ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

HIV Awareness: ಏಡ್ಸ್ ಸುರಕ್ಷಾ ಅಭಿಯಾನ; ರಾಜ್ಯದ 56 ಸಾವಿರ ಮಂದಿಗೆ ಎಚ್‌ಐವಿ ಸೋಂಕು ಇರುವುದು ಗೊತ್ತೇ ಇಲ್ಲ!

ಎಚ್‌ಐವಿಯನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿದರೆ ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ. ಹೀಗಾಗಿ ಎಚ್‌ಐವಿ ಸ್ಥಿತಿಯ ಬಗ್ಗೆ ಅರಿವಿಲ್ಲದೆ ಬದುಕುತ್ತಿರುವ ಜನರನ್ನು ಆದಷ್ಟು ಬೇಗ ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆಗೆ ಒಳಪಡಿಸಲು ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ ಮಹತ್ವದ ಅಭಿಯಾನ ಕೈಗೊಂಡಿದೆ.

ರಾಜ್ಯದ 56 ಸಾವಿರ ಮಂದಿಗೆ ಎಚ್‌ಐವಿ ಸೋಂಕು ಇರುವುದು ಗೊತ್ತೇ ಇಲ್ಲ!

-

Prabhakara R
Prabhakara R Jul 6, 2026 6:37 PM

ಬೆಂಗಳೂರು: ರಾಜ್ಯವನ್ನು ಸಂಪೂರ್ಣವಾಗಿ ಎಚ್‌ಐವಿ (HIV) ಮುಕ್ತ ಮಾಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆಯು (KSAPS) ಮಹತ್ವದ ಹೆಜ್ಜೆಯಿಟ್ಟಿದೆ. ರಾಜ್ಯದಲ್ಲಿ ತಮಗೇ ತಿಳಿಯದಂತೆ ಸೋಂಕಿಗೆ ಒಳಗಾಗಿರುವವರನ್ನು ಪತ್ತೆಹಚ್ಚಲು ‘ಮೊಬಿಲೈಸೇಶನ್ ಫಾರ್ ಏಡ್ಸ್ ಸುರಕ್ಷಾ’ (MAS) ಅಭಿಯಾನಕ್ಕೆ ಸಂಸ್ಥೆಯು ಮತ್ತಷ್ಟು ವೇಗ ನೀಡಿದೆ.

ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಸದ್ಯ ರಾಜ್ಯದಲ್ಲಿ 2.05 ಲಕ್ಷಕ್ಕೂ ಹೆಚ್ಚು (2,05,350) ಎಚ್‌ಐವಿ ಪೀಡಿತರು ಆಂಟಿರೆಟ್ರೋವೈರಲ್ ಥೆರಪಿ (ART) ಚಿಕಿತ್ಸೆ ಪಡೆಯುತ್ತಾ ಸಾಮಾನ್ಯರಂತೆ ಜೀವನ ನಡೆಸುತ್ತಿದ್ದಾರೆ. ಆದರೆ, ಕಳವಳಕಾರಿ ಸಂಗತಿಯೆಂದರೆ ರಾಜ್ಯದಲ್ಲಿ ಇನ್ನೂ ಸುಮಾರು 56,406 ಜನರು ತಮ್ಮ ಎಚ್‌ಐವಿ ಸ್ಥಿತಿಯ ಬಗ್ಗೆ ಅರಿವಿಲ್ಲದೆ ಬದುಕುತ್ತಿದ್ದಾರೆ. ಇಂತಹವರನ್ನು ಆದಷ್ಟು ಬೇಗ ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆಗೆ ಒಳಪಡಿಸುವುದೇ ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

‘ನಿಮ್ಮ ಸ್ಥಿತಿಯನ್ನು ತಿಳಿಯಿರಿ’

ಸಮಾಜದಲ್ಲಿ ಎಚ್‌ಐವಿ ಕುರಿತಾದ ತಾರತಮ್ಯ ಹಾಗೂ ಕೀಳರಿಮೆಯನ್ನು ಹೋಗಲಾಡಿಸಲು ಈ ಅಭಿಯಾನವು “ನಿಮ್ಮ ಸ್ಥಿತಿಯನ್ನು ತಿಳಿಯಿರಿ” ಎಂಬ ಮಹತ್ವದ ಸಂದೇಶವನ್ನು ಸಾರುತ್ತಿದೆ. ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಬಂದು ಎಚ್‌ಐವಿ ತಪಾಸಣೆ ಮಾಡಿಸಿಕೊಳ್ಳಲು ಉತ್ತೇಜಿಸಲಾಗುತ್ತಿದ್ದು, ಈ ತಪಾಸಣಾ ಪ್ರಕ್ರಿಯೆಯನ್ನು ಅತ್ಯಂತ ರಹಸ್ಯ ಹಾಗೂ ಗೌಪ್ಯವಾಗಿಡಲಾಗುತ್ತದೆ. ಎಚ್‌ಐವಿಯನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿದರೆ ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂದು ಸಂಸ್ಥೆ ತಿಳಿಸಿದೆ.

Mobilisation for AIDS Safety campaign

ಈ ಅಭಿಯಾನದಲ್ಲಿ ವೈಜ್ಞಾನಿಕವಾಗಿ ಸಾಬೀತಾದ "Undetectable = Untransmittable " ಎಂಬ ಆರೋಗ್ಯ ಪರಿಕಲ್ಪನೆಯನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಅದೇನೆಂದರೆ, “ಪತ್ತೆಯಾಗದಿದ್ದರೆ = ಹರಡುವುದಿಲ್ಲ. ಎಚ್‌ಐವಿ ಹೊಂದಿರುವ ವ್ಯಕ್ತಿಯು ನಿಯಮಿತವಾಗಿ 'ಎಆರ್‌ಟಿ' (ART) ಚಿಕಿತ್ಸೆ ಪಡೆದು ತನ್ನ ದೇಹದಲ್ಲಿ ವೈರಸ್ ಅನ್ನು ಸಂಪೂರ್ಣ ನಿಯಂತ್ರಣದಲ್ಲಿಟ್ಟುಕೊಂಡರೆ (Undetectable), ಆತನಿಂದ ಲೈಂಗಿಕ ಸಂಗಾತಿಗೆ ವೈರಸ್‌ ಹರಡುವುದಿಲ್ಲ (Untransmittable). ಇದರಿಂದ ಸೋಂಕಿತರು ಯಾವುದೇ ಆತಂಕವಿಲ್ಲದೆ ದೀರ್ಘಕಾಲದವರೆಗೆ ಸಾಮಾನ್ಯರಂತೆ ಆರೋಗ್ಯಕರ ಜೀವನ ನಡೆಸಬಹುದು.

‘ಬ್ರೇಕ್‌ಫ್ರೀ ಕ್ಯೂಆರ್ ಕೋಡ್’

ಈ ಅಭಿಯಾನವನ್ನು ಜನಸಾಮಾನ್ಯರಿಗೆ ಸುಲಭವಾಗಿ ತಲುಪಿಸಲು ತಂತ್ರಜ್ಞಾನದ ಮೊರೆ ಹೋಗಲಾಗಿದ್ದು, ‘ಬ್ರೇಕ್‌ಫ್ರೀ ಕ್ಯೂಆರ್ ಕೋಡ್’ (Breakfree QR Code) ಅನ್ನು ಪರಿಚಯಿಸಲಾಗಿದೆ. ಇದನ್ನು ಸ್ಕ್ಯಾನ್ ಮಾಡುವ ಮೂಲಕ ಎಚ್‌ಐವಿ ಅಪಾಯ ಹಾಗೂ ಜಾಗೃತಿಯ ಮಾಹಿತಿ, ಸಂಪೂರ್ಣ ಗೌಪ್ಯ ಆಪ್ತಸಮಾಲೋಚನೆ (Counseling), ತಮ್ಮ ಹತ್ತಿರದ ತಪಾಸಣಾ ಕೇಂದ್ರಗಳ ಸುಲಭ ಸಂಪರ್ಕದ ವಿವರ ಪಡೆಯಬಹುದು.

Health Tips: ಶುಂಠಿ ಚಹಾ ಹೆಚ್ಚು ಕುಡಿಯುತ್ತೀರಾ? ಮಿತಿಮೀರಿದರೆ ಈ ಆರೋಗ್ಯ ಸಮಸ್ಯೆ ಕಾಡಬಹುದು!

ಸಾರ್ವಜನಿಕರಲ್ಲಿ KSAPS ಮಾಡಿರುವ ಪ್ರಮುಖ ಮನವಿಗಳು:

  • ಪ್ರತಿಯೊಬ್ಬರೂ ಕಡ್ಡಾಯವಾಗಿ ತಮ್ಮ ಎಚ್‌ಐವಿ ಸ್ಥಿತಿಯನ್ನು ತಿಳಿದುಕೊಳ್ಳಲು ತಪಾಸಣೆ ಮಾಡಿಸಿಕೊಳ್ಳಬೇಕು.
  • ಗರ್ಭಿಣಿಯರು ಕಡ್ಡಾಯವಾಗಿ ಎಚ್‌ಐವಿ ಮತ್ತು ಸಿಫಿಲಿಸ್ ತಪಾಸಣೆಗೆ ಒಳಗಾಗಬೇಕು.
  • ಲೈಂಗಿಕ ಸೋಂಕಿನ (STI) ಲಕ್ಷಣಗಳಿದ್ದರೆ ಯಾವುದೇ ಮುಜುಗುರವಿಲ್ಲದೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು.