Dharmasthala Case: ಧರ್ಮಸ್ಥಳ ಬಗ್ಗೆ ಅವಹೇಳನಕಾರಿ ವಿಡಿಯೋ ಮಾಡಿದವರಿಗೆ ಎಸ್‌ಐಟಿ ನೋಟಿಸ್
ಪ್ರಕರಣದ ಬಗ್ಗೆ ಬೇಕಾಬಿಟ್ಟಿ ಮಾತನಾಡಿರುವವರ ಕುರಿತಂತೆ ಕಳೆದ ಒಂದೂವರೆ ತಿಂಗಳ ಎಲ್ಲಾ ವಿಡಿಯೋಗಳನ್ನು ಎಸ್‌ಐಟಿ ಸಂಗ್ರಹಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಎಸ್‌ಐಟಿ ಸಂಪೂರ್ಣ ಪರಿಶೀಲನೆ ಮಾಡಿದ್ದು, ಅವಹೇಳನಕಾರಿ ವಿಡಿಯೋಗಳು ಹಾಗೂ ಅವುಗಳನ್ನು ಮಾಡಿದವರ ಬಗೆಗೆ ಮಾಹಿತಿ ಸಂಗ್ರಹಿಸಿದೆ.


ದಕ್ಷಿಣ ಕನ್ನಡ : ಧರ್ಮಸ್ಥಳ ಪ್ರಕರಣದ (Dharmasthala Case) ವಿಚಾರಣೆಗೆ ವಿಶೇಷ ತಂಡವನ್ನು ಎಸ್‌ಐಟಿ (SIT) ಅಧಿಕಾರಿಗಳು ರಚನೆ ಮಾಡಿದ್ದು, ಪ್ರಕರಣದ ಬಗ್ಗೆ ಬೇಕಾಬಿಟ್ಟಿ ಹೇಳಿಕೆ ನೀಡಿದವರಿಗೆ ಎಸ್‌ಐಟಿ ಠಾಣೆಯಿಂದ ನೋಟಿಸ್ (Notice) ಜಾರಿ ಮಾಡಲಾಗಿದೆ. ಧರ್ಮಸ್ಥಳ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣ, ಮಾಧ್ಯಮದಲ್ಲಿ ಬೇಕಾಬಿಟ್ಟಿ ಹೇಳಿಕೆ ನೀಡಿದವರು, ವಿಡಿಯೋ ಹರಿಬಿಟ್ಟವರಿಗೆ ಎಸ್‌ಐಟಿ ಠಾಣೆಯಿಂದ ನೋಟಿಸ್ ಜಾರಿ ಮಾಡಲಾಗಿದೆ. ತನಿಖೆ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದವರ ಬಗ್ಗೆ ಎಸ್‌ಐಟಿ ಪಟ್ಟಿ ಮಾಡಿದೆ.
ಪ್ರಕರಣದ ಬಗ್ಗೆ ಬೇಕಾಬಿಟ್ಟಿ ಮಾತನಾಡಿರುವ ಕುರಿತಂತೆ ಕಳೆದ ಒಂದೂವರೆ ತಿಂಗಳ ಎಲ್ಲಾ ವಿಡಿಯೋಗಳನ್ನು ಎಸ್ ಐಟಿ ಸಂಗ್ರಹಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಎಸ್‌ಐಟಿ ಸಂಪೂರ್ಣ ಪರಿಶೀಲನೆ ಮಾಡಿದ್ದು, ಅವಹೇಳನಕಾರಿ ವಿಡಿಯೋಗಳು ಹಾಗೂ ಅವುಗಳನ್ನು ಮಾಡಿದವರ ಬಗೆಗೆ ಮಾಹಿತಿ ಸಂಗ್ರಹಿಸಿದೆ.
ಇಂದು ಮಧ್ಯಾಹ್ನ ಗೃಹ ಸಚಿವರ ಉತ್ತರ
ಧರ್ಮಸ್ಥಳದ ಪ್ರಕರಣದ ಎಸ್ಐಟಿ ತನಿಖೆ ಪ್ರಗತಿ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದು ವಿಧಾನ ಸಭೆಯಲ್ಲಿ ಉತ್ತರ ನೀಡಲಿದ್ದಾರೆ. ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆಸಿರುವವರ ಹೆಸರು ಬಹಿರಂಗಪಡಿಸಬೇಕು. ಮುಸುಕುಧಾರಿಯನ್ನು ಬಂಧಿಸಿ ಎಸ್ಐಟಿ ತನಿಖಾ ವರದಿಯನ್ನು ಸದನದಲ್ಲಿ ಮಂಡಿಸಬೇಕು ಎಂದು ಪ್ರತಿಪಕ್ಷ ಬಿಜೆಪಿ ಪಟ್ಟು ಹಿಡಿವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಇಂದಿನ ಕಲಾಪ ತೀವ್ರ ಕುತೂಹಲ ಮೂಡಿಸಿದೆ.
ಅನಾಮಧೇಯ ವ್ಯಕ್ತಿ ನೀಡಿದ ದೂರಿನ ಮೇಲೆ ಎಸ್ಐಟಿ ರಚನೆ ಮಾಡಿರುವುದು, ಧರ್ಮಸ್ಥಳ ಗ್ರಾಮದಲ್ಲಿ ಹೂತಿಟ್ಟಿರುವ ಶವಗಳಿಗಾಗಿ 15 ದಿನಕ್ಕೂ ಹೆಚ್ಚು ದಿನಗಳಿಂದ ಗುಂಡಿ ತೋಡುತ್ತಿದ್ದರೂ ಏನೂ ದೊರೆಯದ ವಿಚಾರವಾಗಿ ಬಿಜೆಪಿ ನಾಯಕರು ಸದನದಲ್ಲಿ ತೀವ್ರ ಗದ್ದಲ ಸೃಷ್ಟಿಸುವ ನಿರೀಕ್ಷೆಯಿದೆ.
ಧರ್ಮಸ್ಥಳ ಕೇಸಿನ ಬಗ್ಗೆ ಸೋಮವಾರ ವಿಧಾನಸಭೆಯಲ್ಲಿ ಪೂರ್ಣ ಉತ್ತರ ನೀಡುವೆ. ಯಾರೂ ರಾಜಕೀಯ ಮಾಡಬಾರದು. ಇದು ಕಾನೂನಾತ್ಮಕ ಕೇಸಾ ಗಿದ್ದು, ಪೊಲೀಸರು ಎಫ್ ಐಆರ್ ಹಾಕಿ ತನಿಖೆ ಮಾಡ್ತಾರೆ. ತಪ್ಪು ಇದ್ದರೆ ಮಾತ್ರ ಕೇಸ್ ಮುಂದುವರಿಸ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಇದನ್ನೂ ಓದಿ: Dharmasthala Case: ಮಧ್ಯಂತರ ವರದಿ ಬಿಡುಗಡೆ ಮಾಡಲು ಸಂಸದ ಯದುವೀರ್ ಆಗ್ರಹ