Yettinahole project: ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರ ಅಡ್ಡಿ: ಮುರುಳೀಧರ ಹಾಲಪ್ಪ
2014 ರಲ್ಲಿ ಸಿದ್ದರಾಮಯ್ಯ ಅವರೇ ಚಾಲನೆ ನೀಡಿದ ಎತ್ತಿನಹೊಳೆ ಯೋಜನೆಗೆ ಈಗಾಗಲೇ ರಾಜ್ಯ ಸರ್ಕಾರ 23 ಸಾವಿರ ಕೋಟಿ ವಿನಿಯೋಗಿಸಿ ಶೇ.90ರಷ್ಟು ಕೆಲಸ ಪೂರ್ಣವಾಗಿದೆ. ಈ ಸಮಯ ರಾಜ್ಯ ಸರ್ಕಾರಕ್ಕೆ ಹೆಸರು ಬರುತ್ತದೆ ಎಂಬ ಅಸೂಯೆಯಲ್ಲಿ ಅರಣ್ಯ, ಪರಿಸರ ಹೆಸರಿನಿಂದ ಯೋಜನೆಗೆ ಅಡ್ಡಗಾಲು ಹಾಕುತ್ತಿದೆ ಎಂದು ನೇರ ಆರೋಪ ಮಾಡಿದರು
-
ಗುಬ್ಬಿ: ಬಹುಕಾಲದ ನಿರೀಕ್ಷೆಯ ಎಂಟು ಜಿಲ್ಲೆಗೆ ಜೀವಜಲವಾದ ಎತ್ತಿನಹೊಳೆ ಯೋಜನೆ (Yettinahole project_ ಮುಗಿಯುವ ಹಂತದಲ್ಲಿ ಅಸೂಯೆ ಗುಣವನ್ನು ಪ್ರದರ್ಶಿಸಿದ ಕೇಂದ್ರ ಸರ್ಕಾರ ಇಲ್ಲಸಲ್ಲದ ಕ್ಯಾತೆ ತೆಗೆದು ಯೋಜನೆ ಪೂರ್ಣಗೊಳಿಸಲು ಅಡ್ಡಿಪಡಿಸುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ(KPCC Vice President Muralidhar Halappa) ಕಿಡಿಕಾರಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು 2014 ರಲ್ಲಿ ಸಿದ್ದರಾಮಯ್ಯ ಅವರೇ ಚಾಲನೆ ನೀಡಿದ ಎತ್ತಿನಹೊಳೆ ಯೋಜನೆಗೆ ಈಗಾಗಲೇ ರಾಜ್ಯ ಸರ್ಕಾರ 23 ಸಾವಿರ ಕೋಟಿ ವಿನಿಯೋಗಿಸಿ ಶೇ.90ರಷ್ಟು ಕೆಲಸ ಪೂರ್ಣವಾಗಿದೆ. ಈ ಸಮಯ ರಾಜ್ಯ ಸರ್ಕಾರಕ್ಕೆ ಹೆಸರು ಬರುತ್ತದೆ ಎಂಬ ಅಸೂಯೆಯಲ್ಲಿ ಅರಣ್ಯ, ಪರಿಸರ ಹೆಸರಿನಿಂದ ಯೋಜನೆಗೆ ಅಡ್ಡಗಾಲು ಹಾಕುತ್ತಿದೆ ಎಂದು ನೇರ ಆರೋಪ ಮಾಡಿದರು.
ರಾಜ್ಯದ ದೊಡ್ಡ ನೀರಾವರಿ ಯೋಜನೆ ಎನಿಸಿದ್ದ ಎತ್ತಿನಹೊಳೆ ಯೋಜನೆ ಹಾಸನ, ಚಿಕ್ಕ ಮಗಳೂರು, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ ಜಿಲ್ಲೆಯ 76 ಲಕ್ಷ ಜನರಿಗೆ ಕುಡಿಯುವ ನೀರು ಒದಗಿಸುವ ಮಹತ್ತರ ಕಾರ್ಯ ನಡೆಸಿದೆ. 29 ತಾಲ್ಲೂಕಿನ 6657 ಗ್ರಾಮಗಳಿಗೆ ಒಟ್ಟು 14 ಟಿಎಂಸಿ ನೀರು 527 ಕೆರೆಗಳಿಗೆ ಹರಿಯಲಿದೆ. ಈ ಯೋಜನೆಯಿಂದ ಎಂಟು ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಯಾಗಲಿದೆ. ಒಟ್ಟು 252.69 ಕಿಮೀ ಉದ್ದದ ಕಾಲುವೆಯಲ್ಲಿ 208 ಕಿಮೀ ಕಾಮಗಾರಿ ಪೂರ್ಣವಾಗಿದೆ ಎಂದರು.
ಇದನ್ನೂ ಓದಿ: Yettinahole project: ಎತ್ತಿನಹೊಳೆ, ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಕೇಂದ್ರ ಸರಕಾರ ಬ್ರೇಕ್
ಕೇಂದ್ರ ಸರ್ಕಾರ ಈ ಮಟ್ಟದ ಕಾಮಗಾರಿ ಆಗುವವರೆಗೆ ಸುಮ್ಮನಿದ್ದು ಈಗ ನಾಲ್ಕು ತಿಂಗಳಿಂದ ಏಕಾಏಕಿ ಮೂರು ಸಮಿತಿ ರಚಿಸಿ ಪರಿಸರ ಹೆಸರಿನಿಂದ ಅಡ್ಡಗಾಲು ಹಾಕಿದೆ. ಈ ಯೋಜನೆ ಬಗ್ಗೆ ಮನವರಿಕೆ ಮಾಡಲು ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ದೆಹಲಿ ಹಾಗೂ ಡೆಹ್ರಾಡೂನ್ ತೆರಳಿ 111 ಹೆಕ್ಟೇರ್ ಅರಣ್ಯ ಪ್ರದೇಶದ ಅರಣ್ಯೀಕರಣ ಬಗ್ಗೆ ಸವಿವರವಾಗಿ ಚರ್ಚಿಸಿದ್ದರೂ ಅನುಮತಿ ನೀಡುತ್ತಿಲ್ಲ.
ದುರುದ್ದೇಶ ಎದ್ದು ಕಾಣುವ ಹಿನ್ನಲೆ ರೈತರಿಗೆ ಅವಶ್ಯ ಎತ್ತಿನಹೊಳೆ ಯೋಜನೆ ಉಳಿಸಲು ಜನವರಿ 4 ರಂದು ಕೆ.ಬಿ.ಕ್ರಾಸ್ ಬಳಿ ಜನಧ್ವನಿ ಕಾರ್ಯಕ್ರಮ ಮೂಲಕ ಗುಬ್ಬಿ, ತಿಪಟೂರು, ಚಿಕ್ಕನಾಯಕನ ಹಳ್ಳಿ ಹಾಗೂ ತುರುವೇಕೆರೆ ತಾಲ್ಲೂಕಿನ ಜನರಿಗೆ ಅರಿವು ಮೂಡಿಸಿ ಕೇಂದ್ರ ಸರ್ಕಾರದ ಜನವಿರೋಧಿತನ ಬಯಲಿಗೆ ಎಳೆಯಲಾಗುವುದು ಎಂದರು.
ಕೆಪಿಸಿಸಿ ಮಾಜಿ ಸದಸ್ಯ ಕೆ.ಆರ್.ತಾತಯ್ಯ ಮಾತನಾಡಿ ಬೃಹತ್ ಯೋಜನೆಯನ್ನು 2012 ರಲ್ಲಿ ಬಿಸಿ ಚರ್ಚೆ ನಡೆದು ಹಲವು ವಿರೋಧದ ನಡುವೆ ಎತ್ತಿನಹೊಳೆ ಯೋಜನೆ 2014 ರಲ್ಲಿ ಸಿಎಂ ಸಿದ್ದರಾ ಮಯ್ಯ ಅವರ ಕಾಲದಲ್ಲಿ ಚಾಲನೆ ಪಡೆದಿತ್ತು. ಭೂ ಸ್ವಾಧೀನ ವಿಚಾರದಲ್ಲಿ ಸಾಕಷ್ಟು ಅಡೆತಡೆ ಎದುರಾದಾಗ ಡಿ.ಕೆ.ಶಿವಕುಮಾರ್ ಅವರು ಖುದ್ದು ನಿಂತು ಎಲ್ಲಾ ಸಮಸ್ಯೆ ಬಗೆಹರಿಸಿ ಹತ್ತು ವರ್ಷದಲ್ಲಿ ಅಂತಿಮ ರೂಪಕ್ಕೆ ತಂದಿದ್ದಾರೆ. ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ.
ಈ ಯೋಜನೆ ಕ್ರೆಡಿಟ್ ಕಾಂಗ್ರೆಸ್ ಸರ್ಕಾರಕ್ಕೆ ಲಭಿಸಲಿದೆ ಎಂಬ ಅಸೂಯೆಯಲ್ಲಿ ತಾಂತ್ರಿಕ ಸಮಸ್ಯೆ ಸೃಷ್ಟಿ ಮಾಡಿ ಎಂಟು ಜಿಲ್ಲೆಗೆ ಕುಡಿಯುವ ನೀರು ಇಲ್ಲದಂತೆ ಮಾಡಲು ಕೇಂದ್ರ ಸರ್ಕಾರ ಪ್ಲಾನ್ ಮಾಡುತ್ತಿದೆ. ಈ ಕುತಂತ್ರ ಬಗ್ಗೆ ತುಮಕೂರು ಜಿಲ್ಲೆಯ ಫಲಾನುಭವಿ ತಾಲ್ಲೂಕಿನ ಜನರಿಗೆ ಅರಿವು ಮೂಡಿಸಲು ಜನಧ್ವನಿ ಕಾರ್ಯಕ್ರಮ ಕೆ.ಬಿ.ಕ್ರಾಸ್ ಬಳಿ ಆಯೋಜಿಸಲಾಗಿದೆ ಎಂದರು.
ಗುಬ್ಬಿ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ವೆಂಕಟೇಶ್ ಮಾತನಾಡಿ ಎತ್ತಿನಹೊಳೆ ಯೋಜನೆ ಮುಗಿಯುವ ಹಂತದಲ್ಲಿ ಕೆಲ ಇಲಾಖೆಗಳನ್ನು ಛೂ ಬಿಟ್ಟು ತಕರಾರು ಸೃಷ್ಟಿಸಿದ ಕೇಂದ್ರ ಸರ್ಕಾರದ ದುರುದ್ದೇಶ ಬಗ್ಗೆ ಜನರಿಗೆ ತಿಳಿಸಬೇಕಿದೆ. ಅರಣ್ಯ ಪರಿಸರ ಬಗ್ಗೆ ಅಡ್ಡಿ ಪಡಿಸುವ ಮಾತಿಗೆ ರಾಜ್ಯ ಸರ್ಕಾರ ನಾಶವಾಗುವ ಅರಣ್ಯಕ್ಕೆ ನೂರು ಪಟ್ಟು ಅರಣ್ಯ ಬೆಳೆಸುವ ವಾಗ್ದಾನ ಮಾಡಿದ್ದರೂ ತಕರಾರು ಮುಂದುವರೆಸಿದ್ದಾರೆ. ಈ ಬಗ್ಗೆ ಜಿಲ್ಲೆಯ ರೈತರಿಗೆ, ಮಹಿಳೆಯರಿಗೆ, ಯುವ ಜನಾಂಗಕ್ಕೆ ತಿಳಿಸಿ ಎತ್ತಿನಹೊಳೆ ಯೋಜನೆ ಉಳಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಮುಂದಿನ ಭಾನುವಾರ ತಾಲ್ಲೂಕಿನ ರೈತ ಭಾಂದವರು ಕೆ.ಬಿ.ಕ್ರಾಸ್ ಹೋರಾಟಕ್ಕೆ ಭಾಗಿಯಾಗುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಜಿ. ಎಚ್.ಜಗನ್ನಾಥ್, ಯುವ ಕಾಂಗ್ರೆಸ್ ಅಧ್ಯಕ್ಷ ಯತೀಶ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಭಾಗ್ಯಮ್ಮ, ಮುಖಂಡರಾದ ಗುರು ರೇಣುಕಾರಾಧ್ಯ, ಎ.ನರಸಿಂಹ ಮೂರ್ತಿ, ವಾಸುಗೌಡ, ಈಶ್ವರಯ್ಯ, ಕಿಟ್ಟದಕುಪ್ಪೆ ನಾಗರಾಜ್, ತಿಮ್ಲಿಪಾಳ್ಯ ಶಶಿ ಇನ್ನಿತರರು ಇದ್ದರು.