ʻ12 ನಿಮಿಷಗಳ ಕ್ಲೈಮ್ಯಾಕ್ಸ್ ಗೆ 22 ದಿನ ಶೂಟಿಂಗ್ʼ; ʻಪಿನಾಕʼ ಮೇಕಿಂಗ್ ಸ್ಟೋರಿ ಬಿಚ್ಚಿಟ್ಟ ʻಗೋಲ್ಡನ್ ಸ್ಟಾರ್ʼ ಗಣೇಶ್
ʻಗೋಲ್ಡನ್ ಸ್ಟಾರ್ʼ ಗಣೇಶ್ ಅವರ ಹುಟ್ಟುಹಬ್ಬದ ವಿಶೇಷವಾಗಿ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಬ್ಯಾನರ್ ಅಡಿಯಲ್ಲಿ ಟಿ.ಜಿ. ವಿಶ್ವಪ್ರಸಾದ್ ನಿರ್ಮಿಸುತ್ತಿರುವ ‘ಪಿನಾಕ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಧನಂಜಯ್ ನಿರ್ದೇಶನದ ಈ ಸಿನಿಮಾವು ಅಕ್ಟೋಬರ್ 2 ರಂದು ತೆರೆಕಾಣಲಿದೆ.
-
ಭಾರತೀಯ ಚಿತ್ರರಂಗಕ್ಕೆ ಸದಭಿರುಚಿಯ ಸಿನಿಮಾಗಳನ್ನು ನೀಡುತ್ತಾ ಬಂದಿರುವ ಖ್ಯಾತ ನಿರ್ಮಾಣ ಸಂಸ್ಥೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಬ್ಯಾನರ್ ಅಡಿಯಲ್ಲಿ ಟಿ.ಜಿ. ವಿಶ್ವಪ್ರಸಾದ್ ನಿರ್ಮಿಸುತ್ತಿರುವ ‘ಪಿನಾಕ’ ಚಿತ್ರದ ಟೀಸರ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅವರ ಹುಟ್ಟುಹಬ್ಬದ ಅಂಗವಾಗಿ ಖಾಸಗಿ ಶಾಲೆಯೊಂದರಲ್ಲಿ ಸಾವಿರಾರು ಮಕ್ಕಳ ಸಮ್ಮುಖದಲ್ಲಿ ಟೀಸರ್ ಅನಾವರಣಗೊಳಿಸಲಾಯಿತು. ಗಣೇಶ್ ಅವರ ಹೊಸ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ನಾನು ಶಿವ ಭಕ್ತ ಎಂದ ಗಣೇಶ್
ಟೀಸರ್ ಬಿಡುಗಡೆ ಬಳಿಕ ಮಾತನಾಡಿದ ನಟ ಗಣೇಶ್, "ಮುಂಗಾರು ಮಳೆಯಿಂದ ನಾಯಕನಾಗಿ ಶುರುವಾದ ನನ್ನ ಸಿನಿ ಜರ್ನಿ ಈ ಹಂತ ತಲುಪಲು ದೇವರ, ತಂದೆ-ತಾಯಿ ಹಾಗೂ ಅಭಿಮಾನಿಗಳ ಆಶೀರ್ವಾದವೇ ಕಾರಣ. ನನ್ನ ಮಕ್ಕಳು 'ಕಾರ್ತಿಕೇಯ 2' ಚಿತ್ರ ನೋಡಿ, ನೀವು ಈ ತರಹದ ಸಿನಿಮಾದಲ್ಲಿ ನಟಿಸಬೇಕು ಎಂದು ಹೇಳುತ್ತಿದ್ದರು. ನಾನು ಮೂಲತಃ ಶಿವ ಭಕ್ತ. 'ಪಿನಾಕ' ಕೂಡ ಶಿವನ ಕುರಿತಾದ ಚಿತ್ರವಾಗಿದ್ದು, ಇದರಲ್ಲಿ ನಟಿಸಿರುವುದು ಬಹಳ ಖುಷಿ ತಂದಿದೆ. ಈ ಕಥೆ ದೊಡ್ಡ ಬಜೆಟ್ ಕೇಳುವುದರಿಂದ ನಿರ್ಮಾಪಕರಿಗೆ ಹೊರೆಯಾಗಬಾರದು ಎಂದು ಆರಂಭದಲ್ಲೇ ಹೇಳಿದ್ದೆ, ಆದರೆ ಅವರು ಕಥೆಗೆ ತಕ್ಕ ಬಜೆಟ್ ಹಾಕಲು ಸಿದ್ಧರಿದ್ದರು" ಎಂದು ನಿರ್ಮಾಪಕರ ಬೆಂಬಲವನ್ನು ಶ್ಲಾಘಿಸಿದರು.
Pinaka Movie: ಅದ್ಧೂರಿ ಸೆಟ್‌ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ʼಪಿನಾಕʼ ಶೂಟಿಂಗ್
22 ದಿನಗಳ ಕ್ಲೈಮ್ಯಾಕ್ಸ್ ಶೂಟಿಂಗ್
ಚಿತ್ರದ ಮೇಕಿಂಗ್ ಬಗ್ಗೆ ಮಾತನಾಡಿದ ಗಣೇಶ್, "ಈ ಚಿತ್ರದ ಚಿತ್ರೀಕರಣದಲ್ಲಿ ಸಾವಿರಾರು ಜನರು ಭಾಗಿಯಾಗುತ್ತಿದ್ದರು. ವಿಶೇಷವಾಗಿ ಚಿತ್ರದ ಕೊನೆಯ 12 ನಿಮಿಷಗಳ ಕ್ಲೈಮ್ಯಾಕ್ಸ್ ದೃಶ್ಯಕ್ಕಾಗಿ ಬರೋಬ್ಬರಿ 22 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ. ಇದು ಚಾರುಕೇಶ ರಾಜನ ಕಥೆಯಾಗಿದ್ದು, ಶ್ರೀನಿವಾಸಮೂರ್ತಿ, ರಂಗಾಯಣ ರಘು, ಸಾಧುಕೋಕಿಲ ಅವರಂತಹ ಹಿರಿಯ ಕಲಾವಿದರಿಂದ ಸಾಕಷ್ಟು ಕಲಿತಿದ್ದೇನೆ. ಇದೇ ಅಕ್ಟೋಬರ್ 2ರಂದು ತೆರೆಗೆ ಬರುತ್ತಿರುವ ಈ ಸಿನಿಮಾ ಪ್ರೇಕ್ಷಕರಿಗೆ ಮನೋರಂಜನೆಯ ರಸದೌತಣ ನೀಡಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಲಸ ಮಾತನಾಡಲಿ ಎಂದ ನಿರ್ದೇಶಕ ಧನಂಜಯ್
ಹೆಸರಾಂತ ನೃತ್ಯ ನಿರ್ದೇಶಕರಾಗಿದ್ದು, ಈ ಚಿತ್ರದ ಮೂಲಕ ಚೊಚ್ಚಲ ಬಾರಿಗೆ ಮೆಗಾಫೋನ್ ಹಿಡಿದಿರುವ ನಿರ್ದೇಶಕ ಧನಂಜಯ್ ಮಾತನಾಡಿ, "ನಾನು ಮಾತಾಡುವುದು ಬೇಡ, ನನ್ನ ಕೆಲಸ ಮಾತನಾಡಲಿ ಎಂದು ಈವರೆಗೆ ಚಿತ್ರದ ಬಗ್ಗೆ ಹೆಚ್ಚು ಬಿಟ್ಟುಕೊಟ್ಟಿರಲಿಲ್ಲ. ಈಗ ಟೀಸರ್‌ಗೆ ಸಿಗುತ್ತಿರುವ ಪ್ರತಿಕ್ರಿಯೆ ನೋಡಿ ಮನತುಂಬಿ ಬಂದಿದೆ. ಟೀಸರ್‌ನಲ್ಲಿ ಕೇವಲ 30% ಮಾತ್ರ ತೋರಿಸಲಾಗಿದ್ದು, ಚಿತ್ರದಲ್ಲಿ ಅಧ್ಯಾತ್ಮಿಕತೆಗೆ ಹೆಚ್ಚು ಒತ್ತು ಕೊಡಲಾಗಿದೆ" ಎಂದರು.
ನಿರ್ಮಾಣದ ಮೇಲ್ವಿಚಾರಣೆ ಹೊತ್ತಿರುವ ವಿಜಯಾ ರಾಜೇಶ್ ಮಾತನಾಡಿ, ಗಣೇಶ್ ಅವರ ಮಗ ವಿಹಾನ್‌ಗೆ 'ಕಾರ್ತಿಕೇಯ 2' ಚಿತ್ರ ಇಷ್ಟವಾಗಿದ್ದರಿಂದ, ಅವರ ಕಾಂಬಿನೇಷನ್‌ನಲ್ಲಿ ಪೌರಾಣಿಕ ಹಿನ್ನೆಲೆಯುಳ್ಳ ಶಿವನ ಕಥಾಹಂದರವನ್ನು ಆಯ್ಕೆ ಮಾಡಿಕೊಳ್ಳಲಾಯಿತು ಎಂದು ಚಿತ್ರದ ಹಿನ್ನೆಲೆಯನ್ನು ಹಂಚಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ಹಿರಿಯ ನಟರಾದ ರಂಗಾಯಣ ರಘು, ಸಾಧುಕೋಕಿಲ, ನಾಯಕಿ ಅರ್ಚನಾ ಅಯ್ಯರ್, ನಟರಾದ ರೋಬೊ ಗಣೇಶ್, ರವೀಂದ್ರನಾಥ್ ಹಾಗೂ ಸಂಗೀತ ನಿರ್ದೇಶಕ ಗೌರಾ ಹರಿ ಉಪಸ್ಥಿತರಿದ್ದರು.