ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸ್ವಯಂ ನಿವೃತ್ತಿ ಪಡೆದು ಸ್ವಾಮೀಜಿಯಾದ ಕೆಎಎಸ್‌ ಅಧಿಕಾರಿಗೂ ಸಿಕ್ತು ಬಡ್ತಿ!; ರಾಜ್ಯ ಸರ್ಕಾರದ ಸ್ಪಷ್ಟನೆ ಏನು?

KAS Officers Promotion: ಕೆಎಎಸ್‌ ಅಧಿಕಾರಿಗಳ ಬಡ್ತಿಯಲ್ಲಿ ಎಡವಟ್ಟು ಬಗ್ಗೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ಟೀಕಿಸಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಸಾವಿರ ಎಡವಟ್ಟುಗಳ ಕಾಂಗ್ರೆಸ್ ಸರ್ಕಾರದಲ್ಲಿ ನಿವೃತ್ತ ಅಧಿಕಾರಿಗೂ ಸಿಗ್ತು ಸರ್ವಿಸ್ ಬಡ್ತಿ! ಎಂದು ಟೀಕಿಸಿದ್ದಾರೆ.

ಸ್ವಯಂ ನಿವೃತ್ತಿ ಪಡೆದು ಸ್ವಾಮೀಜಿಯಾದ ಕೆಎಎಸ್‌ ಅಧಿಕಾರಿಗೂ ಸಿಕ್ತು ಬಡ್ತಿ!

-

Prabhakara R
Prabhakara R Feb 14, 2026 8:10 PM

ಬೆಂಗಳೂರು, ಫೆ. 14: ಕೆಎಎಸ್ ಅಧಿಕಾರಿಗಳ ಬಡ್ತಿಯಲ್ಲಿ (KAS Officers Promotion) ರಾಜ್ಯ ಸರ್ಕಾರ ಎಡವಟ್ಟು ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೆಎಎಸ್‌ ಅಧಿಕಾರಿ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದು ಸ್ವಾಮೀಜಿಯಾಗಿರುವ ಎಚ್.ಎಲ್. ನಾಗರಾಜ್ ಅವರ ಹೆಸರೂ ಬಡ್ತಿ ಪಟ್ಟಿಯಲ್ಲಿ ಸೇರಿರುವುದು ಟೀಕೆಗಳಿಗೆ ಕಾರಣವಾಗಿದೆ.

ಹೌದು, ಎಚ್.ಎಲ್. ನಾಗರಾಜ್ ಅವರು ಈ ಹಿಂದೆ ಮಂಡ್ಯದ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಲೌಕಿಕ ಬದುಕಿಗೆ ವಿದಾಯ ಹೇಳಿ, ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಶ್ರೀಗಳ ಸಮ್ಮುಖದಲ್ಲಿ ಸನ್ಯಾಸ ದೀಕ್ಷೆ ಪಡೆದಿದ್ದರು. ಸದ್ಯ ಅವರು ‘ವಿಶ್ವ ಒಕ್ಕಲಿಗ ಮಹಾಸಂಸ್ಥಾನ’ದ ಪೀಠಾಧಿಪತಿಯಾಗಿ 'ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ' ಎಂಬ ಹೆಸರಿನಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಇವರಿಗೂ ಬಡ್ತಿ ಭಾಗ್ಯ ಲಭಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ರಾಜ್ಯ ಸರ್ಕಾರವನ್ನು ತರಾಟೆ ತೆಗೆದುಕೊಂಡ ಆರ್‌.ಅಶೋಕ್‌

ಅಧಿಕಾರಿಗಳ ಬಡ್ತಿಯಲ್ಲಿ ಎಡವಟ್ಟು ಬಗ್ಗೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ಟೀಕಿಸಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಸಾವಿರ ಎಡವಟ್ಟುಗಳ ಕಾಂಗ್ರೆಸ್ ಸರ್ಕಾರದಲ್ಲಿ ನಿವೃತ್ತ ಅಧಿಕಾರಿಗೂ ಸಿಗ್ತು ಸರ್ವಿಸ್ ಬಡ್ತಿ! ಎಂದು ಟೀಕಿಸಿದ್ದಾರೆ.

ರಾಜ್ಯ ಸರ್ಕಾರ ಇತ್ತೀಚೆಗೆ 20 ಕೆಎಎಸ್ (KAS) ಅಧಿಕಾರಿಗಳಿಗೆ ಬಡ್ತಿ ನೀಡಿ ಅಧಿಕೃತ ಆದೇಶ ಹೊರಡಿಸಿದೆ. ಈ ಪಟ್ಟಿಯಲ್ಲಿ ಹಿರಿಯ ಶ್ರೇಣಿಯ ಅಧಿಕಾರಿಗಳಿಗೆ ಪದೋನ್ನತಿ ನೀಡಲಾಗಿದೆ. ಆದರೆ, ಅಚ್ಚರಿಯ ವಿಷಯವೆಂದರೆ ಈ ಪಟ್ಟಿಯಲ್ಲಿ ಈಗಾಗಲೇ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿರುವ ಎಚ್.ಎಲ್. ನಾಗರಾಜ (ಪ್ರಸ್ತುತ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ) ಅವರ ಹೆಸರೂ ಸೇರಿದೆ.



ಸಿಎಂ ಸಿದ್ದರಾಮಯ್ಯನವರೇ, ನಿಮ್ಮ ಕಾಂಗ್ರೆಸ್ ಸರ್ಕಾರದ ಅದಕ್ಷತೆ, ಅಸಮರ್ಥತೆ ಈಗ ಯಾವ ಮಟ್ಟಕ್ಕೆ ತಲುಪಿದೆ ಗೊತ್ತಾ? ಸೇವೆಯಿಂದ ಸ್ವಯಂನಿವೃತ್ತರಾಗಿ ಕಾವಿ ಧರಿಸಿ ಪೀಠಾಧಿಪತಿಯಾಗಿರುವವರಿಗೂ “ಬಡ್ತಿ ಭಾಗ್ಯ” ನೀಡುವ ಮಟ್ಟಕ್ಕೆ!, ಒಬ್ಬ ಅಧಿಕಾರಿ ಸೇವೆಯಿಂದ ನಿವೃತ್ತರಾಗಿ, ಸಂನ್ಯಾಸ ಸ್ವೀಕರಿಸಿ ಆಧ್ಯಾತ್ಮಿಕ ಜೀವನ ನಡೆಸುತ್ತಿದ್ದರೂ, ನಿಮ್ಮ ಸರ್ಕಾರದ ದಾಖಲೆಗಳಲ್ಲಿ ಅವರು ಇನ್ನೂ “ಸೇವೆಯಲ್ಲಿರುವ ಅಧಿಕಾರಿ”!, ನಿಮ್ಮ ಘನಂದಾರಿ ಆಡಳಿತದಲ್ಲಿ ಮುಖ್ಯಮಂತ್ರಿಗಳು, ಸಚಿವರು, ಅಧಿಕಾರಿಗಳು ಸಹಿ ಮಾಡುವ ಮುನ್ನ ಫೈಲುಗಳನ್ನು ಓದುತ್ತಾರೋ ಕಣ್ಣು ಮುಚ್ಚಿಕೊಂಡು ಸಹಿ ಹಾಕುತ್ತಾರೋ? ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ಕಾಂಗ್ರೆಸ್‌ ಸರ್ಕಾರಕ್ಕೆ ಯಾವ ಅಧಿಕಾರಿಗಳು ಸೇವೆಯಲ್ಲಿ ಇದ್ದಾರೆ, ಯಾರು ನಿವೃತ್ತರಾಗಿದ್ದಾರೆ ಅನ್ನುವ ಕನಿಷ್ಠ ಮಾಹಿತಿಯೂ ಗೊತ್ತಿಲ್ಲದಿದ್ದರೆ, ರಾಜ್ಯದ ಜನತೆ ಆಡಳಿತ ಮತ್ತು ಅಭಿವೃದ್ಧಿ ವಿಚಾರದಲ್ಲಿ ನಿಮ್ಮ ಸರ್ಕಾರದ ಮೇಲೆ ಹೇಗೆ ವಿಶ್ವಾಸ ಇಡಬೇಕು ಸ್ವಾಮಿ? ಇವತ್ತು ನಿವೃತ್ತರಾಗಿರುವ ಅಧಿಕಾರಿಯೊಬ್ಬರಿಗೆ ಬಡ್ತಿ ನೀಡಿದ್ದೀರಿ, ನಾಳೆ ನಿಧನ ಹೊಂದಿರುವ ಅಧಿಕಾರಿಗೆ ವರ್ಗಾವಣೆ ಆದೇಶ ಹೊರಡಿಸಿದರೂ ಆಶ್ಚರ್ಯವಿಲ್ಲ!, ಇದು ಕೇವಲ ಒಂದು ಆಕಸ್ಮಿಕ ಯಡವಟ್ಟು ಅಲ್ಲ. ಇದು ಆಡಳಿತ ವ್ಯವಸ್ಥೆಯ ಸಂಪೂರ್ಣ ಕುಸಿತದ ಸೂಚನೆ ಎಂದು ಕಿಡಿಕಾರಿದ್ದಾರೆ.

ಪ್ರತಿ ವರ್ಷದ ನವೆಂಬರ್ 3, 4, 5ರಂದು ಹಂಪಿ ಉತ್ಸವ ಆಯೋಜನೆ: ಸಿಎಂ ಸಿದ್ದರಾಮಯ್ಯ ಘೋಷಣೆ

ದಿನಕ್ಕೊಂದು ಎಡವಟ್ಟು, ಕ್ಷಣಕ್ಕೊಂದು ಮುಖಭಂಗ. ಇನ್ನೆಷ್ಟು ದಿನ ಸ್ವಾಮಿ ಈ ಎಡವಟ್ಟು ಸರ್ಕಾರಕ್ಕೆ ಎಡವಟ್ಟು ಮುಖ್ಯಮಂತ್ರಿ ಆಗಿ ತಮ್ಮ ಗೌರವ ಕಳೆದುಕೊಳ್ಳುತ್ತೀರಿ. ಸಾಕು ಮಾಡಿ ಈ ಭಂಡ ಬಾಳು. ರಾಜೀನಾಮೆ ಕೊಟ್ಟು ಕರ್ನಾಟಕದ ಗೌರವ ಉಳಿಸಿ, ತಮ್ಮ ಇರೋಬರೋ ಅಲ್ಪ ಸ್ವಲ್ಪ ಗೌರವವನ್ನಾದರೂ ಉಳಿಸಿಕೊಳ್ಳಿ ಎಂದು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರದ ಸ್ಪಷ್ಟನೆ ಏನು?

ನಿವೃತ್ತ ಅಧಿಕಾರಿಗೆ ಬಡ್ತಿ ವಿಚಾರವಾಗಿ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ. ಡಾ. ಎಚ್‌.ಎಲ್‌ ನಾಗರಾಜ್‌, ಕೆ.ಎ.ಎಸ್ (ಹಿರಿಯ ಶ್ರೇಣಿ) ಅಧಿಕಾರಿಯವರಿಗೆ ಸರ್ಕಾರದ ದಿನಾಂಕ 13.2.2026 ರ ಅಧಿಸೂಚನೆ ಸಂಖ್ಯೆ ಸಿಆಸುಇ 103ಆಸೇವ 2025 ರನ್ವಯ ಕೆ.ಎ.ಎಸ್ (ಆಯ್ಕೆ ಶ್ರೇಣಿ)ಗೆ ಮುಂಬಡ್ತಿ ನೀಡಿ ಆದೇಶ ಹೊರಡಿಸಿರುವ ವಿಷಯ ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗಿದೆ.

ಶ್ರೀ ಡಾ. ಎಚ್‌.ಎಲ್‌ ನಾಗರಾಜ್‌, ಕೆ.ಎ.ಎಸ್ (ಹಿರಿಯ ಶ್ರೇಣಿ) ಅಧಿಕಾರಿಯವರು ಸ್ವಯಂ ನಿವೃತ್ತಿಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದು, ಆ ಅರ್ಜಿಯು ಪರಿಶೀಲನೆಯ ಹಂತದಲ್ಲಿರುತ್ತದೆ.

ಪ್ರಸ್ತುತ, ಅವರ ಸ್ವಯಂ ನಿವೃತ್ತಿಯ ಕೋರಿಕೆಯು ಇದುವರೆಗೆ ಅಂಗೀಕೃತವಾಗದೇ ಇರುವುದರಿಂದ ಅವರು ಸರ್ಕಾರೀ ಸೇವೆಯಿಂದ ಬಿಡುಗಡೆ ಹೊಂದಿರುವುದಿಲ್ಲ. ಆದುದರಿಂದ, ಚಾಲ್ತಿಯಲ್ಲಿರುವ ನಿಯಮಗಳ ಅನುಸಾರ ಡಾ. ಎಚ್‌.ಎಲ್‌ ನಾಗರಾಜ್‌, ಕೆ.ಎ.ಎಸ್ (ಹಿರಿಯ ಶ್ರೇಣಿ) ಇವರನ್ನು ಮುಂಬಡ್ತಿಗೆ ಪರಿಗಣಿಸಲಾಗಿದೆ . ಆದರೆ, ವಾಸ್ತವವಾಗಿ ಶ್ರೀ ಡಾ ಎಚ್‌.ಎಲ್‌ ನಾಗರಾಜ್‌ ಇವರು ವಹಿಸಲಾಗುವ ಹುದ್ದೆಯ ಪ್ರಭಾರವನ್ನು ವಹಿಸಿಕೊಂಡಾಗ ಮಾತ್ರಾ ಅವರಿಗೆ ಮುಂಬಡ್ತಿ ದೊರೆಯುತ್ತದೆ ಎಂದು ರಾಜ್ಯ ಸರ್ಕಾರ ಸ್ಪಷ್ಟೀಕರಣ ನೀಡಿದೆ.