ಕರ್ನಾಟಕ ಸೇರಿ ವಿವಿಧೆಡೆಗಳ ಎಸ್‌ಐಆರ್ ಅವಧಿ ವಿಸ್ತರಿಸಿದ ಚುನಾವಣಾ ಆಯೋಗ; ರಾಜ್ಯದಲ್ಲಿ ಆಗಸ್ಟ್ 8ರವರೆಗೆ ಮನೆ-ಮನೆ ಭೇಟಿ
SIR: ಭಾರತೀಯ ಚುನಾವಣಾ ಆಯೋಗವು ಕರ್ನಾಟಕ ಸೇರಿ ದೆಹಲಿ, ಪಂಜಾಬ್ ಮತ್ತು ತೆಲಂಗಾಣದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದೆ. ಜುಲೈ 14ರಂದು ಆಂಧ್ರ ಪ್ರದೇಶ ಮತ್ತು ಹರಿಯಾಣದ ಎಸ್‌ಐಆರ್ ಅವಧಿಯನ್ನು ವಿಸ್ತರಿಸಲಾಗಿತ್ತು.
ಸಾಂದರ್ಭಿಕ ಚಿತ್ರ -
ದೆಹಲಿ, ಜು. 15: ಭಾರತೀಯ ಚುನಾವಣಾ ಆಯೋಗವು (ECI) ಬುಧವಾರ (ಜುಲೈ 15) ಕರ್ನಾಟಕ ಸೇರಿ ದೆಹಲಿ, ಪಂಜಾಬ್ ಮತ್ತು ತೆಲಂಗಾಣದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದೆ. ಎಸ್ಐಆರ್ ಪ್ರಕ್ರಿಯೆಯನ್ನು ಸುಮಾರು 10-12 ದಿನಗಳವರೆಗೆ ವಿಸ್ತರಿಸಲಾಗಿದೆ. ಈ ರಾಜ್ಯಗಳಲ್ಲಿ 3ನೇ ಹಂತದ ಎಸ್‌ಐಆರ್ ನಡೆಯುತ್ತಿದೆ. ಜುಲೈ 14ರಂದು ಆಂಧ್ರ ಪ್ರದೇಶ ಮತ್ತು ಹರಿಯಾಣದ ಎಸ್‌ಐಆರ್ ಅವಧಿಯನ್ನು ವಿಸ್ತರಿಸಲಾಗಿತ್ತು.
ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಭಾರತೀಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಸಂದೀಪ್ ಕುಮಾರ್ ಎಸ್‌ಐಆರ್ ಚಟುವಟಿಕೆಗಳ ಪರಿಷ್ಕೃತ ವೇಳಾಪಟ್ಟಿಯನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದಲ್ಲಿ ಬೂತ್ ಮಟ್ಟದ ಅಧಿಕಾರಿಗಳ (BLO) ಮನೆ-ಮನೆ ಭೇಟಿ ಪ್ರಕ್ರಿಯೆಯು ಜುಲೈ 29ರ ಬದಲಾಗಿ ಆಗಸ್ಟ್ 8ರವರೆಗೆ ಮುಂದುವರಿಯಲಿದೆ. ಕರಡು ಮತದಾರರ ಪಟ್ಟಿಯು ಆಗಸ್ಟ್ 5ರ ಬದಲಿಗೆ ಆಗಸ್ಟ್ 17ರಂದು ಪ್ರಕಟವಾಗಲಿದೆ. ಇನ್ನು ಅಂತಿಮ ಮತದಾರರ ಪಟ್ಟಿಯು ಅಕ್ಟೋಬರ್ 7ರ ಬದಲು ಅಕ್ಟೋಬರ್ 19ರಂದು ಹೊರ ಬೀಳಲಿದೆ.
2002ರ ಮಾಹಿತಿ ನಮೂದಿಸುವುದು ಕಡ್ಡಾಯವಲ್ಲ
ತೆಲಂಗಾಣ ಮತ್ತು ಪಂಜಾಬ್‌ನಲ್ಲಿ ಕೊನೆಯ ದಿನಾಂಕವನ್ನು ಜುಲೈ 24ರಿಂದ ಆಗಸ್ಟ್ 3ಕ್ಕೆ ವಿಸ್ತರಿಸಲಾಗಿದೆ. ಕರಡು ಮತದಾರರ ಪಟ್ಟಿ ಜುಲೈ 31ರ ಬದಲಿಗೆ ಆಗಸ್ಟ್ 10ರಂದು ಹೊರ ಬೀಳಲಿದೆ ಮತ್ತು ಅಂತಿಮ ಪಟ್ಟಿ ಅಕ್ಟೋಬರ್ 1ರ ಬದಲಿಗೆ ಅಕ್ಟೋಬರ್ 12ರಂದು ಪ್ರಕಟವಾಗಲಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 19ರಂದು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 5ರ ಬದಲಿಗೆ ಆಗಸ್ಟ್ 17ರಂದು ಪ್ರಕಟಿಸಲಾಗುತ್ತದೆ. ಜುಲೈ 29ರವರೆಗೆ ನಿಗದಿಯಾಗಿದ್ದ ಮನೆ-ಮನೆ ಭೇಟಿ ಆಗಸ್ಟ್ 8 ರವರೆಗೆ ಮುಂದುವರಿಯಲಿವೆ ಎಂದು ಪ್ರಕಟಣೆ ತಿಳಿಸಿದೆ.
ಎಲ್ಲೆಲ್ಲ ನಡೆಯುತ್ತಿದೆ?
3ನೇ ಹಂತದ ಎಸ್‌ಐಆರ್ ಅನ್ನು ದೆಹಲಿ, ಒಡಿಶಾ, ಮಿಜೋರಾಂ, ಸಿಕ್ಕಿಂ, ಮಣಿಪುರ, ಉತ್ತರಾಖಂಡ, ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಹರಿಯಾಣ, ಚಂಡೀಗಢ, ತೆಲಂಗಾಣ, ಪಂಜಾಬ್, ಕರ್ನಾಟಕ, ಮೇಘಾಲಯ, ಮಹಾರಾಷ್ಟ್ರ, ಜಾರ್ಖಂಡ್, ನಾಗಾಲ್ಯಾಂಡ್, ತ್ರಿಪುರ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಹಾಗೂ ದಿಯುವಿನಲ್ಲಿ ನಡೆಸಲಾಗುತ್ತಿದೆ. ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು ಮತದಾರರ ಸಂಖ್ಯೆ 36.73 ಕೋಟಿ ಎಂದು ಅಂದಾಜಿಸಲಾಗಿದೆ.
ಎಸ್‌ಐಆರ್ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್; ಅಧಿಕಾರಿಗಳಿಗೆ ಖಡಕ್ ಸೂಚನೆ
ಚುನಾವಣಾ ಆಯೋಗವು ಈವರೆಗೆ 6 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ಈ ಪೈಕಿ ಶೇಕಡಾ 7.09 ಹೆಸರು ಅಂದರೆ 4.52 ಕೋಟಿಯಲ್ಲಿ 32.08 ಲಕ್ಷ - ಡಿಲೀಟ್ ಮಾಡಲಾಗಿದೆ. ಒಡಿಶಾ, ಮಣಿಪುರ, ಮಿಜೋರಾಂ, ಸಿಕ್ಕಿಂ, ಉತ್ತರಾಖಂಡ, ಮತ್ತು ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಹಾಗೂ ದಿಯುಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.