ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಉತ್ಪನ್ನಗಳ ಮೇಲೆ '100 ಪರ್ಸೆಂಟ್‌' ವಂಚನೆ ಜಾಹೀರಾತು; ಕಠಿಣ ಕ್ರಮಕ್ಕಿಳಿದ ಸಿಸಿಪಿಎ, 2 ಕಂಪನಿಗಳಿಗೆ ಭಾರಿ ದಂಡ

Misleading advertisements: ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಪ್ರಲ್ಹಾದ ಜೋಶಿ ಅವರ ನಿರ್ದೇಶನದಂತೆ CCPA ಮುಖ್ಯ ಆಯುಕ್ತೆ ನಿಧಿ ಖರೆ ಮತ್ತು ಆಯುಕ್ತೆ ಅನುಪಮ್ ಮಿಶ್ರಾ ನೇತೃತ್ವದಲ್ಲಿ 100 ಪರ್ಸೆಂಟ್‌ ಎಂಬ ಜಾಹೀರಾತಿನೊಂದಿಗೆ ಗ್ರಾಹಕರನ್ನು ಮೋಸಗೊಳಿಸುತ್ತಿರುವ ಕಂಪನಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.

'100 ಪರ್ಸೆಂಟ್‌' ವಂಚನೆ ಜಾಹೀರಾತು; 2 ಕಂಪನಿಗಳಿಗೆ ಭಾರಿ ದಂಡ

ಸಾಂದರ್ಭಿಕ ಚಿತ್ರ -

Prabhakara R
Prabhakara R Jun 21, 2026 10:47 PM

ನವದೆಹಲಿ: ಉತ್ಪನ್ನಗಳ ಪ್ಯಾಕೇಜಿಂಗ್‌ ವೆಬ್‌ಸೈಟ್‌ ಮತ್ತು ಡಿಜಿಟಲ್‌ ವೇದಿಕೆಗಳಲ್ಲಿ ʼ100 ಪರ್ಸೆಂಟ್‌ʼ ಎಂದು ಗ್ರಾಹಕರ ದಾರಿ ತಪ್ಪಿಸುವ ಜಾಹೀರಾತು ಪ್ರಕಟಿಸಿ ವಂಚಿಸುವ ಕಂಪನಿಗಳ ವಿರುದ್ಧ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ₹1 ಲಕ್ಷ ದಂಡ ವಿಧಿಸುವಂಥ ಕಠಿಣ ಕ್ರಮ ಕೈಗೊಳ್ಳುತ್ತಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಪ್ರಲ್ಹಾದ ಜೋಶಿ ಅವರ ನಿರ್ದೇಶನದಂತೆ CCPA ಮುಖ್ಯ ಆಯುಕ್ತೆ ನಿಧಿ ಖರೆ ಮತ್ತು ಆಯುಕ್ತೆ ಅನುಪಮ್ ಮಿಶ್ರಾ ನೇತೃತ್ವದಲ್ಲಿ 100 ಪರ್ಸೆಂಟ್‌ ಎಂಬ ಜಾಹೀರಾತಿನೊಂದಿಗೆ ಗ್ರಾಹಕರನ್ನು ಮೋಸಗೊಳಿಸುತ್ತಿರುವ ಕಂಪನಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.

ಈಗಾಗಲೇ ಆಹಾರ ಉತ್ಪನ್ನಗಳಿಗೆ ಸಂಬಂಧಿಸಿದಂತೆ "100%" ಎಂಬ ಜಾಹೀರಾತು ಮತ್ತು ಅನ್ಯಾಯದ ವ್ಯಾಪಾರ ಪದ್ಧತಿಗಾಗಿ Storia Foods & Beverages ಮತ್ತು Mrs. Bectors Food Specialities Ltd. ಮೇಲೆ CCPA ತಲಾ ₹1 ಲಕ್ಷ ದಂಡ ವಿಧಿಸಲಾಗಿದೆ. ಅಲ್ಲದೇ, ಇಂಥ ಆಕ್ಷೇಪಾರ್ಹ ಜಾಹೀರಾತು, ವಹಿವಾಟು ತಕ್ಷಣವೇ ನಿಲ್ಲಿಸುವಂತೆ ಆದೇಶಿಸಿದ್ದಾಗಿ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಸ್ಟೋರಿಯಾ ಫುಡ್ಸ್ ಅಂಡ್ ಬೆವರೇಜಸ್ ಪ್ರೈ.ಲಿಮಿಟೆಡ್ ವಿರುದ್ಧ CCPA ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಂಡಿದೆ. ಕಾರಣ ʼಸ್ಟೋರಿಯಾ 100% ಕೋಮಲ ತೆಂಗಿನ ನೀರುʼ, ʼಸ್ಟೋರಿಯಾ 100% ದಾಳಿಂಬೆ ಜ್ಯೂಸ್ʼ, ʼಸ್ಟೋರಿಯಾ 100% ಮಿಶ್ರ ಹಣ್ಣು ಜ್ಯೂಸ್ʼ, ʼಸ್ಟೋರಿಯಾ 100% ಮಾವಿನ ಜ್ಯೂಸ್‌ʼ, ʼಸ್ಟೋರಿಯಾ 100% ಪೇರಲ ಮೆಣಸಿನಕಾಯಿ ಜ್ಯೂಸ್ʼ ಎಂದು ತನ್ನ ಉತ್ಪನ್ನಗಳ ಮೇಲೆ ಪ್ರಕಟಿಸುತ್ತಿದ್ದಲ್ಲದೆ, ಜಾಹೀರಾತು ಸಹ ಹೀಗೇ ಪ್ರಸಾರಿಸಿ ಗ್ರಾಹಕರ ದಾರಿ ತಪ್ಪಿಸುತ್ತಿತ್ತು. ಸ್ಟೋರಿಯಾದ ಅಧಿಕೃತ ವೆಬ್‌ಸೈಟ್ (shop.storiafoods.com), ಉತ್ಪನ್ನ ಪ್ಯಾಕೇಜಿಂಗ್‌ನಲ್ಲಿ ಮತ್ತು Amazon, Flipkart, BigBasket, Blinkit, JioMart ಮತ್ತು Zepto ಸೇರಿದಂತೆ ಇ-ಕಾಮರ್ಸ್ ವೇದಿಕೆಗಳಲ್ಲಿ ಸಹ ಹೀಗೆ ಜಾಹೀರಾತು ಇರುತ್ತಿತ್ತು. ಆದರೆ ವಾಸ್ತವವೇ ಬೇರೆ.

ತೆಂಗಿನ ನೀರನ್ನು ನೀರಿನೊಂದಿಗೆ ಬೆರೆಸಿ ತಯಾರಿಸಿರುತ್ತಿತ್ತು. ಆದರೆ, ಈ ಉತ್ಪನ್ನ ವರ್ಗ II ಸಂರಕ್ಷಕ INS 202 ಅನ್ನು ಸಹ ಒಳಗೊಂಡಿದ್ದು, "100% ನೈಸರ್ಗಿಕ" ಎಂಬ ಹೇಳಿಕೆ ಸಮರ್ಥನೀಯವಲ್ಲ. ʼಸ್ಟೋರಿಯಾ 100% ದಾಳಿಂಬೆ ಜ್ಯೂಸ್ʼ ಉತ್ಪನ್ನದಲ್ಲಿ ʼನೀರು+ದಾಳಿಂಬೆ ರಸದ ಸಾಂದ್ರೀಕರಣ 4% + ಸೇಬಿನ ರಸದ ಸಾಂದ್ರೀಕರಣ 10%ʼ ಇದೆ. 100% ಮಿಶ್ರ ಹಣ್ಣು ಜ್ಯೂಸ್ ಅಲ್ಲಿ ʼನೀರು+ಮಿಶ್ರ ಹಣ್ಣಿನ ರಸ ಸಾರ 10% + ಸೇಬು ಸಾರ 10% + ಮಾವಿನ ತಿರುಳು 4%ʼ ಇದೆ.

ಸ್ಟೋರಿಯಾ 100% ಮಾವು ಜ್ಯೂಸ್ ಅಲ್ಲಿ ʼನೀರು+ಮಾವಿನ ತಿರುಳು 16% + ಸೇಬಿನ ರಸ ಸಾಂದ್ರೀಕರಣ 12.5%ʼ ಇರುತ್ತಿತ್ತು. ಹೀಗೆ ಪ್ರತಿಯೊಂದು ಉತ್ಪನ್ನದಲ್ಲೂ ವಂಚನೆ ಕಂಡುಬಂದಿದೆ.

"100% ಅಟ್ಟಾ ಬ್ರೆಡ್", "100% ಸಂಪೂರ್ಣ ಗೋಧಿ ಬ್ರೆಡ್", "ನಮ್ಮ ರುಚಿಕರವಾದ 100% ಆಟಾ ಬ್ರೆಡ್ ಕುಟುಂಬಗಳಿಗೆ ತುಂಬಾ ಇಷ್ಟವಾದ ತಿಂಡಿ", "100% ಸಂಪೂರ್ಣ ಗೋಧಿ ಹಿಟ್ಟಿನೊಂದಿಗೆ ನೈಸರ್ಗಿಕವಾಗಿ ಸಮೃದ್ಧವಾದ ಧಾನ್ಯಗಳು", "100% ಪೋಷಣೆಯ ರುಚಿ", "ನಿಮ್ಮ ದಿನಗಳನ್ನು 100% ತುಂಬಿರಿ", "100% ಆರೋಗ್ಯಕರ ಸಂತೋಷದ ರುಚಿ", "100% ಒಳ್ಳೆಯತನದ ರುಚಿ" ಎಂದೆಲ್ಲಾ ಜಾಹೀರಾತು ಪ್ರಸಾರವಾಗುತ್ತಿತ್ತು. 2026ರ ಏಪ್ರಿಲ್‌ 23ರ ವೇಳೆಗೆ 50 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ದಾಖಲಿಸಿವೆ. ವಾಸ್ತವದಲ್ಲಿ ನೋಡಿದರೆ ಯಾವುದೂ "100%" ಇರುವುದಿಲ್ಲ. ವಿಚಾರಣೆ ವೇಳೆ ಬ್ರೆಡ್ ಉತ್ಪನ್ನಗಳಲ್ಲಿ 87% ಗೋಧಿ ಹಿಟ್ಟು ಇದೆ ಎಂಬುದನ್ನು ಕಂಪನಿಯೇ ಒಪ್ಪಿಕೊಂಡಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

"100% ಆಟಾ" ಮತ್ತು "ಝೀರೋ ಮೈದಾ" ಎಂಬುದೆಲ್ಲಾ ಗ್ರಾಹಕರ ದಾರಿ ತಪ್ಪಿಸುವುದಾಗಿದೆ. ಈ ಬಗ್ಗೆ CCPA ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಯಾವುದೇ ಕಂಪನಿಗಳು ವಾಣಿಜ್ಯ ಲಾಭಕ್ಕಾಗಿ ಉತ್ಪನ್ನಗಳ ಮೇಲೆ ಮತ್ತು ಜಾಹೀರಾತುಗಳಲ್ಲಿ ಸತ್ಯಾಂಶ ಮರೆಮಾಚುವುದನ್ನು ಒಪ್ಪುವುದಿಲ್ಲ. ಇದರ ವಿರುದ್ಧ ಕಠಿಣ ಕ್ರಮ ಜಾರಿಗೊಳಿಸಲಾಗುತ್ತದೆ ಎಂದು ಸಚಿವ ಪ್ರಲ್ಹಾದ ಜೋಶಿ ಎಚ್ಚರಿಸಿದ್ದಾರೆ.