ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಹೊಸಪೇಟೆ ಶಾಖೆ ಉದ್ಘಾಟನೆ
ಸಹಕಾರವು ಶರಣ ಸಂಸ್ಕೃತಿಯ ಜೀವಾಳವೇ ಆಗಿದೆ. ಸಮಾಜದ ವಿಸ್ಮೃತಿಗೆ ಒಳಗಾದ ಶ್ರೀ ಶರಣ ಸಕ್ಕರೆ ಕರಡೀಶ ಅವರ ಹೆಸರು ಈ ಸಹಕಾರಿ ಸಂಘಕ್ಕೆ ಇಟ್ಟಿರುವುದು ಸಮಯೋಚಿತ ಆಗಿದೆ. ಬಡವರು, ಮಧ್ಯಮ ವರ್ಗದ ಜನರಿಗೆ ಈ ಸಂಘ ಅನುಕೂಲ ಮಾಡಲಿ ಎಂದು ಕೊಟ್ಟೂರು ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಶುಭ ಹಾರೈಸಿದ್ದಾರೆ.
ಹೊಸಪೇಟೆಯಲ್ಲಿ ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರಿ ಸಂಘದ ನೂತನ ಶಾಖೆ ಉದ್ಘಾಟನೆ. -
ಹೊಸಪೇಟೆ: ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ ಬ್ಯಾಂಕ್‌ನ ಹೊಸಪೇಟೆ ಶಾಖೆಯನ್ನು ಕೊಟ್ಟೂರು ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಅವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಶ್ರೀಗಳು, ಸಹಕಾರವು ಶರಣ ಸಂಸ್ಕೃತಿಯ ಜೀವಾಳವೇ ಆಗಿದೆ ಎಂದು ತಿಳಿಸಿದರು.
ಸಮಾಜದ ವಿಸ್ಮೃತಿಗೆ ಒಳಗಾದ ಶ್ರೀ ಶರಣ ಸಕ್ಕರೆ ಕರಡೀಶ ಅವರ ಹೆಸರು ಈ ಸಹಕಾರಿ ಸಂಘಕ್ಕೆ ಇಟ್ಟಿದ್ದು ಸಮಯೋಚಿತ ಆಗಿದೆ. ಬಡವರು, ಮಧ್ಯಮ ವರ್ಗದ ಜನರಿಗೆ ಈ ಸಂಘ ಅನುಕೂಲ ಮಾಡಲಿ ಎಂದು ಹಾರೈಸಿದ ಅವರು, ಬಂದ ಲಾಭದ ಸ್ವಲ್ಪ ಭಾಗವನ್ನು ಸಮಾಜಕ್ಕೂ ಹಂಚಬೇಕು ಎಂದು ಒತ್ತಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರ ಮಾತನಾಡಿ, ಸಹಕಾರಿ ಸಂಘ ಬೆಳೆಯುತ್ತಿರುವುದು ತುಂಬ ಸಂತೋಷದ ಸಂಗತಿ. ಪಾರದರ್ಶಕ ಆಡಳಿತ ನೀಡಿದರೆ ಖಂಡಿತ ಸಹಕಾರ ಕ್ಷೇತ್ರ ಬೆಳವಣಿಗೆ ಆಗುವುದು ಖಚಿತ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಅಧ್ಯಕ್ಷ ಜೀ.ನಂಜನಗೌಡರು ಮಾತನಾಡಿ, ಸಹಕಾರಿ ಸಂಸ್ಥೆ ನಿಜಕ್ಕೂ ಆರ್ಥಿಕವಾಗಿ ಸುಭದ್ರವಾಗಿದೆ. ಠೇವಣಿ ಸಂಗ್ರಹಣೆಗೆ ಯಾವ ಕೊರತೆಯೂ ಇಲ್ಲ. ಸಾಲ ಮಂಜೂರಾತಿಯಲ್ಲಿ ಸರಳ ನಿಯಮಗಳನ್ನು ಅಳವಡಿಸಿದ್ದೇವೆ ಎಂದು ಹೇಳಿದರು. ಸಂಡೂರಿನ ಪ್ರಭುದೇವರ ವಿರಕ್ತಮಠದ ಶ್ರೀ ಪ್ರಭುಸ್ವಾಮಿಗಳು ಆಶೀರ್ವಚನ ನೀಡಿದರು.
ಇದೇ ವೇಳೆ ಬಳ್ಳಾರಿ ಶ್ರೇಷ್ಠ ಸಹಕಾರಿ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಜಿ. ನೀಲಕಂಠಪ್ಪ ಹಾಗೂ ವಿವಿಧ ಗಣ್ಯರಿಗೆ ಸನ್ಮಾನ ಮಾಡಲಾಯಿತು. ಬಳಿಕ ಡಾ. ಮೃತ್ಯುಂಜಯ ರುಮಾಲೆ ಬರೆದ "ಶರಣ ಸಕ್ಕರೆ ಕರಡೆಪ್ಪನವರು" ಚಿತ್ತರಗಿ ಪೂಜ್ಯರಿಂದ ಬಿಡುಗಡೆ ಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಪುಷ್ಪಾ ಮಲ್ಲಿಕಾರ್ಜುನ ಪ್ರಾರ್ಥಿಸಿದರು. ಪ್ರಾಸ್ತಾವಿಕವಾಗಿ ಬ್ಯಾಂಕಿನ ಆಡಳಿತ ಮಂಡಳಿಯ ಅಧ್ಯಕ್ಷ ಕಲ್ಗುಡಿ ಮಂಜುನಾಥ ಮಾತನಾಡಿದರು. ಷಾ ಭವರಲಾಲ್ ನಾಹರ್ ಬಿ.ಇಡಿ ಕಾಲೇಜಿನ ಅಧ್ಯಕ್ಷ ಗುಡೇಕೋಟೆ ನಾಗರಾಜ್ ವಂದಿಸಿದರು.