Kempegowda Jayanti: ನಾಡು, ನಗರಗಳ ನಿರ್ಮಾಣದಲ್ಲಿ ನಾಡಪ್ರಭು ಕೆಂಪೇಗೌಡರ ದೂರದರ್ಶಿತ್ವ ಅಪ್ರತಿಮ: ತಹಸೀಲ್ದಾರ್ ಮಮತಾ
Chikkanayakanahalli News: ಚಿಕ್ಕನಾಯಕನಹಳ್ಳಿ ತಾಲೂಕು ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿಯಲ್ಲಿ ತಹಸೀಲ್ದಾರ್ ಮಮತಾ ಅವರು ಮಾತನಾಡಿದ್ದಾರೆ. ಈ ವೇಳೆ ಬೆಂಗಳೂರಿನ ನಿರ್ಮಾಣದಲ್ಲಿ ಕೆಂಪೇಗೌಡರ ದೂರದೃಷ್ಟಿ, ಕೊಡುಗೆಗಳ ಬಗ್ಗೆ ತಹಸೀಲ್ದಾರ್ ಅವರು ಸ್ಮರಿಸಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲೂಕು ಕಚೇರಿಯಲ್ಲಿ ಕೆಂಪೇಗೌಡರ ಜಯಂತಿ ಆಚರಿಸಲಾಯಿತು. -
ಚಿಕ್ಕನಾಯಕನಹಳ್ಳಿ, ಜೂ.27: ನಾಡು ಮತ್ತು ನಗರಗಳ ನಿರ್ಮಾಣದಲ್ಲಿ ನಾಡಪ್ರಭು ಕೆಂಪೇಗೌಡರ ದೂರದರ್ಶಿತ್ವ ಅಪ್ರತಿಮವಾದುದು ಎಂದು ತಹಸೀಲ್ದಾರ್ ಮಮತಾ ತಿಳಿಸಿದರು. ತಾಲೂಕು ಕಚೇರಿಯಲ್ಲಿ ಆಯೋಜಿಸಲಾಗಿದ್ದ ಶ್ರೀ ಕೆಂಪೇಗೌಡರ ಜಯಂತಿಯಲ್ಲಿ (Kempegowda Jayanti) ಅವರು ಮಾತನಾಡಿದರು.
ವಿಜಯನಗರ ಸಾಮ್ರಾಜ್ಯಕ್ಕೆ ಪರ್ಯಾಯವಾಗಿ ಕೆಂಪೇಗೌಡರು ಭವ್ಯ ಸಾಮ್ರಾಜ್ಯ ಕಟ್ಟಿದರು. ಅವರು ಬಾಲ್ಯದಲ್ಲಿಯೇ ತಮ್ಮ ತಂದೆರೊಂದಿಗೆ ಯುದ್ಧಕ್ಕೆ ತೆರಳುತ್ತಿದ್ದಾಗ, ತಾವೂ ಒಬ್ಬ ಮಹಾನ್ ರಾಜನಾಗಬೇಕೆಂಬ ಆಸೆ ಅವರಲ್ಲಿ ಮೊಳಕೆಯೊಡೆಯಿತು. ಅದರಂತೆ ಮುಂದೆ ಅವರು ಸುಂದರ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದರು ಎಂದು ಹೇಳಿದರು.
ಕೆಂಪೇಗೌಡರು ತಾವು ನಿರ್ಮಿಸಿದ ನಗರದ ರಕ್ಷಣೆಗಾಗಿ ಭದ್ರವಾದ ಕೋಟೆಯನ್ನು ಕಟ್ಟಿದರು. ನಾಡಿನ ಸಾರ್ವಜನಿಕರ ಉತ್ತಮ ಬದುಕಿಗಾಗಿ ಹಾಗೂ ಆರ್ಥಿಕ ಆದಾಯದ ಮೂಲವಾಗಿ ವಿವಿಧ ಪೇಟೆಗಳನ್ನು ನಿರ್ಮಿಸಿದರು. ಜನರ ಮತ್ತು ಜಾನುವಾರುಗಳ ನೀರಿನ ದಾಹವನ್ನು ತೀರಿಸಲು ನೂರಾರು ಸುಂದರ ಕೆರೆಗಳನ್ನು ನಿರ್ಮಿಸಿದರು. ಜನರ ಆರೋಗ್ಯ ರಕ್ಷಣೆಗಾಗಿ ಉದ್ಯಾನವನಗಳನ್ನು ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಾಂಸ್ಕೃತಿಕ ಕಲೆಯ ನೆಲೆಬೀಡಾದ ಭವ್ಯ ದೇವಾಲಯಗಳನ್ನು ನಿರ್ಮಿಸಿದರು. ನಾಡಪ್ರಭುಗಳು ಅಂದು ಸಾವಿರಾರು ಕೆರೆಗಳನ್ನು ನಿರ್ಮಿಸಿದ ಭವ್ಯ ಇತಿಹಾಸ ನಮ್ಮ ಕಣ್ಣಮುಂದೆ ಇದೆ. ಆದರೆ ಇಂದು ಅಭಿವೃದ್ಧಿಯ ಹೆಸರಿನಲ್ಲಿ ನಾವು ಕೆರೆಗಳನ್ನು ನಾಶಪಡಿಸುತ್ತಿರುವುದು ಬೇಸರದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಶ್ರೀ ಹರ್ಷ ಮಾತನಾಡಿ, ಮನುಷ್ಯನಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆ ಇದ್ದರೆ ಎಂದಿಗೂ ಒಳ್ಳೆಯದಾಗುತ್ತದೆ. ಯಾರು ಹಾಳಾದರೂ ನಾವು ಚೆನ್ನಾಗಿರಬೇಕು ಎಂಬ ಸ್ವಾರ್ಥ ತುಂಬಿದ ಇಂದಿನ ದಿನಗಳಲ್ಲಿ ನಾಡಿನ ಏಳಿಗೆಗಾಗಿ ನಾಡಪ್ರಭು ಕೆಂಪೇಗೌಡರ ತ್ಯಾಗ, ಕೊಡುಗೆ ಇತಿಹಾಸದಲ್ಲಿ ಅನನ್ಯವಾದುದು ಎಂದು ತಿಳಿಸಿದರು.
ನಿಶಾನಿ ಕಿರಣ್ ಮಾತನಾಡಿ, ನಾವು ಸಮಾಜಕ್ಕೆ ಒಳ್ಳೆಯದನ್ನು ಮಾಡಿದರೆ ನಮಗೂ ಕೂಡ ಒಳ್ಳೆಯದೇ ಆಗುತ್ತದೆ ಎಂಬುದಕ್ಕೆ ಕೆಂಪೇಗೌಡರ ಬದುಕೇ ಸಾಕ್ಷಿʼ ಎಂದು ತಿಳಿಸಿದರು. ದಿಶಾ ಸಮಿತಿ ಸದಸ್ಯ ರಾಮಚಂದ್ರಯ್ಯ ಮಾತನಾಡಿ, ಕೆಂಪೇಗೌಡರು ಪ್ರತಿಯೊಂದು ಜನಾಂಗಕ್ಕೂ ತಮ್ಮದೇ ಆದ ಅನನ್ಯ ಕೊಡುಗೆಯನ್ನು ನೀಡಿದ್ದಾರೆ ಎಂದು ಸ್ಮರಿಸಿದರು. ಒಕ್ಕಲಿಗರ ಸಂಘದ ಉಪಾಧ್ಯಕ್ಷ ಕೃಷ್ಣೇಗೌಡ ಮಾತನಾಡಿ ಗೌರವ ಸಲ್ಲಿಸಿದರು.
ಕೆಂಪೇಗೌಡ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಾವಿಗೆಹಳ್ಳಿ ಮಧು ಮಾತನಾಡಿ, ಬದುಕಿಗೆ ಸುಸ್ಥಿರತೆ ನೀಡಿದ ಕೆಂಪೇಗೌಡರ ಆಡಳಿತ ಮಾದರಿಯನ್ನು ಇಂದು ಸರ್ಕಾರಗಳು ಪಾಲಿಸುತ್ತಿವೆ. ನಾವು ಕೇವಲ ಭಾಷಣಕ್ಕೆ ಸೀಮಿತವಾಗದೆ ನಾಡನ್ನು ಕಟ್ಟುವ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು. ಕಾರ್ಯಕ್ರಮದ ಆರಂಭದಲ್ಲಿ ಉಪನ್ಯಾಸಕ ಹರೀಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಜೂನ್ 28ರಂದು ಬೆಂಗಳೂರಿನ 'ಪರಮ್ ವಿಹಾರ' ವೇದಿಕೆಯಲ್ಲಿ ಸುಗಮ ಸಂಗೀತ-ನೃತ್ಯ ಸಂಗಮ
ಸಮಾರಂಭದಲ್ಲಿ ಕೆಂಪೇಗೌಡ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಶಿವಶಂಕರ್, ಯಶವಂತ, ನಟರಾಜು, ಕುಮಾರಸ್ವಾಮಿ, ಶಂಕರೇಗೌಡ, ಬೆಸ್ಕಾಂ ಎಇಇ ಗವಿರಂಗಯ್ಯ ಪಶು ಪಾಲನೆ ಇಲಾಖೆಯ ಸಹಾಯಕ ನಿರ್ದೇಶಕ ಕಾಂತರಾಜು ಸಿಡಿಪಿಒ ಹೊನ್ನಪ್ಪ ಲೋಕೋಪಯೋಗಿ ಇಲಾಖೆಯ ಮಂಜುರಾಜ್ ಅರಸ್ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿಗಳು ಹಾಗೂ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.