VTU: ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ, ಶ್ರಮವೊಂದೇ ಯಶಸ್ಸಿನ ಕೀಲಿಕೈ, ಅದೃಷ್ಟದ ಹಿಂದೆ ಬೀಳಬೇಡಿ : ವಿಟಿಯು ಕುಲಪತಿ ಡಾ.ವಿದ್ಯಾಶಂಕರ್ ಅಭಿಮತ
ವಿಟಿಯು ಸದೃಢವಾಗಿ ಬೆಳೆದಿರುವ ಜಾಗತಿಕ ಮನ್ನಣೆಗೆ ಪಾತ್ರವಾಗಿರುವ ತಾಂತ್ರಿಕ ವಿಶ್ವ ವಿದ್ಯಾಲಯವಾಗಿದೆ. 25 ವರ್ಷಗಳ ಹಿಂದೆ 400 ಕೋಟಿ ವಾರ್ಷಿಕ ವರಮಾನ ಹೊಂದಿದ್ದ ವಿಶ್ವವಿದ್ಯಾಲಯವು ಪ್ರಸ್ತುತ 700 ಕೋಟಿ ವರಮಾನ ಗಳಿಸುವಷ್ಟು ಸದೃಡವಾಗಿದ್ದು ಯಾವುದೇ ಖಾಸಗಿ ವಿಶ್ವವಿದ್ಯಾಲಯಕ್ಕಿಂತ ಕಡಿಮೆಯಿಲ್ಲದಂತೆ ಬೆಳೆದು ನಿಲ್ಲುವ ಮೂಲಕ ವಿದ್ಯಾರ್ಥಿ ಸ್ನೇಹಿ ವಿಶ್ವವಿದ್ಯಾಲಯವಾಗಿದೆ
-
ಚಿಕ್ಕಬಳ್ಳಾಪುರ: ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ, ಶ್ರಮವೊಂದೇ ಯಶಸ್ಸಿನ ಕೀಲಿ ಕೈಯಾಗಿದೆ. ಇದನ್ನು ಕಂಡುಕೊಳ್ಳದೆ ಕೇವಲ ಅದೃಷ್ಟದ ಹಿಂದೆ ಬೀಳಬೇಡಿ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(Visvesvaraya Technological University)ದ ಕುಲಪತಿ ಡಾ.ವಿದ್ಯಾಶಂಕರ್ ತಿಳಿಸಿದರು.
ತಾಲೂಕಿನ ಚಿಗಟೇನಹಳ್ಳಿ ಬಳಿಯಿರುವ ವಿಟಿಯು ಅಂಗಸಂಸ್ಥೆಯಾಗಿರುವ ವಿಶ್ವೇಶ್ವರಯ್ಯ ಇಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಟೆಕ್ನಾಲಜಿ ಕ್ಯಾಂಪಸ್ಸಿನಲ್ಲಿ ಮಂಗಳವಾರ ನಡೆದ ಯುಕ್ತಿ ೨ಕೆ೨೬ ಟೆಕ್ನೋ ಕಲ್ಚರಲ್ ಫೆಸ್ಟ್ ಮ್ಯೂಸಿಕಲ್ ಅಂಡ್ ಕಲ್ಚರಲ್ ನೈಟ್ಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಟಿಯು ಸದೃಢವಾಗಿ ಬೆಳೆದಿರುವ ಜಾಗತಿಕ ಮನ್ನಣೆಗೆ ಪಾತ್ರವಾಗಿರುವ ತಾಂತ್ರಿಕ ವಿಶ್ವ ವಿದ್ಯಾಲಯವಾಗಿದೆ. 25 ವರ್ಷಗಳ ಹಿಂದೆ 400 ಕೋಟಿ ವಾರ್ಷಿಕ ವರಮಾನ ಹೊಂದಿದ್ದ ವಿಶ್ವವಿದ್ಯಾಲಯವು ಪ್ರಸ್ತುತ 700 ಕೋಟಿ ವರಮಾನ ಗಳಿಸುವಷ್ಟು ಸದೃಢವಾಗಿದ್ದು ಯಾವುದೇ ಖಾಸಗಿ ವಿಶ್ವವಿದ್ಯಾಲಯಕ್ಕಿಂತ ಕಡಿಮೆಯಿಲ್ಲದಂತೆ ಬೆಳೆದು ನಿಲ್ಲುವ ಮೂಲಕ ವಿದ್ಯಾರ್ಥಿ ಸ್ನೇಹಿ ವಿಶ್ವವಿದ್ಯಾಲಯವಾಗಿದೆ ಎಂದರು.
ಇದನ್ನೂ ಓದಿ: Chikkaballapur News: ಮಾ.26ಕ್ಕೆ ಅಂಬೇಡ್ಕರ್ ಕೊಲಾಜ್ ನಾಟಕ ನೋಡಿ ಅಂಬೇಡ್ಕರ್ ಬಗ್ಗೆ ಅರಿಯಿರಿ: ಕೋಟಿಗಾನಹಳ್ಳಿ ರಾಮಯ್ಯ
ಏ.9 ಮತ್ತು 10ರಂದು ವಿಟಿಯು ರಾಜ್ಯಮಟ್ಟದ ಯೂತ್ ಫೆಸ್ಟಿವಲ್ ಎಂಬ ಕಾರ್ಯಕ್ರಮ ಆಯೋಜಿಸುತ್ತಿದೆ. ಇದರ ಜತೆಗೆ ಏ.26ರಂದು ಅಂತರಕಾಲೇಜು ಕ್ರೀಡಾಮಹೋತ್ಸವವನ್ನು ಕೂಡ ತಿಪಟೂರಿನಲ್ಲಿ ಆಯೋಜಿಸಲಾಗಿದೆ. ಇದರಲ್ಲಿ ಸುಮಾರು 6 ಸಾವಿರ ವಿದ್ಯಾರ್ಥಿಗಳು ಭಾಗಿಯಾಗಲಿದ್ದು ಪ್ರತಿ ಈವೆಂಟ್‌ಗೂ ಸುಮಾರು 75 ಲಕ್ಷ ರೂಪಾಯಿ ಕೊಡುವ ಕೆಲಸ ವಿಶ್ವವಿದ್ಯಾಲಯ ಮಾಡಲಿದೆ ಎಂದರು.
ನಾನು ಕುಲಪತಿಯಾದ ಈ 3 ವರ್ಷಗಳಲ್ಲಿ ವಿಶ್ವವಿದ್ಯಾಲಯ ಗುಣಾತ್ಮಕ ಪ್ರಗತಿಯನ್ನು ಕಂಡಿದೆ. ಮುದ್ದೇನಹಳ್ಳಿ ಕ್ಯಾಂಪಸ್ಸಿಗೆ ನಾನು ಕುಲಪತಿಯಾಗಿ ಬಂದ ಹೊಸತರಲ್ಲಿ 100 ವಿದ್ಯಾರ್ಥಿಗಳು ಮಾತ್ರ ಇದ್ದರು. ಈಗ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ದಾಖಲಾಗಿ ದ್ದಾರೆ. ಬೆಳಗಾವಿಯಲ್ಲಿ 300 ಇದ್ದದ್ದು 2500 ವಿದ್ಯಾರ್ಥಿಗಳಿಗೇರಿದೆ. ಮೈಸೂರಿನಲ್ಲಿ 1200 ರಿಂದ 1500, ಗುಲಬರ್ಗಾದಲ್ಲಿ 1200 ವಿದ್ಯಾರ್ಥಿಗಳಿರುವುದನ್ನು ಕಾಣಬಹುದು. ಇದು ನನ್ನ ಅವಧಿಯಲ್ಲಿ ಆಗಿರುವ ಸಾಧನೆ ಎಂದರು.
2024ರಲ್ಲಿ ನಾನು ಕುಲಪತಿ ಆದ ಸಂದರ್ಭದಲ್ಲಿ ಆರಂಭಿಸಿದ್ದು ಯುಕ್ತಿ ಎಂಬ ಕಾರ್ಯ ಕ್ರಮ ಇಂದು ಯಶಸ್ವಿಯಾಗಿ ಮುಂದುವರೆಸಿಕೊಂಡು ಬರಲಾಗುತ್ತಿದೆ. ಇದರ ಮೂಲ ಉದ್ದೇಶ ವಿಟಿಯುಗೆ ಬರುವ ವಿದ್ಯಾರ್ಥಿಗಳಿಗೆ ಕೇವಲ ವಿಶ್ವವಿದ್ಯಾಲಯದ ಪಠ್ಯಕ್ರಮ ವನ್ನು ಮಾತ್ರ ಬೋಧಿಸಿ ಇಂಜನಿಯರಿಂಗ್ ಪದವಿ ಪ್ರಮಾಣ ಪತ್ರ ನೀಡುವುದಲ್ಲ. ಬದಲಿಗೆ ವಿದ್ಯಾರ್ಥಿಗಳಲ್ಲಿ ಅಂತರ್ಗತವಾಗಿರುವ ವಿಶೇಷವಾದ ಪ್ರತಿಭೆಯನ್ನು ಹೊರ ತೆಗೆದು ಅವರಿಗೆ ಇಂತಹ ದೊಡ್ಡ ವೇದಿಕೆ ಕಲ್ಪಿಸುವುದೇ ಆಗಿದೆ ಎಂದರು.
ವಿದ್ಯಾರ್ಥಿಗಳಲ್ಲಿರುವ ಕಲೆ ಮತ್ತು ಸಾಂಸ್ಕೃತಿಕ, ತಾಂತ್ರಿಕ ಪ್ರತಿಭೆಯನ್ನು ಹೊರ ತೆಗೆಯುವ ಕೆಲಸವನ್ನು ವಿಟಿಯು ಸಮರ್ಥವಾಗಿ ಮಾಡುತ್ತಾ ಬಂದಿದೆ. ಆ ಮೂಲಕ ವಿಶ್ವದ ತಾಂತ್ರಿಕ ವಿಶ್ವವಿದ್ಯಾಲಯಗಳಿಗೆ ವಿಟಿಯು ರೋಲ್ ಮಾಡೆಲ್ ಆಗಿ ಬೆಳೆದು ನಿಂತಿದೆ. ಇದಕ್ಕೆ ಇಂಬು ನೀಡುವಂತೆ ವಿಶ್ವವಿದ್ಯಾಲಯ ಅನೇಕ ಪ್ರಶಸ್ತಿಗಳಿಗೆ ಭಾಜನ ವಾಗಿದೆ. ಎಕನಾಮಿಕ್ಸ್ ಟೈಮ್ಸ್ನ ಪ್ರತಿ ವರ್ಷದ ಎಜುಟೆಕ್ ಅವಾರ್ಡ್ನಲ್ಲಿ ಕಡ್ಡಾಯವಾಗಿ ಪ್ರಶಸ್ತಿ ಪಡೆಯುತ್ತಾ ಬಂದಿದೆ.ವಿಟಿಯುನಲ್ಲಿ ಪ್ರವೇಶ ಪಡೆಯಲು ಇಂದು ಕ್ಯೂನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಈ ವರ್ಷ 3 ಎಜುಟೆಕ್ ಅವಾರ್ಡ್ಗಳನ್ನು ತನ್ನದಾಗಿಸಿಕೊಂಡಿರುವುದೇ ವಿಟಿಯು ಬದ್ಧತೆ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ಅದರಲ್ಲಿಯೂ ಅನ್ ಇನ್ಸ್ʼಟ್ಯೂಷನ್ ರೆಡಿ ಫಾರ್ ಫ್ಯೂಚರ್ ಎಜುಕೇಷನ್ ವಿಭಾಗದಲ್ಲಿ ಗೋಲ್ಡ್ ಮೆಡಲ್ ಅನ್ನು ತನ್ನದಾಗಿಸಿಕೊಂಡಿರು ವುದು ಸಾಮಾನ್ಯ ಸಂಗತಿಯಾಗಿ ಉಳಿದಿಲ್ಲ. ಹೀಗಾಗಿ ವಿಟಿಯು ವರ್ತಮಾನ ದಲ್ಲಿ ಯಾವ ಟೆಕ್ನಾಲಜಿ ಬೆಳೆಯುತ್ತಿದೆಯೋ ಅದಕ್ಕೆ ಪೂರಕವಾಗಿ ತನ್ನನ್ನು ತಾನು ಸಜ್ಜುಗೊಳಿಸಿ ಕೊಂಡಿದೆಯಲ್ಲದೆ ವಿದ್ಯಾರ್ಥಿಗಳನ್ನೂ ಸಜ್ಜುಗೊಳಿಸುತ್ತಾ ಸಾಗಿದೆ ಎಂದರು.
2026ರಿಂದ ವಿಟಿಯು ಆರ್ಟಿಫಿಷಿಯಲ್ ಸೂಪರ್ ಇಂಟೆಲಿಜೆನ್ಸ್ ಎಂಬ ಎಲೆಕ್ಟೀವ್ ಕೋರ್ಸುಗಳನ್ನು ನಮ್ಮ ವಿದ್ಯಾರ್ಥಿಗಳಿಗೆ ಪರಿಚಯಿಸುತ್ತಿದ್ದೇವೆ. ಕಾರಣ 2030ರ ಹೊತ್ತಿಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎಂಬುದು ಆರ್ಟಿಫಿಷಿಯಲ್ ಸೂಪರ್ ಇಂಟೆಲಿಜೆನ್ಸಿ ಆಗಲಿದೆ. ಆಕಾರಣದಿಂದ ನಾವು ಟೆಕ್ನಾಲಜಿಯಲ್ಲಿ ಏನೇ ಬದಲಾವಣೆ ಕಂಡುಕೊAಡರು ಈಡೀ ದೇಶದಲ್ಲಿ ಈ ವಿಶ್ವವಿದ್ಯಾಲಯ ಮಾದರಿಯಾಗಿ ಮೊದಲನೆಯದಾಗಿ ಅಳವಡಿಸಿ ಕೊಂಡು ಇತರರಿಗಿಂತ ಮೊದಲಿದ್ದೇವೆ ಎಂದರು.
ವಿಟಿಯು ಕರ್ನಾಟಕದಾದ್ಯಂತ ನಾಲ್ಕು ವಿಭಾಗಗಳಲ್ಲಿ ತನ್ನ ವಿಭಾಗೀಯ ಕ್ಯಾಂಪಸ್ ಗಳನ್ನು ಹೊಂದಿದೆ. ಇಲ್ಲಿಗೆ ಬರುವ ವಿದ್ಯಾರ್ಥಿಗಳಿಗೆ ಕೇವಲ ಇಂಜನಿಯರಿಂಗ್ ಪದವಿ ನೀಡಿದರೆ ಸಾಲದು, ಉದ್ಯೋಗವನ್ನೂ ಒದಗಿಸುವ ಕೆಲಸ ಮಾಡಬೇಕಿದೆ. ಇದಕ್ಕಾಗಿ ಸೆಂಟ್ರ ಲೈಸ್ಡ್ ಪ್ಲೇಸ್‌ಮೆಂಟ್ ಸೆಲ್ ತೆರೆದು ಉದ್ಯೋಗ ಒದಗಿಸುವ ಕೆಲಸ ಮಾಡುತ್ತಿದೆ.
ಅಮೆರಿಕಾದ ವಿಮಾನ ತಯಾರಿಕಾ ಕಂಪನಿಯಾದ ಬೋಯಿಂಗ್ ಸಂಸ್ಥೆಯು ಇಡೀ ರಾಜ್ಯ ದಲ್ಲಿ ತಾಂತ್ರಿಕ ಕಾಲೇಜುಗಳ ಪೈಕಿ ವಿಟಿಯುಗೆ ಸೇರಿದ 38 ವಿದ್ಯಾರ್ಥಿಗಳನ್ನು ಇಂಟರ್ನ್ಶಿಪ್ ಗೆ ಆಯ್ಕೆ ಮಾಡಿಕೊಂಡಿದೆ. ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ 35 ಸಾವಿರ ವೇತನ ನೀಡಿದ್ದು ಈ ಪೈಕಿ ಇಂಟರ್ನ್ಶಿಪ್‌ನಲ್ಲಿದ್ದ 18 ಮಂದಿಯನ್ನು ಖಾಯಂ ನೌಕರರಾಗಿ ಪಡೆದಿದೆ. ಇದು ದೇಶದಲ್ಲಿ ಪ್ರಥಮ ಸಾಧನೆ ನಮ್ಮ ವಿಟಿಯುಗೆ ಸಲ್ಲುತ್ತದೆ. ಇದು ವಿಟಿಯು ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿ ಎಂದರು.
*
ಕನ್ನಡ ಚಲನಚಿತ್ರ ನಾಯಕ ನಟಿ ಆಶಿಕಾ ರಂಗನಾಥ್(Actress Ashika Ranganath) ಮಾತನಾಡಿ, ನಾನೂ ಕೂಡ ನಿಮ್ಮಂತೆ ವಿದ್ಯಾರ್ಥಿಯಾಗಿದ್ದಾಗ ವೇದಿಕೆ ಹಂಚಿಕೊಳ್ಳಲು ಭಯವಾಗುತ್ತಿತ್ತು.ನೃತ್ಯ ಮಾಡಲು ಮಾತ್ರ ಹೆದರುತ್ತಿರಲಿಲ್ಲ. ಈ ಗುಣವೇ ನನ್ನನ್ನು ಸಿನಿಮಾ ರಂಗ ಪ್ರವೇಶ ಮಾಡುವಂತೆ ಮಾಡಿದೆ. 10 ವರ್ಷಗಳಿಂದ ಕೈಹಿಡಿದು ಮುನ್ನಡೆಸಿದೆ. ಪ್ರತಿಯೊಬ್ಬರಲ್ಲೂ ಒಂದೊAದು ವಿಶೇಷವಾದ ಪ್ರತಿಭೆಯಿರಲಿದೆ.ಅದನ್ನು ಸಕಾಲದಲ್ಲಿ ಗುರ್ತಿಸಿ ಪ್ರೋತ್ಸಾಹ ನೀಡಿದರೆ ಕಂಡಿತ ಉತ್ತಮ ಭವಿಷ್ಯ ನಿಮ್ಮದಾಗಲಿದೆ ಎಂದರು.
ಇಂದಿನ ವಿದ್ಯಾರ್ಥಿಗಳಿಗೆ ತಾಂತ್ರಿಕವಾದ ನೆರವು ಹೆಚ್ಚಿದೆ. ಸೋಷಿಯಲ್ ಮೀಡಿಯಾ ಪ್ಲಾಟ್ ಫಾರಂ ಅನಂತವಾಗಿದೆ. ಇದನ್ನು ಬಳಸಿಕೊಂಡು ಬಾಳು ಬೆಳಗಿಸಿಕೊಳ್ಳಿ. ವಿಟಿಯು ಮುದ್ದೇನಹಳ್ಳಿಗೆ ನನ್ನ ಕರೆಸಿ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು. ಇದೇ ವೇಳೆ ವಿದ್ಯಾರ್ಥಿಗಳ ಕೋರಿಕೆಯ ಮೇಲೆ ಚುಟು ಚುಟು ಹಾಡಿಗೆ ನೃತ್ಯ ಮಾಡಿ ಯುವ ಸಮೂಹವನ್ನು ರಂಜಿಸಿದರು.
*
ಕನ್ನಡದ ಮತ್ತೊಬ್ಬ ಶ್ರೇಷ್ಟ ನಟ ನಿರ್ದೇಶಕ ಚಿತ್ರ ಸಾಹಿತಿ ಹಾಡುಗಾರ ಜೋಗಿ ಪ್ರೇಮ್ ಮಾತನಾಡಿ, ನ್ಯಾಯಮಾರ್ಗದಲ್ಲಿ ನಡೆವವರಿಗೆ ಪರೀಕ್ಷೆಗಳು ಹೆಚ್ಚು.ಕೆ.ಡಿ ಸಿನಿಮಾ ಇದೇ 30ಕ್ಕೆ ತೆರೆಗೆ ಬರಲಿದೆ. ಎಲ್ಲರೂ ಚಿತ್ರಮಂದಿರಗಳಿಗೆ ಬಂದು ಚಿತ್ರವನ್ನು ವೀಕ್ಷಿಸಿ ಎಂದು ಮನವಿ ಮಾಡಿದ ಅವರು ಈ ಚಿತ್ರದ ಸರ್ಸೆ ನಿನ್ನ ಸೆರಗು ಹಾಡಿನ ವಿವಾದದ ಬಗ್ಗೆ ಮಾತನಾಡಿ, ಅದರ ಬಗ್ಗೆ ಏನನ್ನೂ ಕೇಳಬೇಡಿ ಎಂದು ಮಾಧ್ಯಮದವರಿಗೆ ಕೈಮುಗಿದರು. ಕಾಲೆಳೆಯುವವರು ಇದ್ದಾಗಲೇ ಬೆಳೆಯಲು ಸಾಧ್ಯ ಎಂದು ಹೇಳಿದ ಅವರು ವಿದ್ಯಾರ್ಥಿಗಳ ಕೋರಿಕೆಯ ಮೇಲೆ ಬೇಡುವೆನು ವರವನ್ನು ಕೊಡು ತಾಯೆ ಜನ್ಮವನ್ನು ಕೊನೆತನಕ ಮರೆಯಲ್ಲ ಜೋಗಿ ಹಾಡನ್ನು ಹಾಡಿ ಕಣ್ಣಾಲಿಗಳು ತೇವವಾಗುವಂತೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಶಾಲ್ ಚೌಕ್ಸೆ ಸಮಾಜ ಘಾತುಕ ಶಕ್ತಿಯಾಗುವ ಬದಲು ದೇಶವನ್ನು ಕಟ್ಟುವ ಸಮರ್ಥ ಯುವಶಕ್ತಿ ನೀವಾಗಬೇಕು. ನೆಲದ ಕಾನೂನು ಮೀರಿದ ಚಟವಟಿಕೆಗಳಲ್ಲಿ ಭಾಗಿಯಾಗಿ ಬದುಕು ಹಾಳು ಮಾಡಿಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಮುದ್ದೇನಹಳ್ಳಿ ವಿಟಿಯು ಕ್ಯಾಂಪಸ್ ನಿರ್ದೇಶಕ ಡಾ.ರಂಗಪ್ಪ, ಬೆಂಗಳೂರು ವಿಭಾಗೀಯ ನಿರ್ದೇಶಕ ಸುದರ್ಶನರೆಡ್ಡಿ, ದಿಲೀಪ್ ಕೃಷ್ಣ, ಪ್ರೊ.ಚಿಕ್ಕಣ್ಣ, ಪ್ರೊ. ಬಿನಮ್ಯಾಥ್ಯು, ಪ್ರೊ.ತನುಜ, ಕಾರ್ಯಕಾರಿ ಮಂಡಳಿ ಸದಸ್ಯರು, ಸಿಂಡಿಕೇಟ್ ಸದಸ್ಯರು ಇದ್ದರು.