ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vijayapura News: ವಿಜಯಪುರ ಜಿಲ್ಲೆಯಲ್ಲಿ 5 ಕೋಟಿ ಗಿಡ ನೆಡುವ ಗುರಿ: ಎಂ.ಬಿ. ಪಾಟೀಲ್‌

M B Patil: ವೃಕ್ಷೋಥಾನ್-2025 ಕಾರ್ಯಕ್ರಮವು ಈ ಬಾರಿ ಡಿ.7ರ ಭಾನುವಾರ ವಿಜಯಪುರ ಜಿಲ್ಲಾ ಕೇಂದ್ರದಲ್ಲಿ ನಡೆಯಲಿದ್ದು, 15 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಇದರಲ್ಲಿ ವಿದ್ಯಾರ್ಥಿಗಳು, ಪೊಲೀಸ್ ಇಲಾಖೆ, ಸೇನಾ ಸಿಬ್ಬಂದಿ, ವಿಜಯಪುರ ಸೈಕ್ಲಿಂಗ್ ಗ್ರೂಪ್, ಅರಣ್ಯ ಇಲಾಖೆ, 50ಕ್ಕೂ ಹೆಚ್ಚು ಸಂಘಸಂಸ್ಥೆಗಳು ಸಕ್ರಿಯವಾಗಿ ತೊಡಗಿಕೊಳ್ಳಲಿವೆ. ಇದರಲ್ಲಿ ಒಟ್ಟು 10 ಲಕ್ಷ ರೂ. ಮೊತ್ತದ ಬಹುಮಾನ ನೀಡಲಾಗುವುದು.

ವಿಜಯಪುರ ಜಿಲ್ಲೆಯಲ್ಲಿ 5 ಕೋಟಿ ಗಿಡ ನೆಡುವ ಗುರಿ: ಎಂ.ಬಿ. ಪಾಟೀಲ

ವೃಕ್ಷೋಥಾನ್-2025 ಓಟದ ಪೋಸ್ಟರ್, ಟೀ ಶರ್ಟ್, ಮೆಡಲ್ ಅನ್ನು ಬೆಂಗಳೂರಿನ ವಿಧಾನಸೌಧದಲ್ಲಿ ಸಚಿವ ಎಂ.ಬಿ.ಪಾಟೀಲ್‌ ಅವರು ಬಿಡುಗಡೆ ಮಾಡಿದ ಅವರು ಬಿಡುಗಡೆ ಮಾಡಿದರು. -

Profile
Siddalinga Swamy Nov 10, 2025 6:34 PM

ಬೆಂಗಳೂರು, ನ.10: ತಮ್ಮ ನೇತೃತ್ವದಲ್ಲಿ ವಿಜಯಪುರ ಜಿಲ್ಲೆಯಲ್ಲಿ (Vijayapura News) ನಡೆಯುತ್ತಿರುವ `ಕೋಟಿ ವೃಕ್ಷ ಅಭಿಯಾನʼ ದಡಿ ಕಳೆದ 9 ವರ್ಷಗಳಲ್ಲಿ ಒಂದೂವರೆ ಕೋಟಿ ಸಸಿಗಳನ್ನು ನೆಡಲಾಗಿದೆ. 2030ರ ವೇಳೆಗೆ ಇನ್ನೂ 3.50 ಕೋಟಿ ಸಸಿಗಳನ್ನು ನೆಟ್ಟು, 5 ಕೋಟಿ ಸಸಿಗಳ ಗುರಿ ಸಾಧಿಸಲಾಗುವುದು ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್‌ (MB Patil) ಹೇಳಿದ್ದಾರೆ. ಸೋಮವಾರ ವಿಧಾನಸೌಧದಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ವೃಕ್ಷೋಥಾನ್-2025 ಓಟದ ಪೋಸ್ಟರ್, ಟೀ ಶರ್ಟ್, ಮೆಡಲ್ ಬಿಡುಗಡೆ ಮಾಡಿದ ಅವರು, ಈ ಉಪಕ್ರಮದ ಮೂಲಕ ಸಾಧಿಸಿರುವ ಸಂಗತಿಗಳ ಕುರಿತು ಮಾತನಾಡಿದರು.

2016ರಲ್ಲಿ ಜಿಲ್ಲೆಯಲ್ಲಿ ಕೇವಲ ಶೇಕಡ 0.17ರಷ್ಟು ಮಾತ್ರ ಅರಣ್ಯವಿತ್ತು. ಆಗ ಜಿಲ್ಲಾಡಳಿತ ಹಾಗೂ ಪಕ್ಷಾತೀತವಾಗಿ ಹಲವು ಸಂಘಸಂಸ್ಥೆಗಳು, ಬಿ.ಎಲ್.ಡಿ.ಇ. ಅಸೋಸಿಯೇಷನ್ ಮೂಲಕ ಕೋಟಿ ವೃಕ್ಷ ಅಭಿಯಾನ ರೂಪಿಸಲಾಯಿತು. ಹೀಗಾಗಿ ಈಗ ಜಿಲ್ಲೆಯಲ್ಲಿ ಹಸಿರು ಹೊದಿಕೆಯು ಶೇಕಡ 2.4ರಷ್ಟಕ್ಕೆ ವೃದ್ಧಿಸಿದೆ. ಜತೆಗೆ ಶುದ್ಧ ಗಾಳಿಯ ಗುಣಮಟ್ಟದಲ್ಲಿ ಇಡೀ ದೇಶದಲ್ಲಿ ವಿಜಯಪುರ ಜಿಲ್ಲೆಯು ತೃತೀಯ ಸ್ಥಾನದಲ್ಲಿದೆ. ಅಂತರ್ಜಲ ಮಟ್ಟ ವೃದ್ಧಿಸಿದ್ದು, ಮಣ್ಣಿನ ಸವಕಳಿ ಮತ್ತು ಮರು ಅರಣ್ಯೀಕರಣ ಸಾಧ್ಯವಾಗಿದೆ. ಅಲ್ಲದೆ, ಬಿಸಿಲಿನ ತಾಪಮಾನ ಮೊದಲಿಗಿಂತ 0.5 ಡಿಗ್ರಿ ಸೆಲ್ಸಿಯಸ್‌ ಅಷ್ಟು ಕಡಿಮೆಯಾಗಿದ್ದು, ಮಳೆಯ ಪ್ರಮಾಣವು 550 ಮಿ.ಮೀ. ಇದ್ದಿದ್ದು ಈಗ 650 ಮಿ.ಮೀ.ವರೆಗೂ ಹೆಚ್ಚಳ ಕಂಡಿದೆ ಎಂದು ಅವರು ವಿವರಿಸಿದರು.

ಕೃಷ್ಣಾ ಭಾಗ್ಯ ಜಲ ನಿಗಮದ ಮೂಲಕ ಸಿಎಸ್ಆರ್ ನಿಧಿಯಡಿ ಮೊದಲ ಐದು ವರ್ಷ ತಲಾ 10 ಲಕ್ಷ ಸಸಿಗಳನ್ನು ವಿತರಿಸಲಾಯಿತು. ರೈತರಿಗೆ ತಮಗೆ ಬೇಕಾದ ಗಿಡಗಳನ್ನು ಉಚಿತವಾಗಿ ಹಂಚಲಾಗುತ್ತಿದೆ. ಇದಕ್ಕಾಗಿ 2016ರಲ್ಲಿ ಸರ್ಕಾರದ ವಿಶೇಷ ಅನುದಾನವನ್ನೂ ಪಡೆದುಕೊಳ್ಳಲಾಗಿತ್ತು. ಇಂತಹ ಸೌಲಭ್ಯವನ್ನು ಮುಂದಿನ 5-10 ವರ್ಷಗಳಿಗೆ ವಿಸ್ತರಿಸಿಕೊಂಡು, 5 ಕೋಟಿ ಗಿಡ ನೆಡುವ ಮಹದಾಸೆ ನಮ್ಮದಾಗಿದೆ. ಈಗ ವಾರ್ಷಿಕ ಮಳೆಯ ದಿನಗಳು ಕೂಡ ಮೊದಲಿದ್ದ 20-30 ದಿನಗಳಿಂದ 40 ದಿನಗಳಿಗೆ ಹಿಗ್ಗಿದೆ ಎಂದು ಹೇಳಿದರು.

ಕೋಟಿ ವೃಕ್ಷ ಅಭಿಯಾನದಿಂದ ವಿಜಯಪುರ ಜಿಲ್ಲೆಯಲ್ಲಿ ಜೀವವೈವಿಧ್ಯ ಪೋಷಣೆ ಸಾಧ್ಯವಾಗಿದ್ದು, 180ಕ್ಕೂ ಹೆಚ್ಚು ಬಗೆಯ ಗಿಡಗಳನ್ನು ನೆಡಲಾಗಿದೆ. ಇವುಗಳಿಗೆ ಹನಿ ನೀರಾವರಿ ಮತ್ತು ಸೌರವಿದ್ಯುತ್ ಮೂಲಕ ನೀರು ಪೂರೈಸಲಾಗುತ್ತಿದೆ. ವಿಜಯಪುರಕ್ಕೆ ನೀರು ಒದಗಿಸುವ ಭೂತನಾಳ ಕೆರೆಯ ಸುತ್ತಮುತ್ತ ಒಂದು ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆ. ಜತೆಗೆ ಮಮದಾಪುರ ಕೆರೆಯ ಪ್ರದೇಶದಲ್ಲಿ 1,600 ಎಕರೆಯಲ್ಲಿ 1.27 ಲಕ್ಷ ಗಿಡ ನೆಟ್ಟು ಹಸಿರು ಹೊದಿಕೆಯನ್ನು ಸೃಷ್ಟಿಸಲಾಗಿದೆ. ಇಲ್ಲಿ ಇನ್ನೂ 20 ಸಾವಿರಕ್ಕೂ ಹೆಚ್ಚು ಗಿಡ ನೆಡಲಾಗುವುದು. ಇದು ಉಳಿದ ಜಿಲ್ಲೆಗಳಿಗೆ ಮೇಲ್ಪಂಕ್ತಿಯಾಗುವಂತಿದೆ ಎಂದು ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದ್ದಾರೆ.

ಕೋಟಿ ವೃಕ್ಷ ಅಭಿಯಾನದ ಮೂಲಕ ಹುಟ್ಟುಹಬ್ಬಕ್ಕೊಂದು ಗಿಡ, ರಕ್ಷಾಬಂಧನದಂದು ವೃಕ್ಷಬಂಧನ, ಏಪ್ರಿಲ್ ಕೂಲ್, ಸಮಾರಂಭಗಳಲ್ಲಿ ಸಸಿಗಳ ಕೊಡುಗೆ ಮುಂತಾದ ಹೆಜ್ಜೆಗಳನ್ನು ಪರಿಚಯಿಸಲಾಗಿದೆ.‌ ಅಭಿಯಾನದ ಸಂಚಾಲಕ ಮುರುಗೇಶ್ ಪಟ್ಟಣ ಶೆಟ್ಟಿ, ಪದಾಧಿಕಾರಿಗಳಾದ ವೀರೇಂದ್ರ ಗುಚ್ಚಟ್ಟಿ, ಡಾ. ರಾಜುಯಲಗೊಂಡ, ಸೋಮು ಮಠ ಗುರೂಜಿ, ನಂದೀಶ್ ಹುಂಡೇಕರ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನೂ ಓದಿ | trains Cancelled: ಪ್ರಯಾಣಿಕರೇ ಗಮನಿಸಿ, ಈ ರೈಲುಗಳ ಸಂಚಾರ ತಾತ್ಕಾಲಿಕವಾಗಿ ರದ್ದು

ಡಿ.7ರಂದು ವೃಕ್ಷೋಥಾನ್-2025

ವೃಕ್ಷೋಥಾನ್-2025 ಈ ಬಾರಿ ಡಿ.7ರ ಭಾನುವಾರ ವಿಜಯಪುರ ಜಿಲ್ಲಾ ಕೇಂದ್ರದಲ್ಲಿ ನಡೆಯಲಿದ್ದು, 15 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಇದರಲ್ಲಿ ವಿದ್ಯಾರ್ಥಿಗಳು, ಪೊಲೀಸ್ ಇಲಾಖೆ, ಸೇನಾ ಸಿಬ್ಬಂದಿ, ವಿಜಯಪುರ ಸೈಕ್ಲಿಂಗ್ ಗ್ರೂಪ್, ಅರಣ್ಯ ಇಲಾಖೆ, 50ಕ್ಕೂ ಹೆಚ್ಚು ಸಂಘಸಂಸ್ಥೆಗಳು ಸಕ್ರಿಯವಾಗಿ ತೊಡಗಿಕೊಳ್ಳಲಿವೆ. ಇದರಲ್ಲಿ ಒಟ್ಟು 10 ಲಕ್ಷ ರೂ. ಮೊತ್ತದ ಬಹುಮಾನ ನೀಡಲಾಗುವುದು. ವೃಕ್ಷೋಥಾನ್ ಯಾವುದೇ ವಯೋಮಿತಿಯ ನಿರ್ಬಂಧವಿಲ್ಲದೆ 5 ಕಿ.ಮೀ, 10 ಕಿ.ಮೀ. ಮತ್ತು 21 ಕಿ.ಮೀ. ವಿಭಾಗದಲ್ಲಿ ನಡೆಯಲಿದೆ. ಆಸಕ್ತರು https://vrukshathon.co.in/ ಮೂಲಕ ನೋಂದಾಯಿಸಿಕೊಳ್ಳಬಹುದು ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ. ʼಸ್ವಚ್ಚ, ಸುಂದರ, ಹಸಿರು ವಿಜಯಪುರಕ್ಕಾಗಿ ಓಡಿʼ ಈ ಬಾರಿಯ ವೃಕ್ಷೋಥಾನ್ ಹೆರಿಟೇಜ್ ರನ್ ಘೋಷ ವಾಖ್ಯಾ ಎಂದು ಅವರು ಹೇಳಿದರು.