ಶ್ರದ್ಧೆ, ಭಕ್ತಿ ಸಂಭ್ರಮದಿಂದ ಜರುಗಿದ ಶ್ರೀ ಕುಮಾರ ಸ್ವಾಮಿ ಜಾತ್ರಾ ಮಹೋತ್ಸವ
ತಾಲೂಕಿನ ದೇವಗಿರಿಯಲ್ಲಿ ಶ್ರೀಕುಮಾರಸ್ವಾಮಿ ಜಾತ್ರೆ ಮಂಗಳವಾರ ಶ್ರದ್ಧೆ, ಭಕ್ತಿ ಹಾಗೂ ಸಂಭ್ರಮ ದಿಂದ ಜರುಗಿತು. ಜಾತ್ರೆಯ ಪ್ರಮುಖ ಘಟ್ಟ ಧ್ವಜಾರೋಹಣವು ಸಂಡೂರು ಘೋರ್ಪಡೆ ರಾಜಮನೆತನ ದವರಿಂದ ಸಂಜೆ ನೆರವೇರಿತು. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು 'ಕುಮಾರಸ್ವಾಮಿ ಮಹರಾಜ್ ಕಿ ಜೈ' ಎಂಬ ಜಯಘೋಷ ಮೊಳಗಿಸಿದರು.
-
ಸಂಡೂರು: ತಾಲೂಕಿನ ದೇವಗಿರಿಯಲ್ಲಿ ಶ್ರೀಕುಮಾರಸ್ವಾಮಿ ಜಾತ್ರೆ ಮಂಗಳವಾರ ಶ್ರದ್ಧೆ, ಭಕ್ತಿ ಹಾಗೂ ಸಂಭ್ರಮದಿಂದ ಜರುಗಿತು. ಜಾತ್ರೆಯ ಪ್ರಮುಖ ಘಟ್ಟ ಧ್ವಜಾರೋಹಣವು ಸಂಡೂರು ಘೋರ್ಪಡೆ ರಾಜಮನೆತನದವರಿಂದ ಸಂಜೆ ನೆರವೇರಿತು. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು 'ಕುಮಾರಸ್ವಾಮಿ ಮಹರಾಜ್ ಕಿ ಜೈ' ಎಂಬ ಜಯಘೋಷ ಮೊಳಗಿಸಿದರು.
ಬೆಳಗ್ಗೆಯಿಂದ ದೇವಸ್ಥಾನದಲ್ಲಿ ಶ್ರಿ ಕಾರ್ತಿಕಸ್ವಾಮಿಗೆ ಕುಂಭಾಭಿಶೇಕ, ಪೂರ್ಣಾಲಂಕಾರ,ನೈವೇದ್ಯ, ಮಹಾ ಮಂಗಳಾರತಿ ಹಾಗೂ ಮತ್ತಿತರ ಪೂಜಾ ಕೈಂಕರ್ಯಗಳು ನೆರವೇರಿದವು.
ಇದನ್ನೂ ಓದಿ: Sandur News: ಸಂಡೂರಿನಲ್ಲಿ 58ನೇ ಗಣಿ ಸುರಕ್ಷತಾ ಸಪ್ತಾಹ ಆಚರಣೆ
ಸಂಜೆ ಐಬಿಯಿಂದ ಧ್ವಜವನ್ನು ಡೊಳ್ಳು, ವೀರಗಾಸೆ ಕುಣಿತ, ನಂದಿಕೋಲು ಮೆರವಣಿಗೆ ಮೂಲಕ ದೇವಸ್ಥಾನದವರೆಗೆ ತರಲಾಯಿತು. ಮೆರವಣಿಗೆಯಲ್ಲಿ ರಾಜಮನೆತನದ ಅಜಯ್ ರಾಜೆ ಘೋರ್ಪಡೆ, ಸೂರ್ಯಪ್ರಭ ರಾಜೆ ಘೋರ್ಪಡೆ, ಬಹಿರ್ಜಿ ಘೋರ್ಪಡೆ, ವೈಷ್ಣವಿ ಬಹಿರ್ಜಿ ಘೋರ್ಪಡೆ, ಏಕಾಂಬರ್ ಘೋರ್ಪಡೆ, ಸಂಸದ ತುಕರಾಮ್(MP Tukaram), ಶಾಸಕಿ ಅನ್ನಪೂರ್ಣ ಈ.ತುಕಾರಾಮ್(MLA Annapurna E. Tukaram) ಭಾಗವಹಿಸಿದ್ದರು.
ದೇವಾಲಯದಲ್ಲಿ ಪೂಜೆ ನೆರವೇರಿಸಿ, ದೇವಸ್ಥಾನದ ಮೇಲೆ ಸಂಪ್ರದಾಯದಂತೆ ಘೋರ್ಪಡೆ ವಂಶಸ್ಥರಿಂದ ಧ್ವಜಾರೋಹಣ ನೆರವೇರಿಸಲಾಯಿತು. ರಾತ್ರಿ ಮಂಗಳ ವಾದ್ಯಗಳೊಂದಿಗೆ ಸ್ವಾಮಿಯ ಪಲ್ಲಕ್ಕಿ ಉತ್ಸವವು ಸಂಪನ್ನವಾಯಿತು.
ಭಕ್ತರಿಗಾಗಿ ದಾರಿಯುದ್ದಕ್ಕೂ ಊಟ, ತಿಂಡಿ, ಪಾನೀಯ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ, ದೇವಸ್ಥಾನದಲ್ಲಿ ಬಾಗಲಕೋಟೆಯ ಬಂಡಿಗಣಿ ಮಠ,ವೆಸ್ಕೋ ಗಣಿ ಕಂಪನಿಗಳಿಂದ ಉಚಿತ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಜಿಲ್ಲೆ ಹಾಗೂ ರಾಜ್ಯದ ವಿವಿಧ ಜಿಲ್ಲೆ ಸೇರಿದಂತೆ ಆಂಧ್ರ, ಮಹಾರಾಷ್ಟ್ರ, ತಮಿಳುನಾಡು ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.