“ಹಿಂದೂ ರಾಷ್ಟ್ರದ ಕಲ್ಪನೆಗೆ ಭಯಪಡುವ ಅಗತ್ಯವಿಲ್ಲ”: ಮತ್ತೊಂದು ವಿವಾದದ ಕಿಡಿ ಹೊತ್ತಿಸಿದ ಯೋಗ ಗುರು ಬಾಬಾ ರಾಮ್‌ದೇವ್
Yoga Guru Baba Ramdev's Remark: ಹಿಂದೂ ರಾಷ್ಟ್ರದ ಕಲ್ಪನೆಗೆ ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಯೋಗ ಗುರು ಬಾಬಾ ರಾಮದೇವ್ ಪ್ರತಿಪಾದಿಸಿದ್ದಾರೆ. ಬಾಬಾ ರಾಮ್‌ದೇವ್ ನೀಡಿರುವ ಈ ಹೇಳಿಕೆ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಯೋಗ ಗುರು ಬಾಬಾ ರಾಮ್‌ದೇವ್ (ಸಂಗ್ರಹ ಚಿತ್ರ) -
ನವದೆಹಲಿ, ಜು. 13: ಹಿಂದೂ ರಾಷ್ಟ್ರದ (Hindu Nation) ಕಲ್ಪನೆಗೆ ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಯೋಗ ಗುರು ಬಾಬಾ ರಾಮದೇವ್ (Yoga Guru Baba Ramdev) ಪ್ರತಿಪಾದಿಸಿದ್ದಾರೆ. ಭಾರತದಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರು ಯಾವುದೇ ರೀತಿಯ ಅಪಾಯವನ್ನು ಎದುರಿಸುತ್ತಿಲ್ಲ ಎಂದೂ ಅವರು ಇದೇ ವೇಳೆ ಹೇಳಿದ್ದಾರೆ. ಸಾಮೂಹಿಕ ಯೋಗ ಶಿಬಿರಗಳು ಮತ್ತು ಆಯುರ್ವೇದ ಉತ್ಪನ್ನಗಳಿಂದ ತಮ್ಮದೇ ಸಾಮ್ರಾಜ್ಯವನ್ನು ನಿರ್ಮಿಸಿರುವ 60 ವರ್ಷದ ಯೋಗ ಗುರು ಬಾಬಾ ರಾಮ್‌ದೇವ್, “ನಮ್ಮ ಪೂರ್ವಜರು ಎಲ್ಲರೂ ಒಂದೇ” ಎಂಬ ಹೇಳಿಕೆ ನೀಡಿದ್ದಾರೆ.
“ಹರಿದ್ವಾರದ ಬಳಿ ಒಂದು ದಿಯೋಬಂದ್ ಇದೆ. 2009ರಲ್ಲಿ ನನ್ನನ್ನು ಅಲ್ಲಿಗೆ ಆಹ್ವಾನಿಸಲಾಯಿತು. ನಮ್ಮ ಧರ್ಮಗಳು ಬೇರೆ ಬೇರೆಯಾಗಿರಬಹುದು, ಆದರೆ ನಮ್ಮ ಪೂರ್ವಜರು ಒಂದೇ ಎಂದು ನಾನು ಅವರಿಗೆ ಹೇಳಿದೆ. ಹಿಂದೂ ರಾಷ್ಟ್ರದ ಪರಿಕಲ್ಪನೆಗೆ ಯಾರೂ ಭಯಪಡುವ ಅಗತ್ಯವಿಲ್ಲ. ನಮ್ಮೆಲ್ಲರ ಪೂರ್ವಜರು ಸನಾತನ ಹಿಂದೂ ಆರ್ಯ-ವೈದಿಕರಾಗಿದ್ದರು. ಇದನ್ನು ನಮ್ಮ ಮುಂದೆಯೇ ಬರೆಯಲಾಗಿದೆ” ಎಂದು ರಾಮದೇವ್ ಹೇಳಿದ್ದಾರೆ. 2009ರಲ್ಲಿ ಉತ್ತರ ಪ್ರದೇಶದ ಇಸ್ಲಾಮಿಕ್ ಸೆಮಿನರಿಗೆ ನೀಡಿದ ಭೇಟಿಯನ್ನು ಅವರು ನೆನಪಿಸಿಕೊಂಡಿದ್ದಾರೆ.
“ಹಿಂದೂ ರಾಷ್ಟ್ರ ಸ್ಥಾಪನೆಯಾದರೆ ಮುಸ್ಲಿಮರು ಎಲ್ಲಿಗೆ ಹೋಗುತ್ತಾರೆ ಎಂದು ಕೆಲವರು ಕೇಳುತ್ತಾರೆ. ನಿಮ್ಮ ಪೂರ್ವಜರ ಸಂಪ್ರದಾಯಗಳನ್ನು ಅಳವಡಿಸಿಕೊಳ್ಳಿ. ನೀವು ಗಡ್ಡ ಬಿಡಬಹುದು ಅಥವಾ ಬೋಳಿಸಿಕೊಳ್ಳಬಹುದು. ನೀವು ಆಯ್ಕೆ ಮಾಡಿದ ಯಾವುದೇ ಉಡುಪನ್ನು ಧರಿಸಬಹುದು. ಆದರೆ ನಿಮ್ಮ ಪೂರ್ವಜರಂತೆಯೇ ವರ್ತಿಸಿ. ಹಿಂದೂಸ್ತಾನದಲ್ಲಿ ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರಿಗೆ ಯಾವುದೇ ಅಪಾಯವಿಲ್ಲ” ಎಂದು ಅವರು ವಿವರಿಸಿದ್ದಾರೆ.
ಭಾರತದಲ್ಲಿ ನೆಲೆಯಾಗುವ ಕನಸಿನೊಂದಿಗೆ ಬಂದಿದ್ದ ಪಾಕ್ ಹಿಂದೂ ಕುಟುಂಬಗಳು ಈಗ ಅತಂತ್ರ
ಬಾಬಾ ರಾಮ್‌ದೇವ್ ನೀಡಿರುವ ಈ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ʼʼಎಲ್ಲರೂ ಸನಾತನಿಗಳೇ ಆಗಿದ್ದರೆ, ಸಮಾಜದಲ್ಲಿ ಇಷ್ಟೊಂದು ವಿಭಜನೆಗಳನ್ನು ಸೃಷ್ಟಿಸಲು ಏಕೆ ಪ್ರಯತ್ನಿಸಲಾಗುತ್ತಿದೆ?ʼʼ ಎಂದು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಪ್ರಶ್ನಿಸಿದರು.
ʼʼಭಯಪಡುವ ಅಗತ್ಯವಿಲ್ಲ ಎಂದು ಬಾಬಾ ರಾಮದೇವ್ ಹೇಳಿದ್ದಾರೆ. ಅವರ ಮನಸ್ಸಿನಲ್ಲಿ ಏನಿದೆ ಅಥವಾ ಅವರು ಯಾವ ಸಂದರ್ಭದಲ್ಲಿ ಇದನ್ನು ಹೇಳುತ್ತಿದ್ದಾರೆಂದು ನಾನು ಹೇಗೆ ಹೇಳಲಿ? ಎಲ್ಲರೂ ಸನಾತನಿಗಳಾಗಿದ್ದರೆ, ಇಲ್ಲಿ ಇಷ್ಟೊಂದು ವಿಭಜನೆಗಳನ್ನು ಸೃಷ್ಟಿಸಲು ಏಕೆ ಪ್ರಯತ್ನಿಸಲಾಗುತ್ತಿದೆ?ʼʼ ಎಂದು ಅವರು ಕೇಳಿದರು.
ʼʼಭಾರತವು ಜಾತ್ಯತೀತ ಗಣರಾಜ್ಯ ಎಂದು ವಿವರಿಸುವ ಸಂವಿಧಾನದ ಮೇಲೆ ದೇಶವು ನಡೆಯುತ್ತದೆʼʼ ಎಂದು ಅಸಾದುದ್ದೀನ್ ಓವೈಸಿಯವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ರಾಷ್ಟ್ರೀಯ ವಕ್ತಾರ ವಾರಿಸ್ ಪಠಾಣ್ ಒತ್ತಿ ಹೇಳಿದರು. ಎನ್‌ಸಿಪಿ (ಶರದ್ ಪವಾರ್ ಬಣ) ರಾಷ್ಟ್ರೀಯ ವಕ್ತಾರ ನಸೀಮ್ ಸಿದ್ದಿಕಿ ಕೂಡ ರಾಮದೇವ್ ಹೇಳಿಕೆಯನ್ನು ಖಂಡಿಸಿದರು.