ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಮಲಾಪುರದ ಅಟಲ್‌ ಬಿಹಾರಿ ವಾಜಪೇಯಿ ಜುವಾಲಜಿಕಲ್ ಪಾರ್ಕ್‌ ಅಭಿವೃದ್ಧಿಗೆ ಕ್ರಮ; ಹೊಸ ಪ್ರಾಣಿಗಳ ಸೇರ್ಪಡೆಗೆ ಒತ್ತು: ರಾಮಲಿಂಗಾರೆಡ್ಡಿ

Ramalinga Reddy: ಹೊಸಪೇಟೆ ತಾಲೂಕಿನ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಜುವಾಲಜಿಕಲ್ ಪಾರ್ಕ್‌ ನೂತನ ಮುಖ್ಯ ಪ್ರವೇಶ ದ್ವಾರ ಹಾಗೂ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯ ರೂ. 18 ಕೋಟಿ ಅನುದಾನದಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದರು.

ಅಟಲ್‌ ಬಿಹಾರಿ ವಾಜಪೇಯಿ ಜುವಾಲಜಿಕಲ್ ಪಾರ್ಕ್‌ ಅಭಿವೃದ್ಧಿಗೆ ಕ್ರಮ

-

Profile
Siddalinga Swamy Nov 24, 2026 8:19 PM

ಹೊಸಪೇಟೆ, ನ.24: ಹಂಪಿಯು ನಾಡಿನ ಐತಿಹಾಸಿಕ ಮತ್ತು ಪ್ರಮುಖ ಸ್ಥಳವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಜುವಾಲಜಿಕಲ್ ಪಾರ್ಕ್‌ ಅನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಿ, ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು ಮತ್ತು ಹೆಚ್ಚುವರಿಯಾಗಿ ರೂ.3 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಹೇಳಿದರು.

ಹೊಸಪೇಟೆ ತಾಲೂಕಿನ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಜುವಾಲಜಿಕಲ್ ಪಾರ್ಕ್‌ ನೂತನ ಮುಖ್ಯ ಪ್ರವೇಶ ದ್ವಾರ ಹಾಗೂ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯ ರೂ. 18 ಕೋಟಿ ಅನುದಾನದಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ವಿಜಯನಗರ ಜಿಲ್ಲಾ ಖನಿಜ ಪ್ರತಿಷ್ಠಾನ ಮತ್ತು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ಅನುದಾನ ಹಾಗೂ ವಿವಿಧ ಗಣಿ ಸಂಸ್ಥೆಗಳ ನೆರವಿನಿಂದ ಅಟಲ್ ಬಿಹಾರಿ ವಾಜಪೇಯಿ ಜುವಾಲಜಿಕಲ್ ಪಾರ್ಕ್‌ ವ್ಯಾಪ್ತಿಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆಕರ್ಷಕವಾದ ಹೊಸ ಪ್ರವೇಶ ದ್ವಾರ, ಹೊಸ ಕ್ಯಾಂಟಿನ್‌, ಮಾಹಿತಿ ಕೇಂದ್ರ, ಪಾರ್ಕ್‌ ಆವರಣದಲ್ಲಿ ಪ್ರಾಣಿಗಳಿಗೆ ಹೊಸ ಕೇಜ್, ಪ್ರವಾಸಿಗರಿಗೆ ವಿಶ್ರಾಂತಿ ತಾಣ, ಮಕ್ಕಳಿಗೆ ಹಾಲುಣಿಸುವ ತಾಯಂದಿರ ಕೊಣೆ, ವೈಲ್ಡ್ ಲೈಪ್ ರೆಸ್ಕ್ಯೂ ಕೇಂದ್ರ, ಕಿಯೋಸ್ಕ್, ಮಾಂಸಭಕ್ಷಕ ಪ್ರಾಣಿಗಳ ಸಂರಕ್ಷಣಾ ಕೇಂದ್ರ ಸೇರಿದಂತೆ ಹಲವು ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸಚಿವರು ಹೇಳಿದರು.

ಪಾರ್ಕ್ ಆವರಣದಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀರು, ಮೇವು, ಆಹಾರ ಕಡಿಮೆ ಆಗದಂತೆ ನೋಡಿಕೊಳ್ಳಲಾಗಿದೆ. ನಿರಂತರ ನೀರು ಪೂರೈಕೆ ಹಾಗೂ ತುರ್ತು ಸಂದರ್ಭಗಳಲ್ಲಿ ಬಳಕೆಗೆ ಸೋಲಾರ್‌ ಚಾಲಿತ ಬೋರ್‌ವೆಲ್ ಅಳವಡಿಸಲಾಗಿದೆ. ಪ್ರಾಣಿಗಳಿಗೆ ನೆರಳು ಕಲ್ಪಿಸಲಾಗಿದೆ. ಸಸ್ಯಗಳ ನಿರ್ವಹಣೆಗೆ ಸ್ಪ್ರಿಂಕ್ಲರ್ ವ್ಯವಸ್ಥೆ, ಸೋಲಾರ್ ಬೋರ್‌ವೆಲ್ ವ್ಯವಸ್ಥೆ ಮಾಡಲಾಗಿದೆ. ಮೃಗಾಲಯಕ್ಕೆ ಇನ್ನಷ್ಟು ಹೊಸ ಪ್ರಾಣಿಗಳನ್ನು ತರಿಸುವ ಉದ್ದೇಶವಿದ್ದು, ಪ್ರಾಣಿಗಳ ಆರೋಗ್ಯ ಮತ್ತು ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಪ್ರವಾಸಿಗರ ಪಾರ್ಕ್ ಸಫಾರಿ ಅನುಕೂಲಕ್ಕಾಗಿ ಹೊಸ ಓಪನ್ ಜೀಪ್, ಕ್ಲೋಜ್ಡ್ ಜೀಪ್, ಬಸ್ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ, ಆಸಕ್ತರಿಗೆ ಪಾರ್ಕ್ ಬಗ್ಗೆ, ಪ್ರಾಣಿಗಳ-ಪಕ್ಷಿಗಳ ಬಗ್ಗೆ ಮಾಹಿತಿ ನೀಡಲು ಮಾಹಿತಿ ಕೇಂದ್ರ ತೆರೆಯಲಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದರು.

ಆನೆಗಳ ಹಾವಳಿ ನಿಯಂತ್ರಣಕ್ಕೆ ಕ್ರಮ

ಹಾಸನ ಜಿಲ್ಲೆಯ ಬೇಲೂರು, ಸಕಲೇಶಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಆನೆಗಳ ಹಾವಳಿಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಬೇಲೂರು ತಾಲೂಕಿನಲ್ಲಿ ಸುಮಾರು 13 ಸಾವಿರ ಎಕರೆ ಅರಣ್ಯ ಪ್ರದೇಶವಿದ್ದರೂ ಅದು ಒಂದೇ ಕಡೆ ಇರದೆ ಒಂಭತ್ತು ಪ್ರತ್ಯೇಕ ಪ್ರದೇಶಗಳಲ್ಲಿ ಹರಡಿಕೊಂಡಿದೆ. ಸಕಲೇಶಪುರದಲ್ಲಿಯೂ ಸುಮಾರು ಒಂದು ಲಕ್ಷ ಎಕರೆ ಅರಣ್ಯ ಪ್ರದೇಶವು 80ಕ್ಕೂ ಹೆಚ್ಚು ಭಾಗಗಳಲ್ಲಿ ಹಂಚಿಹೋಗಿದೆ. ಇದರಿಂದ ಆನೆಗಳ ಸಂಚಾರ ಮತ್ತು ಮಾನವ-ಆನೆ ಸಂಘರ್ಷ ನಿಯಂತ್ರಿಸುವುದು ಸವಾಲಾಗಿದೆ ಎಂದು ವಿವರಿಸಿದರು.

ಆನೆಗಳನ್ನು ಭದ್ರಾ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸುವ ಕುರಿತು ಹಿಂದಿನಿಂದಲೂ ಚರ್ಚೆಗಳು ನಡೆಯುತ್ತಿವೆ. ಜನಪ್ರತಿನಿಧಿಗಳೂ ಈ ವಿಚಾರವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಆನೆಗಳ ಹಾವಳಿಯಿಂದ ಜನರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಆತಂಕವನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದರು.

ಆನೆಗಳು ಕಾಡಿನಿಂದ ಹೊರಬರದಂತೆ ತಡೆಯಲು ಆರ್ಥಿಕ ಮಿತಿಯೊಳಗೆ ಸ್ಟೀಲ್ ರೋಪ್ ಬ್ಯಾರಿಕೇಡ್ ಅಳವಡಿಸುವ ಸಾಧ್ಯತೆ ಪರಿಶೀಲಿಸಲಾಗುತ್ತಿದೆ. ಆನೆಗಳಿಗೆ ಜಿಪಿಎಸ್ ಕಾಲರ್ ಅಳವಡಿಸಿ ಅವುಗಳ ಚಲನವಲನವನ್ನು ನಿರಂತರವಾಗಿ ನಿಗಾ ವಹಿಸುವ ಯೋಜನೆಯನ್ನೂ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ವಿದ್ಯಾರ್ಥಿನಿಯರ ಡೊಳ್ಳು ಕುಣಿತ

ಕಸ್ತೂರಿಬಾಯಿ ಗಾಂಧಿ ಬಾಲಕಿಯರ ವಸತಿನಿಲಯದ ವಿದ್ಯಾರ್ಥಿನಿಯರು ದೀಪಿಕಾ ಮತ್ತು ನೇತ್ರಾವತಿ ನೇತೃತ್ವದಲ್ಲಿ ನಂದಿಕೋಲು ಧ್ವಜ ಹಿಡಿದು ನೃತ್ಯ ಮಾಡುತ್ತಾ, ಡೊಳ್ಳು ಬಾರಿಸಿ ಸ್ವಾಗತ ಕೋರಿದರು. ಪಾರ್ಕ್‌ ವೀಕ್ಷಣೆಗೆ ಆಗಮಿಸಿದ್ದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹೂ ಗುಚ್ಛ ನೀಡಿ, ಸಚಿವರನ್ನು, ಗಣ್ಯರನ್ನು ಸ್ವಾಗತಿಸಿದರು.

ಸಚಿವರಿಂದ ಪಾರ್ಕ್ ಸಫಾರಿ

ಮೃಗಾಲಯದ ನೂತನ ಮುಖ್ಯ ಪ್ರವೇಶ ದ್ವಾರವನ್ನು ಉದ್ಘಾಟಿಸಿದ ಸಚಿವರು, ಬಳಿಕ ಸಿಂಹ ಸಫಾರಿಯಲ್ಲಿ ಕೇಸರಿ, ಧನಂಜಯ, ರಾಧಾ ಸಿಂಹ ಸೇರಿ ಒಟ್ಟು 3 ಸಿಂಹಗಳನ್ನು ಮತ್ತು ಹುಲಿ ಸಫಾರಿ ಹಾಗೂ ಜಿಂಕೆ ಸಫಾರಿಯಲ್ಲಿ ಕೃಷ್ಣಮೃಗ, ನೀಲ್‌ಗಾಯ್, ಕಡವೆ, ಚುಕ್ಕೆ, ಸಾಂಬಾರ್ ಜಿಂಕೆ, ಕೊಂಡುಕುರಿ ಪ್ರಭೇದದ ಜಿಂಕೆ ಸೇರಿದಂತೆ ಒಟ್ಟು 13 ವಿವಿಧ ಜಾತಿಯ 385ಕ್ಕೂ ಹೆಚ್ಚು ಪ್ರಾಣಿಗಳು ಇವೆ. ಮೃಗಾಲವು 350 ಹೆಕ್ಟೇರ್ ವಿಸ್ತೀರ್ಣ ಹೋಂದಿದೆ. ಪ್ರಾಣಿಗಳ ನಿರ್ವಹಣೆ ಮತ್ತು ಪ್ರವಾಸಿಗರಿಗೆ ಕಲ್ಪಿಸಿರುವ ಸೌಲಭ್ಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಮೃಗಾಲಯ ಹಾಗೂ ಸಫಾರಿ ವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಿಸಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.‌

ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತೇವೆ, ಪ್ರತಿಭಟನೆ ಕೈಬಿಡಿ: ಆಶಾ ಕಾರ್ಯಕರ್ತೆಯರಿಗೆ ವಿಡಿಯೊ ಮೂಲಕ ಜಪಾನ್‌ನಿಂದಲೇ ಸಿಎಂ ಡಿಕೆಶಿ ಮನವಿ

ಹೊಸಪೇಟೆ ಶಾಸಕ ಎಚ್.ಆರ್. ಗವಿಯಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಬಸವಂತಪ್ಪ, ಬಳ್ಳಾರಿ ಲೋಕಸಭೆ ಸಂಸದ ಈ. ತುಕಾರಾಂ, ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶಿವಮೂರ್ತಿ ಕೆ, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್.ಎಫ್. ಇಮಾಮ್ ನಿಯಾಜಿ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಕೆ. ರಂಗಸ್ವಾಮಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆಯ ಮುಖ್ಯಸ್ಥ ರವಿ ಬಿ.ಪಿ., ಬಳ್ಳಾರಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ ನಾಯಕ ಕೆ., ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ಎಸ್.ಪಿ ಎಸ್. ಜಾಹ್ನವಿ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಾ.ರವಿಶಂಕರ ಎಸ್.ಎಸ್., ವಿಜಯನಗರ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ, ಬಂಡಿಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯ ಸೇನ್, ಅಟಲ್ ಬಿಹಾರಿ ವಾಜಪೇಯಿ ಜುವಾಲಜಿಕಲ್ ಪಾರ್ಕ್ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಾಜೇಶ್ ನಾಯ್ಕ್. ಎಸ್., ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸಂತೋಷ ನಾಯಕ್, ಸುರೇಶ, ಗೋಪೆ ನಾಯಕ್ ಜಿ, ಹರ್ಷವರ್ಧನ, ವಲಯ ಅರಣ್ಯ ಅಧಿಕಾರಿ ಭರತ ಎಂ.ಎ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರ್ಷ ಡಿ.ಎಲ್, ಆರ್‌ಎಫ್‌ಓ ರಮೇಶ ಜಿ, ಸೇರಿದಂತೆ ಸರಣ್ಯ ಇಲಾಖೆಯ ಅನೇಕ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.