ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Post Office Monthly Income Scheme: ಪ್ರತಿ ತಿಂಗಳು 9,250 ರೂ. ಆದಾಯ ಪಡೆಯಲು ಈ ಯೋಜನೆಯಲ್ಲಿ ಹೂಡಿಕೆ ಮಾಡಿ

ನಿಮ್ಮ ಬಳಿ ಇನ್ವೆಸ್ಟ್‌ ಮಾಡಬಹುದಾದ ಸುಮಾರು 15 ಲಕ್ಷ ರೂ. ಇದೆ ಮತ್ತು ಅದನ್ನು ಸಂಪೂರ್ಣ ಸೇಫ್‌ ಆಗಿರುವುದರಲ್ಲಿ ಇನ್ವೆಸ್ಟ್‌ಮೆಂಟ್‌ ಮಾಡಿ, ಪ್ರತಿ ತಿಂಗಳೂ ಸುಮಾರು 9,250 ರೂ. ಹೆಚ್ಚುವರಿ ಇನ್‌ಕಮ್‌ ಪಡೀಬೇಕು ಅಂತ ಆಲೋಚಿಸುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಅತ್ಯುತ್ತಮ ಯೋಜನೆ. ಅಂಚೆ ಇಲಾಖೆಯಲ್ಲಿ ಮಾಸಿಕ ಆದಾಯ ಯೋಜನೆ ಅಥವಾ ಪೋಸ್ಟ್‌ ಆಫೀಸ್‌ ಮಂತ್ಲಿ ಇನ್‌ಕಮ್‌ ಸ್ಕೀಮ್‌ ಇದಾಗಿದ್ದು, ಸಂಪೂರ್ಣ ವಿವರ ಇಲ್ಲಿದೆ.

ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಕೈತುಂಬ ಹಣ

ಸಾಂದರ್ಭಿಕ ಚಿತ್ರ.

-ಕೇಶವ ಪ್ರಸಾದ್ ಬಿ.

ಬೆಂಗಳೂರು: ನಿಮ್ಮ ಬಳಿ ಇನ್ವೆಸ್ಟ್‌ ಮಾಡಬಹುದಾದ ಸುಮಾರು 15 ಲಕ್ಷ ರೂ. ಇದೆ ಮತ್ತು ಅದನ್ನು ಸಂಪೂರ್ಣ ಸೇಫ್‌ ಆಗಿರುವುದರಲ್ಲಿ ಇನ್ವೆಸ್ಟ್‌ಮೆಂಟ್‌ ಮಾಡಿ, ಪ್ರತಿ ತಿಂಗಳೂ ಸುಮಾರು 9,250 ರೂ. ಹೆಚ್ಚುವರಿ ಇನ್‌ಕಮ್‌ ಪಡೀಬೇಕು ಅಂತ ಆಲೋಚಿಸುತ್ತಿದ್ದೀರಾ? ಕೆಲವೊಮ್ಮೆ ಸ್ಟಾಕ್‌ ಮಾರ್ಕೆಟ್‌ ಅಥವಾ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆಗೆ ನಿಮ್ಮ ಮನಸ್ಸು ಒಪ್ಪದೆಯೇ ಇರಬಹುದು. ಹಾಗಾದರೆ ಅದಕ್ಕೇನು ಪರಿಹಾರ (Post Office Monthly Income Scheme) ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ನಿಜ, ಸ್ಟಾಕ್‌ ಮಾರ್ಕೆಟ್‌ ಅಥವಾ ಮ್ಯೂಚುವಲ್‌ ಫಂಡ್‌ಗಳಲ್ಲಿ ಆಕರ್ಷಕ ಎನ್ನಿಸುವಂಥ ಆದಾಯ ಪಡೆಯಬಹುದು. ಆದರೂ ಅಲ್ಲಿ ಮಾರುಕಟ್ಟೆಯ ರಿಸ್ಕ್‌ ಇದ್ದೇ ಇರುತ್ತೆ. ಉದಾಹರಣೆಗೆ ಈವಾಗ ಗಮನಿಸಿ. ಕಳೆದ ವರ್ಷ ಅಕ್ಟೋಬರ್‌ನಿಂದ ಷೇರು ಮಾರುಕಟ್ಟೆ ನಿರಂತರವಾಗಿ ಮಂದಗತಿಯಲ್ಲಿದೆ. ಹೀಗಾಗಿ ಷೇರು ಹೂಡಿಕೆದಾರರು ಆತಂಕಿತರಾಗಿದ್ದಾರೆ. ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಿದವರು ಕೂಡ ಸಿಪ್‌ಗಳನ್ನು ಸದ್ಯಕ್ಕೆ ನಿಲ್ಲಿಸಬೇಕೇ ಅಥವಾ ಮುಂದುವರಿಸಬೇಕೆ ಎಂಬ ಗೊಂದಲದಲ್ಲಿದ್ದಾರೆ. ಏಕೆಂದರೆ ಕಳೆದ ಕೆಲ ತಿಂಗಳುಗಳಿಂದ ಮಾರ್ಕೆಟ್‌ ಡಲ್‌ ಆಗಿದೆ. ಅನೇಕ ಮಂದಿಯ ಪೋರ್ಟ್‌ ಫೋಲಿಯೊಗಳು ರೆಡ್‌ ಆಗಿದೆ. ಹೀಗಿರುವಾಗ ಹಲವಾರು ಮಂದಿ, ಯಾವುದೇ ವಯಸ್ಸಿನವರಾಗಿರಬಹುದು, ತಮ್ಮ ಹೂಡಿಕೆಗೆ ಮಾರುಕಟ್ಟೆಯ ಯಾವುದೇ ರಿಸ್ಕ್‌ ಇಲ್ಲದೆಯೇ, ತಿಂಗಳಿಗೆ ನಿಯಮಿತ ಆದಾಯ ಪಡೆಯುವುದು ಹೇಗೆ? ಎಂಬ ಆಲೋಚನೆ ಮಾಡುತ್ತಿರಬಹುದು.

ಇನ್ನು ಕೆಲವರಿಗೆ ಸೈಟ್‌ ತಗೊಂಡು, ಮನೆ ಕಟ್ಟಿ ಬಾಡಿಗೆಗೆ ಕೊಡೋಣ ಎಂಬ ಪ್ಲಾನ್‌ ಇರಬಹುದು. ಆದರೆ ಒಂದು ಸಿಂಗಲ್‌ ಬೆಡ್‌ ರೂಮ್‌ ಮನೆಗೆ ಸಿಗುವ ಬಾಡಿಗೆಗಿಂತ ಪೋಸ್ಟ್‌ ಆಫೀಸ್‌ ಮಂತ್ಲಿ ಸ್ಕೀಮ್‌ನಲ್ಲಿ ಇನ್ವೆಸ್ಟ್‌ ಮಾಡೋದು ಬಹಳ ಒಳ್ಳೆಯದು.



ಅಂಚೆ ಇಲಾಖೆಯಲ್ಲಿ ಮಾಸಿಕ ಆದಾಯ ಯೋಜನೆ ಅಥವಾ ಪೋಸ್ಟ್‌ ಆಫೀಸ್‌ ಮಂತ್ಲಿ ಇನ್‌ಕಮ್‌ ಸ್ಕೀಮ್‌ ಇದೆ. ಪೋಸ್ಟ್‌ ಆಫೀಸ್‌ ಎಂಐಎಸ್‌ ಸ್ಕೀಮ್‌ ಎಂದೂ ಇದು ಜನಪ್ರಿಯವಾಗಿದೆ. ಇಲ್ಲಿ ನಿಮ್ಮ ಹೂಡಿಕೆ ಅತ್ಯಂತ ಸುರಕ್ಷಿತ. ಏಕೆಂದರೆ ಇದು ಸರ್ಕಾರದ ಖಾತರಿ ಇರುವ ಯೋಜನೆ. ಜತೆಗೆ ನಿಮಗೆ ಸಿಗುವ ಆದಾಯವೂ ಗ್ಯಾರಂಟಿಯಾಗಿರುತ್ತದೆ. ಬ್ಯಾಂಕ್‌ಗಳಲ್ಲಿ ಫಿಕ್ಸೆಡ್‌ ಡೆಪಾಸಿಟ್‌ ಇಟ್ಟರೂ ನಿಮಗೆ 5 ಲಕ್ಷ ರುಪಾಯಿ ತನಕ ಇನ್ಷೂರೆನ್ಸ್‌ ಸಿಗುತ್ತದೆ. ಆದರೆ ಇಲ್ಲಿ ನಿಮ್ಮ ಹೂಡಿಕೆಯ ಅಷ್ಟೂ ಹಣಕ್ಕೆ ಸರಕಾರ ಗ್ಯಾರಂಟಿ ಕೊಡುತ್ತದೆ. ಆದ್ದರಿಂದ ಸುರಕ್ಷತೆಯ ದೃಷ್ಟಿಯಿಂದ ಅತ್ಯುತ್ತಮ ಯೋಜನೆಯಾಗಿದೆ.

ನಿವೃತ್ತಿಯ ಪ್ಲಾನ್‌ ಮಾಡುವವರಿಗೆ ಅಥವಾ ಮಧ್ಯ ವಯಸ್ಕರಿಗೆ ಇದು ಬೆಸ್ಟ್‌ ಚಾಯ್ಸ್‌ಗಳಲ್ಲೊಂದು. ಏಕೆಂದರೆ ಆ ವಯಸ್ಸಿನಲ್ಲಿ ಯಾರೊಬ್ಬರೂ ತಮ್ಮ ಅಸಲು ಬಂಡವಾಳವನ್ನು ಮಾರುಕಟ್ಟೆಯ ರಿಸ್ಕ್‌ನಲ್ಲಿ ಇಡಲು ಬಯಸುವುದಿಲ್ಲ. ನೀವು ಯುವ ಜನತೆಯಾಗಿದ್ದಾಗ ಸ್ಟಾಕ್‌ ಮಾರ್ಕೆಟ್‌, ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಿ ಗಳಿಸಿರುವ ಹಣವನ್ನು, ಮಧ್ಯ ವಯಸ್ಸು ದಾಟಿದ ಬಳಿಕ ಅಂಚೆ ಇಲಾಖೆಯ ಮಾಸಿಕ ಆದಾಯ ಯೋಜನೆಯಲ್ಲಿ ಸುರಕ್ಷಿತವಾಗಿ ಇಟ್ಟು, ಪ್ರತಿ ತಿಂಗಳೂ ಗರಿಷ್ಠ 9,250 ರುಪಾಯಿ ಆದಾಯ ಪಡೆಯಬಹುದು.

ನೀವು ಇಂಟರ್‌ನೆಟ್‌ನಲ್ಲಿ ಪೋಸ್ಟ್‌ ಆಫೀಸ್‌ ಮಂತ್ಲಿ ಇನ್‌ ಕಮ್‌ ಸ್ಕೀಮ್‌ ಕ್ಯಾಲ್ಕ್ಯುಲೇಟರ್‌ ಮೂಲಕವೂ ನಿಮ್ಮ ಹೂಡಿಕೆಗೆ ಎಷ್ಟು ರಿಟರ್ನ್‌ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು. ಈಗ ಪೋಸ್ಟ್‌ ಆಫೀಸ್‌ ಮಂತ್ಲಿ ಇನ್‌ಕಮ್‌ ಸ್ಲೀಮ್‌ನ ಮತ್ತಷ್ಟು ವಿವರಗಳನ್ನು ನೋಡೋಣ.

2024ರ ಜನವರಿ 1ರಿಂದ ಪೋಸ್ಟ್‌ ಆಫೀಸ್‌ ಮಂತ್ಲಿ ಇನ್‌ಕಮ್‌ ಸ್ಕೀಮ್‌ನ ವಾರ್ಷಿಕ ಬಡ್ಡಿ ದರ 7.4% ಆಗಿದೆ. ಕನಿಷ್ಠ 1000 ರುಪಾಯಿಗಳಿಂದ ಇದರಲ್ಲಿ ಹೂಡಿಕೆ ಮಾಡಬಹುದು. ಸಿಂಗಲ್‌ ಅಕೌಂಟ್‌ನಲ್ಲಿ ಗರಿಷ್ಠ 9 ಲಕ್ಷ ರುಪಾಯಿ ಹಾಗೂ ಜಂಟಿ ಖಾತೆಯಲ್ಲಿ ಗರಿಷ್ಠ 15 ಲಕ್ಷ ರುಪಾಯಿ ಹೂಡಿಕೆ ಮಾಡಬಹುದು. ನೀವು 15 ಲಕ್ಷ ರುಪಾಯಿ ಹೂಡಿಕೆ ಮಾಡಿದ್ರೆ, ಪ್ರತಿ ತಿಂಗಳೂ 9 ಸಾವಿರದ 250 ರುಪಾಯಿ ಬಡ್ಡಿ ಸಿಗುತ್ತದೆ.

ಹಾಗಾದರೆ ಇದರದಲ್ಲಿ ಯಾರು ಹೂಡಿಕೆ ಮಾಡಬಹುದು? ಒಬ್ಬರೇ ಖಾತೆ ತೆರೆಯಬಹುದು. ಜಂಟಿ ಖಾತೆಯಲ್ಲಿ ಇಬ್ಬರು ಅಥವಾ ಮೂವರು ಹೂಡಿಕೆ ಮಾಡಬಹುದು. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿದ್ದರೆ, ಅವರ ಪರವಾಗಿ ಪೋಷಕರು ಹೂಡಿಕೆ ಮಾಡಬಹುದು. 10 ವರ್ಷ ದಾಟಿದ್ದರೆ ಮಕ್ಕಳ ಹೆಸರಿನಲ್ಲಿಯೇ ಅಕೌಂಟ್‌ ತೆರೆಯಬಹುದು.

ಖಾತೆಯನ್ನು ತೆರೆದ ಬಳಿಕ ಪ್ರತಿ ತಿಂಗಳೂ ಬಡ್ಡಿಯನ್ನು ಪಡೆಯಬಹುದು. ಮೆಚ್ಯೂರಿಟಿಯ ಅವಧಿ 5 ವರ್ಷವಾಗಿದ್ದು, ಅಲ್ಲಿಯ ತನಕ ಪ್ರತಿ ತಿಂಗಳೂ ಬಡ್ಡಿಯನ್ನು ಗಳಿಸಬಹುದು. ಸಿಂಗಲ್‌ ಅಕೌಂಟ್‌ನಲ್ಲಿ ಡೆಪಾಸಿಟ್‌ ಮೊತ್ತವು 9 ಲಕ್ಷ ಮೀರುವಂತಿಲ್ಲ. ಜಂಟಿ ಖಾತೆಯಲ್ಲಿ 15 ಲಕ್ಷ ರುಪಾಯಿ ಮೀರುವಂತಿಲ್ಲ.

ಹೂಡಿಕೆ ಆದ ಬಳಿಕ ಮೊದಲ ವರ್ಷ ಆಗುವ ತನಕ ಹಿಂತೆಗೆಯುವಂತಿಲ್ಲ. ನಿಮ್ಮ ಹೂಡಿಕೆಯು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 80 ಸಿ ಅಡಿಗೆ ಒಳಪಡುವುದಿಲ್ಲ. ಟಿಡಿಎಸ್‌ಗೂ ಅನ್ವಯವಾಗುವುದಿಲ್ಲ. ನೀವು ಪೋಸ್ಟ್‌ ಆಫೀಸ್‌ನ ರಿಕರಿಂಗ್‌ ಡೆಪಾಸಿಟ್‌ ಅಥವಾ ಆರ್‌ಡಿ ಅಕೌಂಟ್‌ನಲ್ಲಿ ಇಟ್ಟಿರುವ ಹಣವನ್ನು ಮಂತ್ಲಿ ಇನ್‌ಕಮ್‌ ಸ್ಕೀಮ್‌ಗೆ ವರ್ಗಾಯಿಸಿ ಹೆಚ್ಚಿನ ಬಡ್ಡಿ ಅದಾಯ ಪಡೆಯಬಹುದು.

ಮಂತ್ಲಿ ಇನ್‌ಕಮ್‌ ಸ್ಕೀಮ್‌ ಅಡಿಯಲ್ಲಿ ಪ್ರತಿ ತಿಂಗಳು ಬಡ್ಡಿ ಪಡೆಯುವುದು ಹೇಗೆ?

ನೀವು ನೇರವಾಗಿ ಪೋಸ್ಟ್‌ ಆಫೀಸ್‌ಗೆ ಹೋಗಿ ಬಡ್ಡಿ ಪಡೆಯಬಹುದು. ಅಥವಾ ನಿಮ್ಮ ಸೇವಿಂಗ್ಸ್‌ ಅಕೌಂಟ್‌ಗೆ ತನ್ನಿಂತಾನೆ ಜಮೆ ಆಗುವಂತೆ ಮಾಡಿಕೊಳ್ಳಬಹುದು. ಅಥವಾ ಬಡ್ಡಿಯನ್ನೇ ಮ್ಯೂಚುವಲ್‌ ಫಂಡ್‌ ಸಿಪ್‌ನಂತೆ ಮರು ಹೂಡಿಕೆಯನ್ನೂ ಮಾಡಬಹುದು. 5 ವರ್ಷಗಳ ಹೂಡಿಕೆಯ ಬಳಿಕೆ ಮತ್ತೆ 5 ವರ್ಷಗಳಿಗೆ ಮರು ಹೂಡಿಕೆ ಅಥವಾ ರಿ ಇನ್ವೆಸ್ಟ್‌ ಮಾಡಬಹುದು.

ಈ ಯೋಜನೆಯಲ್ಲಿ ಅನಿವಾಸಿ ಭಾರತೀಯರು ಹೂಡಿಕೆ ಮಾಡುವಂತಿಲ್ಲ. ಭಾರತೀಯ ನಿವಾಸಿಗಳು ಮಾತ್ರ ಹೂಡಿಕೆ ಮಾಡಬಹುದು. ನಿಮ್ಮ ಐಡಿ ಪ್ರೂಫ್‌ ಮತ್ತು ಅಡ್ರೆಸ್‌ ಪ್ರೂಫ್‌ ಕುರಿತ ದಾಖಲಾತಿ ಮತ್ತು ಎರಡು ಪಾಸ್‌ಪೋರ್ಟ್‌ ಸೈಜಿನ ಫೋಟೊ ಇದ್ದರೆ ಅಕೌಂಟ್‌ ತೆರೆಯಬಹುದು.

ಈಗಾಗಲೇ ಹೇಳಿದಂತೆ ಹೂಡಿಕೆಯ ಸಂಪೂರ್ಣ ಸುರಕ್ಷತೆ ಬಯಸುವವರಿಗೆ ಪೋಸ್ಟ್‌ ಆಫೀಸ್‌ ಮಂತ್ಲಿ ಇನ್‌ಕಮ್‌ ಸ್ಕೀಮ್‌ ಉತ್ತಮ ಯೋಜನೆಯಾಗಿದೆ. ಹಾಗಂತ ಎಲ್ಲರಿಗೂ ಇದು ಒಳ್ಳೆಯ ಸ್ಕೀಮ್‌ ಎಂದು ಹೇಳಲು ಸಾಧ್ಯವಿಲ್ಲ. ಮ್ಯೂಚುವಲ್‌ ಫಂಡ್‌ ಅಥವಾ ಷೇರುಗಳಲ್ಲಿ ದೀರ್ಘಕಾಲೀನ ಹೂಡಿಕೆಯಿಂದ ಹೆಚ್ಚು ಆದಾಯ ಸಿಗಬಹುದು. ಆದರೆ ಈಗಾಗಲೇ ತಿಳಿಸಿದಂತೆ ಹೂಡಿಕೆಯ ಸುರಕ್ಷತೆ ಮತ್ತು ನಿಶ್ಚಿತ ಆದಾಯ ಬಯಸುವವರಿಗೆ ಇದು ಉತ್ತಮ ಆಯ್ಕೆ.

ಈ ಸುದ್ದಿಯನ್ನೂ ಓದಿ: Reliance: ಪ್ರೇಮಿಗಳ‌ ದಿನಾಚರಣೆಗೆ ರಿಲಯನ್ಸ್ ಜ್ಯುವೆಲ್ಸ್ ವಿಶೇಷ ಕೊಡುಗೆ; ವಜ್ರದ‌ ಆಭರಣಗಳ ಮೇಲೆ ಶೇ.30 ರಷ್ಟು ಡಿಸ್ಕೌಂಟ್‌

ಗ್ರಾಮೀಣ ಜನರು ತಮ್ಮ ಬೆಳೆಗಳನ್ನು ಮಾರಾಟ ಮಾಡಿದ ಬಳಿಕ ಸಿಗುವ ಹಣದಲ್ಲಿ ಉಳಿತಾಯ ಮತ್ತು ಆದಾಯ ಪಡೆಯಲು ಈ ಸ್ಕೀಮ್‌ ಅನ್ನು ಆಯ್ಕೆ ಮಾಡಬಹುದು. ಹೆಚ್ಚು ಬಡ್ಡಿ ಸಿಗುತ್ತದೆ ಎಂದು ಚೀಟಿಗಳಿಗೆ ಅಥವಾ ಖಾಸಗಿ ಚಿಟ್‌ ಫಂಡ್‌ಗೆ ದುಡ್ಡು ಹಾಕಿ ಮೋಸ ಹೋಗುವುದಕ್ಕಿಂತ ಪೋಸ್ಟ್‌ ಆಫೀಸ್‌ ಮಂತ್ಲಿ ಸ್ಕೀಮ್‌ ಉತ್ತಮ. ಹಾಗಂತ ಮ್ಯೂಚುವಲ್ ಫಂಡ್ ಮತ್ತು ಈ ಯೋಜನೆಗೆ ಹೋಲಿಕೆಯೂ ಸಲ್ಲದು. ಅದರ ಪ್ರಯೋಜನವೇ ಬೇರೆ. ಇದರ ಪ್ರಯೋಜನವೇ ಬೇರೆ.

ಎರಡನೆಯದಾಗಿ, 60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಸೀನಿಯರ್‌ ಸಿಟಿಜನ್ಸ್‌ ಸೇವಿಂಗ್ಸ್ ಸ್ಕೀಮ್‌ ಎಂಬ ಉಳಿತಾಯ ಯೋಜನೆ ಇದೆ. ಇದಕ್ಕೆ ಸೆಕ್ಷನ್‌ 80 ಸಿ ಅಡಿಯಲ್ಲಿ ಟ್ಯಾಕ್ಸ್‌ ಬೆನಿಫಿಟ್‌ ಸಿಗುತ್ತದೆ. ವಾರ್ಷಿಕ್‌ 8.2% ಬಡ್ಡಿ ಸಿಗುತ್ತದೆ. ಇಲ್ಲಿ ಕನಿಷ್ಠ 1000 ರುಪಾಯಿಗಳಿಂದ ಹೂಡಿಕೆ ಆರಂಭಿಸಬಹುದು.