Pratap Simha: 2028ರಲ್ಲಿ ವಿಧಾನಸೌಧ ಪ್ರವೇಶ ಮಾಡಿಯೇ ಮಾಡ್ತೀನಿ: ಪ್ರತಾಪ್ ಸಿಂಹ
ಮೈಸೂರು ಕ್ಷೇತ್ರದಲ್ಲಿ ಬಿಜೆಪಿ ಎಂಪಿ ಟಿಕೆಟ್ ಕೈತಪ್ಪಿದಾದ ಕಾಂಗ್ರೆಸ್ ಶಾಸಕರು ತಮ್ಮ ಪಕ್ಷಕ್ಕೆ ಬರುವಂತೆ ಬೆನ್ನುಬಿದ್ದಿದ್ದರು. ನನಗಾಗಿ ಕಾಂಗ್ರೆಸ್ ಟಿಕೆಟ್ ಅನ್ನು ತಡೆಹಿಡಿದಿದ್ದರು. ಆದರೆ, ನಾನು ನಂಬಿದ ಸಿದ್ಧಾಂತಕ್ಕಾಗಿ ಕಾಂಗ್ರೆಸ್ ಆಫರ್ ತಿರಸ್ಕರಿಸಿದ್ದೆ. ಕಾಂಗ್ರೆಸ್‌ಗೆ ಹೋಗಿದ್ದರೂ ನಾನೇ ಗೆಲ್ಲುತ್ತಿದ್ದೆ. ಯಾಕೆಂದರೆ ಆ ರೀತಿ ಜನ ಸೇವೆ ಮಾಡಿದ್ದೇನೆ. ಆ ಬಲದಿಂದಲೇ ಮುಂದಿನ ಚುನಾವಣೆಯಲ್ಲಿ ನಾನು ವಿಧಾನಸೌಧ ಪ್ರವೇಶ ಮಾಡುವೆ ಎಂದು ವಿಶ್ವಾಸದಿಂದ ಹೇಳುತ್ತಿದ್ದೇನೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
Prabhakara R
Apr 26, 2026 11:12 PM
ಕುಮಟಾ: ʼಬಿಜೆಪಿಯಿಂದ ಟಿಕೆಟ್ ಸಿಗದೇ ಇದ್ದಾಗ ಡಿ.ಕೆ. ಶಿವಕುಮಾರ್ ಕರೆ ಮಾಡಿ ಕಾಂಗ್ರೆಸ್‌ಗೆ ಸೇರುವಂತೆ ಕೇಳಿಕೊಂಡಿದ್ದರು. ಇದಕ್ಕೆ ಒಪ್ಪದೇ ತಿರಸ್ಕರಿಸಿದ್ದೇನೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರ ವಿಶ್ವಾಸದಂತೆ ವಿಧಾನಸೌಧ ಪ್ರವೇಶ ಮಾಡುತ್ತೇನೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದರು. ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಆಯೋಜಿಸಲಾಗಿದ್ದ ಸಾಧನಾ ಸೌರಭ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರಿಗೆ ರಾಷ್ಟ್ರೀಯ ಸೌರಭ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಂಸದ ಮಾತನಾಡಿ, ತಾನು ಬಡತನದಿಂದ ಮೇಲೆ ಬಂದವನು. ಹೋಟೆಲ್‌ಗೆ ಹಾಲು ಹಾಕುತ್ತಿದ್ದ ಬಾಲಕನಾಗಿದ್ದ ತಾನು ಇಂದು ಬರಹಗಾರನಾಗಿ ಗುರುತಿಸಲು ವಿಶ್ವೇಶ್ವರ ಭಟ್ ಅವರ ಮಾರ್ಗದರ್ಶನವೇ ಕಾರಣ. ಪತ್ರಿಕೋದ್ಯಮ ಮಾತ್ರವಲ್ಲದೆ ರಾಜಕಾರಣದಲ್ಲೂ ನನ್ನ ಕೈಹಿಡಿದು ನಡೆಸಿದರು ಎಂದು ಸ್ಮರಿಸಿದರು.