ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Tumkur News: ಶತಮಾನದ ಇತಿಹಾಸವಿರುವ ಸರಕಾರಿ ಶಾಲೆಯ ಜಾಗ ಉಳಿಸಲು ಒತ್ತಾಯ

ತುಮಕೂರಿನಲ್ಲಿ ಶತಮಾನದ ಇತಿಹಾಸವಿರುವ ಶಾಲೆಯ ಜಾಗವು ಮಾರುಕಟ್ಟೆಯಲ್ಲಿ ಅಧಿಕ ಬೆಲೆ ಬಾಳುತ್ತಿರುವುದರಿಂದ, ಕೆಲ ಖಾಸಗಿ ಸಂಸ್ಥೆಗಳು ಹಾಗೂ ರಿಯಲ್ ಎಸ್ಟೇಟ್ ಲಾಬಿ ಶಾಲೆಯ ಮೇಲೆ ಕಣ್ಣಿಟ್ಟಿವೆ. ಶಾಲಾ ಜಾಗವನ್ನು ಕಬಳಿಸುವ ದುರುದ್ದೇಶದಿಂದಲೇ ಶಾಲೆಗೆ ಸರಿಯಾದ ಮೂಲಭೂತ ಸೌಕರ್ಯಗಳು ಸಿಗದಂತೆ ತಡೆಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಶತಮಾನದ ಇತಿಹಾಸವಿರುವ ಸರಕಾರಿ ಶಾಲೆಯ ಜಾಗ ಉಳಿಸಲು ಒತ್ತಾಯ

-

Prabhakara R
Prabhakara R Sep 13, 2026 9:32 PM

​ತುಮಕೂರು: ನಗರದ ಹೃದಯಭಾಗದ ಗಾಂಧೀನಗರದಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಜಾಗವನ್ನು ಒತ್ತುವರಿಯಿಂದ ರಕ್ಷಿಸುವಂತೆ ಆಗ್ರಹಿಸಿ, ಆಲ್ ಇಂಡಿಯಾ ದಲಿತ ಕ್ರಿಯಾ ಸಮಿತಿ ಹಾಗೂ ಆಲ್ ಇಂಡಿಯಾ ಡಾ. ಬಿ.ಆರ್. ಅಂಬೇಡ್ಕರ್ ಪ್ರಚಾರ ಸಮಿತಿಯ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಶತಮಾನದ ಇತಿಹಾಸವಿರುವ ಈ ಶಾಲೆಯ ಜಾಗವು ಮಾರುಕಟ್ಟೆಯಲ್ಲಿ ಅಧಿಕ ಬೆಲೆ ಬಾಳುತ್ತಿರುವುದರಿಂದ, ಕೆಲ ಖಾಸಗಿ ಸಂಸ್ಥೆಗಳು ಹಾಗೂ ರಿಯಲ್ ಎಸ್ಟೇಟ್ ಲಾಬಿ ಶಾಲೆಯ ಮೇಲೆ ಕಣ್ಣಿಟ್ಟಿವೆ. ಶಾಲಾ ಜಾಗವನ್ನು ಕಬಳಿಸುವ ದುರುದ್ದೇಶದಿಂದಲೇ ಶಾಲೆಗೆ ಸರಿಯಾದ ಮೂಲಭೂತ ಸೌಕರ್ಯಗಳು ಸಿಗದಂತೆ ತಡೆಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

​ಖಾಸಗಿ ಕಟ್ಟಡ ನಿರ್ಮಾಣ ಯತ್ನ: ಶಾಲೆಯ ಮೂಲಸ್ಥಿತಿಯನ್ನು ಹಾಳುಮಾಡಿ, ಖಾಸಗಿ ಸಂಸ್ಥೆಯ ಹೆಸರಿನಲ್ಲಿ ಬೇರೆ ಕಟ್ಟಡ ನಿರ್ಮಿಸಲು ಕೆಲವರು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ ಎಂದು ಜಿಲ್ಲಾಧ್ಯಕ್ಷ ಎನ್.ಕೆ. ನಿಧಿಕುಮಾರ್ ಆರೋಪಿಸಿದರು.

​ಖಾತೆ ಇಲ್ಲದಿರುವ ಬಗ್ಗೆ ಆತಂಕ: ಈವರೆಗೂ ಮಹಾನಗರ ಪಾಲಿಕೆಯಿಂದ ಈ ಶಾಲೆಯ ಹೆಸರಿಗೆ ಯಾವುದೇ ಅಧಿಕೃತ ಖಾತೆ ಆಗಿಲ್ಲ. ಈ ಕುರಿತು ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಪಾಲಿಕೆಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜಿಲ್ಲಾ ಅಟ್ರಾಸಿಟಿ ಕಮಿಟಿ ಸದಸ್ಯ ಕೆ. ಗೋವಿಂದರಾಜು ಬೇಸರ ವ್ಯಕ್ತಪಡಿಸಿದರು.

​ಕೂಡಲೇ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು, ಶತಮಾನದ ಇತಿಹಾಸವಿರುವ ಸರ್ಕಾರಿ ಶಾಲೆಯ ಜಾಗವನ್ನು ಸಂರಕ್ಷಿಸಿ, ಸರ್ಕಾರವೇ ಮುತುವರ್ಜಿ ವಹಿಸಿ ಶಾಲೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

​ಈ ಪ್ರತಿಭಟನಾ ಮನವಿ ಸಲ್ಲಿಕೆ ವೇಳೆ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಕೆ. ನಿಧಿಕುಮಾರ್, ಜಿಲ್ಲಾ ಅಟ್ರಾಸಿಟಿ ಕಮಿಟಿ ಸದಸ್ಯ ಕೆ. ಗೋವಿಂದರಾಜು, ಪಿಂಜಾರ್ ಮತ್ತು ನದಾಫ್ ಸಂಘಟನೆಯ ರಾಜ್ಯಧ್ಯಕ್ಷ ಬಶೀರ್ ಅಹಮ್ಮದ್, ದಲಿತ ಸೇನೆ ರಾಮ್ ವಿಲಾಸ್ ಸಂಘಟನೆ ಜಿಲ್ಲಾಧ್ಯಕ್ಷ ಗೂಳೂರು ಸಿದ್ಧರಾಜು, ಸಂವಿಧಾನ ರಕ್ಷಣಾ ಕ್ರಾಂತಿ ಸೇನೆ ರಾಜ್ಯ ಅಧ್ಯಕ್ಷ ಪ್ರಕಾಶ್ ಹೆಚ್.ಪಿ., ಭೈರೇಶ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.