IND vs ENG: ಮ್ಯಾಂಚೆಸ್ಟರ್‌ನಲ್ಲಿ ಅರ್ಧಶತಕ ಸಿಡಿಸಿ ಅಪರೂಪದ ದಾಖಲೆ ಬರೆದ ಯಶಸ್ವಿ ಜೈಸ್ವಾಲ್!
ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಮೊದಲನೇ ದಿನ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅರ್ಧಶತಕವನ್ನು ಸಿಡಿಸಿದರು. ಆ ಮೂಲಕ ಮ್ಯಾಂಚೆಸ್ಟರ್‌ನಲ್ಲಿ ಅರ್ಧಶತಕ ಸಿಡಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದಕ್ಕೂ ಮುನ್ನ ಸುನೀಲ್ ಗವಾಸ್ಕರ್ ಈ ಅಂಗಣದಲ್ಲಿ ಅರ್ಧಶತಕವನ್ನು ಬಾರಿಸಿದ್ದರು.

ಅರ್ಧಶತಕ ಬಾರಿಸಿ ಮ್ಯಾಂಚೆಸ್ಟರ್‌ನಲ್ಲಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್.

ಮ್ಯಾಂಚೆಸ್ಟರ್: ಇಲ್ಲಿನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ(IND vs ENG) ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದ ಆರಂಭಿಕ ದಿನ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ (Yashasvi jaiswal) ಅರ್ಧಶತಕವನ್ನು ಬಾರಿಸಿದ್ದಾರೆ. ಆ ಮೂಲಕ ಮ್ಯಾಂಚೆಸ್ಟರ್‌ನಲ್ಲಿ 50 ವರ್ಷಗಳ ಬಳಿಕ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಭಾರತ ತಂಡ ಈಗಾಗಲೇ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಈ ಹಿನ್ನೆಲೆಯಲ್ಲಿ ಟೆಸ್ಟ್ ಸರಣಿಯನ್ನು ಜೀವಂತವಾಗಿರಿಸಿಕೊಳ್ಳಬೇಕೆಂದರೆ ಭಾರತ ಈ ಪಂದ್ಯವನ್ನು ಕಡ್ಡಾಯವಾಗಿ ಗೆಲ್ಲಬೇಕಾಗುತ್ತದೆ, ಇಲ್ಲವಾದಲ್ಲಿ ಟೆಸ್ಟ್ ಸರಣಿಯನ್ನು ಆತಿಥೇಯರಿಗೆ (England) ಬಿಟ್ಟು ಕೊಡಬೇಕಾಗುತ್ತದೆ.
ಜುಲೈ 23 ರಂದು ಬುಧವಾರ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಭಾರತ ತಂಡದ ಪರ ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು ಕೆಎಲ್ ರಾಹುಲ್ ಜೊತೆ ಸೇರಿ ಮುರಿಯದ ಮೊದಲನೇ ವಿಕೆಟ್‌ಗೆ 94 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಭಾರತ ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟರು. 107 ಎಸೆತಗಳನ್ನು ಆಡಿದ ಯಶಸ್ವಿ ಜೈಸ್ವಾಲ್, ಒಂದು ಸಿಕ್ಸರ್ ಹಾಗೂ 10 ಬೌಂಡರಿಗಳೊಂದಿಗೆ 58 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ದೊಡ್ಡ ಇನಿಂಗ್ಸ್ ಆಡುವ ಮುನ್ಸೂಚನೆಯನ್ನು ನೀಡಿದ್ದರು. ಆದರೆ, 41ನೇ ಓವರ್‌ನಲ್ಲಿ ಲಿಯಾಮ್ ಡಾಸನ್ ಎಸೆತದಲ್ಲಿ ಸ್ಲಿಪ್‌ನಲ್ಲಿ ಕ್ಯಾಚ್ ಕೊಟ್ಟು ವಿಕೆಟ್ ಒಪ್ಪಿಸಿದರು.
IND vs ENG: IND vs ENG: ಕನ್ನಡಿಗ ಕರುಣ್ ನಾಯರ್‌ರ ಟೆಸ್ಟ್ ವೃತ್ತಿ ಜೀವನ ಅಂತ್ಯ? ಫ್ಯಾನ್ಸ್ ಪ್ರತಿಕ್ರಿಯೆ!
ಈ ಅರ್ಧಶತಕದ ಮೂಲಕ ಯಶಸ್ವಿ ಜೈಸ್ವಾಲ್ ವಿಶೇಷ ದಾಖಲೆಯನ್ನು ಬರೆದಿದ್ದಾರೆ. 50 ವರ್ಷಗಳ ಬಳಿಕ ಮ್ಯಾಂಚೆಸ್ಟರ್‌ನಲ್ಲಿ 50ಕ್ಕೂ ಅಧಿಕ ರನ್ ಗಳಿಸಿದ ಭಾರತದ ಮೊದಲ ಆರಂಭಿಕ ಬ್ಯಾಟ್ಸ್‌ಮನ್ ಎಂಬ ಸಾಧನೆಗೆ ಜೈಸ್ವಾಲ್ ಭಾಜನರಾಗಿದ್ದಾರೆ. 1974ರಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಬಾರಿ ಮ್ಯಾಂಚೆಸ್ಟರ್‌ನಲ್ಲಿ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಅರ್ಧಶತಕವನ್ನು ಬಾರಿಸಿದ್ದರು.
Yashasvi Jaiswal continues his impressive run with the bat ✨
— BCCI (@BCCI) July 23, 2025
He gets to his 12th Test half-century 👏👏
💯 up for #TeamIndia
Updates ▶️ https://t.co/L1EVgGu4SI#ENGvIND | @ybj_19 pic.twitter.com/zUi3A5KD5c
ಮೊಹಮ್ಮದ್ ಅಝರುದ್ದೀನ್ ದಾಖಲೆ ಸರಿಗಟ್ಟಿದ ಜೈಸ್ವಾಲ್
ಇಲ್ಲಿ ಅರ್ಧಶತಕ ಸಿಡಿಸಿದ ಬಳಿಕ ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧ 1000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 1000 ರನ್‌ಗಳನ್ನು ಕಲೆ ಹಾಕಿದ ಎರಡನೇ ಬ್ಯಾಟ್ಸ್‌ಮನ್ ಎಂಬ ಜಂಟಿ ದಾಖಲೆಯನ್ನು ಮಾಜಿ ನಾಯಕ ಮೊಹಮ್ಮದ್ ಅಝರದ್ದೀನ್ ಅವರೊಂದಿಗೆ ಹಂಚಿಕೊಂಡಿದ್ದಾರೆ. ಈ ಇಬ್ಬರೂ ಬ್ಯಾಟ್ಸ್‌ಮನ್ 16 ಇನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ತಲುಪಿದ್ದಾರೆ. 15 ಇನಿಂಗ್ಸ್‌ಗಳಲ್ಲಿ ಸಾವಿರ ರನ್ ಗಳಿಸಿದ ರಾಹುಲ್ ದ್ರಾವಿಡ್ ಅಗ್ರ ಸ್ಥಾನದಲ್ಲಿದ್ದಾರೆ.
IND vs ENG: ಸತತ 14 ಬಾರಿ ಟಾಸ್ ಸೋತು ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಭಾರತ!
ಭಾರತ ತಂಡಕ್ಕೆ ಉತ್ತಮ ಆರಂಭ
ನಾಲ್ಕನೇ ಟೆಸ್ಟ್ ಪಂದ್ಯದ ಮೊದಲನೇ ದಿನ ಭಾರತ ತಂಡಕ್ಕೆ ಉತ್ತಮ ಆರಂಭ ಸಿಕ್ಕಿದೆ. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಯಶಸ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ ಟೀಮ್ ಇಂಡಿಯಾಗೆ 94 ರನ್‌ಗಳ ಜೊತೆಯಾಟವನ್ನು ಆಡಿ ತಂಡಕ್ಕೆ ಉತ್ತಮ ಆರಂಭ ತಂದುಕೊಟ್ಟಿದ್ದರು. ಕೆಎಲ್ ರಾಹುಲ್ ಕೂಡ ಉತ್ತಮವಾಗಿ ಆಡಿ 46 ರನ್ ಗಳಿಸಿ ಅರ್ಧಶತಕದಂಚಿನಲ್ಲಿ ವಿಕೆಟ್ ಒಪ್ಪಿಸಿದ್ದರು. ಶುಭಮನ್ ಗಿಲ್ ನಿರಾಶೆ ಮೂಡಿಸಿದರೂ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಸಾಯಿ ಸುದರ್ಶನ್ 57 ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ. ರಿಷಭ್ ಪಂತ್ ಗಾಯಕ್ಕೆ ತುತ್ತಾಗುವುದಕ್ಕೂ ಮುನ್ನ 37 ರನ್ ಗಳಿಸಿದ್ದರು. ಇದೀಗ ಭಾರತ 72 ಓವರ್‌ಗಳಿಗೆ 3 ವಿಕೆಟ್ ನಷ್ಟಕ್ಕೆ 231 ರನ್‌ಗಳನ್ನು ಕಲೆ ಹಾಕಿದೆ. ರವೀಂದ್ರ ಜಡೇಜಾ ಹಾಗೂ ಸಾಯಿ ಸುದರ್ಶನ್ ಕ್ರೀಸ್‌ನಲ್ಲಿದ್ದಾರೆ.