ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Raghavendra Jois Column: ನವೆಂಬರ್‌ ಮಾಸದಲ್ಲೇ ಮಾಸದಿರಲಿ ಕನ್ನಡ‌

ಪಂಪ, ರನ್ನ, ಪೊನ್ನ, ಬಸವಣ್ಣ, ಅಕ್ಕಮಹಾದೇವಿ, ಸರ್ವಜ್ಞ, ಕನಕದಾಸ, ಪುರಂದರದಾಸರಂತಹ ದಾರ್ಶನಿಕರು ಮತ್ತು ಕವಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕುವೆಂಪು, ಬೇಂದ್ರೆ, ಮಾಸ್ತಿ, ಶಿವರಾಮ ಕಾರಂತ, ಡಾ. ಯು.ಆರ್. ಅನಂತಮೂರ್ತಿ ಸೇರಿದಂತೆ ಅನೇಕ ಸಾಹಿತಿಗಳು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ನವೆಂಬರ್‌ ಮಾಸದಲ್ಲೇ ಮಾಸದಿರಲಿ ಕನ್ನಡ

-

Profile
Ashok Nayak Nov 4, 2026 8:40 PM

ಪ್ರಸ್ತುತ

ರಾಘವೇಂದ್ರ ಜೋಯಿಸ್

ಅನೇಕ ಮಹನೀಯರ ಹೋರಾಟ, ತ್ಯಾಗ ಮತ್ತು ಪರಿಶ್ರಮದ ಫಲವಾಗಿ 1956ರ ನವೆಂಬರ್ 1ರಂದು ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸಿ ವಿಶಾಲ ಮೈಸೂರು ರಾಜ್ಯವನ್ನು ರಚಿಸ ಲಾಯಿತು. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ತನ್ನದೇ ಆದ ವಿಶಿಷ್ಟ ಲಿಪಿ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿರುವ ಕನ್ನಡ ಭಾಷೆ ಜಗತ್ತಿನ ಅತ್ಯಂತ ಪ್ರಾಚೀನ ಹಾಗೂ ಶ್ರೀಮಂತ ಭಾಷೆಗಳಲ್ಲಿ ಒಂದಾಗಿದೆ.

ಪಂಪ, ರನ್ನ, ಪೊನ್ನ, ಬಸವಣ್ಣ, ಅಕ್ಕಮಹಾದೇವಿ, ಸರ್ವಜ್ಞ, ಕನಕದಾಸ, ಪುರಂದರದಾಸರಂತಹ ದಾರ್ಶನಿಕರು ಮತ್ತು ಕವಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕುವೆಂಪು, ಬೇಂದ್ರೆ, ಮಾಸ್ತಿ, ಶಿವರಾಮ ಕಾರಂತ, ಡಾ. ಯು.ಆರ್. ಅನಂತಮೂರ್ತಿ ಸೇರಿದಂತೆ ಅನೇಕ ಸಾಹಿತಿಗಳು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ. ಶಾಸ್ತ್ರೀಯ ಭಾಷೆಯ ಸ್ಥಾನಮಾನವೂ ಕನ್ನಡದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕರ್ನಾಟಕವು ಸಾಹಿತ್ಯ, ಸಂಗೀತ, ಕಲೆ, ವಿಜ್ಞಾನ, ಶಿಕ್ಷಣ, ಕೈಗಾರಿಕೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ದೇಶಕ್ಕೆ ಮಹತ್ವದ ಕೊಡುಗೆ ನೀಡಿದೆ.

ಇದನ್ನೂ ಓದಿ: Dr Rajendra Kumar Column: ಕನ್ನಡದ ಆತ್ಮ ಕಾಣೆಯಾಗಿದೆ ಹುಡುಕುವಿರಾ ?

ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನದ ಪ್ರಮುಖ ಕೇಂದ್ರವಾಗಿ ಗುರುತಿಸಿ ಕೊಂಡಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿ. ನಮ್ಮ ಮೂವತ್ತ ಒಂದು ಜಿಲ್ಲೆಗಳೂ ತಮ್ಮದೇ ಆದ ವಿಭಿನ್ನವಾದ ಪ್ರಾಕೃತಿಕ, ಐತಿಹಾಸಿಕ, ಪ್ರವಾಸೋದ್ಯಮದ ವೈಶಿಷ್ಟ್ಯಗಳಿಂದ ಹೆಸರು ಮಾಡಿದೆ.

ಪ್ರತೀ ಜಿಲ್ಲೆಯಲ್ಲೂ ಆಡು ಭಾಷೆಯು ಕನ್ನಡವೇ ಆದರೂ ಆಯಾಯ ಪ್ರದೇಶದಲ್ಲಿ ಆಡುವ ಕನ್ನಡ ಭಾಷೆಯ ಶೈಲಿ ಬೇರೆಯೇ ಆದರೂ ಎಲ್ಲದರಲ್ಲೂ ಭಾಷೆಯ ಸೊಬಗು ಒಂದೇ. ಇಂಥ ಸುಂದರವಾದ ಕನ್ನಡ ಹಬ್ಬವನ್ನು ನಾವು ನವೆಂಬರ್ ಮಾಸದಲ್ಲಿ ಆಚರಿಸುತ್ತಿರುವ ಈ ಸಂದರ್ಭ ದಲ್ಲಿ ನಾವೆಲ್ಲರೂ ಕೆಲವು ಸಣ್ಣ ರೂಢಿ ಬದಲಾವಣೆ ಮಾಡಿಕೊಳ್ಳುವುದರ ಮೂಲಕ ಕನ್ನಡವನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುವತ್ತ ಪ್ರಯತ್ನಿಸೋಣ.

  1. ಇಂದಿನ ಜಾಗತೀಕರಣದ ಯುಗದಲ್ಲಿ ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳನ್ನು ಕಲಿಯುವುದು ಅನಿವಾರ್ಯವೂ ಅಗತ್ಯವೂ ಆಗಿದೆ. ಆದರೆ ಇತರ ಭಾಷೆಗಳನ್ನು ಕಲಿಯುವ ಭರದಲ್ಲಿ ನಮ್ಮ ಮಾತೃ ಭಾಷೆಯನ್ನು ನಿರ್ಲಕ್ಷಿಸದೇ ಇರೋಣ. ಮನೆಯಲ್ಲೂ, ಶಾಲೆಯಲ್ಲೂ, ಕಚೇರಿಯಲ್ಲೂ ಹಾಗೂ ಸಾಮಾಜಿಕ ಜೀವನದಲ್ಲೂ ಕನ್ನಡದ ಬಳಕೆಗೆ ಹೆಚ್ಚಿನ ಆದ್ಯತೆ ನೀಡೋಣ. ಹೊರ ರಾಜ್ಯಗಳಿಂದ ಇಲ್ಲಿಗೆ ಉದ್ಯೋಗ, ವೃತ್ತಿ ಮಾಡಲು ಬಂದು ನೆಲೆಸಿ ‘ಖನ್ನಡ್ ಗೊತ್ತಿಲ್ಲ’ ಎನ್ನುವವರಿಗೆ ಅವರ ಭಾಷೆಯ ಮಾತನಾಡಿಸದೇ ಅವರಿಗೆ ಕನ್ನಡ ಕಲಿಸೋಣ.
  2. ಕನ್ನಡದಲ್ಲಿ ಮಾತನಾಡುವುದು ಮಾತ್ರವಲ್ಲದೆ ಕನ್ನಡ ಪುಸ್ತಕಗಳನ್ನು ಕೊಂಡು ಓದುವುದರ ಮೂಲಕ ಕನ್ನಡ ಸಾಹಿತ್ಯವನ್ನು ಪ್ರೋತ್ಸಾಹಿಸೋಣ. ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಕುವೆಂಪು, ಬೇಂದ್ರೆ, ಮಾಸ್ತಿ, ಕಾರಂತ, ಭೈರಪ್ಪ ಮುಂತಾದವರ ಸಾಹಿತ್ಯ ಓದೋಣ. ಮಕ್ಕಳಿಗೂ ಓದಿಸಲಿಕ್ಕೆ ಹಚ್ಚೋಣ.
  3. ಇಂದಿನ ಮಕ್ಕಳಿಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪರಿಚಯ ಮಾಡಿಕೊಡುವುದು ನಮ್ಮ ಕರ್ತವ್ಯ ವಾಗಿದೆ. ತಂತ್ರಜ್ಞಾನ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿಯೂ ಕನ್ನಡದ ಬಳಕೆ ಹೆಚ್ಚಾಗಬೇಕು. ಅದರ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸೋಣ.
  4. ಕನ್ನಡಿಗರು ಎಲ್ಲೇ ಇದ್ದರೂ ತಮ್ಮ ಭಾಷೆ ಮತ್ತು ಸಂಸ್ಕೃತಿಯೊಂದಿಗೆ ನಂಟು ಉಳಿಸಿಕೊಳ್ಳಬೇಕು. ತಮ್ಮ ಮೂಲ ಭಾಷೆಯ ಸೊಬಗು, ಆ ನೆಲದ ಸೊಗಡು ಬಗ್ಗೆ ಯಾವಾಗಲೂ ಒಂದು ಕೃತಜ್ಞತಾ ಭಾವ ಹಾಗೂ ಗೌರವ ಇರಬೇಕು.
  5. ಆದಷ್ಟು ಕನ್ನಡ ಸಿನಿಮಾ, ನಾಟಕ ನೋಡಿ ಪ್ರೋತ್ಸಾಹಿಸೋಣ. ಇತರ ಕಲೆಗಳಾದ ಯಕ್ಷಗಾನ, ಸಂಗೀತ, ಜಾನಪದ, ಗಮಕ, ನೃತ್ಯ, ಚಿತ್ರಕಲೆ ಮುಂತಾದವುಗಳನ್ನು ಪ್ರೋತ್ಸಾಹಿಸುವುದರ ಮೂಲಕ ತೆರೆ ಮರೆಯಲ್ಲಿರುವ ನಮ್ಮದೇ ಪ್ರತಿಭೆಗಳನ್ನು ಗೌರವಿಸೋಣ.
  6. ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಆಯ್ಕೆ ಇರಲಿ. ಕನ್ನಡ ಭಾಷೆ ವಿಷಯ ಕಡ್ಡಾಯ ಇರಲಿ. ನಶಿಸುತ್ತಿರುವ ಸರ್ಕಾರಿ ಶಾಲೆಗಳನ್ನು ಸರ್ಕಾರ ಚೆನ್ನಾಗಿ ನಡೆಸಿ ಕೈಗೆಟುಕುವ ದರದಲ್ಲಿ ಎಲ್ಲರಿಗೂ ಉತ್ತಮ ಶಿಕ್ಷಣ ನೀಡುವಂತಾಗಲಿ. ಕನ್ನಡದ ಉಳಿವಿಗಾಗಿ ಹೆಚ್ಚಿನ ಒತ್ತು ನೀಡಲಿ.
  7. ಕನ್ನಡ ರಾಜ್ಯೋತ್ಸವವೆಂದರೆ ನವೆಂಬರ್ ಒಂದು ಅಥವಾ ನವೆಂಬರ್ ಮಾಸದಲ್ಲಿ ಕೇವಲ ಕೆಂಪು-ಹಳದಿ ಧ್ವಜ ಹಾರಿಸುವುದು, ಸಿಹಿ ಹಂಚುವುದು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಗಳಲ್ಲಿ ಭಾಗವಹಿಸುವುದಕ್ಕೆ ಸೀಮಿತವಾ ಗಬಾರದು. ಕನ್ನಡದ ಬಗ್ಗೆ ಅಭಿಮಾನ ಬೆಳೆಸಿ ಕೊಳ್ಳುವುದರ ಜೊತೆಗೆ ಕನ್ನಡದ ಉಳಿವು, ಬೆಳವಣಿಗೆ ಮತ್ತು ಪ್ರಸಾರಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುವ ಸಂಕಲ್ಪದ ದಿನವಾ ಗಬೇಕು. ವರ್ಷವೆಲ್ಲಾ ಇದು ಆಚರಣೆಯಲ್ಲಿರುವಂತೆ ನೋಡಿಕೊಳ್ಳಬೇಕು.