ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Suhas Shetty Murder: ಸುಹಾಸ್‌ ಶೆಟ್ಟಿ ಕೊಲೆ; ಸೋಶಿಯಲ್‌ ಮೀಡಿಯಾದಲ್ಲೇ ಟಾರ್ಗೆಟ್‌ ಫಿಕ್ಸ್‌ ಮಾಡಿದ್ದ ಹಂತಕರು!

ಮಾರ್ಚ್ ಅಂತ್ಯದಲ್ಲೇ ಸುಹಾಸ್ ಶೆಟ್ಟಿಯ (Suhas Shetty Murder Case) ತಲೆ ಉರುಳಿಸಲು ಹಂತಕರು ಪ್ಲಾನ್ ಮಾಡಿದ್ದರು. ಹಂತಕರು ಸುಹಾಸ್​ ಫೋಟೋ ಸಹಿತ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ ಹಾಕಿ ಟಾರ್ಗೆಟ್ ಫಿಕ್ಸ್ ಮಾಡಿದ್ದರಲ್ಲದೆ, ಅದನ್ನು ಸ್ವತಃ ಸುಹಾಸ್‌ಗೆ ಟ್ಯಾಗ್ ಮಾಡಿದ್ದರು.

ಸುಹಾಸ್‌ ಕೊಲೆ; ಸೋಶಿಯಲ್‌ ಮೀಡಿಯಾದಲ್ಲೇ ಹಂತಕರಿಂದ ಟಾರ್ಗೆಟ್‌ ಫಿಕ್ಸ್‌!

ಮೃತ ಸುಹಾಸ್‌ ಶೆಟ್ಟಿ

ಹರೀಶ್‌ ಕೇರ ಹರೀಶ್‌ ಕೇರ May 2, 2025 7:51 AM

ಮಂಗಳೂರು: ಮಂಗಳೂರಿನಲ್ಲಿ (Mangaluru news) ಹಿಂದೂ ಕಾರ್ಯಕರ್ತನ ಹತ್ಯೆಗೆ (Hindu Activist) ಭಾರೀ ಆಕ್ರೋಶ ವ್ಯಕ್ತವಾಗ್ತಿದೆ. ನಡು ರಸ್ತೆಯಲ್ಲೇ ಬಜರಂಗ ದಳ (Bajaranga dal) ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು (Suhas Shetty murder case) ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಕೊಲೆಗೈದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ತನಿಖೆ ವೇಳೆ ಕೊಲೆ ಕೇಸ್​ಗೆ ಸಂಬಂಧಿಸಿದ ಕೆಲವು ಸ್ಫೋಟಕ ವಿಚಾರಗಳು ಬಯಲಾಗುತ್ತಿವೆ. ದುಷ್ಕರ್ಮಿಗಳು ಸೋಶಿಯಲ್ ಮೀಡಿಯಾದಲ್ಲೇ ಸುಹಾಸ್‌ ಶೆಟ್ಟಿಗೆ ಪ್ರತೀಕಾರದ ಎಚ್ಚರಿಕೆ ಕೊಟ್ಟಿದ್ದರು ಎಂದು ಗೊತ್ತಾಗಿದೆ.

ಮಾರ್ಚ್ 31, 2025ರಂದು ಸುಹಾಸ್ ಶೆಟ್ಟಿ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು. ಮಾರ್ಚ್ ಅಂತ್ಯದಲ್ಲೇ ಸುಹಾಸ್ ಶೆಟ್ಟಿಯ ತಲೆ ಉರುಳಿಸಲು ಹಂತಕರು ಪ್ಲಾನ್ ಮಾಡಿದ್ದರು. ಹಂತಕರು ಸುಹಾಸ್​ ಫೋಟೋ ಸಹಿತ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ ಹಾಕಿ ಟಾರ್ಗೆಟ್ ಫಿಕ್ಸ್ ಮಾಡಿದ್ದರಲ್ಲದೆ, ಅದನ್ನು ಸ್ವತಃ ಸುಹಾಸ್‌ಗೆ ಟ್ಯಾಗ್ ಮಾಡಿದ್ದರು. ಆ ಟ್ಯಾಗ್ ಮಾಡಿದ ವಿಡಿಯೋವನ್ನು ಸುಹಾಸ್ ಶೆಟ್ಟಿ ಡೌನ್ ಲೋಡ್ ಮಾಡಿಕೊಂಡಿದ್ದ ಎನ್ನಲಾಗುತ್ತಿದೆ.

ಟಾರ್ಗೆಟ್ ಕಿಲ್ಲರ್ ಇನ್‌ಸ್ಟಾಗ್ರಾಂ ಪೇಜ್‌

ಟಾರ್ಗೆಟ್ ಕಿಲ್ಲರ್ ಹೆಸರಿನ ಇನ್ಸ್ಟಾಗ್ರಾಂ ಪೇಜ್​​ ಕೂಡ ಕ್ರಿಯೇಟ್ ಮಾಡಿದ್ದ ದುಷ್ಕರ್ಮಿಗಳು, ಸುಹಾಸ್‌ಗೆ ಟಾರ್ಗೆಟ್ ಫಿಕ್ಸ್ ಮಾಡಿರುವುದಾಗಿಯೂ ಹೇಳಿದ್ದರು. 2022ರ ಜುಲೈ 28ರಂದು ಹತ್ಯೆಯಾದ ಸುರತ್ಕಲ್‌ನ ಫಾಜೀಲ್‌ನ ಫೋಟೋ ಜೊತೆಗೆ ಸುಹಾಸ್‌ನ ಫೋಟೋ ಹಾಕಿ "ರಿವೇಂಜ್ ಸೂನ್" ಎಂದು ಪೋಸ್ಟ್ ಮಾಡಿದ್ದರು. ಮಂಗಳೂರಿನಲ್ಲಿ ನಡೆದ ಬಶೀರ್ ಹತ್ಯೆ ಆರೋಪಿಯ ರಿವೇಂಜ್ ಬಗ್ಗೆಯೂ ಪೋಸ್ಟ್ ಮಾಡಿದ್ದರು. 2018ರ ಜನವರಿ 3ರಂದು ನಡೆದಿದ್ದ ಬಶೀರ್ ಹತ್ಯೆ ಪ್ರಕರಣದಲ್ಲಿ ಬಶೀರ್ ಹತ್ಯೆ ಆರೋಪಿ ಶ್ರೀಜಿತ್ ಫೋಟೋ ಕೂಡ ಬಳಸಿ "ರಿವೇಂಜ್ ಸೂನ್" ಎಂದು ಪೋಸ್ಟ್ ಮಾಡಿದ್ದರು. ಫಾಜಿಲ್ ಹತ್ಯೆಗೆ ಪ್ರತೀಕಾರವಾಗಿ ಹಂತಕರು ಸುಹಾಸಿನ ಹತ್ಯೆ ಮಾಡಿದ್ದಾರೆ ಎನ್ನುವ ಮಾಹಿತಿ ಇದುವರೆಗೆ ಗೊತ್ತಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಬಂದ್​​

ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ಭಾರೀ ಆಕ್ರೋಶ ವ್ಯಕ್ತವಾಗ್ತಿದೆ. ಇಂದು ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಬಂದ್​​ಗೆ ಕರೆ ನೀಡಿದೆ. ಬಂದ್ ಕರೆ ನೀಡಿರುವ ಹಿನ್ನೆಲೆ, ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ BNS ಕಲಂ 163 ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಆಗಿದೆ. ಈ ನಿಷೇಧಾಜ್ಞೆ ಮುಂಜಾನೆ 6 ಗಂಟೆಯಿಂದ ಮೇ 6ರ ಮುಂಜಾನೆ 6 ಗಂಟೆ ವರೆಗೆ ನಾಲ್ಕು ದಿನಗಳ ಕಾಲ ಜಾರಿಯಲ್ಲಿರಲಿದೆ.

ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಇವರ ಆದೇಶದಂತೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಹತ್ಯೆ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ ಗೆ ಕರೆ ನೀಡಿರುವ ವಿಶ್ವ ಹಿಂದೂ ಪರಿಷತ್, ಪ್ರತಿಭಟನೆ ಕೂಡ ನಡೆಸಲಿದೆ. ಮಂಗಳೂರು ನಗರದಲ್ಲಿ ಖಾಸಗಿ ಬಸ್ ಸಂಚಾರ ಬಂದ್ ಮಾಡಲಾಗಿದೆ. ಖಾಸಗಿ ಬಸ್​​ಗಳು ರಸ್ತೆಗೆ ಇಳಿಯುವುದಿಲ್ಲ.

ಮೃತ ಸುಹಾಸ್ ಶೆಟ್ಟಿ ಅಂತ್ಯಕ್ರಿಯೆ ಇಂದು ನಡೆಯಲಿದೆ. ಸುಹಾಸ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಕಾರಿಂಜದ ಪುಳಿಮಜಲು ಗ್ರಾಮದವರಾಗಿದ್ದಾರೆ. ಮಂಗಳೂರಿನಿಂದ ಪುಳಿಮಜಲು ತನಕ ಜಾಥಾ ಮೂಲಕ ಮೃತದೇಹ ಮೆರವಣಿಗೆಗೆ ಕಾರ್ಯಕರ್ತರು ಒತ್ತಾಯ ಮಾಡಿದ್ದಾರೆ. ಬಂದ್ ಗೆ ಕರೆ ನೀಡಿರುವ ಹಿನ್ನೆಲೆ ಇಂದು ಮಂಗಳೂರಿನ ಹೋಟೆಲ್, ಅಂಗಡಿ- ಮುಂಗಟ್ಟುಗಳೂ ಬಂದ್ ಆಗಿವೆ.

ಇದನ್ನೂ ಓದಿ: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯ ಭೀಕರ ದೃಶ್ಯ ವೈರಲ್‌; ಇಲ್ಲಿದೆ ಎದೆ ನಡುಗಿಸುವ ವಿಡಿಯೊ