Shidlaghatta News: ಅಧ್ಯಕ್ಷ ಸ್ಥಾನ ನೀಡಿದರೆ ಅಭಿವೃದ್ಧಿಗೆ ಆದ್ಯತೆ: ಜೆಡಿಎಸ್ ಬೆಂಬಲಿತ ಅನಿತಾ
ವಯಸ್ಸಿನಲ್ಲಿ ಹಿರಿಯರಾಗಿದ್ದ ಸದಸ್ಯರಿಗೆ ಮೊದಲ 15 ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನ ನೀಡಲಾ ಗಿದ್ದು, ಬಳಿಕದ 15 ತಿಂಗಳ ಅವಧಿಗೆ ನನಗೆ ಅಧ್ಯಕ್ಷ ಸ್ಥಾನ ನೀಡುವುದಾಗಿ ಶಾಸಕ ಬಿ.ಎನ್. ರವಿಕುಮಾರ್(MLA B.N.Ravikumar) ಅವರ ಸಮ್ಮುಖದಲ್ಲೇ ಭರವಸೆ ನೀಡಲಾಗಿತ್ತು. ಇದೀಗ ಮೊದಲ ಅವಧಿ ಪೂರ್ಣ ಗೊಂಡಿರುವುದರಿಂದ ನೀಡಿದ ಮಾತಿನಂತೆ ಅಧ್ಯಕ್ಷ ಸ್ಥಾನವನ್ನು ನನಗೆ ನೀಡಬೇಕು
-
ಶಿಡ್ಲಘಟ್ಟ: "ಹೊಸಪೇಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನವನ್ನು ನನಗೆ ನೀಡಿದರೆ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ" ಎಂದು ಜೆಡಿಎಸ್ ಬೆಂಬಲಿತ ಈರೆಬಲ ಕ್ಷೇತ್ರದ ಗ್ರಾಮ ಪಂಚಾಯಿತಿ ಸದಸ್ಯೆ ಅನಿತಾ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸಪೇಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ (ಎಸ್‌ಸಿ) ಮಹಿಳಾ ಮೀಸಲು ಕ್ಷೇತ್ರವಾಗಿದ್ದು, ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯ ವೇಳೆ ಜೆಡಿಎಸ್ ಬೆಂಬಲಿತ ಸದಸ್ಯರ ನಡುವೆ ಅಧ್ಯಕ್ಷ ಸ್ಥಾನದ ಅವಧಿ ಹಂಚಿಕೆ ಕುರಿತು ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ತಿಳಿಸಿದರು.
ವಯಸ್ಸಿನಲ್ಲಿ ಹಿರಿಯರಾಗಿದ್ದ ಸದಸ್ಯರಿಗೆ ಮೊದಲ 15 ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನ ನೀಡಲಾ ಗಿದ್ದು, ಬಳಿಕದ 15 ತಿಂಗಳ ಅವಧಿಗೆ ನನಗೆ ಅಧ್ಯಕ್ಷ ಸ್ಥಾನ ನೀಡುವುದಾಗಿ ಶಾಸಕ ಬಿ.ಎನ್. ರವಿಕುಮಾರ್(MLA B.N. Ravikumar) ಅವರ ಸಮ್ಮುಖದಲ್ಲೇ ಭರವಸೆ ನೀಡಲಾಗಿತ್ತು. ಇದೀಗ ಮೊದಲ ಅವಧಿ ಪೂರ್ಣಗೊಂಡಿರುವುದರಿಂದ ನೀಡಿದ ಮಾತಿನಂತೆ ಅಧ್ಯಕ್ಷ ಸ್ಥಾನವನ್ನು ನನಗೆ ನೀಡಬೇಕು ಎಂದು ಆಗ್ರಹಿಸಿದರು.
ಅಧ್ಯಕ್ಷ ಸ್ಥಾನ ದೊರೆತರೆ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ, ಸ್ವಚ್ಛತೆ, ಬೀದಿ ದೀಪ ಸೇರಿದಂತೆ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ, ಪಾರದರ್ಶಕ ಆಡಳಿತದ ಮೂಲಕ ಹೊಸಪೇಟೆ ಗ್ರಾಮ ಪಂಚಾಯಿತಿಯನ್ನು ಮಾದರಿ ಪಂಚಾಯಿತಿಯನ್ನಾಗಿ ರೂಪಿಸಲು ಶ್ರಮಿಸುತ್ತೇನೆ ಎಂದು ಹೇಳಿದರು.
ಶಾಸಕ ಬಿ.ಎನ್.ರವಿಕುಮಾರ್ ಅವರ ಅಭಿವೃದ್ಧಿ ಪರ ಚಿಂತನೆ ಮತ್ತು ಜನಪರ ಕಾರ್ಯಗಳಿಂದ ಪ್ರೇರಣೆ ಪಡೆದಿದ್ದು, ಅದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಪಂಚಾಯಿತಿ ಮಟ್ಟದಲ್ಲೂ ಜಾರಿಗೆ ತರುವ ಉದ್ದೇಶ ಹೊಂದಿದ್ದೇನೆ. ಪಕ್ಷದ ಹಿರಿಯ ಮುಖಂಡರು ಹಾಗೂ ಸಂಬಂಧಪಟ್ಟವರು ಮಧ್ಯಸ್ಥಿಕೆ ವಹಿಸಿ, ಒಪ್ಪಂದದಂತೆ ನನಗೆ ಅಧ್ಯಕ್ಷ ಸ್ಥಾನ ನೀಡಿ ಜನಸೇವೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಅಂಜಿನಪ್ಪ, ಪಿಳ್ಳಮ್ಮ, ಚೆನ್ನಪ್ಪ ಸೇರಿದಂತೆ ಜೆಡಿಎಸ್ ಬೆಂಬಲಿತ ಸದಸ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.