Water Crisis: 411 ಹಳ್ಳಿಗಳಲ್ಲಿ ಕುಡಿವ ನೀರಿನ ಅಭಾವ
ಉತ್ತರಕನ್ನಡ ಜಿಲ್ಲೆ ಶೇ. 80ರಷ್ಟು ಅರಣ್ಯ ಪ್ರದೇಶ ಹೊಂದಿದ್ದು, ಜಿಲ್ಲೆಯ ಹಲವು ತಾಲೂಕು ಗಳಲ್ಲಿ ಬೇಸಿಗೆಯ ಆರಂಭದಲ್ಲೇ ನೀರಿನ ಅಭಾವ ತಲೆದೋರುತ್ತಿದೆ. ಜಿಲ್ಲೆಯ ಸುಮಾರು 411 ಹಳ್ಳಿಗಳು ಕುಡಿಯುವ ನೀರಿನ ತುಟಾಗ್ರತೆ ಎದುರಿಸುವ ಸಾಧ್ಯತೆಯಿದೆ ಎಂದು ಗುರುತಿಸಲಾಗಿದೆ.
-
ವಿಶಾಖಾ ಭಟ್ಟ ಹೆಗ್ಗಾರ್ ಶಿರಸಿ
ಬೇಸಿಗೆಯ ಆರಂಭದಲ್ಲೇ ನೀರಿನ ಅಭಾವ
ಉತ್ತರ ಕನ್ನಡ ಜಿಲ್ಲೆಯಲ್ಲಿ ಜಲಕ್ಷಾಮ ಸಂಭವ
ಫಲಪ್ರದವಾಗದ ನೀರಿನ ಯೋಜನೆಗಳು
ಮಲೆನಾಡು ಹಾಗೂ ಕರಾವಳಿಯನ್ನು ಒಳಗೊಂಡ ಉತ್ತರಕನ್ನಡ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಜಲಕ್ಷಾಮ ತಲೆದೋರುತ್ತದೆ. ಸರಕಾರದ ಹಲವು ಯೋಜನೆಗಳು ಇಲ್ಲಿ ಫಲಪ್ರದವಾಗದೇ, ಜಲ ಜೀವನ್ ಮಿಷನ್ ಸೇರಿದಂತೆ ಶಾಶ್ವತ ಕುಡಿಯುವ ನೀರು ಸರಬರಾಜು ಯೋಜನೆ ಕಾಟಾಚಾರ ಎಂಬಂತಾಗಿದೆ.
ಉತ್ತರಕನ್ನಡ ಜಿಲ್ಲೆ ಶೇ. 80ರಷ್ಟು ಅರಣ್ಯ ಪ್ರದೇಶ ಹೊಂದಿದ್ದು, ಜಿಲ್ಲೆಯ ಹಲವು ತಾಲೂಕುಗಳಲ್ಲಿ ಬೇಸಿಗೆಯ ಆರಂಭದಲ್ಲೇ ನೀರಿನ ಅಭಾವ ತಲೆದೋರುತ್ತಿದೆ. ಜಿಲ್ಲೆಯ ಸುಮಾರು 411 ಹಳ್ಳಿಗಳು ಕುಡಿಯುವ ನೀರಿನ ತುಟಾಗ್ರತೆ ಎದುರಿಸುವ ಸಾಧ್ಯತೆಯಿದೆ ಎಂದು ಗುರುತಿಸಲಾಗಿದೆ.
ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವುದು ಹಾಗೂ ನದಿಗಳು ಬತ್ತುತ್ತಿರುವುದು ಈ ಪರಿಸ್ಥಿತಿಗೆ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ.
ಹಳ್ಳ ಹಿಡಿದ ಜಲಜೀವನ್ ಮಿಷನ್: ಕೇಂದ್ರ ಸರಕಾರದ ಈ ಮಹತ್ವಾಕಾಂಕ್ಷಿ ಜಲಜೀವನ್ ಮಿಷನ್ ಯೋಜನೆಯು 2024ರ ವೇಳೆಗೆ ಪ್ರತಿ ಮನೆಗೆ ನಲ್ಲಿ ನೀರು ಪೂರೈಸುವ ಗುರಿ ಹೊಂದಿತ್ತು, ಆದರೆ ರಾಜ್ಯಾದ್ಯಂತ ಹಲವು ಕಾರಣಗಳಿಂದ ಇದರ ಗಡುವು ವಿಸ್ತರಿಸಲ್ಪಟ್ಟಿದೆ. ಉತ್ತರ ಕನ್ನಡದಲ್ಲಿ ಕಾಮಗಾರಿಗಳ ವಿಳಂಬ ಹಾಗೂ ಅಸಮರ್ಪಕ ಅನುಷ್ಠಾನದಿಂದಾಗಿ ಜನರು ಇಂದಿಗೂ ಟ್ಯಾಂಕರ್ ನೀರನ್ನು ಅವಲಂಬಿಸುವಂತಾಗಿದೆ.
ಇದರಿಂದ ಶಿರಸಿ ನಗರದ 31 ವಾರ್ಡ್ ಗಳಲ್ಲಿ 5 ವಾರ್ಡ್ ಗಳಲ್ಲಿ ಇಂದಿಗೂ ಸಮರ್ಪಕ ನೀರು ಪೂರೈಕೆ ಯೋಜನೆ ಜಾರಿಯಾಗಿಲ್ಲ. ಪೈಪ್ ಲೈನ್ ಕಾಮಗಾರಿಗಳು ಅರ್ಧಕ್ಕೆ ನಿಂತಿರುವುದರಿಂದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ.
ಇದನ್ನೂ ಓದಿ: Sirsi News: ಬಾವಿಗೆ ಬಿದ್ದು ಯಮನನ್ನು ಗೆದ್ದು ಬಂದ 2ರ ಬಾಲೆ; ಜೀವದ ಹಂಗು ತೊರೆದು ರಕ್ಷಿಸಿದ ವ್ಯಕ್ತಿ!
ಜಿಲ್ಲಾಡಳಿತ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 2025ರ ಮಾಹಿತಿಯಂತೆ ಜಿಲ್ಲೆಯಾದ್ಯಂತ ಸುಮಾರು 411 ಹಳ್ಳಿಗಳನ್ನು ಕುಡಿಯುವ ನೀರಿನ ತುಟಾಗ್ರತೆ ಎದುರಿಸುತ್ತಿರುವ ಪ್ರದೇಶಗಳೆಂದು ಗುರುತಿಸಲಾಗಿದೆ. ಕಳೆದ ವರ್ಷ ಜಿಲ್ಲೆಯ 26 ಹಳ್ಳಿಗಳಿಗೆ ಟ್ಯಾಂಕರ್‌ಮತ್ತು ಬೋರ್‌ವೆಲ್ ಗಳ ಮೂಲಕ ತುರ್ತು ನೀರು ಪೂರೈಕೆ ಮಾಡಲಾಗಿತ್ತು.
ಜಿಲ್ಲೆಯ 198 ಗ್ರಾಪಂನಲ್ಲಿ ನೀರಿನ ಬವಣೆ ಸಾಧ್ಯತೆ!
ಜಿಲ್ಲೆಯ 13 ತಾಲೂಕುಗಳಲ್ಲಿ ಒಟ್ಟೂ 229 ಗ್ರಾಪಂಗಳಿದ್ದು, ಏಪ್ರಿಲ್, ಮೇ ಅವಧಿಯಲ್ಲಿ ಮಳೆಯಾಗದೇ ಇದ್ದರೆ 198 ಗ್ರಾಪಂಗಳ ವ್ಯಾಪ್ತಿಯಲ್ಲಿ ನೀರಿನ ತೊಂದರೆ ಉಂಟಾಗ ಬಹುದು ಎಂದು ಈಗಾಗಲೇ ಕಂದಾಯ ಇಲಾಖೆ ಅಂದಾಜಿಸಿದೆ. ಕಾರವಾರ, ಸಿದ್ದಾಪುರ, ಯಲ್ಲಾಪುರ ತಲಾ ಎರಡು ಹಳ್ಳಿಗಳಲ್ಲಿ, ಹಳಿಯಾಳ 23 ಹಳ್ಳಿ, ಮುಂಡಗೋಡ 8 ಹಳ್ಳಿಗಳು ನೀರಿನ ತೊಂದರೆ ಅನುಭವಿಸುತ್ತಿವೆ.
ಏಪ್ರಿಲ್ ತಿಂಗಳಲ್ಲಿ 506, ಮೇ ತಿಂಗಳಲ್ಲಿ 531 ಗ್ರಾಮಗಳಲ್ಲಿ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಅದರಲ್ಲಿ ಹಳಿಯಾಳ 109 ಗ್ರಾಮಗಳಿದ್ದರೆ, ಸಿದ್ದಾಪುರ 97 ಗ್ರಾಮಗಳು ಪಟ್ಟಿಯಲ್ಲಿವೆ. ಉಳಿದ ತಾಲೂಕಿನಲ್ಲಿ 40ಕ್ಕಿಂತ ಕಡಿಮೆ ಗ್ರಾಮ ಗಳಿವೆ.
ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿತ, ಜನರಲ್ಲಿ ಆತಂಕ: ಉತ್ತರಕನ್ನಡ ಜಿಲ್ಲೆಯು ಸಂಪದ್ಭರಿತ ಅರಣ್ಯವನ್ನು ಹೊಂದಿದ್ದರೂ, ವರ್ಷದಿಂದ ವರ್ಷಕ್ಕೆ ಅಂತರ್ಜಲದ ಮಟ್ಟ ಕುಸಿತವಾಗುತ್ತಿರುವುದರಿಂದ ನೀರಿನ ಸಮಸ್ಯೆ ಎದುರಾಗಲು ಕಾರಣವಾಗುತ್ತಿದೆ. ನೀರಿನ ಸಮಸ್ಯೆ ಕೇವಲ ಮನುಷ್ಯರ ಮೇಲೆ ಮಾತ್ರ ಪರಿಣಾಮ ಬೀರದೇ ವನ್ಯಜೀವಿ, ಕೃಷಿ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಕಾಡಿನಲ್ಲಿ ನೀರು ಸಿಗದೇ ವನ್ಯಜೀವಿಗಳು ನೀರನ್ನು ಅರಸಿ ನಾಡಿನತ್ತ ಬರುತ್ತಿವೆ. ಜಲ ಮೂಲಗಳು ಬತ್ತುವುದರಿಂದ ಅಡಿಕೆ, ತೆಂಗು, ಬಾಳೆ, ಅನಾನಸ್ ಒಳಗೊಂಡು ವಾಣಿಜ್ಯ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗದೇ ಗಿಡ ಮರಗಳು ಒಣಗು ತ್ತವೆ. ಆದರೆ ನಮ್ಮನ್ನಾಳುವ ಸರಕಾರಗಳ ಜನಪ್ರತಿನಿಽಗಳು ಇಲ್ಲಿನ ಜಲಮೂಲ ಗಳನ್ನು ಯೋಜನೆಗಳ ನೆಪದಲ್ಲಿ ಬೇರೆ ಜಿಲ್ಲೆಗೆ ನೀಡುತ್ತಿರುವುದರಿಂದ ಕೃಷಿಕರು ಸಂಕಷ್ಟ ಅನುಭವಿಸುವಂತಾಗಿದೆ. ಈಗಾಗಲೇ ಬೃಹತ್ ಯೋಜನೆಗಳಿಂದ ಜಿಲ್ಲೆಯು ಧಾರಣಾ ಸಾಮರ್ಥ್ಯ ಕಳೆದುಕೊಂಡಿದೆ ಎಂದು ಪರಿಸರ ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯ ಜೀವದಿಗಳಾದ ಬೇಡ್ತಿ, ಅಘನಾಶಿನಿ, ಗಂಗಾವಳಿ ನದಿಗಳಿಗೆ ಸಣ್ಣ ನೀರಾವರಿ ಯೋಜನೆಗಳ ಕಾರಣದಿಂದ ಬೇಸಿಗೆಯಲ್ಲಿ ತನ್ನ ಹರಿಸುವು ನಿಲ್ಲಿಸುತ್ತವೆ. ಹಾವೇರಿ ಜಿಲ್ಲೆಯ ಕುಡಿಯುವ ನೀರಿಗಾಗಿ ರೂಪಿಸಲಾಗಿರುವ ಬೇಡ್ತಿ-ಅಘನಾಶಿನಿ ನದಿ ಜೋಡಣೆ ಯೋಜನೆಗೆ ಉತ್ತರ ಕನ್ನಡದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಜಿಲ್ಲೆಯ ಜಲಮೂಲಗಳನ್ನು ಬೇರೆಡೆಗೆ ತಿರುಗಿಸಿದರೆ ಸ್ಥಳೀಯವಾಗಿ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಿಸಬಹುದು ಎಂಬ ಆತಂಕ ಜನರಲ್ಲಿ ಮನೆಮಾಡಿದೆ.
ಉತ್ತರಕನ್ನಡ ಜಿಲ್ಲೆಯ ಕರಾವಳಿ ಹಾಗೂ ಬಯಲುಸೀಮೆ ಪ್ರದೇಶದಲ್ಲಿ ಬೇಸಿಗೆಯಲ್ಲಿ ನೀರಿನ ಅಭಾವ ಎದುರಿಸುವುದು ಸಾಮಾನ್ಯ ಸಂಗತಿ. ಈದೀಗ ಜಾರಿಯಾಗಿರುವ ನದಿಗಳ ಜೋಡಣೆ ಯೋಜನೆಯು ಜಿಲ್ಲೆಯಲ್ಲಿ ಮತ್ತಷ್ಟು ನೀರಿನ ಅಭಾವವನ್ನು ಉಂಟು ಮಾಡುತ್ತದೆ. ಘಟ್ಟದ ಮೇಲಿನ ಹಾಗೂ ಕರಾವಳಿ ಭಾಗದ ತಾಲೂಕುಗಳಲ್ಲಿ ಈ ವರೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಇಲ್ಲ.
ಬೇಡ್ತಿ-ಅಘನಾಶಿನಿ ನದಿಗಳು ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ಹಾಗೂ ಕೆಳಗಿನ ಪ್ರದೇಶಗಳ ಜನವಸತಿ, ಕೃಷಿಭೂಮಿ, ಕಾಡು, ಗೋಮಾಳ, ಕೆರೆಗಳಿಗೆ ನಿರಂತರ ನೀರು ಒದಗಿಸುವ ಜಲಮೂಲವಾಗಿವೆ. ಈ ಯೋಜನೆಯಿಂದ ನದಿಗಳಲ್ಲಿ ಹರಿಯಬೇಕಾದ ಕನಿಷ್ಠ ಸ್ವಾಭಾವಿಕ ಪ್ರವಾಹವೂ ಕಣ್ಮರೆಯಾಗಿ, ನೀರಿನ ಕೊರತೆ ಉಂಟಾಗಲಿದೆ ಎಂದು ಬೇಡಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಕಳವಳ ವ್ಯಕ್ತಪಡಿಸಿದ್ದಾರೆ.
ಜಲ ಜೀವನ ಮಿಷನ್ ಯೋಜನೆಗೆ ವಿಳಂಬವೇಕೆ?
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಹಾಗೂ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಯಾದ ಜಲಜೀವನ ಮಿಷನ್ ಉತ್ತರ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಸಮರ್ಪಕವಾಗಿ ಬಳಕೆಗೆ ಸಿಗುತ್ತಿಲ್ಲ. ಅನೇಕ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಕಾಮಗಾರಿ ಅರ್ಧಕ್ಕೆ ಸ್ಥಗಿತವಾದ ಪರಿಣಾಮ ಬೇಸಿಗೆ ಪ್ರಾರಂಭದಲ್ಲಿಯೇ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಜಿಲ್ಲೆಯ ಬಹುತೇಕ ಅರಣ್ಯ ವ್ಯಾಪ್ತಿ ಹೊಂದಿರುವುದರಿಂದ ಯೋಜನೆ ಕಾರ್ಯರೂಪಗೊಳಿಸಲು ಅರಣ್ಯ ಇಲಾಖೆಯ ಅನುಮತಿ ಕಡ್ಡಾಯವಾಗಿದೆ. ಅಲ್ಲದೇ, ಯೋಜನೆಗಳಿಗೆ ಅಗತ್ಯ ಹಣಕಾಸು ಹಾಗೂ ತಾಂತ್ರಿಕ ಸಿಬ್ಬಂದಿ ಕೊರತೆಯಿಂದ ಯೋಜನೆಗೆ ಹಿನ್ನೆಡೆಯಾಗಿದೆ. ಕೆಲವೊಂದು ಕಾಮಗಾರಿಗಳ ಜಲ ಮೂಲವು ಪ್ರಸ್ತುತ ಅನುಷ್ಠಾನಗೊಳ್ಳುತ್ತಿರುವ ಬಹು ಗ್ರಾಮ ಕುಡಿಯವ ನೀರಿನ ಯೋಜನೆಗೆ ಅವಲಂಬಿತ ವಾಗಿರುವುದರಿಂದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ತಡೆಯಾಗುತ್ತಿದೆ. ಇದರಿಂದ ವಿಳಂಬವಾಗಿದೆ ಎನ್ನುವುದು ಜಿಲ್ಲಾ ಪಂಚಾಯತ ಅಧಿಕಾರಿಗಳ ಅಭಿಪ್ರಾಯ.
ಜಿಲ್ಲೆಯಲ್ಲಿ ಬತ್ತುತ್ತಿದೆ ಅಂತರ್ಜಲ
ಮಲೆನಾಡಿನಲ್ಲಿ ಇತ್ತೀಚಿನ ದಿನಗಳಲ್ಲಿ ಅಂತರ್ಜಲ ಸಮಸ್ಯೆ ಎದುರಾಗಿದೆ. ಅತಿಯಾದ ಬಳಕೆಯಿಂದ ಅಂತರ್ಜಲ ಮಟ್ಟ 0.5 ರಿಂದ 7.16 ಮೀಟರ್ʼಗಳಷ್ಟು ತೀವ್ರವಾಗಿ ಕುಸಿದಿದೆ. ಬೋರ್‌ವೆಲ್ ನಲ್ಲಿಯೂ ನೀರು ಬತ್ತಿದ್ದು, ಕರಾವಳಿ ಭಾಗದಲ್ಲಿ ಉಪ್ಪು ನೀರು ಬರುವ ಭೀತಿ ಎದುರಾಗಿದೆ. ಹಳಿಯಾಳ ತಾಲೂಕಿನಲ್ಲಿ ತಾಲೂಕಿನಲ್ಲಿ ಈಗಾಗಲೇ ಬೋರ್‌ವೆಲ್ ಕೊರೆತವನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
![]()
ಉತ್ತರ ಕನ್ನಡ ಜಿಲ್ಲೆಯ ಕದಂಬ ನೌಕಾನೆಲೆಯ ಮೇಲೆಯೂ ಈ ನದಿ ತಿರುವ ಯೋಜನೆ ಪರಿಣಾಮ ಬೀರಲಿದ್ದು, ನೌಕಾನೆಲೆಗೆ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಈ ಯೋಜನೆ ಕೈಬಿಡುವ ಮೂಲ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ನೀರಿನ ತುಟಾಗ್ರತೆ ಎದುರಾಗುವ ವಿವಿಧ ತಾಲೂಕಿನ ಹಳ್ಳಿಗಳಿಗೆ ಜಲ ಮೂಲ ಬಳಸಿ, ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸುವಲ್ಲಿ ಸರಕಾರ ಹೆಚ್ಚಿನ ಆಸಕ್ತಿ ವಹಿಸಲಿ.
- ಅನಂತ ಹೆಗಡೆ ಅಶೀಸರ, ಅಧ್ಯಕ್ಷ, ಅಘನಾಶಿನಿ-ಬೇಡ್ತಿ ಕೊಳ್ಳ ಸಂರಕ್ಷಣಾ ಸಮಿತಿ