Gubbi News: ದಿಢೀರ್ ಮುಷ್ಕರ ಮಾಡಿದ ಗುಬ್ಬಿಯ ಆಟೋ ಚಾಲಕರು..!!
ಗುಬ್ಬಿ ಪಟ್ಟಣದ ಯಾವುದೇ ಬಡಾವಣೆಗೆ ಹೋದರೂ 40 ರೂ.ಗಳಿಗಿಂತ ಹೆಚ್ಚು ಹಣ ಗ್ರಾಹಕ ರಿಂದ ಪಡೆಯಲು ಸಾಧ್ಯವಾಗದು. ಇಂತಹ ಸನ್ನಿವೇಶದಲ್ಲಿ ನಾವು ಬೆಲೆ ಏರಿಕೆ ಮಾಡಲು ಸಂಬಂಧಪಟ್ಟ ಇಲಾಖೆಗಳ ಅನುಮತಿ ತೆಗೆದುಕೊಳ್ಳಬೇಕು. ಆದರೆ ಇಲ್ಲಿರುವ ಗೋ ಗ್ಯಾಸ್ ಕಂಪನಿಯವರು ನಮಗೆ ಹೇಳುವುದು ನಮಗೆ ಯಾವುದೇ ದರ ನಿಗದಿಯ ನಿರ್ದೇಶನಗಳಿಲ್ಲ
-
ಗುಬ್ಬಿ: ತಿಂಗಳಲ್ಲಿ ಸುಮಾರು 30 ರೂಗಳಷ್ಟು ಆಟೋ ಗ್ಯಾಸ್ ದರ ಏರಿಕೆಯಾಗಿದ್ದು ಬೆಳಿಗ್ಗೆ ಒಂದು ಬೆಲೆ ಸಂಜೆ ಒಂದು ಬೆಲೆ ಕೇಳಿದರೆ ನಿಮಗೆ ಗ್ಯಾಸ್ ನೀಡುವುದಿಲ್ಲ ಎನ್ನುವ ಸ್ಥಳೀಯ ಗೋ ಗ್ಯಾಸ್ ಬಂಕ್ ನವರ ವಿರುದ್ಧ ಸಂಜೆ ಆಟೋ ಚಾಲಕರು ದಿಢೀರ್ ಮುಷ್ಕರ ನಡೆಸಿದರು.
ಬಂಕ್ ಬಳಿ ಜಮಾಯಿಸಿದ ಗ್ಯಾಸ್ ಆಟೋ ಮಾಲೀಕರು ಮತ್ತು ಚಾಲಕರು 30 ರೂ ಏರಿಕೆ ಮಾಡಿದ್ದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಗ್ರಾಹಕರ ಬಳಿ ಹೆಚ್ಚು ಹಣ ಕೇಳಿದರೆ ನಿತ್ಯ ಜಗಳ ಮಾಡಿಕೊಳ್ಳುವ ದುಸ್ಥಿತಿ ಎದುರಾಗಿದೆ ಎಂದು ಆಟೋ ಚಾಲಕರು ತಮ್ಮ ಅಳಲು ತೋಡಿಕೊಂಡರು.
ಗ್ರಾಮಾಂತರ ಪ್ರದೇಶದಿಂದ ಬಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಆಟೋ ಓಡಿಸಿ ಜೀವನ ಮಾಡುವಷ್ಟು ದುಡ್ಡು ಸಿಗದೆ ಇದ್ದರೂ ಹೇಗೋ ನಿಭಾಯಿಸಿಕೊಂಡು ಹೋಗುತ್ತಿದ್ದೆವು.
ಇದನ್ನೂ ಓದಿ: Gubbi News: ಎಲ್ಲಾ ವರ್ಗಕ್ಕೂ ದಕ್ಕಿದ ಬಜೆಟ್: ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್
ಆದರೆ ಈ ಗೋ ಗ್ಯಾಸ್ ಕಂಪನಿಯವರು ಯುದ್ಧದ ನೆಪಯೊಡ್ಡಿ ಒಂದು ತಿಂಗಳಲ್ಲಿ ಹಲವಾರು ಬಾರಿ ಗ್ಯಾಸ್ ದರ ಏರಿಸಿದ್ದು ನಾವು ಜನರಿಗೆ ಬೆಲೆ ಏರಿಸಲಾಗದು ಎಂದು ಗುಬ್ಬಿ ಆಟೋ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಲಕ್ಕೆಗೌಡ ತಿಳಿಸಿದರು.
ಗುಬ್ಬಿ ಪಟ್ಟಣದ ಯಾವುದೇ ಬಡಾವಣೆಗೆ ಹೋದರೂ 40 ರೂ.ಗಳಿಗಿಂತ ಹೆಚ್ಚು ಹಣ ಗ್ರಾಹಕರಿಂದ ಪಡೆಯಲು ಸಾಧ್ಯವಾಗದು. ಇಂತಹ ಸನ್ನಿವೇಶದಲ್ಲಿ ನಾವು ಬೆಲೆ ಏರಿಕೆ ಮಾಡಲು ಸಂಬಂಧಪಟ್ಟ ಇಲಾಖೆಗಳ ಅನುಮತಿ ತೆಗೆದುಕೊಳ್ಳಬೇಕು. ಆದರೆ ಇಲ್ಲಿರುವ ಗೋ ಗ್ಯಾಸ್ ಕಂಪನಿಯವರು ನಮಗೆ ಹೇಳುವುದು ನಮಗೆ ಯಾವುದೇ ದರ ನಿಗದಿಯ ನಿರ್ದೇಶನಗಳಿಲ್ಲ. ಸರ್ಕಾರ ಆ ರೀತಿ ಏನಾದರೂ ಮಾಡುವುದಿದ್ದರೆ ನಮಗೆ ನೋಟಿಸ್ ನೀಡಲಿ ನಾವು ಅದಕ್ಕೆ ಉತ್ತರಿಸುತ್ತೇವೆ ಎಂದು ಕಂಪನಿಯ ಜನರಲ್ ಮ್ಯಾನೇಜರ್ ದೂರವಾಣಿ ಮೂಲಕ ತಿಳಿಸಿರುತ್ತಾರೆ.
ಸ್ಥಳಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ನಿರೀಕ್ಷಕಿ ವೀಣಾ ಭೇಟಿ ನೀಡಿ ಮುಷ್ಕರ ನಿರತರನ್ನು ಸಮಾಧಾನ ಮಾಡಿದರು. ಬಂಕ್ ನ ಸಿಬ್ಬಂದಿ ಜೊತೆ ಚರ್ಚಿಸಿ ನೀವು ಮನಸ್ಸೋ ಇಚ್ಛೆ ಬೆಲೆ ಏರಿಸುವಂತಿಲ್ಲ. ಹಾಗೇನಾದರೂ ಬೆಲೆ ಹೆಚ್ಚು ಮಾಡಬೇಕಿದ್ದರೆ ಕಂಪನಿ ಆದೇಶ ಮಾಡಬೇಕು ಎಂದರು. ವೃಥಾ ಸುಮ್ಮನೆ ಗ್ಯಾಸ್ ಬೆಲೆ ಹೆಚ್ಚು ಮಾಡಿರುವ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಈ ಸಂದರ್ಭದಲ್ಲಿ ಎಚ್ಚರಿಸಿ ದರು.