Rangaswamy Mookanahalli Column: ಒತ್ತಾಸೆಯಾದವರಿಗೆ ನಾವೂ ಹೆಗಲಾಗಬೇಕಲ್ಲವೇ?
ನಮಗೆ ನೆರವಾಗುತ್ತಲೇ ಬಂದಿರುವ ರಷ್ಯಾ ಮತ್ತು ಇಸ್ರೇಲ್ ಗೆ ನಾವು ನೇರವಾಗಿ ಇಂದಿಗೂ ಬೆಂಬಲ ಸೂಚಿಸಿಲ್ಲ. ರಷ್ಯಾ ಮತ್ತು ಉಕ್ರೈನ್ ನಡುವಿನ ಯುದ್ದವಾದಾಗ ಭಾರತ ತಟಸ್ಥವಾಗಿ ಉಳಿದುಕೊಂಡಿತು. ಮೀಡಿಯಾ ಮುಂದೆ ಸ್ವತಃ ಮೋದಿಯವರು ಇದು ಯುದ್ಧದ ಸಮಯವಲ್ಲ ಎಂದು ಹೇಳಿಕೆ ನೀಡಿದರು. ಅಮೇರಿಕಾ ಬೇಡ ಎಂದರೂ ರಷ್ಯಾದಿಂದ ನಾವು ತೈಲ ಕೊಂಡದ್ದು ಬಿಟ್ಟರೆ ನಾವು ಅವರಿಗೆ ಇನ್ನ್ಯಾವ ರೀತಿಯ ಸಹಾಯವನ್ನೂ ಬಾಯಿಮಾತಿಗೂ ಮಾಡಲಿಲ್ಲ. ಇನ್ನು ಇಸ್ರೇಲ್ ಮತ್ತು ಘಾಸಾದಲ್ಲಿನ ಹಮಾಸ್ ವಿರುದ್ದದ ಯುದ್ಧದಲ್ಲಿ ಕೂಡ ನಾವು ಇಸ್ರೇಲ್ ಪರ ಮಾತನಾಡದೆ ಸುಮ್ಮನೆ ಕುಳಿತೆವು.


Rangaswamy Mookanahalli Column: ಈ ಲೇಖನವನ್ನ ಬರೆಯುತ್ತಿರುವ ಸಮಯದಲ್ಲಿ ನಮ್ಮ ದೇಶದಲ್ಲಿ ಯುದ್ಧ ಕಾವು ಇನ್ನೂ ಇಳಿದಿಲ್ಲ. ನಾವು ಪಾಕಿಸ್ತಾನಕ್ಕೆ ಬಹಳ ಪೆಟ್ಟು ಕೊಟ್ಟಿದ್ದೇವೆ. ಆದರೂ ಆ ದೇಶ ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಜಾಗತಿಕ ಮಟ್ಟದಲ್ಲಿ ಪೋಸ್ ಕೊಡುತ್ತಾ ನಾವು ಯುದ್ಧದಲ್ಲಿ ಗೆದ್ದಿದ್ದೇವೆ ಎಂದು ಬೀಗುತ್ತಿದೆ. ವಾಸ್ತವದ ಅರಿವು ಜಗತ್ತಿಗೆಲ್ಲಾ ಇಂದು ಗೊತ್ತಾಗಿದೆ.ಯಾವುದೇ ದೇಶಕ್ಕೂ ಯುದ್ಧ ಎಂದರೆ ಅದೊಂದು ನಷ್ಟದ ಬಾಬತ್ತು. ಹಣ ಖರ್ಚಾಗುವುದು ತಪ್ಪಿಸಲು ಆಗುವುದಿಲ್ಲ. ಹಾಗೆಯೇ ಜೀವಹಾನಿಯನ್ನು ಕೂಡ ತಪ್ಪಿಸಲಾಗುವುದಿಲ್ಲ. ವಸ್ತುಸ್ಥಿತಿ ಹೀಗಿದ್ದೂ ,ಈ ಯುದ್ಧದಿಂದ ಭಾರತಕ್ಕೆ ಲಾಭವಾಗಿದೆ ಎಂದು ಹೇಳಬಹುದು. ಜಾಗತಿಕ ಮಟ್ಟದಲ್ಲಿ ಭಾರತದಲ್ಲಿ ತಯಾರಾದ ಕ್ಷಿಪಣಿಗಳ ತಾಕತ್ತು ಅನಾವರಣವಾಗಿದೆ. ಅದೇ ಸಮಯದಲ್ಲಿ ಚೀನಾ ಮತ್ತು ಅಮೆರಿಕಾದ ಡಿಫೆನ್ಸ್ ಸರಕುಗಳು ಡಮ್ ಎನ್ನುವಲ್ಲಿ ವಿಫಲವಾಗಿ ಠುಸ್ಸ್ ಎಂದದ್ದು ಜಗತ್ತಿಗೆ ಕೇಳಿಸಿದೆ. ರಷ್ಯಾ ಮತ್ತು ಇಸ್ರೇಲ್ ತಂತ್ರಜ್ಞಾನ ಭಾರತಕ್ಕೆ ಈ ಯುದ್ಧದಲ್ಲಿ ಬಹಳಷ್ಟು ಸಹಾಯ ಮಾಡಿವೆ. ನೆಲದಲ್ಲಿಟ್ಟ ಸಣ್ಣ ಉಪಕರಣಗಳು ಆಕಾಶದಲ್ಲಿ ಬರುವ ಕ್ಷಿಪಣಿಗಳನ್ನು ಗುರುತಿಸಿ ಅವುಗಳನ್ನು ಗಾಳಿಯಲ್ಲೇ ಹೊಡೆದು ಉರುಳಿಸುವಲ್ಲಿ ಯಶಸ್ವಿಯಾಗಿವೆ. ಭಾರತದ ಸಂಕಷ್ಟದ ಸಮಯದಲ್ಲಿ ಸದಾ ನಿಲ್ಲುವ ಎರಡು ದೇಶಗಳನ್ನು ನಾವು ಮರೆಯಬಾರದು. ಒಂದು ದೀರ್ಘಕಾಲದ ಹಿತೈಷಿ ರಷ್ಯಾ. ಇನ್ನೊಂದು ಭಾರತೀಯರನ್ನು , ಹಿಂದೂಗಳನ್ನೂ ಇನ್ನಿಲ್ಲದೆ ಪ್ರೀತಿಸುವ ಇಸ್ರೇಲ್. ಭಾರತದ ಪರವಿದ್ದೇವೆ ಎಂದು ಘೋಷಣೆ ಮಾಡಿದ್ದ ಅಮೇರಿಕಾ ದ್ವಿಮುಖ ನೀತಿ ಇಂದಿಗೆ ಎಲ್ಲರಿಗೂ ಗೊತ್ತಾಗಿದೆ. ಅಮೇರಿಕಾ ಒಂದು ಲಾಭಕೋರ ದೇಶ. ತನ್ನ ದೇಶಕ್ಕೆ ಮತ್ತು ಅಲ್ಲಿನ ಬಂಡವಾಳಶಾಹಿಗಳಿಗೆ ಲಾಭವಾಗದ ಯಾವ ಕಾರ್ಯವನ್ನೂ ಆ ದೇಶ ಮಾಡುವುದಿಲ್ಲ. ಇಂದಿಗೆ ಆ ದೇಶವನ್ನು ನಿಜಾರ್ಥದಲ್ಲಿ ಆಳುತ್ತಿರುವುದು ಬಂಡವಾಳಶಾಹಿಗಳು. ಟ್ರಂಪ್ ಸ್ವತಃ ಒಬ್ಬ ವ್ಯಾಪಾರಿ. ಎಲಾನ್ ಮಸ್ಕ್ ಆತನಿಗಿಂತ ಒಂದು ಕೈ ಮೇಲು. ಹೀಗಾಗಿ ಟ್ರಂಪ್ ಕಿಂಗ್ ಆದರೆ ಎಲಾನ್ ಮಸ್ಕ್ ಕಿಂಗ್ ಮೇಕರ್.
ಅಮೇರಿಕಾ ದೇಶವನ್ನು ನಾವು ಪಕ್ಕಕ್ಕಿಟ್ಟು ನಮಗೆ ಮಿತ್ರರಾಗಿರುವ ರಷ್ಯಾ ಮತ್ತು ಇಸ್ರೇಲ್ ಬಗ್ಗೆ ಒಂದಷ್ಟು ಗಮನಹರಿಸೋಣ . ಜಗತ್ತಿನ ಬಹುತೇಕ ದೇಶಗಳನ್ನ ನೋಡಿ , ಎಲ್ಲಾ ದೇಶಗಳೂ ನಾಲ್ಕು ಅಥವಾ ಐದು ವರ್ಷಕ್ಕೆ ಹೊಸ ನಾಯಕನನ್ನ ಆರಿಸಬೇಕು. ಇಲ್ಲವೇ ಹಳೆಯ ನಾಯಕನಲ್ಲಿ ಮತ್ತೆ ವಿಶ್ವಾಸ ವ್ಯಕ್ತಪಡಿಸಬೇಕು. ಆದರೆ ಜಗತ್ತಿನಲ್ಲಿ ಎರಡು ದೇಶಗಳಿವೆ , ಅವುಗಳಿಗೆ ಇಂತಹ ಚಿಂತೆ ಇಲ್ಲ. ಒಂದು ಚೀನಾ , ಜಿ ಪಿಂಗ್ ಬದುಕಿರುವವರೆಗೆ ಅವರೇ ಅಧ್ಯಕ್ಷ . ಎರಡು ರಷ್ಯಾ , ಇಲ್ಲಿ ೨೦೩೬ ರ ವರೆಗೆ ಪುಟಿನ್ ಅವರನ್ನ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಜಗತ್ತು ಪೂರ್ತಿ ಮುಂದಿನ ನಾಲ್ಕು ಅಥವಾ ಐದು ವರ್ಷದ ನಂತರವೇನು ? ಎನ್ನುವುದು ತಿಳಿಯದೆ ಇರುತ್ತದೆ. ಆದರೆ ಇವೆರೆಡು ದೇಶಗಳಲ್ಲಿ ಮಾತ್ರ ಅಷ್ಟರಮಟ್ಟಿನ ಸ್ಥಿರತೆಯಿದೆ. ಇದರರ್ಥ ಬಹಳ ಸರಳ . ಜಗತ್ತಿನಲ್ಲಿ ಚೀನಾ ಮತ್ತು ರಷ್ಯಾ ದೇಶಗಳು ಮಾತ್ರ ದೊರಗಾಮಿ ಚಿಂತನೆ ಅಥವಾ ಪ್ಲಾನ್ ಮಾಡಬಲ್ಲವು ಉಳಿದಂತೆ ಬೇರೆ ದೇಶಗಳು ಶಾರ್ಟ್ ಟರ್ಮ್ ಪ್ಲಾನ್ ಮಾತ್ರ ಮಾಡಬಲ್ಲವು. ಹೀಗಾಗಿ ಚೀನಾ ಮತ್ತು ರಷ್ಯಾ ಮುಂದಿನ ೨೦/೩೦/೪೦ ವರ್ಷಗಳಿಗೆ ಪ್ಲಾನ್ ಮಾಡುತ್ತಿವೆ. ಇದು ಹೀಗೆ ಆಗಬೇಕು ಎನ್ನುವ ನೀಲನಕ್ಷೆ ಅವರ ಬಳಿಯಿದೆ. ಅಮೇರಿಕಾ ಮತ್ತು ಯೂರೋಪು ಹಳೆಯ ಆಟಗಾರರು ಅವರನ್ನ ಚೀನಾ ಮತ್ತು ರಷ್ಯಾ ಯಾವಾಗಲೂ ಪರದೆಯ ಆಚೆಗೆ ಸರಿಸಿಯಾಗಿದೆ. ಇದರಲ್ಲಿ ಚೀನಾ ಅದೆಷ್ಟೇ ಮುಂದುವರಿದರೂ ಭಾರತಕ್ಕೆ ಕವಡೆ ಕಾಸಿನ ಲಾಭವಿಲ್ಲ. ಹೀಗಾಗಿ ಅದನ್ನು ಕೂಡ ಬದಿಗಿರಿಸೋಣ. ರಷ್ಯಾ ೨೦೩೬ ರ ವರೆಗೆ ಭಾರತಕ್ಕೆ ನಿಜಕ್ಕೂ ಮಿತ್ರನಾಗಿ ಉಳಿಯಲಿದೆ. ಆ ನಂತರದ ಕಥೆ ಕೂಡ ವಿಭಿನ್ನವಾಗಿರುವುದಿಲ್ಲ ಎಂದು ಆಶಿಸೋಣ.ಭಾರತಕ್ಕೆ ಸಂಕಷ್ಟ ಎಂದಾಗೆಲ್ಲಾ ಓಡಿ ಬರುವ ದೇಶ ರಷ್ಯಾ.
ಇಸ್ರೇಲ್ ಎನ್ನುವ ಪದ ಎಷ್ಟು ಪವರ್ ಫುಲ್ ಅಂತ ಹಲವು ಸರ್ತಿ ಅನ್ನಿಸಿದೆ . ಜಗತ್ತಿನಲ್ಲಿ ಇರುವ ನೂರಾರು ದೇಶಗಳಲ್ಲಿ ಇಸ್ರೇಲ್ ಒಂದು! ಆದರೆ ನೂರರಲ್ಲಿ ಒಂದಾಗದೆ ಉಳಿದದ್ದು ಜಗತ್ತಿನಲ್ಲಿ ಅದಕ್ಕೆ ಆ ಮಟ್ಟದ ಕೀರ್ತಿ ತಂದು ಕೊಟ್ಟಿದೆ ಎನ್ನಬಹುದು . ಇಸ್ರೇಲ್ ಅಂದಾಕ್ಷಣ ಸಾಮಾನ್ಯವಾಗಿ ಎಲ್ಲರ ಮನಸ್ಸಿನಲ್ಲಿ ನೆನಪು ಬರುವುದು ಪ್ಯಾಲೇಸ್ತೀನ್ ನವರು ಮಾಡುವ ಒಂದು ದಾಳಿಗೆ ಉತ್ತರವಾಗಿ ಇವರು ಮಾಡುವ ಎರಡು ಅಥವಾ ಮೂರು ಮರು ದಾಳಿಗಳು . ಇಸ್ರೇಲಿಗಳು ತಮ್ಮ ಮೇಲೆ ಆದ ಆಕ್ರಮಣಕ್ಕೆ ಹುಲುಬುತ್ತಾ ಅಥವಾ ಶೋಕ ಆಚರಿಸುತ್ತಾ ಕೂರುವ ಜಾಯಮಾನದವರಲ್ಲ . ದಾಳಿಗೆ ವಿರುದ್ಧವಾಗಿ ಅದಕ್ಕಿಂತ ಹೆಚ್ಚಿನ ಪ್ರಮಾಣದ ಹಾನಿ ಮಾಡುವ ದಾಳಿ ಮಾಡುವುದು ಜಗತ್ತಿಗೆ ಇಸ್ರೇಲ್ ಬಗ್ಗೆ ತಿಳಿದಿರುವ ಅತಿ ಸಾಮಾನ್ಯ ವಿಷಯ . ಇಸ್ರೇಲ್ ತನ್ನ ಸುತ್ತ ಇರುವ ದೇಶಗಳೊಂದಿಗೆ ಒಳ್ಳೆಯ ಸಂಬಂಧ ಹೊಂದಿಲ್ಲ . ಇಸ್ರೇಲ್ ಸುತ್ತಾ ಲೆಬನಾನ್ , ಸಿರಿಯಾ , ಸೌದಿ ಅರೇಬಿಯಾ , ಪ್ಯಾಲೇಸ್ತೀನ್, ಜೋರ್ಡನ್ , ಈಜಿಪ್ಟ್ ದೇಶಗಳನ್ನ ಹೊಂದಿದೆ . ಇವೆಲ್ಲಾ ಮುಸ್ಲಿಂ ದೇಶಗಳು . ಈ ಎಲ್ಲಾ ದೇಶಗಳಿಗೂ ಇಸ್ರೇಲ್ ಎಂದರೆ ರಕ್ತ ಕುದಿಯುತ್ತದೆ . ಅದಕ್ಕೆ ಕಾರಣ ಇಸ್ರೇಲ್ ಇರುವ ಜಾಗ ನಮ್ಮದು ಇಸ್ರೇಲ್ ಗೆ ಸೇರಿದ್ದೇ ಅಲ್ಲ ಎನ್ನುವುದು ಬಹಳ ಹಳೆಯ ವಾದ . ಹೀಗಾಗಿ ಇಸ್ರೇಲ್ ಸದಾ ಎಚ್ಚರದಿಂದ ಇರಬೇಕಾದ ಪರಿಸ್ಥಿತಿಯಲ್ಲಿದೆ . ಸದಾ ಒಂದಲ್ಲ ಒಂದು ಆಕ್ರಮಣಗಳಿಗೆ ಇಸ್ರೇಲ್ ಗುರಿಯಾಗುತ್ತಲೇ ಇರುತ್ತದೆ . ಇಸ್ರೇಲ್ ಗೆ ನೀವು ಭೇಟಿ ಕೊಟ್ಟಿದ್ದೆ ಆದರೆ ಅಲ್ಲಿ ಅಘೋಷಿತ ಯುದ್ಧದ ಪರಿಸರ ಇರುವುದು ನಿಮ್ಮ ಅರಿವಿಗೆ ಬಂದಿತು . ಹಾಗೆಂದು ಜನ ಭಯಭೀತರಾಗಿದ್ದಾರೆ ಎಂದುಕೊಂಡರೆ ಅದು ತಪ್ಪು . ಜನ ಸಾಮಾನ್ಯ ರೀತಿಯಲ್ಲಿ ತಮ್ಮ ಜೀವನ ನೆಡೆಸುತ್ತಾ ಇರುತ್ತಾರೆ . ಜೋರಾಗಿ ಸೈರನ್ ಕೂಗುತ್ತದೆ . ಆ ಸೈರನ್ ಯುದ್ಧದ ಅಥವಾ ಆಪತ್ತು ಎನ್ನುವ ಸಂಕೇತ . ಜನ ಇಂತಹ ಸೈರನ್ ಗೆ ಹೊಂದಿಕೊಂಡಿದ್ದಾರೆ . ಅಲ್ಲಿ ಪ್ಯಾನಿಕ್ ಅನ್ನುವುದು ಇಲ್ಲ .ನಿಮ್ಮ ಪಕ್ಕದಲ್ಲಿ ಬೀಚ್ ನಲ್ಲಿ ಮಲಗಿದ್ದ ಪುರುಷ ಅಥವಾ ಮಹಿಳೆ ಕೆಲವು ನಿಮಿಷಗಳಲ್ಲಿ ಸೈನಿಕರಾಗಿ ಬದಲಾಗುತ್ತಾರೆ . ಪ್ರವಾಸಿಗನಿಗೆ ಕೀಪ್ ಯುವರ್ ಕೂಲ್ ಎಲ್ಲಾ ಕಂಟ್ರೋಲ್ ನಲ್ಲಿದೆ ಎನ್ನುವ ತಣ್ಣನೆಯ ಭಾವನೆ ನೀಡುತ್ತಾರೆ .
ರೋತ್ಸ್ ಚೈಲ್ಡ್ ಎನ್ನುವ ಯಹೂದಿ ಸಂಸ್ಥೆ ಮೂಲವಾಗಿ ಜರ್ಮನಿ ಫ್ರಾನ್ಸ್ ಮತ್ತು ಇಂಗ್ಲೆಂಡ್ ನಲ್ಲಿ ಬಹಳ ಹಿಡಿತ ಹೊಂದಿದೆ . ಆರ್ಥಿಕ ವಲಯದಲ್ಲಿ ರೋತ್ಸ್ ಚೈಲ್ಡ್ ಎನ್ನುವುದು ಎಷ್ಟು ಪ್ರಭಲ ಸಂಸ್ಥೆಎಂದರೆ ಜಗತ್ತಿನ ಹಿರಿಯಣ್ಣ ಅಮೇರಿಕಾ ದ ಪ್ರೆಸಿಡೆಂಟ್ ಯಾರಾಗ ಬೇಕು ಎನ್ನುವುದನ್ನ ಕೂಡ ನಿರ್ಧರಿಸುವಷ್ಟು , ಬಹುತೇಕ ಎಲ್ಲಾ ಮುಖ್ಯ ದೇಶಗಳ ಸೆಂಟ್ರಲ್ ಬ್ಯಾಂಕ್ ನಲ್ಲಿ ಇವರು ಪರೋಕ್ಷ ಅಥವಾ ಅಪರೋಕ್ಷವಾಗಿ ಹಿಡಿತ ಹೊಂದಿದ್ದಾರೆ ಎನ್ನುವುದು ಆರ್ಥಿಕವಲಯದಲ್ಲಿ ಆಗಾಗ್ಗೆ ಪಿಸುಗುಡುವ ವಿಷಯ . ಬೆಂಕಿಯಿಲ್ಲದೆ ಖಾಲಿ ಹೊಗೆ ಹೇಗೆ ತಾನೇ ಬಂದಿತು ? ಹೀಗಾಗಿ ಅಮೇರಿಕಾ ಒಂದೇ ಅಲ್ಲದೆ ಜಗತ್ತಿನ ಮುಖ್ಯ ದೇಶಗಳ ಹಣಕಾಸು ಆಟವನ್ನ ನಿಯಂತ್ರಿಸುವುದು ರೋತ್ಸ್ ಚೈಲ್ಡ್ ಎನ್ನುವ ಯಹೂದಿ ಸಂಸ್ಥೆ .ಇಂತಹ ಯಹೂದಿಗಳಿಗೆ ಭಾರತವೆಂದರೆ ಅತೀವ ಪ್ರೀತಿ. ಹೀಗಾಗಿ ಭಾರತದ ಮೇಲೆ ಆಕ್ರಮಣವಾದಾಗಲೆಲ್ಲಾ ಅವರು ನಮಗೆ ಬೆಂಬಲ ಸೂಚಿಸುತ್ತಾ ಬಂದಿದ್ದಾರೆ.
ಗಮನಿಸಿ ಇಷ್ಟು ಸಹಾಯ ಮಾಡುವ ರಷ್ಯಾ ಮತ್ತು ಇಸ್ರೇಲ್ ಗೆ ನಾವು ನೇರವಾಗಿ ಇಂದಿಗೂ ಬೆಂಬಲ ಸೂಚಿಸಿಲ್ಲ. ರಷ್ಯಾ ಮತ್ತು ಉಕ್ರೈನ್ ನಡುವಿನ ಯುದ್ದವಾದಾಗ ಭಾರತ ತಟಸ್ಥವಾಗಿ ಉಳಿದುಕೊಂಡಿತು. ಮೀಡಿಯಾ ಮುಂದೆ ಸ್ವತಃ ಮೋದಿಯವರು ಇದು ಯುದ್ಧದ ಸಮಯವಲ್ಲ ಎಂದು ಹೇಳಿಕೆ ನೀಡಿದರು. ಅಮೇರಿಕಾ ಬೇಡ ಎಂದರೂ ರಷ್ಯಾದಿಂದ ನಾವು ತೈಲ ಕೊಂಡದ್ದು ಬಿಟ್ಟರೆ ನಾವು ಅವರಿಗೆ ಇನ್ನ್ಯಾವ ರೀತಿಯ ಸಹಾಯವನ್ನೂ ಬಾಯಿಮಾತಿಗೂ ಮಾಡಲಿಲ್ಲ. ಇನ್ನು ಇಸ್ರೇಲ್ ಮತ್ತು ಘಾಸಾದಲ್ಲಿನ ಹಮಾಸ್ ವಿರುದ್ದದ ಯುದ್ಧದಲ್ಲಿ ಕೂಡ ನಾವು ಇಸ್ರೇಲ್ ಪರ ಮಾತನಾಡದೆ ಸುಮ್ಮನೆ ಕುಳಿತೆವು. ಆದರೆ ಗಮನಿಸಿ ಈ ಎರೆಡೂ ದೇಶಗಳು ಭಾರತದ ಈ ನಡೆಯನ್ನು ಮನಸ್ಸಿನಲ್ಲಿ ಇಟ್ಟು ಕೊಳ್ಳದೆ ನಮ್ಮ ಕಷ್ಟದ ಸಮಯದಲ್ಲಿ ನಮಗೆ ಸಹಾಯ ಹಸ್ತ ಚಾಚಿವೆ. ಇಸ್ರೇಲ್ ಈ ವಿಷಯದಲ್ಲಿ ಸದಾ ಒಂದು ಹೆಜ್ಜೆ ಮುಂದೆ. ಭಾರತ ಬೆಳಗಿನ ೧:೪೬ ರಲ್ಲಿ ಪಾಕಿಸ್ತಾನದ ಮೇಲೆ ದಾಳಿ ಮಾಡುತ್ತೆ , ನೀವು ನಂಬುವುದಿಲ್ಲ ಬೆಳಗಿನ ೧:೪೭ ಕ್ಕೆ ಇಸ್ರೇಲ್ ನಾವು ಭಾರತದೊಂದಿಗೆ ಇದ್ದೇವೆ ಎಂದು ಟ್ವೀಟ್ ಮಾಡುತ್ತದೆ. ಅವರಿಗೆ ನಮ್ಮ ಪರ ನಿಲ್ಲಲು ಒಂದು ನಿಮಷವೂ ಬೇಡ. ಅವರು ಸದಾ ನಮ್ಮೊಂದಿಗೆ ಇದ್ದಾರೆ. ಆದರೆ ನಾವು ? ಜಾಗತಿಕ ಮಟ್ಟದಲ್ಲಿ ಎಲ್ಲಾ ದೇಶಗಳು ಕೂಡ ತಮ್ಮ ಶಕ್ತ್ಯಾನುಸಾರ ದ್ವಿಮುಖ ನೀತಿಯನ್ನು ಅನುಸರಿಸುತ್ತವೆ. ಆದರೆ ರಷ್ಯಾ ಮತ್ತು ಇಸ್ರೇಲ್ ದೇಶಗಳು ಸದಾ ನಮ್ಮೊಂದಿಗೆ ಏಕಮುಖ ನೀತಿಯನ್ನು ಪ್ರದರ್ಶಿಸಿವೆ. ಇಂತಹ ಮಿತ್ರ ದೇಶಗಳ ಸಂಕಷ್ಟ ಸಮಯದಲ್ಲಿ ನಾವು ನಿಮ್ಮೊಂದಿಗೆ ಇದ್ದೇವೆ ಎನ್ನುವ ದಾಷ್ಟಿಕತೆ ಭಾರತ ಬೆಳೆಸಿಕೊಳ್ಳಬೇಕಿದೆ. ಈ ನೈತಿಕ ಬೆಂಬಲ ನೀಡಿದರೆ ಸಾಕು. ಉಳಿದಂತೆ ರಷ್ಯಾ ಮತ್ತು ಇಸ್ರೇಲ್ ಎರಡೂ ತಮ್ಮ ವಿರುದ್ಧ ನಿಂತವರನ್ನು ಸದೆ ಬಡಿಯುವ ಶಕ್ತಿಯನ್ನು ಹೊಂದಿವೆ.
ಶೀತಲ ಸಮರದಲ್ಲಿ ರಷ್ಯಾವನ್ನು ಛಿದ್ರ ಮಾಡಿದ ಅಮೆರಿಕಾದ ಪಾರುಪತ್ಯ ಬಹಳ ದಿನ ನಡೆಯುವುದಿಲ್ಲ. ರಷ್ಯಾ ಅಂದಿನ ದಿನದ ಕುಸಿತವನ್ನು ಸಹಿಸಿಕೊಂಡು ಅದನ್ನು ಮರೆತು ಬಹುದೂರ ಸಾಗಿ ಬಂದಿದೆ. ತನ್ನ ಹಿಂದಿನ ಶಕ್ತಿಯನ್ನು ಅದು ಮರಳಿ ಪಡೆಯುವ ದಾರಿಯಲ್ಲಿದೆ. ಇನ್ನು ಇಸ್ರೇಲ್ ಎನ್ನುವ ದೇಶ ಭೂಪಟದಲ್ಲೇ ಇರಲಿಲ್ಲ. ಮೇ ೧೪,೧೯೪೮ ರಂದು ಹೊಸ ದೇಶವಾಗಿ ಉದಯಿಸಿದೆ. ವಿಸ್ತೀರ್ಣದಲ್ಲಿ ನಮ್ಮ ಮಿಝೋರಾಂ ರಾಜ್ಯಕ್ಕಿಂತ ಸ್ವಲ್ಪ ಕಡಿಮೆ ಹೊಂದಿರುವ ಇಸ್ರೇಲ್ ಗೌರವದಲ್ಲಿ ಮಾತ್ರ ಜಗತ್ತನ್ನ ಆಕ್ರಮಿಸಿದೆ . ಅಮೇರಿಕಾ ದ ಸಂಸತ್ತು , ಅಮೆರಿಕಾದ ಮೀಡಿಯಾ ಹೌಸ್ , ಅಮೆರಿಕಾದ ಬಹುಪಾಲು ವ್ಯಾಪಾರ ಇಸ್ರೇಲ್ ಯಹೂದಿಗಳ ಕೈಲಿದೆ . ಅಮೇರಿಕಾದ ಮೀಡಿಯಾ ಹೌಸ್ ಗಳಲ್ಲಿ ೯೦ ಕ್ಕೂ ಅಧಿಕ ಇಸ್ರೇಲಿಗಳ ಆಡಳಿತದಲ್ಲಿದೆ. ಹೀಗಾಗಿ ಇಸ್ರೇಲಿಗರಿಗೆ ನಮ್ಮಿಂದ ಹಣಕಾಸು ಅಥವಾ ತಂತ್ರಜ್ಞಾನದ ಸಹಾಯ ಬೇಕಿಲ್ಲ.
ನವಭಾರತವಿದು ಎಂದು ಹೆಮ್ಮೆಯಿಂದ ಹೇಳುವ ನಾವು ಈ ವರ್ಷದಿಂದಾದರೂ ನಮ್ಮೊದಿಂಗೆ ನಿಂತವರೊಂದಿಗೆ ನಾವು ನಿಲ್ಲುತ್ತೇವೆ ಎನ್ನುವ ಮನಸ್ಥಿತಿ ಬೆಳೆಸಿಕೊಳ್ಳದೆ ಹೋದರೆ , ತಟಸ್ಥವಾಗಿ ಉಳಿದು ಕೊಳ್ಳುವ ಹಳೆಯ ಚಾಳಿಯನ್ನು ಮುಂದುವರೆಸಿದರೆ ರಷ್ಯಾ ಮತ್ತು ಇಸ್ರೇಲ್ ಗಳು ಕೂಡ ಮನಸ್ಸು ಬದಲಿಸಬಹುದು. ಇಂತಹ ಎರಡು ಪ್ರಬಲ ರಾಷ್ಟ್ರಗಳು ಭಾರತದ ಬೆನ್ನಿಗಿದೆ ಎನ್ನುವುದು ಸುಕೃತ. ನಾವು ಅದನ್ನು ಗೌರವಿಸಬೇಕು. ಅವರ ಸಂಕಷ್ಟದಲ್ಲೂ ಜೊತೆಯಾಗಬೇಕು. ಒನ್ ವೇ ಪ್ರೀತಿ ಬಹುಕಾಲ ಬಾಳುವುದಿಲ್ಲ ಎನ್ನುವ ಪರಿಜ್ಞಾನ ನಮ್ಮ ಕೇಂದ್ರ ಸರಕಾರಕ್ಕೆ ಬೇಗ ಬರಲಿ.
ಇದನ್ನೂ ಓದಿ: Rangaswamy Mookanahalli Column: ವಿವಿಧತೆಯಲ್ಲಿ ಏಕತೆ ಎನ್ನುವ ಮಾತು ಸುಳ್ಳಾಗದಿರಲಿ !