ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narayanaa Yaji Column: ಲೋಕವನ್ನು ಹರುಷಗೊಳಿಸಿದ ಸುಂದರಕಾಂಡದ ಸುಂದರ

ರಾಮಾಯಣದಲ್ಲಿ ಅತ್ಯಂತ ಮಹತ್ವದ ಕಾಂಡವೆಂದರೆ ಸುಂದರಕಾಂಡ. ಇದರ ನಾಯಕ ಹನುಮಂತ. ರಾಮಕಾರ್ಯಕ್ಕಾಗಿಯೇ ತನ್ನ ಬದುಕನ್ನು ಮುಡುಪಾಗಿಟ್ಟವನ ವಿವರ ಸುಂದರಕಾಂಡದಲ್ಲಿ ಬರುತ್ತದೆ. ಅದರಲ್ಲೂ ಹನುಮಂತನ ಶೌರ್ಯ ಧೈರ್ಯ ಕಾರ್ಯಚಾತುರ್ಯಗಳನ್ನು ಇಲ್ಲಿ ಮನೋಹರವಾಗಿ ಕವಿ ವಾಲ್ಮೀಕಿ ಬಣ್ಣಿಸಿದ್ದಾರೆ.

ಲೋಕವನ್ನು ಹರುಷಗೊಳಿಸಿದ ಸುಂದರಕಾಂಡದ ಸುಂದರ

-

ಹರೀಶ್‌ ಕೇರ ಹರೀಶ್‌ ಕೇರ Sep 14, 2025 7:00 AM

- ನಾರಾಯಣ ಯಾಜಿ

narayana yaji

ಕೊಂಕದೇ ಕೊನರದೆ ಲಂಕೆಯೊಳ್ ಸಿಲುಕದವ

ಉತ್ತಿಷ್ಠ ಹರಿಶಾರ್ದೂಲ! ಲಙ್ಘಯಸ್ವ ಮಹಾರ್ಣವಮ್

ಪರಾ ಹಿ ಸರ್ವಭೂತಾನಾಂ ಹನುಮನ್ಯಾ ಗತಿಸ್ತವ ৷৷ಕಿ.66.36৷৷

ಎದ್ದೆಳು ಹರಿಶಾರ್ದೂಲನೆ! ಮಹಾಸಮುದ್ರವನ್ನು ಲಂಘಿಸು. ನಿನಗಿರುವ ಗಮನಶಕ್ತಿಯು ಯಾವ ಪ್ರಾಣಿಗಳಿಗಿಂತಲೂ ಶ್ರೇಷ್ಠವಾದುದು. (ಭಾವಾರ್ಥ)

ರಾಮಾಯಣದಲ್ಲಿ ಅತ್ಯಂತ ಮಹತ್ವದ ಕಾಂಡವೆಂದರೆ ಸುಂದರಕಾಂಡ. ಇದರ ನಾಯಕ ಹನುಮಂತ. ರಾಮಕಾರ್ಯಕ್ಕಾಗಿಯೇ ತನ್ನ ಬದುಕನ್ನು ಮುಡುಪಾಗಿಟ್ಟವನ ವಿವರ ಸುಂದರಕಾಂಡದಲ್ಲಿ ಬರುತ್ತದೆ. ರಾಮಾಯಣದ ತುಂಬ ರಾಮನೇ ವ್ಯಾಪಿಸಿದ್ದಾನೆ. ಆತನ ಶೌರ್ಯ, ಬಲ ಮತ್ತು ಪರಾಕ್ರಮಗಳನ್ನು ವಿವರಿಸುತ್ತದೆ. ಬೇರೆ ಎಲ್ಲಾ ಪಾತ್ರಗಳು ಈ ಮಹಾಕಾವ್ಯದಲ್ಲಿ ಇದ್ದರೂ ಅವೆಲ್ಲವೂ ರಾಘವನ ನೆರಳಿನಲ್ಲಿಯೇ ಇವೆ. ರಾಮನ ಪ್ರತಿದ್ವಂದ್ವಿ ರಾವಣನೂ ಸಹ ರಾಮನ ಎದುರು ವಿಜ್ರಂಭಿಸಿದರೂ ಮೀರಿ ಬೆಳೆಯುವುದಿಲ್ಲ. ಇವೆಲ್ಲವನ್ನು ಮೀರಿ ಹನುಮ ಸುಂದರಕಾಂಡದಲ್ಲಿ ವಿಜ್ರಂಭಿಸುತ್ತಾನೆ. ಆಗ ವಾಲ್ಮೀಕಿಗೆ ಎಲ್ಲಿಯೋ ಆಂಜನೇಯನ ಪಾತ್ರ ತನ್ನ ಮಹಾಕಾವ್ಯದ ನಿರ್ವಚನದಿಂದ ಆಚೆ ಹೋಗುತ್ತಿದೆ ಎಂದು ಅನಿಸಿರಬೇಕು; ಆಗ ಹನುಮಂತನ ಬಾಯಿಯಿಂದಲೇ ಈ ಎಲ್ಲ ಕಾರ್ಯವನ್ನು ತಾನು ರಾಮನ ಸಲುವಾಗಿಯೇ ಮಾಡುತ್ತಿರುವುದು ಎನ್ನುತ್ತಾ “ದಾಸೋಹಂ ಕೋಸಲೇಂದ್ರಸ್ಯ ರಾಮಸ್ಯಾಕ್ಲಿಷ್ಟಕರ್ಮಣಃ” ಎಂದು ತನ್ನನ್ನು ತಾನೇ ಪ್ರಭು ಶ್ರೀರಾಮನ ದಾಸ ಎಂದು ಅದೂ ಒಂದಲ್ಲ ಎರಡು ಸಲ (42 ಮತ್ತು 43 ಸರ್ಗಗಳಲ್ಲಿ) ಹೇಳಿಸಿಬಿಡುತ್ತಾನೆ. ಆದರೂ ರಾಮಾಯಣದ ಈ ಕಾಂಡ ಸಮಗ್ರ ರಾಮಾಯಣವನ್ನು ಮೀರಿ ಬೆಳೆದುಬಿಟ್ಟಿದೆ.

ರಾಮಾಯಣವನ್ನು ಪಾರಾಯಣ ಮಾಡುವುದಕ್ಕಿಂತ ಹೆಚ್ಚಾಗಿ ಸುಂದರಕಾಂಡವನ್ನು ಪಾರಾಯಣ ಮಾಡುತ್ತಾರೆ. ಭಾರತದಲ್ಲಿ ಹನುಮಂತನಿಗಿರುವಷ್ಟು ಗುಡಿ, ದೇವಸ್ಥಾನಗಳು ಬೇರೆ ಯಾವ ದೇವರಿಗೂ ಇಲ್ಲ. ಸಾಕ್ಷಾತ್ ಶನಿಯೂ ಸಹ ಈತನ ಒಲವು ಇದ್ದವರಿಗೆ ಯಾವ ಅಪಾಯವನ್ನೂ ಮಾಡಲಾರ. ಹನುಮ ಬೆಳೆದು ನಿಂತಿದ್ದು ಆತ ಸುಂದರಕಾಂಡದಲ್ಲಿ ತೋರಿದ ಸಂಯಮ, ವಿವೇಕ, ಚತುರತೆ, ವಿವೇಚನೆ, ಬುದ್ಧಿ, ಮತ್ತು ಪರಾಕ್ರಮದ ಮೂಲಕವಾಗಿ. ಆತನ ಕಾರ್ಯತತ್ಪರತೆಯಿಂದ ಈ ಭಾಗ ಕಾವ್ಯಕ್ಕಿಂತ ಮೇಲಿನ ಹಂತಕ್ಕೆ ತಲುಪಿ ಸತ್ಯನಾರಾಯಣ ವೃತಕಥೆಯಂತೆ ಆರಾಧನಾ ಭಾಗವಾಗಿದೆ. ಅದರ ವಿವರಣೆ ಇಲ್ಲಿನ ಉದ್ಧೇಶವಲ್ಲ; ಮಹಾಕಾವ್ಯದ ಸತ್ವವನ್ನು ಓದಿ ಆನಂದಪಡುವುದು ಮತ್ತು ಸಹೃದಯರಿಗೆ ಹಂಚುವುದಷ್ಟೇ ನನ್ನ ಕೆಲಸ. ಹಾಗಾಗಿ ಇದರ ಪಠಣದ ಫಲಶ್ರುತಿಗಿಂತಲೂ ಕಾವ್ಯಸೌಂದರ್ಯವನ್ನು ಗಮನಿಸೋಣ.

ಈ ಕಾಂಡದುದ್ದಕ್ಕೂ ಇರುವುದು ವಾನರರು, ರಾಕ್ಷಸರು. ಕಾರ್ಯ ನಡೆಯುವುದು ಭೀಕರಾಕೃತಿಯ ರಾಕ್ಷಸರಿರುವ ಲಂಕೆಯಲ್ಲಿ. ರಾಮನ ವಿರಹದಲ್ಲಿ ಅನ್ನಾಹಾರವನ್ನು ಬಿಟ್ಟ ಸೀತೆ ಅಲ್ಲಿದ್ದಾಳೆ. ಆಕೆಯ ಸ್ಥಿತಿ ಹೇಗಿತ್ತೆಂದರೆ ಅರಣ್ಯದಲ್ಲಿ ಉಟ್ಟುಕೊಂಡ ಬಟ್ಟೆಯನ್ನೇ ಇನ್ನೂ ಧರಿಸಿಕೊಂಡಿದ್ದಳು. ಸ್ನಾನ ಮಾಡಿ ಒದ್ದೆ ಬಟ್ಟೆಯಲ್ಲಿಯೇ ಇದ್ದು ಸದಾಕಾಲ ಬೆದರಿಸುವ ರಾಕ್ಷಸರ ನಡುವೆ ರಾಮನನ್ನೇ ಪ್ರತೀಕ್ಷೆ ಮಾಡುತ್ತಿದ್ದಳು. ಸೀತಾಕಾಂಡವೆನ್ನುವ ಶೋಕಗೀತೆಯಾಗಿಯೋ, ಹನುಮದಿಗ್ವಿಜಯ ಕಾಂಡವಾಗಿಯೋ ಹೆಸರಿಡಬಹುದಿತ್ತು. ಅದೆಲ್ಲವನ್ನೂ ಬಿಟ್ಟು ಇದು ಸುಂದರಕಾಂಡವಾಗಲು ಕಾರಣ ಇದರ ಪರಿಣಾಮದಿಂದಲಾಗಿ. ಪರಿಣಾಮವೆನ್ನುವುದು ಕಾರ್ಯ ಕಾರಣಗಳಿಂದ ಉದ್ಭವಿಸುತ್ತದೆ. ಇಲ್ಲಿ ಕಾರಣ ಸೀತೆ. ಸಮುದ್ರದ ಮಧ್ಯೆ ಇರುವ ಲಂಕೆ ಹೊರಪ್ರಪಂಚಕ್ಕೆ ಅಭೇದ್ಯವಾಗಿತ್ತು. ಅದೆಲ್ಲಿದೆ ಎನ್ನುವುದು ತಿಳಿದಿದ್ದು ಸುಗ್ರೀವನಿಗೆ ಮಾತ್ರ. ಹಾಗಾಗಿ ಆತನ ಸಖ್ಯ ರಾಮನಿಗೆ ಮುಖ್ಯ. ಸೀತಾನ್ವೇಷಣೆಗಾಗಿಯೇ ರಾಮ ಸುಗ್ರೀವನ ಸಖ್ಯವನ್ನು ಮಾಡಿ ವಾಲಿಯನ್ನು ಕೊಂದಿರುವುದರ ಹೊರತೂ ಬೇರೆ ಯಾವ ರಾಜಕಾರಣವೂ ಅದರಲ್ಲಿಲ್ಲವೆನ್ನುವುದನ್ನು ಮೊದಲೇ ನೋಡಿದ್ದೇವೆ. ಸೀತೆ ಎಲ್ಲಿದ್ದಾಳೆ ಎಂದು ತಿಳಿಯಲು ಕಾರಣನಾದವ ಹನುಮಂತ. ಈ ಕಾರ್ಯಕಾರಣದಿಂದಾದ ಪರಿಣಾಮವೇ ರಾಮನಿಗೆ ಸೀತೆ ಎಲ್ಲಿ ಇದ್ದಾಳೆಂದು ತಿಳಿದ ಹರ್ಷ. ಬದುಕುವ ಆಸೆಯನ್ನೇ ತೊರೆದಿದ್ದ ಸೀತೆಗೆ ರಾಮನ ವಿಷಯ ತಿಳಿಯಿತು ಮತ್ತು ತನ್ನನ್ನು ಕರೆದೊಯ್ಯುತ್ತಾನೆನ್ನುವ ಸಂತೋಷ. ಹನುಮಂತನಿಗೆ ತಾನು ರಾಮಕಾರ್ಯವನ್ನು ಸಾಧಿಸಿದೆನೆನ್ನುವ ಸಂತೋಷ. ಸುಗ್ರೀವನಿಗೆ ರಾಮನಿಗೆ ಸೀತೆಯನ್ನು ಹುಡುಕಲು ತಾನು ನೆರವಾಗುವೆನೆಂದು ಕೊಟ್ಟ ವಚನ ಉಳಿಸಿಕೊಂಡ ಆನಂದ. ಹಾಗಾಗಿ ಇದು ಸುಂದರಕಾಂಡ. ಇವಿಷ್ಟೇ ಆಗಿದ್ದರೆ ಅದು ಕೇವಲ ರಾಮ ಸೀತೆ ವಾನರರಿಗೆ ಮಾತ್ರವಾಗಿತ್ತು. ಇದಕ್ಕಿಂತಲೂ ಮೀರಿ ಋಷಿಗಳಿಗೆ, ದೇವತೆಗಳಿಗೆ, ಸಾಕ್ಷಾತ್ ಬ್ರಹ್ಮನಿಗೂ ಸೀತಾನ್ವೇಷಣೆಯಿಂದ ಸಂತೋಷ ಉಂಟಾಗಿದೆ ಎನ್ನುವುದು ಕಾವ್ಯದ ಒಳಗುಟ್ಟು. ಅದರ ಕುರಿತು ಸೀತಾಪಹರಣದ ಭಾಗವನ್ನು ಗಮನಿಸಬೇಕು.

ರಾಮಾಯಣದಲ್ಲಿ ರಾಮನ ವನಾಗಮನದ ಉದ್ಧೇಶವೇ ರಾವಣವಧೆ. ಸ್ವತಃ ರಾಮನೇ ಅದನ್ನು ಆಹ್ವಾನಿಸಿಕೊಂಡಿರುವುದು. ಅಗಸ್ತ್ಯರ ಆಶ್ರಮದಲ್ಲಿ ಅದಕ್ಕೆ ಸಂಕಲ್ಪ ಮಾಡಿ ಮುನ್ನೆಡೆದಿದ್ದು. (ಹಿಂದಿನ ಭಾಗಗಳಲ್ಲಿ ಇವುಗಳ ಸಮಗ್ರ ವಿವರಗಳಿವೆ). ರಾವಣ ಸೀತೆಯನ್ನು ಅಪಹರಣ ಮಾಡಿವಾಗ ಅರಣ್ಯದ ಪ್ರಾಣಿ, ಪಕ್ಷಿ, ಗಿಡಮರ, ನದಿಗಳೆಲ್ಲವೂ ಶೋಕಿಸಿದವು ಎಂದು ವಾಲ್ಮೀಕಿ ವರ್ಣಿಸುತ್ತಾರೆ. ಕಾಡಿನ ಪ್ರಾಣಿಗಳೆಲ್ಲವೂ ಸೀತೆಯ ಗೋಳನ್ನು ನೋಡಲಾಗದೇ, ನಕ್ಷತ್ರಗಳೆಲ್ಲವೂ ಮಂಕಾಗಿ ಲೋಕವೆಲ್ಲವೂ ಸೀತೆಯ ಗೋಳನ್ನು ಕೇಳಿ ಸ್ತಬ್ಧವಾಗಿಬಿಟ್ಟವು. “ಸಾಧ್ವಿಯಾದ ರಾಮನ ಭಾರ್ಯೆಯಾದ ವೈದೇಹಿಯನ್ನು ರಾವಣನು ಸೆಳೆದೊಯ್ಯುತ್ತಿದ್ದಾನೆ. ಅಯ್ಯೋ! ಧರ್ಮವೆಲ್ಲಿದೆ, ಸತ್ಯವೆಲ್ಲಿದೆ, ಋಜುತ್ವ ದಯಾಪರತೆ ಯಾವುದೂ ಈಗ ಇಲ್ಲವಾಗಿದೆ” ಎಂದು ರಾವಣನ ದೌರ್ಜನ್ಯವನ್ನು ನೋಡಿ ದುಃಖ ಪಡುತ್ತಿದ್ದವಂತೆ. ಈ ಸಮಯದಲ್ಲಿ ಬ್ರಹ್ಮ, ದೇವತೆಗಳು ಮತ್ತು ಋಷಿಮುನಿಗಳು ಈ ದೃಶ್ಯವನ್ನು ನೋಡಿ

ದೃಷ್ಟ್ವಾ ಸೀತಾಂ ಪರಾಮೃಷ್ಟಾಂ ದೀನಾಂ ದಿವ್ಯೇನ ಚಕ್ಷುಷಾ

ಕೃತಂ ಕಾರ್ಯಮಿತಿ ಶ್ರೀಮಾನ್ವ್ಯಾಜಹಾರ ಪಿತಾಮಹಃ ৷৷ಅ.52.10৷৷

“ಆರು ಕೋಟಿ ವರ್ಷಗಳ ಕಾಲ ಜಗತ್ತನ್ನು ರೋದಿಸುವಂತೆ ಮಾಡಿದ ರಾವಣತ್ವವೆನ್ನುವುದು ಸೀತೆಯ ಅಪಹಾರದ ನೆವದಿಂದ ಪರಾಕ್ರಮಿಯಾದ ರಾಮನಿಂದ ಆಗುವುದೆಂದು ಹಣೆಬರಹ ಬರೆದ ಬ್ರಹ್ಮ ಮತ್ತು ಅದನ್ನು ದಿವ್ಯ ದೃಷ್ಟಿಯಿಂದ ಅರಿತ ಋಷಿಮುನಿಗಳು ಮಾತ್ರ ಸಂತಸ ಪಟ್ಟರು” ಎನ್ನುವ ವಿವರ ಬರುತ್ತದೆ. ಅಲ್ಲಿ ಸಂತಸ ಪಟ್ಟರೆ ಈಗ ಸೀತಾನ್ವೇಷಣೆಯಿಂದ ಆ ಕಾರ್ಯ ಪೂರ್ಣವಾಗುವುದೆನ್ನುವ ಸಂತೋಷ ಅವರಲ್ಲಿ ಮನೆ ಮಾಡಿದೆ. ಈ ಕಾರಣದಿಂದಲೂ ಇದು ಸುಂದರಕಾಂಡ. ಇದರಿಂದ ಕಾವ್ಯದ ಸೌಂದರ್ಯ ಇಮ್ಮಡಿಯಾಗುತ್ತದೆ.

ಅಂಗದನ ಬಂಡಾಯದ ಸಮಯದಲ್ಲಿ ಹನುಮಂತನ ಚತುರತೆ ಮೊದಲು ಕಾಣಿಸಿಕೊಂಡಿತ್ತು. ಅದಂತೂ ಶಮನವಾಯಿತು. ಸಂಪಾತಿಯ ಮೂಲಕವಾಗಿ ಲಂಕೆಗೆ ಹೋಗಬೇಕಾದ ದಿಕ್ಕು ಮತ್ತು ಸಾಗಬೇಕಾದ ದೂರವೂ ತಿಳಿದಂತಾಯಿತು. ಲಂಕೆ ಅಲ್ಲಿಂದ ನೂರು ಯೋಜನ ದೂರದಲ್ಲಿದೆ ಎಂದು ಹೇಳಿದ್ದಾಗಿ ರಾಮಾಯಣ ತಿಳಿಸುತ್ತದೆ. ಇಂದು ಕಾಣಿಸುವ ರಾಮಸೇತು ಧನುಷ್ಕೋಟಿಯಿಂದ ಮನ್ನಾರ ದ್ವೀಪಕ್ಕೆ ಸುಮಾರು 48 ಕಿ.ಮಿ. ಉದ್ದವಿದೆಯೆಂದು ಅಂದಾಜಿಸಲಾಗಿದೆ. ಹಾಗಾದರೆ ರಾಮಾಯಣದ ಅಳತೆಗೂ ಈಗ ಲಭ್ಯವಿರುವುದಕ್ಕೂ ವ್ಯತ್ಯಾಸದ ಕುರಿತು ಗೊಂದಲಪಡಬೇಕಾಗಿಲ್ಲ. ಮೊದಲೇ ತಿಳಿಸಿದಂತೆ ಕಾವ್ಯದ ಪರಿಭಾಷೆಯಲ್ಲಿ ಕೆಲವೊಂದನ್ನು ಅಲಂಕಾರಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ನಿಜಜೀವನದ ಸುಳ್ಳು ಕಾವ್ಯದಲ್ಲಿ ಅಲಂಕಾರವಾಗಿರುತ್ತದೆ. ಇದನ್ನು ಒಂದು ಉಪಮೆಯನ್ನಾಗಿ ಗಮನಿಸುವುದೊಳ್ಳೆಯದು. ಸೀತೆ ಎಲ್ಲಿದ್ದಾಳೆ ಎಂದು ತಿಳಿದ ವಾನರರಿಗೆ ಸಂತೋಷವೂ ಸಮುದ್ರದ ಅಗಾಧತೆಯನ್ನು ನೋಡಿ ದುಃಖವೂ ಏಕಕಾಲದಲ್ಲಿ ಆಯಿತು. ಅವರವರಿಗೆ ತಿಳಿದಂತೆ ಅವರು ತಮ್ಮ ತಮ್ಮ ಹಾರುವ ಸಾಮರ್ಥ್ಯವನ್ನು ಹೇಳಿಕೊಳ್ಳತೊಡಗಿದರು. ಆದರೆ ಯಾರಿಗೂ ಲಂಕೆಗೆ ಹೋಗಿ ತಲುಪುವ ಸಾಮರ್ಥ್ಯವಾಗಲೀ, ಒಂದು ವೇಳೆ ಹೋದರೂ ಅಲ್ಲಿಂದ ತಿರುಗಿ ಬರುವ ಶಕ್ತಿಯಾಗಲೀ ಇಲ್ಲ. ಅಂಗದನಿಗೆ ಆ ಸಾಮರ್ಥ್ಯವಿದೆಯಾದರೂ ಆತ ಯುವರಾಜನಾಗಿರುವುದರಿಂದ ಆತ ಹೋಗುವುದು ಸಮಂಜಸವಲ್ಲವೆಂದು ಜಾಂಬವಂತ ಹೇಳುತ್ತಾನೆ. ನಾಯಕ ಎಷ್ಟೇ ಸಮರ್ಥನಾದರೂ, ಆತ ಯುದ್ಧ ಅಥವಾ ವ್ಯೂಹಾತ್ಮಕ ಕೂಟದಲ್ಲಿ ತಾನೇ ಮೊದಲಿಗೆ ಮುನ್ನುಗ್ಗಿ ಹೋಗಕೂಡದು, ಸಮರ್ಥರಾದ ಬೇರೊಬ್ಬರನ್ನು ಕಳುಹಿಸಬೇಕು ಎನ್ನುತ್ತಾನೆ.

ನ ಹಿ ಪ್ರೇಷಯಿತಾ ತಾತ! ಸ್ವಾಮೀ ಪ್ರೇಷ್ಯಃ ಕಥಞ್ಚನ.

ಭವತಾಯಂ ಜನಸ್ಸರ್ವಃ ಪ್ರೇಷ್ಯಃ ಪ್ಲವಗಸತ್ತಮ৷৷ಕಿ.65.22৷৷

ನಾಯಕನಾದವ ಯಾವತ್ತಿಗೂ ತಾನೇ ದೂತನಾಗಬಾರದು. ಆತನಿಗೆ ಏನಾದರೂ ಹೆಚ್ಚುಕಡಿಮೆ ಆದರೆ ಉಳಿದವರು ಎಷ್ಟೇ ಪ್ರಬಲರಾದರೂ ಉಪಯೋಗವಿಲ್ಲ. ದೇಶದ ನೇತಾರರು, ಸಚಿವರು, ಸೇನಾಪತಿ ಮೊದಲಾದವರು ಆಯಕಟ್ಟಿನ ಜಾಗದಲ್ಲಿ ಕುಳಿತು ಪರಿಸ್ಥಿತಿಯನ್ನು ಅವಲೋಕಿಸುತ್ತಾ ಇರುತ್ತಾರೆ. ತಾಳಿಕೋಟೆ ಯುದ್ದದಲ್ಲಿ ವಿಜಯನಗರದ ಸೈನ್ಯಕ್ಕೆ ಗೆಲುವಾಗುತ್ತಿರುವಾಗ ರಾಮರಾಯ ತಾನೇ ಸೈನ್ಯದ ಮಂಚೂಣಿಯಲ್ಲಿ ಉತ್ಸಾಹದಿಂದ ಕಾಣಿಸಿಕೊಂಡ ಪರಿಣಾಮವಾಗಿ ಅನಾಮಧೇಯನಿಗೆ ಬಲಿಯಾಗಿ ಹಂಪಿಯ ಪತನಕ್ಕೆ ಹೇತುವಾಗಬೇಕಾಯಿತು. ರಾಜ ದೇಶದ ಮುಖ್ಯಸ್ಥನಾಗಿರುವುದರಿಂದ ಆತನನ್ನು ಆಶ್ರಯಿಸಿ ಕಾರ್ಯವನ್ನು ಸಾಧಿಸಬೇಕಾಗಿದೆ. ಆಧುನಿಕ ಯುಗದಲ್ಲಿ ಸಹ ಎಲ್ಲಾ ದೇಶಗಳೂ ಇದೇ ನೀತಿಯನ್ನು ಅನುಸರಿಸುತ್ತಿವೆ. ಯುವರಾಜನಾದ ಅಂಗದ ಹೋಗಕೂಡದು, ಬೇರೆ ಎಲ್ಲ ವಾನರರಿಗೆ ಆಗದು, ಹಾಗಾದರೆ ಸೀತಾನ್ವೇಷಣೆ ಹೇಗೆ ಮುಂದೆ ಎನ್ನುವ ಗೊಂದಲದಿಂದಲಿದ್ದಾಗ ಜಾಂಬವನ ಮನಸ್ಸಿನಲ್ಲಿದ್ದದ್ದು ಬೇರೆಯವರೇ. ಮೂಲೆಯಲ್ಲಿ ಸುಮ್ಮನೆ ಕುಳಿತು ವಾನರರ ಮಾತಿನ ಪರಾಕ್ರಮವನ್ನು ಕೇಳುತ್ತಿದ್ದ ಹನುಮನ ಕಡೆ ನೋಡಿ ಆತನನ್ನು ಸಮುದ್ರೋಲ್ಲಂಘನಕ್ಕೆ ಪ್ರಚೋದಿಸಿದ.

ಮೊದಲ ಭೇಟಿಯಲ್ಲಿಯೇ ರಾಮ ಆಂಜನೇಯನ ವಿಶಿಷ್ಟತೆಯನ್ನು ಗಮನಿಸಿದ್ದ. ಸುಗ್ರೀವನಿಗೆ ಅವನ ಸಾಮರ್ಥ್ಯದ ಅರಿವಿತ್ತು. ವಾಲಿಗೂ ಆತನ ಪರಾಕ್ರಮ ತಿಳಿದಿತ್ತು. ಆತ ಸುಗ್ರೀವನ ಜೊತೆ ಬಿಟ್ಟು ತನ್ನಲ್ಲಿ ಬರುವಂತೆ ಹೇಳಿದ್ದರೂ ಸುಗ್ರೀವನನ್ನು ಬಿಟ್ಟು ಆತ ಇರಲಿಲ್ಲ ಎಂದು ಉತ್ತರಕಾಂಡದಲ್ಲಿದೆ. ಅಂಗದನನ್ನು ಸರಿಹಾದಿಗೆ ತಂದು ತನ್ನ ಪಾಡಿಗೆ ಸುಮ್ಮನಿದ್ದ ಆಂಜನೇಯನಿಗೆ ಜಾಂಬವ ಆತನ ಶಕ್ತಿ ಸಾಮರ್ಥ್ಯದ ಕುರಿತು ಎಚ್ಚರಿಸಿದ. ಇಲ್ಲಿ ಎಚ್ಚರಿಸಿದ ಎನ್ನುವದಕ್ಕೆ ಕಾರಣವಿದೆ. ಜನಿಸಿದ ಕೂಡಲೇ ಸೂರ್ಯನನ್ನು ಹಿಡಿಯಲು ಹಾರಿ ಇಂದ್ರನ ವಜ್ರಾಯುಧದ ಹೊಡೆತದಿಂದ ದವಡೆ ಮುರಿದು ಹೋಯಿತು. ಆಗ ಆತನ ತಂದೆಯಾದ ವಾಯುವಿಗೆ ಸಿಟ್ಟು ಬಂದು ಸಂಚಾರವನ್ನು ಸ್ತಬ್ದಗೊಳಿಸಿಬಿಟ್ಟಿದ್ದ. ಪ್ರಪಂಚವೆಲ್ಲವೂ ಕಂಗಾಲಾಗಿ ಹೋದಾಗ ಬ್ರಹ್ಮನ ನೇತೃತ್ವದಲ್ಲಿ ದೇವತೆಗಳೆಲ್ಲರೂ ಬಂದು ಬಾಲಕನಿಗೆ ವರಗಳನ್ನುಕೊಟ್ಟಿದ್ದರು. ಚಿರಂಜೀವಿಯಾಗುವಂತೆ ಬ್ರಹ್ಮನೇ ಹರಸಿದನು. ವಾಯುವಿಗೆ ಸಮಾಧಾನವಾಗಿ ಮೊದಲಿನಂತೆ ಸಂಚಾರಮಾಡಿ ಜೀವಿಗಳ ಆಹಾರಸೇವನೆ, ವಿಸರ್ಜನಾಂಗಗಳು ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಂಡ.

ಹನುಮನಿಗೆ ಇದರ ಅರಿವಿಲ್ಲ. ಅಂಜನಾದೇವಿ ಮತ್ತು ಕೇಸರಿಯ ಮಗನಾದ ಆತ ಬಾಲ್ಯದಲ್ಲಿ ಬಲು ತುಂಟನಾಗಿದ್ದ. ಅಡವಿಯಲ್ಲಿದ್ದ ಋಷಿಮುನಿಗಳಿಗೆ ಉಪಟಳ ನೀಡುತ್ತಿದ್ದ. ಅಕಾಲದಲ್ಲಿ ವರ ಸಿಕ್ಕಿದರೆ ಪರಿಣಾಮ ವಿಪರೀತವಾಗುವುದು ಎಂದು ಋಷಿಗಳು ಆತನ ಶಕ್ತಿಗಳು ಮರೆಯಾಗಲಿ ಎಂದು ಹೆಚ್ಚು ಕೋಪಗೊಳ್ಳದೇ ಹೇಳಿದರಂತೆ. ಹನುಮನಿಗೆ ದೇವತೆಗಳು ಸುಮ್ಮನೇ ವರಗಳನ್ನು ಕೊಟ್ಟಿದ್ದಲ್ಲ. ರಾಮಾವತಾರಕ್ಕೆ ಮೊದಲೇ ಸ್ವರ್ಗದಲ್ಲಿ ನಡೆದ ಸಭೆಯಲ್ಲಿ ಅವರೆಲ್ಲರೂ ಯಾರ್ಯಾರು ಯಾವಯಾವ ರೀತಿಯಲ್ಲಿ ರಾಮನಿಗೆ ಸಹಕಾರಿಯಾಗಿ ಒದಗಬೇಕೆನ್ನುವುದು ನಿರ್ಧಾರವಾಗಿತ್ತು. ಇಲ್ಲದಿದ್ದರೆ ರಾಕ್ಷಸರಿಗೆ ದಕ್ಕಿದ ವರಗಳಿಗೂ, ಮಾರುತಿಯಲ್ಲಿ ನಿಕ್ಷೇಪಿಸಿದ ವರಗಳಿಗೂ ವ್ಯತ್ಯಾಸವಿರುತ್ತಿರಲಿಲ್ಲ. ಋಷಿಮುನಿಗಳಿಗೆ ಇದರ ಅರಿವಿತ್ತು. ಹಾಗಾಗಿ ಮರೆವಿನ ವರವನ್ನು ಇತ್ತಿದ್ದರು. “ಹನುಮಲ್ಲಿರುವ ಶಕ್ತಿಯನ್ನು ಯಾರಾದರೂ ನೆನಪಿಸಿದರೆ ಆತನಲ್ಲಿರುವ ಅಪಾರಬಲದ ಅರಿವು ಅವನಿಗುಂಟಾಗುತ್ತದೆ ಹಾಗೂ ಆ ಬಲದ ವೃದ್ಧಿಯೂ ಆಗುತ್ತದೆ” ಎಂದಿದ್ದರು. ಪರಾಕ್ರಮ, ಉತ್ಸಾಹ, ಬುದ್ಧಿ, ಪ್ರತಾಪ, ಸೌಶಿಲ್ಯ, ಮಾಧುರ್ಯ, ನೀತಿ-ಅನೀತಿಗಳ ವಿವೇಕ, ಗಾಂಭೀರ್ಯ, ಚಾತುರ್ಯ, ಶ್ರೇಷ್ಠವಾದ ಬಲ ಮತ್ತು ಧೈರ್ಯಗಳಲ್ಲಿ ಹನುಮಂತನನ್ನು ಮೀರಿಸುವವರೇ ಇಲ್ಲ ಎನ್ನುವದನ್ನು ಜಾಂಬವ ಅರಿತಿದ್ದ.

ರಾಮನಿಗೆ ಹದಿನಾರು ಗುಣಗಳಿದ್ದರೆ ಈತನಲ್ಲಿ ಹದಿಮೂರು ಗುಣಗಳಿದ್ದವು. ಸೂರ್ಯನ ಜೊತೆಗೇ ಸಾಗುತ್ತಾ ವ್ಯಾಕರಣ ಶಾಸ್ತ್ರವನ್ನು ಕಲಿತಿದ್ದ. ಸೂತ್ರ, ವೃತ್ತಿ, ವಾರ್ತಿಕ, ಮಹಾರ್ಥವುಳ್ಳ ಮಹಾಭಾಷ್ಯ, ಸಂಗ್ರಹಗ್ರಂಥ, ಛಂದಃಶಾಸ್ತ್ರದಲ್ಲಿಯೂ ಆತ ಬ್ರಹಸ್ಪತಿಗೆ ಸಮಾನನಾಗಿದ್ದ ಎಂದು ಅಗಸ್ತ್ಯರು ರಾಮನಿಗೆ ತಿಳಿಸಿದ ವಿಷಯ ಉತ್ತರಕಾಂಡದಲ್ಲಿದೆ. ದೇವತೆಗಳು ವರವನ್ನುಕೊಟ್ಟಿದ್ದು ರಾಮಕಾರ್ಯಕ್ಕಾಗಿಯಾದರೆ, ಆತನಿಗೆ ಸೂರ್ಯ ವಿದ್ಯೆಯನ್ನು ಕಲಿಸಿದ್ದು ಆತ ಮುಂದಿನ ಕಲ್ಪದಲ್ಲಿ ಬ್ರಹ್ಮನಾಗಲಿಕ್ಕೆಂದು. ಸೂರ್ಯನಿಂದ ವ್ಯಾಕರಣ ಕಲಿತರೆ ಉಳಿದ ವಿದ್ಯೆ ಯಾರು ಕಲಿಸಿದರು ಎನ್ನುವ ವಿವರವಿಲ್ಲ. ಆತನಿಗೆ ವರದ ಮರೆವೆಯುಂಟಾಗಲಿ ಎಂದು ಶಪಿಸಿದವರು ಭೃಗು ಮತ್ತು ಬೃಹಸ್ಪತಿ ವಂಶದ ಮಹರ್ಷಿಗಳು ಎಂದಿರುವುದರಿಂದ, ಅವರೇ ಇವನಿಗೆ ಕಲಿಸಿರಬಹುದು. ವಿದ್ಯೆಯನ್ನು ಕಲಿಯಲು ವಿನಯವಿರಬೇಕಾಗುತ್ತದೆ. ಬಲ ಇದ್ದವನಿಗೆ ಸಹಜವಾಗಿ ಮದ ಬರುತ್ತದೆ. ಹಾಗಾಗಿ ಆತನಲ್ಲಿ ವಿನಯವನ್ನು ಮೂಡಿಸಲು ವರ ನೀಡಿದ್ದರು. ಇದು ಮದ್ದಾನೆಯನ್ನು ಪಳಗಿಸಲು ಮಾಡಿದ ತಂತ್ರ.

ವಾಲಿ ಸುಗ್ರೀವರ ನಡುವೆ ವಿವಾದ ನಡೆದಾಗ ಆತನಿಗೆ ತನ್ನ ಪರಾಕ್ರಮದ ಅರಿವಿರದೇ ಬೋನಿನಲ್ಲಿ ಇದ್ದ ಸಿಂಹದಂತೆ ಇದ್ದ. ಒಂದು ವೇಳೆ ಆತನಿಗೆ ಆಗಲೇ ಅರಿವಿಗೆ ಬಂದಿದ್ದರೆ ರಾಮಕಾರ್ಯಕ್ಕೆ ಆತ ದೊರೆಯುತ್ತಿರಲಿಲ್ಲ. ಸುಗ್ರೀವನ ಪ್ರಕರಣ ಬೇರೆಯೇನೋ ಆಗುತ್ತಿತ್ತು. ಇವೆಲ್ಲವೂ ಪೂರ್ವನಿರ್ಧಾರಿತವೆಂದೇ ತೋರುವುದು. ಬ್ರಹ್ಮ ಪದವಿಯನ್ನು ಪಡೆಯಲು ಅರ್ಹತೆ ಒಂದೇ ಸಾಕಾಗುವುದಿಲ್ಲ, ಅನುಗ್ರಹವೂ ಬೇಕು. ಅದನ್ನು ಅನುಗ್ರಹಿಸುವ ಪ್ರಭು ಶ್ರೀರಾಮಚಂದ್ರ ಎಂದು ಅಗಸ್ತ್ಯರು ರಾಮನಿಗೆ ಹೇಳಿಹೋಗಿದ್ದರು.

ಹನುಮಂತನಿಗೆ ಆತನ ಬಲವನ್ನು ನೆನಪಿಸುವ ಜಾಂಬವನೇನೂ ಸಾಮಾನ್ಯದವನಲ್ಲ. ಬ್ರಹ್ಮ ಒಮ್ಮೆ ಆಕಳಿಸಿದಾಗ ಹುಟ್ಟಿದವ. ವಾಮನ ಬಲಿಯನ್ನು ನಿಗ್ರಹಿಸಿದ್ದನ್ನು ಮೂರು ಲೋಕಕ್ಕೂ ಓಡಿಹೋಗಿ ತಿಳಿಸಿದವ. ಸೂರ್ಯನ ಜೊತೆ ಸ್ಪರ್ಧಿಸಿದವ. ಹನುಮನಿಗೆ ಆತನ ಬಲವನ್ನು ತಿಳಿಸಲು ಯೋಗ್ಯ ಸಂದರ್ಭ, ವಿಷಯ ಮತ್ತು ಅವಕಾಶ ಬೇಕಿತ್ತು. ರಾವಣ ನಿಗ್ರಹಕ್ಕಾಗಿ ನಿಕ್ಷೇಪಿಸಿದ ಬಲವನ್ನು ಹೊರತೆಗೆಯಬೇಕಾಗಿತ್ತು. ಅವಕಾಶ ಈಗ ದೊರೆಯಿತು. ಹಾಗಾಗಿ ಆತ ಹನುಮನಿಗೆ ಆತನ ಬಲವನ್ನು ಜ್ಞಾಪಿಸಿದ. ಪಾರ್ತಿಸುಬ್ಬ ತನ್ನ ಚೂಡಾಮಣಿ ಪ್ರಸಂಗದಲ್ಲಿ ಇದನ್ನು ಬಹುಮನೋಹರವಾಗಿ ವರ್ಣಿಸಿರುವುದು ಹೀಗೆ.

“ನೀನೆ ಕಲಿ ಹನುಮ৷ ನಮ್ಮವರೊಳು ನೀನೇ ಕಲಿ ಹನುಮ ৷ಕೊಂಕದೆ ಕೊನರದೆ ৷ ಲಂಕೆಯೊಳ್ ಸಿಲುಕದೆ৷ ಪಂಕಜಮುಖಿ ৷ ಸೀತೆ ৷ ಯಂ ಕಂಡು ಬರಲಿಕ್ಕೆ ৷৷” ಎಂದು ವರ್ಣಿಸುತ್ತಾನೆ. ನೆಬ್ಬೂರು ನಾರಾಯಣ ಭಾಗವತರ ಭಾಗವತಿಕೆಯಲ್ಲಿ ಈ ಭಾಗವನ್ನು ಕೆರಮನೆ ಶಂಭು ಹೆಗಡೆಯವರು ಹನುಮಂತನಾಗಿ ಸಾಕ್ಷಾತ್ಕರಿಸುತ್ತಿದ್ದರು. ಶಂಭು ಹೆಗಡೆಯವರ ಮರೆಯಲಾಗದ ಪಾತ್ರಗಳಲ್ಲಿ ಸುಂದರಕಾಂಡ (ಚೂಡಾಮಣಿ) ಪ್ರಸಂಗದ ಹನುಮಂತನೂ ಒಂದು.

ಹನುಮಂತನಿಗೆ ಸ್ವಸ್ವರೂಪ ಪ್ರಜ್ಞೆ ಜಾಗ್ರತವಾಯಿತು. ತನ್ನ ಪರಾಕ್ರಮವನ್ನು ಒಂದೊಂದಾಗಿಯೇ ನೆನಪಿಗೆ ತಂದುಕೊಳ್ಳುವ ವಿವರ ಬರುತ್ತದೆ. ಇದು ಆತ್ಮಪ್ರಶಂಸೆಯಲ್ಲ, ಆತ್ಮವಿಶ್ವಾಸವನ್ನು ತೋರಿಸುವುದು. ಆತ್ಮಶ್ಲಾಘನೆ ವೀರರಿಗೆ ಉಚಿತವಲ್ಲ. ಹಾಗೆ ಮಾಡಿಕೊಂದರೆ ಅದು ಆತ್ಮಹತ್ಯೆಗೆ ಸಮ ಎಂದು ಮಹಾಭಾರತದಲ್ಲಿ ಕೃಷ್ಣ ಹೇಳುತ್ತಾನೆ. ಕಳೆದುಹೋದ ನಿಧಿ ಸಿಕ್ಕಾಗ ಅದನ್ನು ಜತನದಿಂದ ಎಣಿಸಿಟ್ಟುಕೊಳ್ಳುವಂತೆ ಹನುಮ ತನ್ನ ಪರಾಕ್ರಮಗಳನ್ನು ಬಣ್ಣಿಸುತ್ತಾನೆ.

ಸಮುದ್ರವನ್ನು ದಾಟುವಾಗ ತನ್ನ ಭಾರವನ್ನು ಭೂಮಿ ತಡೆದುಕೊಳ್ಳುವ ಜಾಗವನ್ನು ಅರಸಿದಾಗ ಮಹೇಂದ್ರ ಪರ್ವತ ಕಾಣಿಸುತ್ತದೆ. ಅದನ್ನು ಏರುವಾಗ ಆತನ ಪಾದಾಘಾತಕ್ಕೆ ಸಿಕ್ಕಿದ ಮಹೇಂದ್ರ ಪರ್ವತದ ಶಿಖರಗಳೇ ಉರುಳಿ ಬಿದ್ದವಂತೆ. ಹಾರಿದನು ಹನುಮ ಲಂಕೆಗೆ. ಹಾಗೇ ಹಾರುವುದಕ್ಕೆ ಮೊದಲೇ ಮನಸ್ಸನ್ನು “ಜಗಾಮ ಲಙ್ಕಾಂ ಮನಸಾ ಮನಸ್ವೀ” ಲಂಕೆಯತ್ತಲೇ ಕೇಂದ್ರೀಕರಿಸಿದನಂತೆ.

ಹನುಮದ್ವಿಕಾಸಕ್ಕೆ ತಡೆ ಇನ್ನಿಲ್ಲ.

ಇದನ್ನೂ ಓದಿ: Narayana Yaji Column: ರಾಮಾಯಣದಲ್ಲಿನ ವಿಲಕ್ಷಣ ಪ್ರಸಂಗ- ಅಂಗದ ಬಂಡಾಯ; ಹನುಮನ ಶಮನ