷಣ ಸರ್ವೆ ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ವಾಪಸು ಕರೆಯಿಸಿಕೊಳ್ಳಬೇಕು. ರೈತರ ಮೇಲೆ ನಡೆಸುತ್ತಿರುವ ದೌರ್ಜನ್ಯ ಕೂಡಲೇ ನಿಲ್ಲಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ರೈತರು ಬಿಡದಿಯ ಮಲೆನಾಡು ಹಸಿರು ಪ್ರದೇಶವನ್ನು ಉಳಿಸಿಕೊಳ್ಳುವ ರೈತರ ಪರವಾಗಿ ಹೋರಾಟಕ್ಕೆ ಕರೆ ಕೊಡಬೇಕಾಗುತ್ತದೆ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಯಶವಂತ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್‌ ಕಿಡಿ

ಬಿಡದಿ ಟೌನ್‌ ಶಿಪ್‌ ಭೂಸ್ವಾಧೀನ ವಿರೋಧಿಸಿ ಬಿಡದಿಯ ರೈತರು "ನಮ್ಮ ಭೂಮಿ, ನಮ್ಮ ಹಕ್ಕು" ಎಂದು ಕಳೆದ 485 ದಿನಗಳಿಂದಲೂ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಇಂದು ಕಾಂಗ್ರೆಸ್‌ ಸರ್ಕಾರ ಏಕಾಏಕಿ ಅಧಿಕಾರಿಗಳನ್ನು ಛೂಬಿಟ್ಟು ಜೆಎಂಸಿ ಸರ್ವೇಗೆ ಮುಂದಾಗಿರುವುದು ಅಕ್ಷಮ್ಯ ಎಂದು ರಾಜ್ಯ ಜೆಡಿಎಸ್‌ ಕಿಡಿಕಾರಿದೆ.

ರಾಜ್ಯ ಸರ್ಕಾರದ ಈ ರೈತ ವಿರೋಧಿ ನಡೆಯನ್ನು ಜೆಡಿಎಸ್ (Janata Dal Secular) ಪಕ್ಷವು ತೀವ್ರವಾಗಿ ಖಂಡಿಸುತ್ತದೆ. ಡಿ.ಕೆ.ಶಿವಕುಮಾರ್ ಸರ್ಕಾರ ಪೊಲೀಸರ ಬಲಪ್ರಯೋಗ ಹಾಗೂ ದಬ್ಬಾಳಿಕೆ ಮೂಲಕ ರೈತರನ್ನು ಒಕ್ಕಲೆಬ್ಬಿಸುತ್ತಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ.

ಜೆಡಿಎಸ್ ಮೊದಲಿನಿಂದಲೂ ರೈತರ ಹಿತರಕ್ಷಣೆಗೇ ಬದ್ಧವಾಗಿದೆ. ರೈತರ ಒಪ್ಪಿಗೆಯಿಲ್ಲದೆ, ಅವರ ಆಕ್ಷೇಪಣೆಗಳನ್ನು ಪರಿಗಣಿಸದೆ ಬಿಡದಿಯಲ್ಲಿ ರೈತರ ಒಂದಿಂಚು ಭೂಮಿಯನ್ನೂ ಮುಟ್ಟಲು ಬಿಡುವುದಿಲ್ಲ. ಕೂಡಲೇ ಈ ಸರ್ವೆ ಭೂಸ್ವಾಧೀನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಮತ್ತು ಬಿಡದಿ ಟೌನ್‌ ಶಿಪ್‌ ಯೋಜನೆಯನ್ನು ಕೈಬಿಡಬೇಕು. ಇಲ್ಲದಿದ್ದರೆ ಜೆಡಿಎಸ್ ಪಕ್ಷವು ರೈತರ ಪರವಾಗಿ ಬೀದಿಗಿಳಿದು ಉಗ್ರ ಹೋರಾಟ ನಡೆಸಲಿದೆ ಎಂದು ರಾಜ್ಯ ಜೆಡಿಎಸ್‌ ಎಚ್ಚರಿಕೆ ನೀಡಿದೆ.