ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SL Bhyrappa: 'ಆವರಣ' ಕಾದಂಬರಿಗಾಗಿ ಬಾನು ಮುಷ್ತಾಕ್ ಮನೆಯಲ್ಲಿ ಒಂದು ವಾರ ಇದ್ದ ಭೈರಪ್ಪ!

Banu Mushtaq: 'ಆವರಣ' ಕಾದಂಬರಿ ಬರೆಯುವ ಮೊದಲು ಮುಸ್ಲಿಮರ ಜನಜೀವನ ಅರಿಯಲು ಎಸ್.ಎಲ್. ಭೈರಪ್ಪ ಅವರು ಬಾನು ಮುಷ್ತಾಕ್ ಅವರ ಮನೆಯಲ್ಲಿ ಒಂದು ವಾರ ಇರುವುದಾಗಿ ಹೇಳಿದರು. ಆಗ ಬಾನು ಮುಷ್ತಾಕ್ ಮನೆಯಲ್ಲಿ ಉಂಟಾದ ತಲ್ಲಣಗಳೇನು? ಈ ಬಗ್ಗೆ ಸಾಹಿತಿ ಬಾನು ಮುಷ್ತಾಕ್ ವಿಸ್ತೃತವಾಗಿ ಬರೆದಿದ್ದಾರೆ.

'ಆವರಣ' ಕಾದಂಬರಿಗಾಗಿ ಬಾನು ಮುಷ್ತಾಕ್ ಮನೆಯಲ್ಲಿ ಒಂದು ವಾರ ಇದ್ದ ಭೈರಪ್ಪ!

-

Prabhakara R Prabhakara R Sep 24, 2025 9:43 PM

| ಬಾನು ಮುಷ್ತಾಕ್, ಸಾಹಿತಿ

ಆವರಣ ಬರೆಯುವುದಕ್ಕೆ ಮುಂಚಿತವಾಗಿ ಎಸ್.ಎಲ್. ಭೈರಪ್ಪನವರು ಹಾಸನದಲ್ಲಿ ಒಂದು ಸಾಹಿತ್ಯಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಆಗಮಿಸಿದ್ದರು. ನಾನು ಕಾರ್ಯಕ್ರಮಕ್ಕೆ ತಡವಾಗಿ ಹೋದೆ. ಆಗ ಅಲ್ಲಿದ್ದ ಕೆಲವರು ಭೈರಪ್ಪನವರು ನನ್ನ ಬಗ್ಗೆ ಒಂದೆರಡು ಸಾರಿ ವಿಚಾರಿಸಿದರು ಎಂದು ಸಂದೇಶವನ್ನು ಕೊಟ್ಟರು. ಕಾರ್ಯಕ್ರಮ ಮುಗಿದ ನಂತರ ನಾನು ಅವರನ್ನು ಸಂಪರ್ಕಿಸಿದೆ. ಆಗ ಅವರು ನನ್ನೊಡನೆ ಹೇಳಿದರು," ನಾನು ನಿಮ್ಮ ಮನೆಗೆ ಬರಬೇಕೆಂದಿದ್ದೇನೆ" ಎಂದು." ಬನ್ನಿ" ಎಂದು ಕರೆದೆ." ಈಗಲೇ ಬರುವುದಿಲ್ಲ. ಆದರೆ ನಾನು ಒಂದು ವಾರದ ಮಟ್ಟಿಗೆ ಬಂದು ನಿಮ್ಮ ಮನೆಯಲ್ಲಿಯೇ ಉಳಿಯುತ್ತೇನೆ" ಎಂದರು. ನನಗೆ ಗಲಿಬಿಲಿಯಾದದ್ದಂತೂ ನಿಜ. ನಂತರ ನಾನು ಆ ವಿಷಯವನ್ನು ಮರೆತೇ ಬಿಟ್ಟೆ.

ಸುಮಾರು ಒಂದು ತಿಂಗಳ ನಂತರ ನನ್ನ ಲ್ಯಾಂಡ್‌‌ಲೈನ್‌‌ಗೆ ಒಂದು ಫೋನ್ ಬಂದಿತ್ತು. ಭೈರಪ್ಪನವರು ಫೋನ್ ಮಾಡಿದ್ದರು. ಮತ್ತು ತಾವು ಇಂತಹ ದಿನ ಬರುವುದಾಗಿ ನನಗೆ ಮಾಹಿತಿ ನೀಡಿದರು. ನನಗೆ ಸಿಕ್ಕಾಪಟ್ಟೆ ಗಾಬರಿಯಾಯಿತು. ಅವರಿಗಾಗಿ ನಾನು ಯಾವ ವ್ಯವಸ್ಥೆಯನ್ನು ಮಾಡಬೇಕು ಎಂಬುದೇ ನನಗೆ ತೋಚದಂತಾಯಿತು. ಆಗ ನನ್ನ ಮೂವರು ಹೆಣ್ಣು ಮಕ್ಕಳು ಕೂಡ ಅವಿವಾಹಿತರಾಗಿದ್ದರು ಮತ್ತು ವಿದ್ಯಾಭ್ಯಾಸದಲ್ಲಿ ತೊಡಗಿದ್ದರು. ಮಗ ತಾಹೇರ್ ಹೈಸ್ಕೂಲಿನಲ್ಲಿ ಓದುತ್ತಿದ್ದ. ಹಿರಿಯವಳಾದ ಸಮೀನಾ ಮೈಸೂರು ಯುನಿವರ್ಸಿಟಿಯಲ್ಲಿ ಚಿನ್ನದ ಪದಕವನ್ನು ಪಡೆದಿದ್ದಳು. ನಂತರ ಏಕಕಾಲದಲ್ಲಿ ಐಎಎಸ್ ಮತ್ತು ಕೆಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಳು. ನನಗೆ ಆತಂಕವಾಗಿದ್ದು ಅವರಿಗಾಗಿ ನಾನು ಊಟದ ವ್ಯವಸ್ಥೆಯನ್ನು ಹೇಗೆ ಮಾಡಬೇಕು ಎಂದು. ಹೀಗಾಗಿ ನಾನು ಅವರನ್ನೇ ಕೇಳುವುದು ಉತ್ತಮ ಎಂದು ಭಾವಿಸಿ ಮತ್ತೆ ನಾನೇ ಅವರಿಗೆ ಫೋನ್ ಮಾಡಿ ಅವರಿಗಾಗಿ ನಾನು ಏನು ವ್ಯವಸ್ಥೆಯನ್ನು ಮಾಡಬೇಕು ಎಂದು ಕೇಳಿದೆ. ಅದಕ್ಕೆ ಅವರು ಬಹಳ ಸರಳವಾಗಿ ತಾವು ನಾನ್ ವೆಜ್ ಆಹಾರ ಅಭ್ಯಾಸಕ್ಕೆ ಒಗ್ಗಿಕೊಂಡಿಲ್ಲ ಎಂದು ತಿಳಿಸಿ ವೆಜಿಟೇರಿಯನ್ ಮನೆ ಊಟವನ್ನು ತಮಗೆ ಮಾಡಬಹುದು ಎಂದು ತಿಳಿಸಿದರು. ನಮ್ಮ ಮನೆಯಲ್ಲಿ ನಮ್ಮ ಜತೆಯಲ್ಲಿ ಅಡುಗೆ ಮನೆಯ ಊಟವನ್ನೇ ತಾವು ಕೂಡ ಸೇವಿಸುವುದಾಗಿ ನನಗೆ ಸಮಾಧಾನದಿಂದ ಉತ್ತರಿಸಿದರು.

ಭೈರಪ್ಪನವರು ಬಾನು ಮುಷ್ತಾಕ್‌ ಅವರಿಗೆ ಬರೆದಿದ್ದ ಪತ್ರ

_SL Bhyrappa  (1)

ಈ ಸುದ್ದಿಯನ್ನೂ ಓದಿ | SL Bhyrappa: ಭೈರಪ್ಪ ನಿಧನದಿಂದ ಸ್ನೇಹಿತನನ್ನು ಕಳೆದುಕೊಂಡಷ್ಟೇ ನೋವಾಗಿದೆ: ಕೆ.ಎಸ್‌.ಭಗವಾನ್

ಹೀಗಾಗಿ ಅವರು ಬರುವುದಕ್ಕೆ ಒಂದು ವಾರ ಮುಂಚಿತವಾಗಿಯೇ ನಾನು ನನ್ನ ಫ್ರಿಜ್ ಅನ್ನು ಖಾಲಿ ಮಾಡಿದೆ. ಹಾಸನದ ನಳನಳಿಸುವ ತಾಜಾ ತರಕಾರಿಗಳಿಂದ ತುಂಬಿಸಿದೆ. ಮತ್ತು ಮೀನು ಚಿಕನ್ ಮತ್ತು ಮಟನ್ ಅನ್ನು ಫ್ರಿಜ್‌‌ನಿಂದ ಹೊರ ತೆಗೆದು ಬಳಸಿದೆ. ಮತ್ತೆ ಅವುಗಳನ್ನು ಖರೀದಿಸಲಿಲ್ಲ. ಎಲ್ಲರಿಗಿಂತ ಹೆಚ್ಚು ತಕರಾರು ತೆಗೆದವನೇ ಮಗ. ಏಕೆಂದರೆ ಮೂರು ಹೊತ್ತು ಕೂಡ ನಾನ್ ವೆಜ್ ತಿನ್ನುತ್ತಿದ್ದ ಅವನಿಗೆ ಒಂದು 15 ದಿನಗಳ ಕಾಲ ಅವನ ಆಯ್ಕೆಯ ಆಹಾರ ಸಿಗುವುದಿಲ್ಲ ಎಂಬುದು ಅವನಿಗೆ ಇಷ್ಟವಾಗಲಿಲ್ಲ. ಎಲ್ಲಾ ರೀತಿಯ ಕ್ಯಾತೆ ತೆಗೆದು ಅವು ಯಾವುವು ಕೂಡ ನಿಲ್ಲಲಿಲ್ಲ ಎಂದು ಅವನಿಗೆ ಅರಿವಾದ ನಂತರ ಅವರ ಸಾಹಿತ್ಯದ ಬಗ್ಗೆ ತಕರಾರು ತೆಗೆದ. ಅಂದರೆ ನನ್ನ ಮತ್ತು ಅವನ ನಡುವೆ ಭೈರಪ್ಪನವರ ಬರವಣಿಗೆಯ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. ಅವನ ಅಕ್ಕಂದಿರು ಕೂಡ ನಡುನಡುವೆ ಮೂಗು ತೂರಿಸಿದರು. ಅವನ ಅಬ್ಜೆಕ್ಷನ್ ಅನ್ನು ಸರ್ವಾನುಮತದಿಂದ ತಳ್ಳಿಹಾಕಿ ವೋಟಿಂಗ್ ಹಾಕದೆಯೂ ಬಹುಮತದಿಂದ ಕರಾರು ಪಾಸಾಗಿ ಭೈರಪ್ಪನವರ ಆತಿಥ್ಯವನ್ನು ನಿರ್ವಹಿಸಲು ಎಲ್ಲರೂ ತಯಾರಾದರು. ತಾಹೇರ್ ಒಂದು ವಾರದ ಮಟ್ಟಿಗೆ ತನ್ನ ಅಜ್ಜಿಯ ಮನೆಗೆ ಅಂದರೆ ನನ್ನ ತಾಯಿಯ ಮನೆಗೆ ಶಿಫ್ಟ್ ಆಗುವುದಾಗಿ ಹೇಳಿ, ನನ್ನನ್ನು ಬೆದರಿಸಲು ಪ್ರಯತ್ನಪಟ್ಟ. ಸಮೀನಾ ಅವನ ಬ್ಯಾಗ್ ಪ್ಯಾಕ್ ಮಾಡಿದಳು. ಲುಬ್ನಾ ಅವನ ಪುಸ್ತಕಗಳನ್ನು ರೆಡಿ ಮಾಡಿಕೊಟ್ಟಳು. ಆಯಶ ಕಿಕಿ ಎಂದು ನಗುತ್ತಾ ಅವನನ್ನು ಕಿಚಾಯಿಸಿದಳು. ಕೊನೆಗೂ ಅವನು ತನ್ನ ಅಬ್ಜೆಕ್ಷನ್ನು ಮತ್ತು ಬೆದರಿಕೆಗಳನ್ನು ಹಿಂಪಡೆದು ವಿಧೇಯ ಮಗನಂತೆ ಭೈರಪ್ಪನವರ ಆಗಮನವನ್ನು ಎದುರು ನೋಡತೊಡಗಿದ.

_SL Bhyrappa

ಭೈರಪ್ಪನವರು ನಮ್ಮ ಮನೆಗೆ ಬಂದರು. ಆರಂಭದ ಕೆಲವು ಮುಜುಗರಗಳನ್ನು ಬಿಟ್ಟರೆ ನನಗೆ ಹೆಚ್ಚಿನ ಸಂಕೋಚಗಳೇನೂ ಆಗಲಿಲ್ಲ. ನನ್ನ ಅಡುಗೆಯ ಸಹಾಯಕ್ಕೆ ಶಬಾನ ಸಸ್ಯಹಾರಿ ಅಡುಗೆಯನ್ನೇ ಮಾಡಲು ಸಂತೋಷವಾಗಿ ಒಪ್ಪಿಕೊಂಡಳು. ಭೈರಪ್ಪನವರು ಕೂಡ ತಾವು ಬರೆಯಲಿರುವ ಕಾದಂಬರಿ ಒಂದಕ್ಕೆ ಹಿನ್ನೆಲೆಯಾಗಿ ಮಾಹಿತಿ ಸಂಗ್ರಹಣ ಮಾಡುವ ಸಲುವಾಗಿ ನಮ್ಮ ಮನೆಗೆ ಬಂದಿರುವುದಾಗಿ ಹೇಳಿದರು. ಮುಸ್ಲಿಂ ಸಾಂಸ್ಕೃತಿಕ ಹಿನ್ನೆಲೆಯ ಮನೆಯ ವಾತಾವರಣ ತಾವು ಅಭ್ಯಸಿಸಬೇಕಾಗಿದೆ ಎಂತಲೂ ಮತ್ತು ಮುಸ್ಲಿಂ ಕುಟುಂಬದ ನಡವಳಿಕೆಗಳನ್ನು ಕೂಡ ತಾವು ಅವಲೋಕಿಸಬೇಕಾಗಿದೆ ಎಂತಲೂ, ಆ ಕಾರಣಕ್ಕೆ ನಮ್ಮ ಮನೆಗೆ ಬಂದಿರುವುದಾಗಿಯೂ ಅವರು ಹೇಳಿದರು. ನಾನು ನಕ್ಕು ಬಿಟ್ಟೆ ಮತ್ತು ಅಂತಹ ವಾತಾವರಣ ನಮ್ಮ ಮನೆಯಲ್ಲಿ ಅವರಿಗೆ ಸಿಗುವುದಿಲ್ಲವೆಂತಲೂ ಮತ್ತು ಅಂತಹ ಮತ್ತು ನೈಜ ವಾತಾವರಣದ ಅಗತ್ಯ ಅವರಿಗೆ ಇದ್ದಲ್ಲಿ ಅಂತಹ ಮನೆಗಳಲ್ಲಿ ಭೈರಪ್ಪನವರನ್ನು ಸ್ವಾಗತಿಸುವುದಿಲ್ಲವೆಂತಲೂ ನಾನು ಅವರಿಗೆ ಹೇಳಿದೆ. ಹೀಗಾಗಿ ಅವರು ನಮ್ಮ ಮನೆಯಲ್ಲಿ ಉಳಿಯುವುದಾಗಿ ನಿರ್ಧರಿಸಿದರು.

ಶವನಾಳ ಅಡುಗೆ ಅವರಿಗೆ ಇಷ್ಟವಾಯಿತು, ತರಕಾರಿ ಪಲ್ಯ, ಸೊಪ್ಪಿನ ಸಾರು ಕೂಡ ವಿಶೇಷವಾಗಿ ಇಷ್ಟವಾಯಿತು. ಮಾರನೇ ದಿನ ನನಗೆ ಆಲೂರು ಸಾಹಿತ್ಯ ಸಮ್ಮೇಳನದಲ್ಲಿ ಒಂದು ಮುಖ್ಯವಾದ ಕಾರ್ಯಕ್ರಮವಿತ್ತು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮರಳಿ ಬಂದ ನಾನು ಬರುವಾಗಲೇ ಜ್ವರವನ್ನು ಹೊತ್ತು ತಂದೆ. ಹೀಗಾಗಿ ನಾನು ಜ್ವರದಿಂದ ನರಳುತ್ತಾ ಮಲಗಿರುವಾಗ ಸಮೀನಾಳೆ ಭೈರಪ್ಪನವರ ದೇಖರೇಖುಗಳನ್ನು ನೋಡತೊಡಗಿದಳು.

ಭೈರಪ್ಪನವರಿಗೆ ಖಬರಸ್ತಾನವನ್ನು ನೋಡಬೇಕಿತ್ತು. ಮಸೀದಿಯನ್ನೂ ನೋಡಬೇಕಿತ್ತು. ಒಂದು ದಿನ ಬೆಳಗಿನ ಹೊತ್ತು ಮುಷ್ತಾಕ್, ಭೈರಪ್ಪನವರನ್ನು ಖಬರ್‌‌ಸ್ತಾನಿಗೆ ಕರೆದುಕೊಂಡು ಹೋದರು. ಭೈರಪ್ಪನವರು ಹೊರಗಿನಿಂದ ಖಬರಸ್ತಾನವನ್ನು ನೋಡಿದರು. ಒಳಗಡೆ ಕೂಡ ಗೋರಿಗಳ ನಡುವಿನಿಂದ ಹಾದು ಹೋಗಿ ಮೂಲೆಮೂಲೆಯಲ್ಲೂ ಸಂಚರಿಸಿ ಬಂದರು. ಆಮೇಲೆ ಅವರು ಮುಸ್ತಾಕ್ ಅನ್ನು ಕೇಳಿದರು "ಇಲ್ಲಿ ಗೋರಿಗಳ ತಲದಸೆಯಲ್ಲಿ ಗ್ರೆನೆಟಿನ ಕಲ್ಲುಗಳನ್ನು ನಿಲ್ಲಿಸಿದ್ದಾರಲ್ಲ, ಅದನ್ನು ಉರ್ದುವಿನಲ್ಲಿ ಏಕೆ ಬರೆದಿದ್ದಾರೆ?" ಮುಷ್ತಾಕ್ ತಬ್ಬಿಬಾಗಿ ಹೋದರು. ಅದಕ್ಕೆ ಏನು ಉತ್ತರಿಸಬೇಕು ಎಂಬುದು ಅವರಿಗೆ ಗೊತ್ತಾಗಲಿಲ್ಲ. ಹೀಗಾಗಿ ಅವರು ಮನೆಗೆ ಮರಳಿ ಬಂದ ನಂತರ, ನನಗೆ ಭೈರಪ್ಪನವರ ಪ್ರಶ್ನೆಯನ್ನು ಒಪ್ಪಿಸಿದ ಮುಷ್ತಾಕ್, ಅದಕ್ಕೆ ನೀವೇ ಉತ್ತರ ಹೇಳಿ ಎಂದು ಜವಾಬ್ದಾರಿಯನ್ನು ನನ್ನ ಮೇಲೆ ಹೊರಿಸಿದರು. ಹಾಗೂ ಭೈರಪ್ಪನವರು ಹಬ್ಬದ ಸನ್ನಿವೇಶಗಳನ್ನು ತಮ್ಮ ನೋಟ್ ಬುಕ್‌ನಲ್ಲಿ ಬರೆದುಕೊಳ್ಳುತ್ತಿದ್ದರು ಎಂದು ತಿಳಿಸಿದರು.

ಮುಷ್ತಾಕ್ ಮತ್ತು ಭೈರಪ್ಪನವರು ಒಂದು ಸಾರಿ ನಮಾಜ್ ಟೈಮಲ್ಲಿ ಆ ಮಸೀದಿಗೆ ಹೋದರು. ಅಲ್ಲಿ ಮಹಿಳೆಯರಿಗೆ ನಮಾಜ್ ಮಾಡಲು ಅವಕಾಶವಿತ್ತು. ಅವರಿಗಾಗಿ ಪ್ರತ್ಯೇಕ ಹಾಲಲ್ಲಿ ನಮಾಜ್‌‌ಗೆ ವ್ಯವಸ್ಥೆ ಮಾಡಿದ್ದರು. ಅದೇ ನಾನು ಆಗ ಶುಕ್ರವಾರ ಮಧ್ಯಾಹ್ನ ಮಾತ್ರ ಆ ಮಸೀದಿಯಲ್ಲಿ ನಮಾಜ್‌ನ ಸಲುವಾಗಿ ಹೋಗುತ್ತಿದ್ದೆ. ಆದುದರಿಂದ ಮುಷ್ತಾಕ್ ಅವರು ತಮ್ಮ ಜತೆಯಲ್ಲಿ ಕರೆದುಕೊಂಡು ಆ ಮಸೀದಿಗೆ ಹೋದರು. ಭೈರಪ್ಪನವರು ಕೈಕಾಲು ತೊಳೆದು ಮಸೀದಿಯೊಳಗೆ ಒಳಗಡೆ ಕುಳಿತಿದ್ದರು ಮತ್ತು ಸಕಲವನ್ನು ಕೂಡ ತಮ್ಮ ನೋಟ್ ಪುಸ್ತಕದಲ್ಲಿ ಬರೆದುಕೊಳ್ಳುತ್ತಿದ್ದರು.

ನಂತರ ಭೈರಪ್ಪನವರು ಮುಸ್ಲಿಮರ ವಿದ್ಯಾಸಂಸ್ಥೆಯನ್ನು ನೋಡಲು ಬಯಸಿದರು. ಹೀಗಾಗಿ ಮುಷ್ತಾಕ್ ಅವರನ್ನು ಆಲೂರಿಗೆ ಕರೆದುಕೊಂಡು ಹೋದರು. ಅಲ್ಲೇ ಇಡೀ ಸಂಸ್ಥೆಯ ಆವರಣದಲ್ಲಿ ಸುತ್ತಾಡಿದ ಭೈರಪ್ಪನವರು ಅಲ್ಲಿನ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳಿಗಾಗಿ ಮಾಡಿದ್ದ ವ್ಯವಸ್ಥೆ ಮೊದಲಾದವುಗಳನ್ನೆಲ್ಲ ಪರಿಶೀಲನೆ ಮಾಡಿ ತಮ್ಮ ನೋಟ್ ಬುಕ್‌ನಲ್ಲಿ ಬರೆದುಕೊಂಡರು.

ಆಗ ಮೊಬೈಲ್ ಮತ್ತು ಅದರ ಗೀಳು ಯಾರಿಗೂ ಅಂಟಿಕೊಂಡಿರಲಿಲ್ಲ. ರಾತ್ರಿ ಊಟ ಟೇಬಲ್‌ನಲ್ಲಿ ಮತ್ತು ಊಟವಾದ ನಂತರ ಒಳ್ಳೆಯ ಚರ್ಚೆ ನಡೆಯುತ್ತಿತ್ತು. ಭೈರಪ್ಪನವರು ಮುಸ್ಲಿಮರ ಆಲೋಚನಾ ಕ್ರಮದ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದರು. ನಾನು ಅದಕ್ಕೆ ಸೂಕ್ತವಾಗಿ ಪ್ರತಿಕ್ರಿಯೆ ನೀಡುತ್ತಿದ್ದೆ. ನಂತರ ಅವರು ತತ್ವಶಾಸ್ತ್ರದ ಮೂಲಕ ವಿಚಾರಗಳನ್ನು ಚರ್ಚೆ ಮಾಡುತ್ತಿದ್ದರು. ಆಗ ಸಮೇನ ತನ್ನ ಸ್ಪರ್ಧಾತ್ಮಕ ಪರೀಕ್ಷೆಗಳ ಸಲುವಾಗಿ ಇಂಡಿಯನ್ ಹಿಸ್ಟರಿ ಅನ್ನು ಆಳವಾಗಿ ಅಭ್ಯಾಸ ಮಾಡುತ್ತಿದ್ದಳು. ಹೀಗಾಗಿ ಅವಳು ಅವರ ಅನೇಕ ಸಂದೇಹಗಳಿಗೆ ಇಂಡಿಯನ್ ಹಿಸ್ಟರಿಯ ದೃಷ್ಟಾಂತಗಳ ಮೂಲಕ ವಿವರಣೆ ನೀಡುತ್ತಿದ್ದಳು. ಅವರಿಬ್ಬರ ನಡುವೆ ನಡೆಯುತ್ತಿದ್ದ ಚರ್ಚೆಗಳನ್ನು ಹೇಳುವುದೇ ಒಂದು ಅದ್ಭುತವಾದ ಸಂದರ್ಭವಾಗಿತ್ತು. ಹೀಗೆ ಒಂದು ವಾರದವರೆಗೂ ನಮ್ಮಗಳ ಬಾಂಧವ್ಯ ಮುಂದುವರಿಯಿತು.

ಭೈರಪ್ಪನವರ ಕುತೂಹಲದ ಕಣ್ಣುಗಳಿಗೆ ಮುಸ್ಲಿಂ ಹಿನ್ನೆಲೆಯ ಬದುಕು ಅಗೋಚರವಾಗಿಯೇ ಉಳಿಯಿತು. ಮುಸ್ಲಿಂ ಸಮುದಾಯದ ಒಳ ಹೊರಗನ್ನು ಒಂದು ವಾರದೊಳಗೆ ತಿಳಿಯುವುದು ಅಸಾಧ್ಯದ ಕೆಲಸ. ಆದರೂ ಕೂಡ ಭೈರಪ್ಪನವರ ತೀವ್ರ ಕುತೂಹಲ ಮತ್ತು ವಿಷಯ ಸಂಗ್ರಹಣೆಯ ದಾಹ ಹಾಗೂ ಅಪರಿಚಿತ ಲೋಕಗಳ ಪರಿಚಯವನ್ನು ಗಳಿಸುವ ತೀವ್ರತೆ ವಿಶಿಷ್ಟವಾಗಿತ್ತು. ಆದರೆ ನನಗೆ ಅನಿಸುತ್ತಿತ್ತು ಅವರು ಹೊರನೋಟದ ತೊಗಟೆಯ ಅರಿವನ್ನು ಮಾತ್ರ ಪಡೆಯುತ್ತಿದ್ದಾರೆ. ಮುಸ್ಲಿಂ ಸಮುದಾಯದ ಪರಿಚಯ, ಚಿಂತನೆ ಮತ್ತು ಅನುಭವವನ್ನು ಪಡೆಯಲು ಎಲ್ಲೋ ಸೋಲುತ್ತಿದ್ದಾರೆ ಅಂತ ಅನಿಸುತ್ತಿತ್ತು. ಹಾಗೂ ಈ ಎಲ್ಲ ಮಾಹಿತಿಯನ್ನು ಅವರು ಹೇಗೆ ಬಳಕೆ ಮಾಡಬಹುದು ಮತ್ತು ಅವರ ಗ್ರಹಿಕೆ ಮತ್ತು ಬರವಣಿಗೆ ಮುಸ್ಲಿಂ ವಿರೋಧಿ ನಿಲುವನ್ನು ವ್ಯಕ್ತಪಡಿಸುದಾಗ ನನ್ನ ಬಗ್ಗೆ ಸಮುದಾಯದ ನಿಲುವು ಏನಾಗಬಹುದು ಎಂಬುದರ ಬಗ್ಗೆ ಕೂಡ ನನಗೆ ಆಲೋಚನೆ ಉಂಟಾಗುತ್ತಿತ್ತು. ಆದರೆ ನಾನು ಎಲ್ಲಾ ಆಲೋಚನೆಗಳನ್ನು ಕೂಡ ಬದಿಗೊತ್ತಿ ಭೈರಪ್ಪನವರ ಜೊತೆಯಲ್ಲಿ ಅತ್ಯಂತ ಸಹಜವಾಗಿ ವರ್ತನೆ ಮಾಡಿದೆ ಮತ್ತು ನನ್ನ ಕುಟುಂಬ ಕೂಡ ಇದಕ್ಕೆ ಪೂರಕವಾಗಿ ಸಂಪೂರ್ಣ ಸಹಕಾರವನ್ನು ಮತ್ತು ಆರಂಭದಿಂದಲೇ ಕಿರಿಕಿರಿ ವ್ಯಕ್ತಪಡಿಸುತ್ತಿದ್ದ ಮಗ, ಮಧ್ಯ ಮಧ್ಯದಲ್ಲಿ ನನ್ನ ತಾಯಿಯ ಮನೆಗೆ ಹೋಗಿ ಗಡದ್ದಾಗಿ ಬಿರಿಯಾನಿ ಉಂಡು ಚಿಕನ್ ಕಬಾಬ್ ತಿಂದು ಆದರೂ ಮುನಿಸಿಕೊಂಡು ನನ್ನಿಂದಲೂ ಭೈರಪ್ಪನವರಿಂದಲೂ ದೂರವಾಗಿಯೇ ಉಳಿದ.

ನಂತರ ಆವರಣ ಪ್ರಕಟವಾಯಿತು. ಆವರಣದಲ್ಲಿ ಭೈರಪ್ಪನವರು ರಿಸರ್ಚ್ ಮಾಡಿದಂತೆಯೇ ತಮ್ಮ ಕೆಲವು ಪೂರ್ವ ನಿರ್ಧರಿತ ಪ್ರಮೇಯಗಳಿಗೆ ಅನುಕೂಲವಾಗುವಂತಹ ಮತ್ತು ತಕ್ಕದಾದ ನಿದರ್ಶನಗಳನ್ನೇ ಕೊಟ್ಟು ಮುಸ್ಲಿಂ ಸಮುದಾಯದ ರಾಕ್ಷಸೀಕರಣದ ಬಿಂಬಕ್ಕೆ ಪೂರಕವಾದ ಬರವಣಿಗೆಯನ್ನು ಕೊಟ್ಟರು. ಆದರೆ ಅವರು ಸದರಿ ಕಾದಂಬರಿಯ ಪೀಠಿಕೆಯಲ್ಲಿ ಒಬ್ಬ ಸಹೋದರಿಯ ಮನೆಯಲ್ಲಿ ಉಳಿದುದಾಗಿ ತಿಳಿಸಿದರು ಮತ್ತು ಹೆಸರನ್ನು ಬರೆಯಲಿಲ್ಲ. ಹೀಗಾಗಿ ಆ ಸಹೋದರಿ ಯಾರು ಎಂಬುದು ತಿಳಿಯದೆ ಊಹಾಪೋಹದ ಮಟ್ಟದಲ್ಲಿಯೇ ಉಳಿಯಿತು. ಆದರೆ ಆ ಸಂದರ್ಭದಲ್ಲಿ ನಮ್ಮ ಮನೆಗೆ ಅನೇಕ ಲೇಖಕರು ಬಂದು ಅವರೊಡನೆ ಫೋಟೋಗಳನ್ನು ತೆಗೆದುಕೊಂಡರು. ಮತ್ತು ಕ್ರಮೇಣ ಎಲ್ಲರಿಗೂ ಆವರಣ ಬರವಣಿಗೆಯ ಮುಂಚಿತವಾಗಿ ಅವರು ನಮ್ಮ ಮನೆಯಲ್ಲಿ ಇದ್ದರು ಎಂಬ ವಿಷಯವು ತಿಳಿದು ಬಂತು.

ಆವರಣದ ಬರವಣಿಗೆಯು ತೀವ್ರ ವಿವಾದವಾಗುತ್ತದೆ ಎಂಬುದು ಅವರ ನಿರೀಕ್ಷೆಯಾಗಿತ್ತು. ನನಗೆ ಅನಿಸುತ್ತೆ ಅವರು ವಿವಾದವನ್ನು ಬಯಸಿದ್ದರು ಎಂದು. ಆದರೆ ಅದು ವಿವಾದದ ಸ್ವರೂಪವನ್ನು ಪಡೆಯಲಿಲ್ಲ. ಬದಲಿಗೆ ಗೌರಿ ಅವರು ಆವರಣ ಒಂದು ವಿಕೃತಿ ಎಂದು ಕೃತಿಯನ್ನು ಪ್ರಕಟ ಮಾಡಿದರು. ಅದರಲ್ಲಿ ಆವರಣದ ಬಗ್ಗೆ ಅನೇಕ ಲೇಖಕರ ವಿಮರ್ಶೆಗಳು ಇವೆ.

ನನಗೆ ಅನಿಸಿದ್ದು ಭೈರಪ್ಪನವರು ಊಟ ತಿಂಡಿಯ ಆಹಾರ ಅಭ್ಯಾಸದಲ್ಲಿ ಕಠೋರ ನಿಯಮವನ್ನೇನು ಪಾಲಿಸುತ್ತಿರಲಿಲ್ಲ. ನನ್ನ ಬಾಲ್ಯಕಾಲದಿಂದಲೂ ನನಗೆ ಓದಿನ ರುಚಿ ಹತ್ತಿದ್ದು ಭೈರಪ್ಪನವರ ಬರವಣಿಗೆಯ ಮೂಲಕವೇ. ಅವರ ಓದುಗ ಬಳಗದ ಅತ್ಯಂತ ಲಾಯಲ್ ಆದ ಓದುಗಳಾಗಿದ್ದೆ ನಾನು. ಆದರೆ ಅವರ ಧೋರಣೆ ಬದ್ಧತೆ ಮತ್ತು ಪೂರ್ವಗ್ರಹ ಪೀಡಿತ ಆಲೋಚನಾ ಸರಣಿಯ ಪ್ರತಿಪಾದನೆಯ ನಂತರ ನಾನು ಅವರಿಗೆ ಪ್ರಿಯ ಓದುಗಳಾಗಿ ಉಳಿಯಲಿಲ್ಲ. ಬದಲಿಗೆ ಒಬ್ಬ ನುರಿತ ಲಾಯರ್‌ನಂತೆ ಕೆಲ ವಿಷಯಗಳನ್ನು ರೂಪಿಸಿಕೊಂಡು ಅದನ್ನು ಸಂಶೋಧನೆಯ ಮೂಲಕ ಅಗೆದು ತೆಗೆದ ಮಾಹಿತಿಯನ್ನು ಬಳಸಿ ಪ್ರಬುದ್ಧವಾಗಿ ನಿರೂಪಿಸುತ್ತಿದ್ದ ವಾದದ ಶೈಲಿಯಂತೆ ಕಂಡು ಬರುತ್ತಿದ್ದವು. ಅವರ ಸೃಜನಶೀಲತೆಯನ್ನು ಅಪಹರಿಸಿದವರ್ಯಾರು ಎಂದು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತಿದ್ದೆ.

ಈ ಸುದ್ದಿಯನ್ನೂ ಓದಿ | SL Bhyrappa Passes away: ಭೈರಪ್ಪನವರ ಬೆನ್ನು ಹತ್ತಿದ ವಿವಾದಗಳ ಸಾಲು ಸಾಲು

ಸೈದ್ಧಾಂತಿಕವಾಗಿ ನಮ್ಮ ನಡುವೆ ಭಿನ್ನಾಭಿಪ್ರಾಯವಿದ್ದರೂ ಕೂಡ , ಅವರನ್ನು ಕಂಡು ಮಾತನಾಡಿ ಚರ್ಚಿಸಿ ಅವರ ನೆನಪುಗಳು ನನ್ನ ಮನ ಪಟಲದಲ್ಲಿ ಉಳಿದು, ಇಂದು ಅವರು ಸ್ವರ್ಗಸ್ಥರಾದರು ಎಂಬ ವಿಷಯದಿಂದ ಒಂದು ಭಾವತಂತು ತುಂಡಾದಂತೆ ಭಾಸವಾಗುತ್ತಿದೆ. ನನಗೆ ಏನೋ ಖಾಸಗಿ ನಷ್ಟವಾದಂತೆ ಅನಿಸುತ್ತಿದೆ. ಭೈರಪ್ಪನವರಿಗೆ ನನ್ನ ಭಾವಪೂರ್ಣ ನಮನಗಳು.