ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಇಂಗ್ಲೆಂಡ್‌ ವಿರುದ್ಧ ಗೆದ್ದು ಏಕದಿನ ಸರಣಿಯಲ್ಲಿ ಶುಭಾರಂಭ ಕಂಡ ಭಾರತ!

IND vs ENG 1st ODI Highlights: ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನದ ತೋರಿದ ಭಾರತ ತಂಡ ಮೊದಲನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 4 ವಿಕೆಟ್‌ಗಳಿಂದ ಗೆಲುವು ಪಡೆದಿದೆ. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್‌ ಇಂಡಿಯಾ 1-0 ಮುನ್ನಡೆ ಪಡೆದಿದೆ.

IND vs ENG: ಇಂಗ್ಲೆಂಡ್‌ಗೆ ನಿರಾಶೆ, ಭಾರತದ ಸಂಘಟಿತ ಪ್ರದರ್ಶನಕ್ಕೆ ಒಲಿದ ಜಯ!

India won 1st ODI by 4 Wickets against England

Profile Ramesh Kote Feb 6, 2025 9:01 PM

ನಾಗ್ಪುರ: ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಭಾರತ ತಂಡ, ಮೊದಲನೇ ಏಕದಿನ ಪಂದ್ಯದಲ್ಲಿ (IND vs ENG) ಇಂಗ್ಲೆಂಡ್‌ ವಿರುದ್ದ 4 ವಿಕೆಟ್‌ ಗೆಲುವು ಪಡೆದಿದೆ. ಆ ಮೂಲಕ ರೋಹಿತ್‌ ಶರ್ಮಾ ನಾಯಕತ್ವದ ಟೀಮ್‌ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದಿದೆ.

ಇಲ್ಲಿನ ವಿದರ್ಭ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಇಂಗ್ಲೆಂಡ್‌ ತಂಡ, 47.4 ಓವರ್‌ಗಳಿಗೆ 248 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಆ ಮೂಲಕ ಎದುರಾಳಿ ಭಾರತ ತಂಡಕ್ಕೆ 249 ರನ್‌ಗಳ ಗುರಿಯನ್ನು ನೀಡಿತ್ತು. ಬಳಿಕ ಗುರಿ ಹಿಂಬಾಲಿಸಿದ ಭಾರತ ತಂಡ, ಮೂವರು ಬ್ಯಾಟ್ಸ್‌ಮನ್‌ಗಳ ಅರ್ಧಶತಕಗಳ ಬಲದಿಂದ 38.4 ಓವರ್‌ಗಳಿಗೆ 251 ರನ್‌ಗಳನ್ನು ಗಳಿಸಿ ಗೆಲುವಿನ ಗಡಿ ದಾಟಿತು.

IND vs ENG: ʻದಯವಿಟ್ಟು ನಿವೃತ್ತಿ ಪಡೆಯಿರಿʼ-ರೋಹಿತ್‌ ಶರ್ಮಾ ವಿರುದ್ದ ಫ್ಯಾನ್ಸ್‌ ಕಿಡಿ!

ಇಂಗ್ಲೆಂಡ್‌ಗೆ ಭರ್ಜರಿ ಆರಂಭ

ಮೊದಲು ಬ್ಯಾಟ್‌ ಮಾಡಿದ್ದ ಇಂಗ್ಲೆಂಡ್‌ ತಂಡಕ್ಕೆ ಓಪನರ್ಸ್‌ ಬೆನ್‌ ಡಕೆಟ್‌ (32) ಹಾಗೂ ಫಿಲ್‌ ಸಾಲ್ಟ್‌ (43 ರನ್‌) 75 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು. ಆದರೆ ಫಿಲ್‌ ಸಾಲ್ಟ್‌ ರನ್‌ ಔಟ್‌ ಆಗುವ ಮೂಲಕ ಭಾರತ ಕಮ್‌ಬ್ಯಾಕ್‌ ಮಾಡಿತು. ಈ ವೇಳೆ ಹರ್ಷಿತ್‌ ರಾಣಾ, ಬೆನ್‌ ಡಕೆಟ್‌ ಮತ್ತು ಹ್ಯಾರಿ ಬ್ರೂಕ್‌ ಅವರನ್ನು ಔಟ್‌ ಮಾಡಿ ಭಾರತದ ಕಮ್‌ಬ್ಯಾಕ್‌ಗೆ ನೆರವು ನೀಡಿದ್ದರು. ಇಂಗ್ಲೆಂಡ್‌ ತಂಡ ಕೇವಲ ಎರಡು ರನ್‌ ಅಂತರದಲ್ಲಿ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು.



ಬಟ್ಲರ್‌, ಬೆಥೆಲ್‌ ಅರ್ಧಶತಕ

ಕಳೆದ ಟಿ20ಐ ಸರಣಿಯಲ್ಲಿ ಅನುಭವಿಸಿದ್ದ ಬ್ಯಾಟಿಂಗ್‌ ವೈಫಲ್ಯವನ್ನು ಮೊದಲನೇ ಏಕದಿನ ಪಂದ್ಯದಲ್ಲಿ ತಿದ್ದಿಕೊಳ್ಳುವಲ್ಲಿ ಇಂಗ್ಲೆಂಡ್‌ ವಿಫಲವಾಯಿತು. ನಾಯಕ ಜೋಸ್‌ ಬಟ್ಲರ್‌ (52 ರನ್‌) ಹಾಗೂ ಜಾಕೋಬ್‌ ಬೆಥೆಲ್‌ (51 ರನ್‌) ಅವರು ಮಧ್ಯಮ ಕ್ರಮಾಂಕದಲ್ಲಿ ಅರ್ಧಶತಕಗಳನ್ನು ಸಿಡಿಸಿದ್ದು ಬಿಟ್ಟರೆ, ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದರು.

ಭಾರತದ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಡೆಬ್ಯೂಟಂಟ್‌ ಹರ್ಷಿತ್‌ ರಾಣಾ ಹಾಗೂ ರವೀಂದ್ರ ಜಡೇಜಾ ತಲಾ 3 ವಿಕೆಟ್‌ಗಳನ್ನು ಕಬಳಿಸಿದರು.

ಭಾರತಕ್ಕೆ 4 ವಿಕೆಟ್‌ ಜಯ

ಇಂಗ್ಲೆಂಡ್‌ ನೀಡಿದ್ದ ಸ್ಪರ್ಧಾತ್ಮಕ ಗುರಿಯನ್ನು ಹಿಂಬಾಲಿಸಿದ ಭಾರತ ತಂಡಕ್ಕೆ ಉತ್ತಮ ಆರಂಭ ತಂದುಕೊಡುವಲ್ಲಿ ಓಪನರ್ಸ್‌ ರೋಹಿತ್‌ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್‌ ವೈಫಲ್ಯ ಅನುಭವಿಸಿದರು. ಆದರೆ, ಶ್ರೇಯಸ್‌ ಅಯ್ಯರ್‌ (59 ರನ್‌), ಶುಭಮನ್‌ ಗಿಲ್‌ (87 ರನ್‌) ಹಾಗೂ ಅಕ್ಷರ್‌ ಪಟೇಲ್‌ (52 ರನ್‌) ಅರ್ಧಶತಕಗಳ ಬಲದಿಂದ ಭಾರತ ತಂಡ ಗೆಲುವಿನ ದಡ ಸೇರಿತು.



ಶ್ರೇಯಸ್‌ ಅಯ್ಯರ್‌ ಭರ್ಜರಿ ಕಮ್‌ಬ್ಯಾಕ್‌

ದೀರ್ಘಾವಧಿ ಬಳಿಕ ಭಾರತ ಏಕದಿನ ತಂಡಕ್ಕೆ ಮರಳಿದ ಶ್ರೇಯಸ್‌ ಅಯ್ಯರ್‌ ಸ್ಪೋಟಕ ಬ್ಯಾಟ್‌ ಮಾಡಿದರು. ಆಡಿದ 36 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 9 ಬೌಂಡರಿಗಳೊಂದಿಗೆ 59 ರನ್‌ಗಳನ್ನು ಸಿಡಿಸಿದರು. ಅದರಲ್ಲಿಯೂ ವಿಶೇಷವಾಗಿ ಅವರು 163ರ ಸ್ಟ್ರೈಕ್‌ ರೇಟ್‌ನಲ್ಲಿ ಸ್ಕೋರ್‌ ಮಾಡಿದ್ದು ಎಲ್ಲರ ಗಮನ ಸೆಳೆಯಿತು. ಸುಲಭವಾಗಿ ಶತಕ ಸಿಡಿಸುವ ಹಾದಿಯಲ್ಲಿದ್ದ ಶ್ರೇಯಸ್‌ ಅಯ್ಯರ್‌, ಜಾಕೋಬ್‌ ಬೆಥೆಲ್‌ ಎಸೆತದಲ್ಲಿ ಸ್ವೀಪ್‌ ಮಾಡಲು ಹೋಗಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

IND vs ENG: ಇಂಗ್ಲೆಂಡ್‌ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆದ ರವೀಂದ್ರ ಜಡೇಜಾ!

ಗಿಲ್‌-ಅಕ್ಷರ್‌ ಜುಗಲ್‌ಬಂದಿ

ಶ್ರೇಯಸ್‌ ಅಯ್ಯರ್‌ ವಿಕೆಟ್‌ ಒಪ್ಪಿಸಿದ ಬಳಿಕ ಮೇಲಿನ ಕ್ರಮಾಂಕದಲ್ಲಿ ಬಡ್ತಿ ಪಡೆದು ಕ್ರೀಸ್‌ಗೆ ಬಂದಿದ್ದ ಅಕ್ಷರ್‌ ಪಟೇಲ್‌ ಹಾಗೂ ಶುಭಮನ್‌ ಗಿಲ್‌ ಭರ್ಜರಿ ಜೊತೆಯಾಟವನ್ನು ಆಡಿದರು. ಈ ಜೋಡಿ ಮುರಿಯದ ನಾಲ್ಕನೇ ವಿಕೆಟ್‌ಗೆ 108 ರನ್‌ಗಳ ಜತೆಯಾಟವನ್ನು ಆಡಿದರು. ಒಮ್ಮೆ ಸಿಕ್ಕಿದ್ದ ಜೇವದಾನವನ್ನು ಸದುಪಯೋಗಪಡಿಸಿಕೊಂಡಿದ್ದ ಶುಭಮ್‌ ಗಿಲ್‌ 96 ಎಸೆತಗಳಲ್ಲಿ 14 ಬೌಂಡರಿಗಳೊಂದಿಗೆ 87 ರನ್‌ಗಳಿಸಿ ಭಾರತದ ಗೆಲುವಿಗೆ ಕೈ ಜೋಡಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇವರ ಜೊತೆ ಮತ್ತೊಂದು ತುದಿಯಲ್ಲಿ ಸಾಥ್‌ ನೀಡಿದ್‌ ಅಕ್ಷರ್‌ ಪಟೇಲ್‌, 47 ಎಸತೆಗಳಲ್ಲಿ ಒಂದು ಸಿಕ್ಸರ್‌ ಹಾಗೂ ಆರು ಬೌಂಡರಿಗಳೊಂದಿಗೆ 52 ರನ್‌ಗಳನ್ನು ಕಲೆ ಹಾಕಿದರು.

ಸ್ಕೋರ್‌ ವಿವರ

ಇಂಗ್ಲೆಂಡ್‌: 47.4 ಓವರ್‌ಗಳಿಗೆ 248-10 ( ಜೋಸ್‌ ಬಟ್ಲರ್‌ 52ರನ್‌, ಜಾಕೋಬ್‌ ಬೆಥೆಲ್‌ 51 ರನ್‌, ಫಿಲ್‌ ಸಾಲ್ಟ್‌ 43 ರನ್;‌ ಹರ್ಷಿತ್‌ ರಾಣಾ 53ಕ್ಕೆ 3, ರವೀಂದ್ರ ಜಡೇಜಾ 26ಕ್ಕೆ 3

ಭಾರತ: 38.4 ಓವರ್‌ಗಳಿಗೆ 251-6 (ಶುಭಮನ್‌ ಗಿಲ್‌ 87 ರನ್‌, ಶ್ರೇಯಸ್‌ ಅಯ್ಯರ್‌ 59 ರನ್‌, ಅಕ್ಷರ್‌ ಪಟೇಲ್‌ 52; ಸಾಕಿಬ್‌ ಮಹ್ಮೂದ್‌ 47ಕ್ಕೆ 2, ಆದಿಲ್‌ ರಶೀದ್‌ 49 ಕ್ಕೆ 2)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಶುಭಮನ್‌ ಗಿಲ್‌