Amazing Pet Planet: ಅಮೇಜಿಂಗ್ ಪೆಟ್ ಪ್ಲಾನೆಟ್; ಶಿರಸಿಯಲ್ಲಿದೆ ಒಂದು ಪುಟ್ಟ ಪ್ರಾಣಿ ಸಾಮ್ರಾಜ್ಯ!
ಇದು ಪ್ರಾಣಿ-ಪಕ್ಷಿಗಳ ಅನಾಥಾಶ್ರಮವಾಗಿದೆ. ಪ್ರಾಣಿಪ್ರಿಯ ವೈದ್ಯ ಡಾ. ರಾಜೇಂದ್ರ ಸಿರ್ಸಿಕರ್ ಮತ್ತು ಪೂಜಾರಾಜ್ ಸಿರ್ಸಿಕರ್ ದಂಪತಿ ಈ 'ಅಮೇಜಿಂಗ್ ಪೆಟ್ ಪ್ಲಾನೆಟ್' ಅನ್ನು ನಡೆಸುತ್ತಿದ್ದಾರೆ. ರಸ್ತೆ ಅಪಘಾತಕ್ಕೊಳಗಾದ ಮತ್ತು ಅನಾರೋಗ್ಯಕ್ಕೆ ತುತ್ತಾದ ಅನಾಥ ಪ್ರಾಣಿ-ಪಕ್ಷಿಗಳನ್ನು ಈ ದಂಪತಿ ರಕ್ಷಿಸಿ ತಂದು, ತಮ್ಮ ಸ್ವಂತ ಹಣದಲ್ಲಿ ಪೋಷಿಸುತ್ತಿದ್ದಾರೆ.
ಶಿರಸಿಯ ಅಮೇಜಿಂಗ್ ಪೆಟ್ ಪ್ಲಾನೆಟ್ -
| ವಿನುತಾ ಹೆಗಡೆ, ಶಿರಸಿ
ಪ್ರಕೃತಿಯ ಮಡಿಲಲ್ಲಿ ಪ್ರಾಣಿ ಮತ್ತು ಪಕ್ಷಿಗಳೊಂದಿಗೆ ಸಮಯ ಕಳೆಯಲು ಬಯಸುವವರಿಗೆ ಸೂಕ್ತ ಜಾಗವೊಂದು ಶಿರಸಿಯ ಹೊರವಲಯದಲ್ಲಿದೆ. ಇಲ್ಲಿ ಕೇವಲ ಸ್ಥಳೀಯ ಪ್ರಾಣಿ-ಪಕ್ಷಿ ತಳಿಗಳಲ್ಲದೆ, ವಿದೇಶಿ ಮೂಲದ ಅಪರೂಪದ ಜೀವಿಗಳನ್ನೂ ನೋಡಬಹುದು. ಜಗತ್ತಿನ ವಿವಿಧ ಭಾಗಗಳ ವಿಶಿಷ್ಟ ಜೀವಿಗಳನ್ನು ಹತ್ತಿರದಿಂದ ನೋಡುವ ಅವಕಾಶ ಇಲ್ಲಿ ಪಡೆಯಬಹುದು. 'ಅಮೇಜಿಂಗ್ ಪೆಟ್ ಪ್ಲಾನೆಟ್' (Amazing Pet Planet) ಎಂಬ ಹೆಸರಿನ ಈ ಸ್ಥಳವು ಪ್ರಾಣಿ ಸಂಗ್ರಹಾಲಯವಲ್ಲ. ಇದು ಪ್ರಾಣಿ-ಪಕ್ಷಿಗಳ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರವಾಗಿದೆ.
ಹೌದು, ಇದು ಪ್ರಾಣಿ-ಪಕ್ಷಿಗಳ ಅನಾಥಾಶ್ರಮವಾಗಿದೆ. ಪ್ರಾಣಿಪ್ರಿಯ ವೈದ್ಯ ಡಾ. ರಾಜೇಂದ್ರ ಸಿರ್ಸಿಕರ್ ಮತ್ತು ಪೂಜಾರಾಜ್ ಸಿರ್ಸಿಕರ್ ದಂಪತಿ ಈ 'ಅಮೇಜಿಂಗ್ ಪೆಟ್ ಪ್ಲಾನೆಟ್' ಅನ್ನು ನಡೆಸುತ್ತಿದ್ದಾರೆ. ಇದು ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿ ಆರಂಭವಾದ ಪ್ರಾಣಿ-ಪಕ್ಷಿಗಳ ಅನಾಥಾಶ್ರಮವಾಗಿದ್ದು. ರಸ್ತೆ ಅಪಘಾತಕ್ಕೊಳಗಾದ ಮತ್ತು ಅನಾರೋಗ್ಯಕ್ಕೆ ತುತ್ತಾದ ಅನಾಥ ಪ್ರಾಣಿ-ಪಕ್ಷಿಗಳನ್ನು ಈ ದಂಪತಿ ರಕ್ಷಿಸಿ ತಂದು, ತಮ್ಮ ಸ್ವಂತ ಹಣದಲ್ಲಿ ಪೋಷಿಸುತ್ತಿದ್ದಾರೆ.
ಇಲ್ಲಿ ಏನೆಲ್ಲಾ ನೋಡಬಹುದು
ವಿದೇಶಿ ಪಕ್ಷಿಗಳು: ಆಫ್ರಿಕನ್ ಗ್ರೇ ಪ್ಯಾರಟ್, ಮಕಾವ್ (Macaws), ಕಾಕಟೂಸ್, ಮತ್ತು ವಿವಿಧ ಬಣ್ಣದ ಲವ್ ಬರ್ಡ್ಸ್ ಹಾಗೂ ಫಿಂಚ್‌ಗಳು ಇಲ್ಲಿವೆ.
ಸರೀಸೃಪಗಳು: ವಿವಿಧ ತಳಿಯ ಇಗುವಾನಾಗಳು (Iguanas), ಆಮೆಗಳು ಮತ್ತು ಹಾವುಗಳನ್ನು ಸುರಕ್ಷಿತವಾಗಿ ಸಂರಕ್ಷಿಸಲಾಗಿದೆ.
ಸಣ್ಣ ಪ್ರಾಣಿಗಳು: ಪರ್ಷಿಯನ್ ಬೆಕ್ಕುಗಳು, ವಿವಿಧ ತಳಿಯ ಮೊಲಗಳು, ಹ್ಯಾಮ್ಸ್ಟರ್‌ಗಳು ಮತ್ತು ಗಿನಿ ಪಿಗ್‌ಗಳು ಪ್ರವಾಸಿಗರ, ಅದರಲ್ಲೂ ಮಕ್ಕಳ ಮನಸೆಳೆಯುತ್ತವೆ.
ಅಮೇಜಿಂಗ್ ಪೆಟ್ ಪ್ಲಾನೆಟ್ ವಿಡಿಯೊ
ರಕ್ಷಣೆ ಮತ್ತು ಪುನರ್ವಸತಿ ಕಾರ್ಯ
ಅಮೇಜಿಂಗ್ ಪೆಟ್ ಪ್ಲಾನೆಟ್ ಕೇವಲ ಪ್ರದರ್ಶನಕ್ಕಷ್ಟೇ ಸೀಮಿತವಾಗಿಲ್ಲ. ಇದರ ಹಿಂದಿರುವ ಮುಖ್ಯ ಉದ್ದೇಶ 'ಪ್ರಾಣಿ ಸಂರಕ್ಷಣೆ'. ಅಪಘಾತಕ್ಕೀಡಾದ ಅಥವಾ ಅನಾರೋಗ್ಯಕ್ಕೆ ಒಳಗಾದ ಬೀದಿಯ ಪ್ರಾಣಿಗಳನ್ನು ಮತ್ತು ಪಕ್ಷಿಗಳನ್ನು ರಕ್ಷಿಸಿ, ಅವುಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಲಾಗುತ್ತದೆ. ಅನೇಕ ಬಾರಿ ಜನರು ಸಾಕುಪ್ರಾಣಿಗಳನ್ನು ತಂದು ಸಾಕಲಾಗದೆ ಬೀದಿಗೆ ಬಿಡುತ್ತಾರೆ. ಅಂತಹ ಪ್ರಾಣಿಗಳಿಗೆ ಇದು ಸುಸಜ್ಜಿತ ಆಶ್ರಯ ತಾಣವಾಗಿದೆ. ಇನ್ನು ಕಾಡು ಪ್ರಾಣಿಗಳು ನಾಡಿಗೆ ಬಂದಾಗ ಅವುಗಳಿಗೆ ಹಾನಿ ಮಾಡದೆ ಹೇಗೆ ರಕ್ಷಿಸಬೇಕು ಎಂಬ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಇಲ್ಲಿನ ತಂಡ ಮಾಡುತ್ತದೆ.
ಈ ತಾಣದ ವಿಶೇಷತೆಗಳು
- ಸಂವಾದಾತ್ಮಕ ಪರಿಸರ: ಇಲ್ಲಿ ನೀವು ಪಕ್ಷಿಗಳಿಗೆ ಆಹಾರ ನೀಡಬಹುದು ಮತ್ತು ಅವುಗಳೊಂದಿಗೆ ಫೋಟೋ ತೆಗೆದುಕೊಳ್ಳಬಹುದು. ಇದು ಪ್ರಾಣಿಗಳ ಬಗ್ಗೆ ಪ್ರೀತಿ ಮೂಡಿಸಲು ಸಹಾಯ ಮಾಡುತ್ತದೆ.
- ಶೈಕ್ಷಣಿಕ ಭೇಟಿ: ಶಾಲಾ ಮಕ್ಕಳಿಗೆ ಪ್ರಾಣಿ ಸಂಕುಲದ ಬಗ್ಗೆ ಪ್ರಾಯೋಗಿಕ ಜ್ಞಾನ ನೀಡಲು ಇದು ಅತ್ಯುತ್ತಮ ಸ್ಥಳ.
- ಪರಿಣಿತರ ತಂಡ: ಇಲ್ಲಿನ ಸಿಬ್ಬಂದಿಗಳು ಪ್ರತಿಯೊಂದು ಜೀವಿಯ ಆಹಾರ ಕ್ರಮ ಮತ್ತು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ.
ಕೌಟುಂಬಿಕ ಶ್ರಮ ಮತ್ತು ಪ್ರಾಣಿ ಪ್ರೇಮ
ಶಿರಸಿಯ ಅಮೇಜಿಂಗ್ ಪೆಟ್ ಪ್ಲಾನೆಟ್ ಕೇವಲ ಒಂದು ಪ್ರಾಣಿ ಸಂಗ್ರಹಾಲಯವಲ್ಲ, ಅದು ಡಾ. ರಾಜೇಂದ್ರ ಸಿರ್ಸಿಕರ್ ಮತ್ತು ಅವರ ಪತ್ನಿ ಪೂಜಾ ರಾಜ್ ಅವರ ಕನಸಿನ ಕೂಸು. ಇವರಿಬ್ಬರೂ ಸೇರಿ ಪ್ರಾಣಿ ಸಂಕುಲದ ರಕ್ಷಣೆಗಾಗಿ ತಮ್ಮ ಬದುಕನ್ನೇ ಮೀಸಲಿಟ್ಟಿದ್ದಾರೆ.
ಅಪ್ಪಟ ಪ್ರಾಣಿ ಪ್ರೇಮಿ ಡಾ. ರಾಜೇಂದ್ರ ಸಿರ್ಸಿಕರ್

ಪ್ರಾಣಿಗಳ ಸಂಜೀವಿನಿ ಡಾ. ರಾಜೇಂದ್ರ ಸಿರ್ಸಿಕರ್ ಅವರು ವೃತ್ತಿಯಿಂದ ವೈದ್ಯರಾಗಿದ್ದರೂ, ಪ್ರವೃತ್ತಿಯಿಂದ ಅಪ್ಪಟ ಪ್ರಾಣಿ ಪ್ರೇಮಿ. ಪ್ರತಿಯೊಂದು ದೇಶಿ-ವಿದೇಶಿ ತಳಿಯ ಪಕ್ಷಿ ಮತ್ತು ಪ್ರಾಣಿಗಳ ಆಹಾರ ಪದ್ಧತಿ ಹಾಗೂ ಆರೋಗ್ಯದ ಬಗ್ಗೆ ಅವರಿಗೆ ಆಳವಾದ ಜ್ಞಾನವಿದೆ.
ಗಾಯಗೊಂಡ ಹಾವುಗಳು, ಪಕ್ಷಿಗಳು ಅಥವಾ ಅನಾಥವಾದ ಪ್ರಾಣಿಗಳನ್ನು ಇವರು ರಕ್ಷಿಸಿ, ತಕ್ಷಣದ ಚಿಕಿತ್ಸೆ ನೀಡಿ ಮರುಜೀವ ನೀಡುತ್ತಾರೆ. ಅವರ ಚಿಕಿತ್ಸೆಯಿಂದ ಬದುಕುಳಿದ ನೂರಾರು ಜೀವಿಗಳು ಇಂದು ಪೆಟ್ ಪ್ಲಾನೆಟ್‌ನಲ್ಲಿ ಸುಖವಾಗಿವೆ.
ಪೆಟ್ ಪ್ಲಾನೆಟ್ ಹಿಂದಿನ ಶಕ್ತಿ ಪೂಜಾ ರಾಜ್ ಸಿರ್ಸಿಕರ್

ಪೆಟ್ ಪ್ಲಾನೆಟ್ ಹಿಂದಿನ ಶಕ್ತಿ, ಡಾ. ರಾಜೇಂದ್ರ ಅವರ ಪ್ರತಿಯೊಂದು ಹೆಜ್ಜೆಯಲ್ಲೂ ಸಾಥ್ ನೀಡಿರುವವರು ಪೂಜಾ ರಾಜ್ ಸಿರ್ಸಿಕರ್. ಈ ಬೃಹತ್ ಪೆಟ್ ಪ್ಲಾನೆಟ್‌ನ ದೈನಂದಿನ ನಿರ್ವಹಣೆಯಲ್ಲಿ ಪೂಜಾ ಅವರ ಪಾತ್ರ ದೊಡ್ಡದು. ಪ್ರಾಣಿಗಳ ಸ್ವಚ್ಛತೆ ಮತ್ತು ಅವುಗಳಿಗೆ ಬೇಕಾದ ತಾಯಿಯಂತಹ ಮಮತೆಯ ಆರೈಕೆಯನ್ನು ಇವರು ನೀಡುತ್ತಾರೆ. ಬರುವ ಪ್ರವಾಸಿಗರಿಗೆ ಮತ್ತು ಮಕ್ಕಳಿಗೆ ಪ್ರಾಣಿಗಳೊಂದಿಗೆ ಹೇಗೆ ವರ್ತಿಸಬೇಕು, ಅವುಗಳನ್ನು ಹೇಗೆ ಪ್ರೀತಿಸಬೇಕು ಎಂಬುದನ್ನು ಪೂಜಾ ಅವರು ಅತ್ಯಂತ ತಾಳ್ಮೆಯಿಂದ ವಿವರಿಸುತ್ತಾರೆ. ಉತ್ತರ ಕನ್ನಡದ ಭಾಗದಲ್ಲಿ ಪ್ರಾಣಿ ರಕ್ಷಣೆ ಮತ್ತು ನಿರ್ವಹಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಪ್ರಮುಖ ಮಹಿಳೆಯರಲ್ಲಿ ಇವರು ಒಬ್ಬರು.
ರಕ್ಷಣೆ ಮತ್ತು ಮರುಜೀವ ನೀಡುವ ಕಾಯಕ
ಈ ದಂಪತಿ ನೇತೃತ್ವದ ತಂಡವು ಶಿರಸಿ ಸುತ್ತಮುತ್ತಲಿನ ಪರಿಸರದಲ್ಲಿ ಯಾವುದಾದರೂ ಪ್ರಾಣಿ ಸಂಕಷ್ಟದಲ್ಲಿದೆ ಎಂಬ ಮಾಹಿತಿ ಬಂದ ತಕ್ಷಣ ಅಲ್ಲಿಗೆ ಧಾವಿಸುತ್ತಾರೆ. ಡಾ. ರಾಜೇಂದ್ರ ಅವರು ಅನೇಕ ವಿಷಕಾರಿ ಹಾಗೂ ವಿಷರಹಿತ ಹಾವುಗಳನ್ನು ಜನವಸತಿ ಪ್ರದೇಶದಿಂದ ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ ಅಥವಾ ಗಾಯಗೊಂಡಿದ್ದರೆ ಚಿಕಿತ್ಸೆ ನೀಡಿದ್ದಾರೆ. ಇನ್ನು ಮಾಲೀಕರಿಂದ ನಿರ್ಲಕ್ಷಿಸಲ್ಪಟ್ಟ ವಿದೇಶಿ ಪಕ್ಷಿಗಳಿಗೆ ಪೂಜಾ ರಾಜ್ ಅವರು ವಿಶೇಷ ಕಾಳಜಿ ವಹಿಸಿ ಅವುಗಳಿಗೆ ಹೊಸ ಬದುಕು ನೀಡಿದ್ದಾರೆ.
Sirsi Marikamba Jatre 2026: ಫೆ. 24ರಿಂದ ದಕ್ಷಿಣ ಭಾರತದ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ
ಭೇಟಿ ನೀಡುವವರಿಗೆ ಮಾಹಿತಿ
ಇಲ್ಲಿ ನೀವು ನೀಡುವ ಪ್ರವೇಶ ಶುಲ್ಕವನ್ನು ಈ ಪ್ರಾಣಿಗಳ ಆಹಾರ ಮತ್ತು ಚಿಕಿತ್ಸೆಗಾಗಿ ಬಳಸಲಾಗುತ್ತದೆ. ನೀವು ಭೇಟಿ ನೀಡಿದಾಗ ಪ್ರಾಣಿಗಳಿಗೆ ತೊಂದರೆಯಾಗದಂತೆ ವರ್ತಿಸುವುದು ಮತ್ತು ಅಲ್ಲಿನ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ.
ಈ ದಂಪತಿಗಳ ಈ ಕಾರ್ಯ ಕೇವಲ ಹವ್ಯಾಸವಲ್ಲ, ಇದು ಪ್ರಕೃತಿಯ ಮೇಲಿನ ಅತೀವ ಗೌರವ. "ನಮ್ಮೊಂದಿಗೆ ಈ ಭೂಮಿಯ ಮೇಲೆ ಬದುಕುವ ಹಕ್ಕು ಪ್ರಾಣಿಗಳಿಗೂ ಇದೆ" ಎಂಬ ಸಂದೇಶವನ್ನು ಇವರು ಈ ಪೆಟ್ ಪ್ಲಾನೆಟ್ ಮೂಲಕ ಸಾರುತ್ತಿದ್ದಾರೆ.