ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ರಾಮಮಂದಿರದಲ್ಲಿ ನೂರಾರು ಕೋಟಿ ಅವ್ಯವಹಾರದ ಆರೋಪ: ಸುಪ್ರೀಂ ಕೋರ್ಟ್ ತನಿಖೆಗೆ ಮುಂದಾಗಿದ್ದು, ಪ್ರಧಾನಿಗಳು ಮೌನ ಮುರಿದು ಸತ್ಯ ಹೇಳಲಿ: ಲಾಯರ್ ನಾರಾಯಣಸ್ವಾಮಿ ಆಗ್ರಹ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ವಿಚಾರದಲ್ಲಿ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಕೊಡುಗೆಯೂ ಇದೆ ಎಂಬುದನ್ನು ಬಿಜೆಪಿ ಮತ್ತದರ ಅಂಗಸಂಸ್ಥೆಗಳು ಮನಗಾಣ ಬೇಕು. ಕೋಟ್ಯಂತರ ಭಕ್ತರ ದೇಣಿಗೆಯಿಂದ ನಿರ್ಮಾಣಗೊಂಡಿರುವ ಇದು ಸಾರ್ವಜನಿಕ ದೇವಾಲಯ ವಾಗಿದ್ದು, ಅದರ ಹಣಕಾಸಿನ ವ್ಯವಹಾರಗಳ ಲೆಕ್ಕವನ್ನು ಸಾರ್ವಜನಿಕರಿಗೆ ಮುಕ್ತವಾಗಿ ನೀಡಬೇಕಾದ್ದು ಧರ್ಮ

ರಾಮಮಂದಿರದಲ್ಲಿ ನೂರಾರು ಕೋಟಿ ಅವ್ಯವಹಾರದ ಆರೋಪ

-

Profile
Ashok Nayak Jul 15, 2026 10:54 PM

ಚಿಕ್ಕಬಳ್ಳಾಪುರ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ಹುಂಡಿ ಹಣ, ಚಿನ್ನ-ಬೆಳ್ಳಿ ಕಾಣಿಕೆಗಳು ಹಾಗೂ ದೇವಾಲಯದ ಆಸ್ತಿಗಳ ನಿರ್ವಹಣೆಯಲ್ಲಿ ನೂರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳ ಕುರಿತು ಸುಪ್ರೀಂ ಕೋರ್ಟ್ ತನಿಖೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಬಹಿರಂಗಪಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಕಾನೂನು ಘಟಕದ ಮುಖಂಡ ಹಾಗೂ ವಕೀಲ ನಾರಾಯಣಸ್ವಾಮಿ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಶ್ರೀರಾಮ ಕೇವಲ ಬಿಜೆಪಿ, ಆರ್‌ಎಸ್‌ಎಸ್(RSS), ಬಜರಂಗದಳ ಅಥವಾ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi)ಯವರ ಸ್ವತ್ತಲ್ಲ; ಅವರು ದೇಶದ 140 ಕೋಟಿ ಜನರ ನಂಬಿಕೆ ಮತ್ತು ಭಾವನೆಗಳ ಪ್ರತೀಕ" ಎಂದು ಹೇಳಿದರು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ವಿಚಾರದಲ್ಲಿ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಕೊಡುಗೆಯೂ ಇದೆ ಎಂಬುದನ್ನು ಬಿಜೆಪಿ ಮತ್ತದರ ಅಂಗಸಂಸ್ಥೆಗಳು ಮನಗಾಣ ಬೇಕು. ಕೋಟ್ಯಂತರ ಭಕ್ತರ ದೇಣಿಗೆಯಿಂದ ನಿರ್ಮಾಣಗೊಂಡಿರುವ ಇದು ಸಾರ್ವಜನಿಕ ದೇವಾ ಲಯವಾಗಿದ್ದು, ಅದರ ಹಣಕಾಸಿನ ವ್ಯವಹಾರಗಳ ಲೆಕ್ಕವನ್ನು ಸಾರ್ವಜನಿಕರಿಗೆ ಮುಕ್ತವಾಗಿ ನೀಡಬೇಕಾದ್ದು ಧರ್ಮ. ಆದರೆ ದೇವಾಲಯದ ಆಡಳಿತವನ್ನು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂಬ ಆರೋಪದಿಂದ ಪಾರದರ್ಶಕತೆಗೆ ಧಕ್ಕೆಯಾಗಿದೆ ಎಂದು ದೂರಿದರು.

ಇದನ್ನೂ ಓದಿ: Chikkaballapur News: ಡಾ.ಎನ್.ರಾಜಮ್, ಪಂಡಿತ್ ಉಲ್ಲಾಸ್ ಕಾಶಲ್ಕರ್ ಅವರಿಗೆ ಶ್ರೀ ಸತ್ಯ ಸಾಯಿ ಸಂಗೀತ ಶಿರೋಮಣಿ ಪುರಸ್ಕಾರ

ಆರ್.ಜೆ.ಡಿ. ಪಕ್ಷದ ಎಂ.ಪಿ.ಸುಧಾಕರ್ ಲಾಲ್ ರಾಮಮಂದಿರ ಹುಂಡಿ ಅವ್ಯವಹಾರದ ಸಂಬಂಧ ಸಲ್ಲಿಸಿರುವ ಅರ್ಜಿಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ದೇವಾಲಯದ ಆಡಳಿತಕ್ಕೆ ಸಂಬಂಧಿಸಿದ ಸಿಸಿಟಿವಿ ಪೂಟೇಜ್ ಸಹಿತ ಸಂಪೂರ್ಣ ಮಾಹಿತಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ ಎಂದು ಹೇಳಿದ ಅವರು, ಈವಿಚಾರದಲ್ಲಿ ಏನೆಲ್ಲಾ ಬೆಳವಣಿಗೆಗಳು ಆಗಿವೆಯೋ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಬಹಿರಂಗಗೊAಡಿಲ್ಲ ಎಂದು ಆರೋಪಿಸಿದರು.

ರಾಮಲಲ್ಲ ದೇವಾಲಯದಲ್ಲಿದ್ದ ಸುಮಾರು 5 ಕೋಟಿ ಮೌಲ್ಯದ ಬಂಗಾರದ ಪುಟಗಳಲ್ಲಿ ಮುದ್ರಿತ ರಾಮಚರಿತಮಾನಸ ಗ್ರಂಥ ಕಾಣೆಯಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ. ಭಕ್ತರು ಸಮರ್ಪಿ ಸಿದ್ದ ಚಿನ್ನ ಹಾಗೂ ಬೆಳ್ಳಿಯ ಮೂರ್ತಿಗಳನ್ನು ಕರಗಿಸಿ ಗಟ್ಟಿಗಳಾಗಿ ಪರಿವರ್ತಿಸಲಾಗಿದೆ ಎಂಬ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ರಾಮಮಂದಿರ ನಿರ್ಮಾಣಕ್ಕೆ ಸ್ವತಃ ಶಂಕುಸ್ಥಾಪನೆ ನೆರವೇರಿಸಿ ಉದ್ಘಾಟನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಹಾಗೂ ಬಿಜೆಪಿ ರಾಷ್ಟ್ರೀಯ ನಾಯಕತ್ವ ಈ ಆರೋಪಗಳ ಕುರಿತು ಸ್ಪಷ್ಟನೆ ನೀಡಬೇಕು. ವಿರೋಧ ಪಕ್ಷಗಳು ಪ್ರಶ್ನಿಸಿದಾಗ ರಾಜಕೀಯ ಆರೋಪ ಮಾಡುವ ಬದಲು ವಾಸ್ತವಾಂಶವನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಅಧಿಕಾರಕ್ಕೆ ಬರಲು ರಾಮಮಂದಿರದ ಹೆಸರನ್ನು ಬಳಸಿಕೊಂಡಿತು. ಈಗ ದೇವಾಲಯದ ಹಣಕಾಸಿನ ಅವ್ಯವಹಾರದ ಆರೋಪಗಳು ಕೇಳಿ ಬಂದಿರುವಾಗ ಮೌನಕ್ಕೆ ಶರಣಾಗಿರುವುದು ಅತ್ಯಂತ ಆತಂಕಕಾರಿ. ಆರೋಪಗಳು ಸಾಬೀತಾದರೆ ಅದು ಶ್ರೀರಾಮನ ಹೆಸರಿಗೂ ಕೋಟ್ಯಂತರ ಭಕ್ತರ ಭಾವನೆಗಳಿಗೂ ಮಾಡಿದ ಅಪಮಾನವಾಗಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗೌರಿಬಿದನೂರು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮಂಜುನಾಥ್, ಮಂಚೇನಹಳ್ಳಿಯ ತಿರುಮಳಪ್ಪ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ನಾಗರಾಜನ್, ಚಿಕ್ಕಬಳ್ಳಾಪುರ ಕಾಂಗ್ರೆಸ್ ಕಾನೂನು ಘಟಕದ ಮುನಿಕೃಷ್ಣಪ್ಪ, ಶಿವಾರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.