ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಏಳು ವರ್ಷಗಳ ಬಳಿಕ ಗುರು-ಶಿಷ್ಯರ ಸಮಾಗಮ

ಕಳೆದ ಡೆಸೆಂಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸದ ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌ ಸರಣಿ ವೇಳೆ ಅಶ್ವಿನ್‌ ಅವರು ದಿಢೀರ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಐಪಿಎಲ್‌ನಲ್ಲಿ ಅಶ್ವಿನ್‌ ಇದುವರೆಗೆ 211 ಪಂದ್ಯಗಳನ್ನಾಡಿ 800 ರನ್‌ ಮತ್ತು 180 ವಿಕೆಟ್‌ ಉರುಳಿಸಿದ್ದಾರೆ.

ಗುರು-ಶಿಷ್ಯರ ಸಮಾಗಮ; ಜತೆಯಾಗಿ ಅಭ್ಯಾಸ ನಡೆಸಿದ ಧೋನಿ, ಅಶ್ವಿನ್‌

Profile Abhilash BC Feb 28, 2025 1:28 PM

ಚೆನ್ನೈ: ಮಾರ್ಚ್‌ 22 ರಿಂದ ಆರಂಭಗೊಳ್ಳಲಿರುವ ಐಪಿಎಲ್‌(IPL 2025) ಪಂದ್ಯಾವಳಿಗೆ ಮಾಜಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಸಿದ್ಧತೆ ಆರಂಭಿಸಿದೆ. ಮೊದಲ ದಿನವೇ ಟೀಮ್‌ ಇಂಡಿಯಾದ ಮಾಜಿ ಆಟಗಾರರಾದ ಮಹೇಂದ್ರ ಸಿಂಗ್‌ ಧೋನಿ ಮತ್ತು ಆರ್‌.ಅಶ್ವಿನ್‌ 7 ವರ್ಷಗಳ ಬಳಿಕ ಸಮಾಗಮಗೊಂಡರು. ಪರಸ್ಪರ ಯೋಗ ಕ್ಷೇಮ ವಿಚಾರಿಸಿಕೊಂಡು ಅಭ್ಯಾಸ ನಿರತರಾದರು. ಈ ಸುಂದರ ಕ್ಷಣದ ವಿಡಿಯೊವನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಮ್ಮ ಅಧಿಕೃತ ಟ್ವಿಟರ್‌ ಎಕ್ಸ್‌ನಲ್ಲಿ ಹಂಚಿಕೊಂಡಿದೆ. 2018ರ ತನಕ ಚೆನ್ನೈ ತಂಡದಲ್ಲಿದ್ದ ಅಶ್ವಿನ್‌ ಆ ಬಳಿಕ ಮೆಗಾ ಹರಾಜಿನಲ್ಲಿ ಪಂಜಾಬ್‌ ಕಿಂಗ್ಸ್‌ ತಂಡ ಸೇರಿದ್ದರು. ಇದಾದ ಬಳಿಕ ಡೆಲ್ಲಿ, ರಾಜಸ್ಥಾನ್‌ ಪರ ಆಡಿದ್ದರು. ಕಳೆದ ಬಾರಿ ನಡೆದಿದ್ದ ಮೆಗಾ ಹರಾಜಿನಲ್ಲಿ ಅವರನ್ನು 9.75 ಕೋಟಿ ರೂ.ಗೆ ಖರೀದಿಸಿ ಮತ್ತೆ ತವರು ತಂಡಕ್ಕೆ ಕರೆತರಲಾಗಿತ್ತು.

'ಜೀವನವು ಒಂದು ವೃತ್ತವಾಗಿದೆ. ಐಪಿಎಲ್‌ ವೃತ್ತಿ ಜೀವನ ಆರಂಭಿಸಿದ ತಂಡಕ್ಕೆ ಮತ್ತೆ ಮರಳಿದ್ದು ಅಪಾರ ಸಂತಸ ತಂದಿದೆ. ನಾನು ಸಿಎಸ್‌ಕೆಯಲ್ಲಿ ಕಲಿತದ್ದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನನ್ನನ್ನು ಇಲ್ಲಿಯವರೆಗೆ ಮುನ್ನಡೆಸಿದೆ. ನಾನು ಬೇರೆ ಫ್ರಾಂಚೈಸಿ ಪರ ಆಡುವಾಗ ತವರಿನ ಅಭಿಮಾನಿಗಳು ನಾನು ಬೌಲಿಂಗ್ ಮತ್ತು ಬ್ಯಾಟಿಂಗ್ ಮಾಡುವಾಗ ಕೂಗುವುದಿಲ್ಲ ಅಥವಾ ಸಂಭ್ರಮಿಸುವುದಿಲ್ಲ ಎಂಬುದನ್ನು ನಾನು ಗಮನಿಸಿದ್ದೇನೆ. ಇದೀಗ ಮತ್ತೆ ನನ್ನ ತವರು ತಂಡದ ಪರ ಆಡಲಿಳಿದದ್ದು ಅಭಿಮಾನಗಳಿಗೂ ಖುಷಿ ತಂದಿದೆ. ಈ ಬಾರಿ ಚೆಪಾಕ್‌ ಮೈದಾನದಲ್ಲಿ ನಾನು ಆಡುವಾಗ ಅಭಿಮಾನಿಗಳ ಬೆಂಬಲ ದೊಡ್ಡ ಮಟ್ಟದಲ್ಲಿ ಕಾಣಸಿಗಲಿದೆ. ಅದರಲ್ಲೂ ಧೋನಿ ಜತೆ ಮತ್ತೆ ಆಡಲು ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಪುಣ್ಯ' ಎಂದು ಅಶ್ವಿನ್‌ ಹೇಳಿದರು.

ಕಳೆದ ಡೆಸೆಂಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸದ ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌ ಸರಣಿ ವೇಳೆ ಅಶ್ವಿನ್‌ ಅವರು ದಿಢೀರ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಐಪಿಎಲ್‌ನಲ್ಲಿ ಅಶ್ವಿನ್‌ 211 ಪಂದ್ಯಗಳನ್ನಾಡಿ 800 ರನ್‌ ಮತ್ತು 180 ವಿಕೆಟ್‌ ಉರುಳಿಸಿದ್ದಾರೆ.

ಚೆನ್ನೈ ತಂಡದ ನಾಯಕ ಋತುರಾಜ್‌ ಗಾಯಕ್ವಾಡ್‌, ಧೋನಿ, ಅಶ್ವಿನ್‌ ಸೇರಿ ಹಲವು ಆಟಗಾರರು ಗುರುವಾರದಿಂದ ಅಭ್ಯಾಸ ಆರಂಭಿಸಿದ್ದಾರೆ. ಚೆನ್ನೈ ತಂಡ ಮಾ.23 ರಂದು ಮುಂಬೈ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ತವರು ಮೈದಾನವಾದ ಚೆಪಾಕ್‌ನಲ್ಲಿ ನಡೆಯಲಿದೆ.

ಧೋನಿ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದ ವೇಳೆ ಅವರು ಧರಿಸಿದ್ದ ಟಿ-ಶರ್ಟ್‌ನಲ್ಲಿನ ಕೋಡ್ ವರ್ಡ್‌ ಒಂದು ಭಾರೀ ಕುತೂಹಕ್ಕೆ ಕಾರಣವಾಗಿತ್ತು. ಕಪ್ಪು ಬಣ್ಣದ ಟಿ-ಶರ್ಟ್‌ನಲ್ಲಿ ಮೋರ್ಸ್ ಕೋಡ್‌ಗಳಿರುವ ಗ್ರಾಫಿಕ್ ಕಂಡು ಬಂದಿತ್ತು. 'ಒನ್ ಲಾಸ್ಟ್ ಟೈಮ್'(ಒಂದು ಕೊನೆಯ ಅವಕಾಶ) ಎನ್ನುವುದು ಈ ಕೋಡ್ ವರ್ಡ್‌ನ ಅರ್ಥವಾಗಿದೆ.

ಇದನ್ನೂ ಓದಿ IPL 2025: ಡೆಲ್ಲಿ ಕ್ಯಾಪಿಟಲ್ಸ್‌ಗೆ ಪೀಟರ್ಸನ್‌ ಮೆಂಟರ್‌

ಬಾರಿಯ ಟೂರ್ನಿಯಲ್ಲಿ ಧೋನಿ ತಮ್ಮ ಬ್ಯಾಟ್‌ನ ತೂಕವನ್ನು ಇಳಿಸಿ ಆಡಲಿದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ಧೋನಿ 1250-1300 ಗ್ರಾಂ ತೂಕದ ಬ್ಯಾಟ್‌ನೊಂದಿಗೆ ಆಡುತ್ತಾರೆ. ಆದರೆ ಈ ಬಾರಿ ಕನಿಷ್ಠ 10-20 ಗ್ರಾಂಗಳಷ್ಟು ತೂಕವನ್ನು ಕಡಿಮೆ ಮಾಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಮಂಡಿ ನೋವಿನಿಂದ ಬಳಲುತ್ತಿರುವ ಧೋನಿ ಈ ಬಾರಿ ಇಂಪ್ಯಾಕ್ಟ್‌ ಆಟಗಾರನಾಗಿ ಆಡಲಿದ್ದಾರಾ ಅಥವಾ ಪೂರ್ಣ ಪ್ರಮಾಣದ ವಿಕೆಟ್‌ ಕೀಪರ್‌ ಆಗಿ ಆಡಲಿದ್ದಾರಾ ಎನ್ನುವುದು ಇನ್ನಷ್ಟೇ ಖಚಿತವಾಗಬೇಕಿದೆ.