Yadgir News: ತಂದೆ ಸಾವಿನ ದುಃಖದಲ್ಲೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿ!
ತಂದೆಯ ಅಕಾಲಿಕ ಸಾವಿನ ನೋವಿನಲ್ಲೂ ವಿದ್ಯಾರ್ಥಿನಿ ಅನುಸುಜಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಬರೆದ ಮನಮಿಡಿಯುವ ಘಟನೆ ಮಂಗಳವಾರ ಗುರುಮಠಕಲ್ ಪಟ್ಟಣದ ಕಟ್ಟಲ್ ಗೇರಾ ಓಣಿಯಲ್ಲಿ ನಡೆದಿದೆ. ವಿದ್ಯಾರ್ಥಿನಿ ಅನುಸುಜಾ ತಂದೆಯ ಸಾವಿನ ದುಃಖದಲ್ಲೇ ಎಸ್ಸೆಸ್ಸೆಲ್ಸಿ ಹಿಂದಿ ಪರೀಕ್ಷೆ ಬರೆದು, ಮಧ್ಯಾಹ್ನದ ನಂತರ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾಳೆ.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಅನುಸುಜಾ. -
ಗುರುಮಠಕಲ್, ಮಾ.31: ತಂದೆಯ ಅಕಾಲಿಕ ಸಾವಿನ ನೋವಿನಲ್ಲೂ ವಿದ್ಯಾರ್ಥಿನಿಯೊಬ್ಬಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಮನಮಿಡಿಯುವ ಘಟನೆ ಪಟ್ಟಣದ ಕಟ್ಟಲ್ ಗೇರಾ ಓಣಿಯಲ್ಲಿ ಮಂಗಳವಾರ ನಡೆದಿದೆ. ಯಾದಗಿರಿ ಜಿಲ್ಲೆ (Yadgir News) ಗುರುಮಠಕಲ್ ಕಟಲಗೇರಾ ಬಡಾವಣೆಯ ಕೂಲಿ ಕಾರ್ಮಿಕ ಅಂಜಪ್ಪ ಅನಾರೋಗ್ಯದಿಂದ ಸೋಮವಾರ ಮೃತಪಟ್ಟಿದ್ದರು. ತಂದೆಯ ಸಾವಿನಿಂದ ಕಂಗಾಲಾಗಿದ್ದ ವಿದ್ಯಾರ್ಥಿನಿ ಅನುಸುಜಾ, ಆ ನೋವಿನಲ್ಲೇ ಹಿಂದಿ ವಿಷಯದ ಪರೀಕ್ಷೆ ಬರೆದು, ಮಧ್ಯಾಹ್ನದ ನಂತರ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾಳೆ.
ಗುರುಮಠಕಲ್ ಪಟ್ಟಣದ ಉಪ್ಪಾರ ಗಡ್ಡ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಅನುಸುಜಾ, ಜಿ. ಶ್ರೀನಿವಾಸ್ ರೆಡ್ಡಿ ಸ್ಮಾರಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ (ಫ್ರಂಟ್ ಲೈನ್ ಶಾಲೆ) ಪರೀಕ್ಷಾ ಕೇಂದ್ರದಲ್ಲಿ ಈಗಾಗಲೇ ನಾಲ್ಕು ವಿಷಯಗಳ ಪರೀಕ್ಷೆಯನ್ನು ಬರೆದಿದ್ದು. ಕೊನೆಯ ಎರಡು ವಿಷಯದ ಪರೀಕ್ಷೆಯನ್ನು ಬರೆಯುವ ಸಿದ್ಧತೆಯಲ್ಲಿದ್ದಳು. ಈ ನಡುವೆ ವಿದ್ಯಾರ್ಥಿನಿಗೆ ತಂದೆಯ ಸಾವು ತೀವ್ರ ಆಘಾತ ಉಂಟು ಮಾಡಿದೆ.
SSLC Exam: ಆಂಬ್ಯುಲೆನ್ಸ್‌ನಲ್ಲಿ ಬಂದು ಸ್ಟ್ರೆಚರ್ ಬೆಡ್ ಮೇಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿ!
ವಿಷಯ ತಿಳಿದ ಶಾಲಾ ಶಿಕ್ಷಕರು, ಶಾಲೆಯ ಎಸ್‌ಡಿಎಂಸಿ ಸದಸ್ಯರು, ಸ್ಥಳೀಯ ಪುರಸಭೆಯ ಮಾಜಿ ಸದಸ್ಯ ಆಶಣ್ಣ ಬುದ್ಧ ಬೆಳಗ್ಗೆ ವಿದ್ಯಾರ್ಥಿನಿಯ ಮನೆಗೆ ತೆರಳಿ, ಸಾಂತ್ವನ ಹೇಳಿ, ಪರೀಕ್ಷೆ ಬರೆಯಲು ಆತ್ಮಸ್ಥೈರ್ಯ ತುಂಬಿದ್ದರು.