Gubbi News: ರೋಗಮುಕ್ತ ಸಮಾಜ ನಿರ್ಮಾಣಕ್ಕೆ ಜೂ.29ರಂದು ಜಾಗೃತಿ ಸಂವಾದ
ಆಹಾರ ತಜ್ಞ ಡಾ.ಖಾದರ್ ವಿದೇಶದಲ್ಲಿ ಹತ್ತಾರು ಲಕ್ಷ ವೇತನ ಪಡೆಯುವ ಅವಕಾಶ ತೊರೆದು ನಮ್ಮ ನೆಲದ ವಿಷಯುಕ್ತ ಮಣ್ಣು, ಪ್ಲಾಸ್ಟಿಕ್ ಹಾವಳಿ, ಅನಾರೋಗ್ಯಕರ ಆಹಾರ ಪದ್ಧತಿ, ವಿಷಯುಕ್ತ ಆಹಾರ ಈ ಬಗ್ಗೆ ಅಧ್ಯಯನ ನಡೆಸಿ ಉತ್ತಮ ಆರೋಗ್ಯಕ್ಕೆ ಆಹಾರ ಪದ್ಧತಿ ಹಾಗೂ ರಾಸಾಯನಿಕ ಮುಕ್ತ ಕೃಷಿ ಬಗ್ಗೆ ಜಾಗೃತಿ ಮೂಡಿಸುತ್ತಾ ಮನೆ ಮಾತಾಗಿದ್ದಾರೆ.
-
ಗುಬ್ಬಿ: ಶ್ರೀಗಂಧ ಬೆಳೆಗಾರರ ಮತ್ತು ಬಳಕೆದಾರರ ಅಭಿವೃದ್ದಿ ಸಂಶೋಧನಾ ಸಂಘ ಹಾಗೂ ಚೇಳೂರಿನ ಸಹಜ ನೈಸರ್ಗಿಕ ಬೇಸಾಯ ತರಬೇತಿ ಕೇಂದ್ರದ ಸಹಯೋಗದಲ್ಲಿ ಜೂ.29ರಂದು ಹೇರೂರು ಶ್ರೀ ಗುರುಸಿದ್ದರಾಮೇಶ್ವರ ಸಮುದಾಯಭವನದಲ್ಲಿ ಆಹಾರ ತಜ್ಞ ಡಾ.ಖಾದರ್ ಅವರ ವಿಶೇಷ ಉಪನ್ಯಾಸ ಮೂಲಕ ರೋಗಮುಕ್ತ ಸಮಾಜ ನಿರ್ಮಾಣಕ್ಕೆ ಜನಜಾಗೃತಿ ಮತ್ತು ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಶ್ರೀಗಂಧ ಬೆಳೆಗಾರರ ಮತ್ತು ಬಳಕೆದಾರರ ಅಭಿವೃದ್ದಿ ಸಂಶೋಧನಾ ಸಂಘದ ರಾಜ್ಯಾಧ್ಯಕ್ಷ ಬಿ.ಆರ್.ರಘುರಾವ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನೈಸರ್ಗಿಕ ಕೃಷಿ ಮತ್ತು ದೇಶಿ ಹಸುಗಳ ಪಂಚಗವ್ಯ ಮೂಲಕ ರಾಸಾಯನಿಕ ಮುಕ್ತ ಮಣ್ಣು ಸಿದ್ಧಪಡಿಸಿ ಸಹಜ ಕೃಷಿ ನಡೆಸುವ ಹಾಗೂ ಸಿರಿಧಾನ್ಯಗಳ ಮೂಲಕ ನಮ್ಮ ಆಹಾರ ಪದ್ಧತಿ ರೂಡಿಸಿ ಆರೋಗ್ಯ ಸಮಾಜ ನಿರ್ಮಾಣಕ್ಕೆ ಅವಶ್ಯ ಮಾರ್ಗದರ್ಶನವನ್ನು ಈ ಕಾರ್ಯಕ್ರಮ ನೀಡಲಿದೆ ಎಂದರು.
ಇದನ್ನೂ ಓದಿ: Gubbi News: ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕರಾಗಿ ಎನ್.ಎ.ನಾಗರಾಜು ಆಯ್ಕೆ
ಬಿಪಿ, ಶುಗರ್, ಕ್ಯಾನ್ಸರ್ ಮುಂತಾದ ಮಾರಕ ರೋಗಗಳಿಗೆ ಸಿರಿಧಾನ್ಯಗಳ ಮೂಲಕ ರೋಗ ಮುಕ್ತವಾಗುವ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ಅವರ ಮಾರ್ಗದರ್ಶನ ಮೂಲಕ ನಮ್ಮ ಜೀವನ ಆರೋಗ್ಯಕರ ವಾಗಿ ಇಟ್ಟುಕೊಳ್ಳುವ ಅಭ್ಯಾಸ ಮಾಡೋಣ. ಈ ಸಂವಾದ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಸಾಲಿಂಗಯ್ಯ, ತುಮಕೂರು ವಿವಿ ಪ್ರಾಂಶುಪಾಲ ಕರಿಯಣ್ಣ ಇನ್ನಿತರ ಸಂಪನ್ಮೂಲ ವ್ಯಕ್ತಿಗಳು ಆಗಮಿಸಲಿದ್ದಾರೆ. ಜೂ..29ರ ಬೆಳಿಗ್ಗೆ 10 ಗಂಟೆಗೆ ಹೇರೂರು ಸಿದ್ಧರಾಮೇಶ್ವರ ಸಮುದಾಯ ಭವನಕ್ಕೆ ಜಿಲ್ಲೆಯ ಎಲ್ಲಾ ರೈತರು ಆಗಮಿಸುವಂತೆ ಮನವಿ ಮಾಡಿದರು.
ಸಹಜ ನೈಸರ್ಗಿಕ ಕೃಷಿಕ ಅಮ್ಮನಘಟ್ಟ ಶಂಕರಪ್ಪ ಮಾತನಾಡಿ ಸಿರಿಧಾನ್ಯಗಳ ಬಗ್ಗೆ ಮೂಗು ಮುರಿಯುವವರಿಗೆ ಡಾ.ಖಾದರ್ ಉಪನ್ಯಾಸ ಅವಶ್ಯವಿದೆ. ರೋಗಮುಕ್ತ ಬದುಕು ಕಟ್ಟಿಕೊಳ್ಳಲು ಈ ಸಂವಾದ ತರಬೇತಿ ಕಾರ್ಯಕ್ರಮ ದಾರಿ ದೀಪವಾಗಲಿದೆ. ಹತ್ತು ಹಲವು ರೋಗಗಳಿಂದ ಮುಕ್ತಿ ಪಡೆಯುವ ಜೊತೆಗೆ ಪ್ಲಾಸ್ಟಿಕ್ ಮುಕ್ತ ಸಮಾಜ ಕಟ್ಟುವುದು, ನೈಸರ್ಗಿಕ ಕೃಷಿ ಬಗ್ಗೆ ಅಗತ್ಯ ಮಾಹಿತಿ ಸಿಗಲಿದೆ. ಈ ಕಾರ್ಯಕ್ರಮದಲ್ಲಿ ನೈಸರ್ಗಿಕ ಆಹಾರ ಮಹತ್ವ, ಸಿರಿಧಾನ್ಯಗಳ ಪ್ರಯೋಜನ, ದೈನಂದಿನ ಆಹಾರ ಪದ್ಧತಿಗಳ ಬಗ್ಗೆ ಪ್ರಶ್ನೋತ್ತರ ಸಂವಾದ ನಡೆಯಲಿದೆ. ಇದರ ಪ್ರಯೋಜನ ಜಿಲ್ಲೆಯ ಎಲ್ಲಾ ರೈತ ಭಾಂದವರು ಪದ್ದುಕೊಳ್ಳಬೇಕು ಎಂದು ತಿಳಿಸಿದರು.
ಕರ್ನಾಟಕ ಸರ್ವೋದಯ ಮಂಡಳಿ ಜಿಲ್ಲಾಧ್ಯಕ್ಷ ಪುಟ್ಟಕಾಮಣ್ಣ ಮಾತನಾಡಿ, ಗಾಂಧೀಜಿ ತತ್ವ ಸಿದ್ಧಾಂತಕ್ಕೆ ಹತ್ತಿರವಾದ ಈ ಕಾರ್ಯಕ್ರಮ ನೈಸರ್ಗಿಕ ಕೃಷಿ ಮತ್ತು ಆಹಾರ ಬಗ್ಗೆ ಅಗತ್ಯ ಮಾಹಿತಿ ಪಡೆಯಬಹುದಾಗಿದೆ. ರಾಸಾಯನಿಕ ಬಳಕೆ ಅನಿವಾರ್ಯ ಎಂದುಕೊಂಡ ರೈತರು ಈ ಕಾರ್ಯ ಕ್ರಮ ಪ್ರಯೋಜನ ಪಡೆಯಬೇಕಿದೆ. ಜಾಗೃತಿ ಕಾರ್ಯಕ್ರಮ ಗುಬ್ಬಿಯಿಂದ ಚಾಲನೆ ಸಿಕ್ಕು ರಾಜ್ಯ ವ್ಯಾಪಿ ನೈಸರ್ಗಿಕ ಕೃಷಿ ಆಹಾರ ಬಗ್ಗೆ ಆಂದೋಲನ ನಡೆಸಲು ಸಂಘ ಸಜ್ಜಾಗಿದೆ. ಈ ಜೊತೆಗೆ ಶ್ರೀಗಂಧ ಕೃಷಿ ಮತ್ತು ಅದರ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ಮಳಿಗೆ ತೆರೆಯಲಿದ್ದು, ರೈತರು ಅಗತ್ಯ ಮಾಹಿತಿ ಪಡೆಯಬಹುದಾಗಿದೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಈ ಕಾರ್ಯಕ್ರಮ ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸುದ್ದಿಗೋಷ್ಠಿಯಲ್ಲಿ ಡಿ.ಪಿ.ರಂಗನಾಥ್, ಎಸ್.ಲಿಂಗಪ್ಪ, ಮೋಹನ್ ಕುಮಾರ್, ನಿವೃತ್ತ ವಲಯ ಅರಣ್ಯಾಧಿಕಾರಿ ಶಾಂತರಾಜು, ವಕೀಲ ಬಿ.ವಿ.ರಾಜೀವ್ ಇತರರು ಇದ್ದರು.