Vishwavani Award: ರಷ್ಯಾದಲ್ಲಿ ಮೊಳಗಿದ ವಿಶ್ವವಾಣಿ ಕಹಳೆ: ಕನ್ನಡ ನಾಡಿನ 21 ಸಾಧಕರಿಗೆ ಮಾಸ್ಕೋದಲ್ಲಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಪ್ರದಾನ
ಭಾರತ ಮತ್ತು ರಷ್ಯಾದ ಗಣ್ಯರ ಸಮ್ಮುಖದಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಸಮಾಜ ಸೇವೆ, ಕೃಷಿ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಚಿತ್ರರಂಗ, ಕೈಗಾರಿಕೋದ್ಯಮ, ಪ್ರವಾಸೋದ್ಯಮ, ಹೋಟೆಲ್ ಉದ್ಯಮ ಮುಂತಾದ ಹಲವು ರಂಗಗಳಲ್ಲಿ ತಮ್ಮಷ್ಟಕ್ಕೆ ತಾವೇ ಸಾಧನೆ ಗೈಯುತ್ತಿರುವವರನ್ನು ಗುರುತಿಸಿ ಅವರಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಗೌರವಿಸಿದ್ದು ‘ವಿಶ್ವವಾಣಿ’ಯ ವಿಶೇಷವಾಗಿತ್ತು.

ರಷ್ಯಾದ ಮಾಸ್ಕೋದಲ್ಲಿ ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಪ್ರದಾನ

ಪ್ರತ್ಯಕ್ಷ ವರದಿ : ರಾಜು ಅಡಕಳ್ಳಿ, ಮಾಸ್ಕೋ
ರಷ್ಯಾ. ಸಾಧಕರ ಸ್ವರ್ಗ. ಇದು ಜಗತ್ತಿನ ಪ್ರಬಲ ರಾಷ್ಟ್ರಗಳಲ್ಲೊಂದು. ಶಿಸ್ತು ಸ್ವಚ್ಛತೆಯಲ್ಲೂ ಮಾದರಿ, ಇಲ್ಲಿ ಕಳೆದ ಐದು ಶತಮಾನಗಳಲ್ಲಿ ನಡೆದ ಕ್ರಾಂತಿಗಳು ಒಂದಲ್ಲಾ ಎರಡಲ್ಲ. ಸಾಹಿತ್ಯ ಸಂಸ್ಕೃತಿ, ಚರಿತ್ರೆ, ಹೋರಾಟ, ಯುದ್ಧಗಳಲ್ಲೂ ಈ ದೇಶ ಮುಂದು. ಇಂಥ ಐತಿಹಾಸಿಕ ಸಾಧನೆಗಳ ನೆಲದಲ್ಲಿ ‘ವಿಶ್ವವಾಣಿ’ ಏರ್ಪಡಿಸಿದ್ದ ಗ್ಲೋಬಲ್ ಅಚೀವರ್ಸ್ ಸಮ್ಮೇಳನದಲ್ಲಿ ಕನ್ನಡ ನಾಡಿನ 21 ಸಾಧಕರಿಗೆ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿಯೊಂದಿಗೆ ಪುರಸ್ಕರಿಸಿದ್ದು ಅರ್ಥಪೂರ್ಣವಾಗಿತ್ತು.
ರಷ್ಯಾದ ರಾಜಧಾನಿ ಮಾಸ್ಕೋ ವಿಶ್ವದ ಸುಂದರ ನಗರಗಳಲ್ಲೊಂದು. ಇಂಥ ಸೌಂದರ್ಯದ ತವರು ಮನೆಯಲ್ಲಿ ಭಾರತ ಮತ್ತು ರಷ್ಯಾದ ಗಣ್ಯರ ಸಮ್ಮುಖದಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಸಮಾಜ ಸೇವೆ, ಕೃಷಿ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಚಿತ್ರರಂಗ, ಕೈಗಾರಿಕೋದ್ಯಮ, ಪ್ರವಾಸೋದ್ಯಮ, ಹೋಟೆಲ್ ಉದ್ಯಮ ಮುಂತಾದ ಹಲವು ರಂಗಗಳಲ್ಲಿ ತಮ್ಮಷ್ಟಕ್ಕೆ ತಾವೇ ಸಾಧನೆ ಗೈಯುತ್ತಿರುವವರನ್ನು ಗುರುತಿಸಿ ಅವರಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಗೌರವಿಸಿದ್ದು ‘ವಿಶ್ವವಾಣಿ’ಯ ವಿಶೇಷವಾಗಿತ್ತು.

ಬೆಂಗಳೂರಿನಿಂದ ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟರ ನೇತೃತ್ವದಲ್ಲಿ ರಷ್ಯಾಕ್ಕೆ ಆಗಮಿಸಿದ ವಿಶೇಷ ನಿಯೋಗವು, ಮಾಸ್ಕೋದ ವಿವಿಧ ಐತಿಹಾಸಿಕ, ಪಾರಂಪರಿಕ, ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದಲ್ಲದೆ, ಗ್ಲೋಬಲ್ ಅಚೀವರ್ಸ್ ಸಮ್ಮೇಳನದಲ್ಲಿ ಸಕ್ರಿಯವಾಗಿ ಭಾಗವಹಿಸಿತು. ಈ ಸಂದರ್ಭದಲ್ಲಿ ರಷ್ಯಾದ ಸಚಿವರು, ರಾಜತಾಂತ್ರಿಕ ಅಧಿಕಾರಿಗಳು ಮತ್ತು ಅನಿವಾಸಿ ಭಾರತೀಯರು ಕೂಡಿಕೊಂಡಿದ್ದು ಸಮಾರಂಭಕ್ಕೆ ಶೋಭೆ ತಂದಿತ್ತು. ಎರಡೂ ರಾಷ್ಟ್ರಗಳ ರಾಷ್ಟ್ರಗೀತೆಯೊಂದಿಗೆ, ಗಣೇಶನ ಸ್ತುತಿಯೊಂದಿಗೆ ಈ ಸಮಾರಂಭ ಪ್ರಾರಂಭವಾಗಿದ್ದಲ್ಲದೇ, ಪರಿಸರ ಪ್ರೀತಿಯ ದ್ಯೋತಕವಾಗಿ ಗಿಡಕ್ಕೆ ನೀರು ಹನಿಸುವ ಪ್ರಕ್ರಿಯೆಯೊಂದಿಗೆ ಚಾಲನೆ ನೀಡಿದ್ದು ಗಮನಾರ್ಹವಾಗಿತ್ತು.

ಸ್ವಾತಂತ್ರ್ಯ ಹೋರಾಟದಲ್ಲಿ ಮೈಸೂರು ಸಂಸ್ಥಾನದ ಕೊಡುಗೆ ಅಪಾರ
ಮುಖ್ಯ ಅತಿಥಿಯಾಗಿದ್ದ ರಷ್ಯಾ ಒಕ್ಕೂಟದ ಡೆಪ್ಯೂಟಿ ಆಫ್ ದಿ ಡುಮಾ ಸ್ಟೇಟ್ ಗ್ಲಾಸ್ಕೊವಾ ಅಂಜೇಲಿಕ ಇಗೋರೆವ್ ಅವರು ಮಾತನಾಡಿ, ಬ್ರಿಟಿಷರ ವಿರುದ್ಧ ಭಾರತದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ಅನನ್ಯವಾಗಿತ್ತು. ಆಗ ಮೈಸೂರು ಸಂಸ್ಥಾನ ಸ್ಥಳೀಯ ಪ್ರಜೆಗಳ ಹಿತಾಸಕ್ತಿ ಕಾಪಾಡಲು ಕೈಗೊಂಡಿದ್ದ ಕ್ರಮಗಳು ಸ್ಮರಣೀಯ. ಸ್ವಾತಂತ್ರ್ಯ ಹೋರಾಟದಲ್ಲಿ ಆಗಿನ ಮೈಸೂರು ರಾಜ್ಯದ ಕೊಡುಗೆ ಅನುಪಮವಾಗಿದೆ ಎಂದು ನುಡಿದರು.

ಹಿಂದೂ ಸಮುದಾಯದ ಚಟುವಟಿಕೆಗಳಿಗೆ ಹೊಸ ಸಂಚಲನ
ಸಮಾರಂಭದ ಗೌರವ ಉಪಸ್ಥಿತಿ ವಹಿಸಿದ್ದ ಮಾಸ್ಕೋ ವಿಶ್ವವಿದ್ಯಾಲಯದ ಏಷ್ಯಾ ಮತ್ತು ಆಫ್ರಿಕಾ ಅಧ್ಯಯನ ವಿಭಾಗದ ನಿರ್ದೇಶಕ ಅಲೆಕ್ಸಿ ಮಾಸ್ಲೋವ್ ಅವರು, ಮಾಸ್ಕೋದಲ್ಲಿ ಈಗ ಹಿಂದೂ ಸಮುದಾಯದ ಚಟುವಟಿಕೆಗಳಿಗೆ ಹೊಸ ಸಂಚಲನ ಸಿಗುತ್ತಿದೆ. ಇದೇ ಮೊದಲ ಬಾರಿಗೆ ಹಿಂದೂಗಳಿಗೆ ಪೂಜೆ ಪುನಸ್ಕಾರಗಳಿಗಾಗಿ ಮಂದಿರ ನಿರ್ಮಿಸುವ ಪ್ರಯತ್ನ ನಡೆದಿದೆ. ಇದಕ್ಕೆ ಇಲ್ಲಿಯ ಸರಕಾರದಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿರುವುದರಿಂದ, ಇದಕ್ಕೆ ಪೂರಕವಾಗಿ ಭೂಮಿ ಆಯ್ಕೆ ಮಾಡಿ, ಸಂಬಂಧ ಪಟ್ಟ ಕಾಗದ ಪತ್ರಗಳನ್ನು ಸಿದ್ಧ ಪಡಿಸುವ ತಯಾರಿ ನಡೆದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ವಿಶ್ವೇಶ್ವರ ಭಟ್ಟರ ಕಾರ್ಯಕ್ಕೆ ಮೆಚ್ಚುಗೆ
ಮಾಜಿ ಸಚಿವ ಆರಗ ಜ್ಞಾನೇಂದ್ರ, ಬಿ.ಸಿ ಪಾಟೀಲ್, ಪ್ರಮೋದ್ ಮಧ್ವರಾಜ್, ಶಾಸಕ ಸಿಮೆಂಟ್ ಮಂಜು ಅವರು ಮಾತನಾಡಿ, ವಿವಿಧ ದೇಶಗಳಲ್ಲಿ ಈ ರೀತಿ ಉತ್ತಮ ವೈಚಾರಿಕ ಮತ್ತು ಸಾಂಸ್ಕೃತಿಕ ಸಮ್ಮೇಳನಗಳನ್ನು ವ್ಯವಸ್ಥೆ ಮಾಡುವುದು ಸುಲಭವಲ್ಲ. ಈ ನಿಟ್ಟಿನಲ್ಲಿ ವಿಶ್ವವಾಣಿಯು ಹೊಸ ಪರಂಪರೆಗೆ ನಾಂದಿ ಹಾಡಿರುವುದು ಸ್ವಾಗತಾರ್ಹ. ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭಗಳನ್ನು ಏರ್ಪಡಿಸುವುದೇ ಈಗಿನ ಕಾಲದಲ್ಲಿ ಕಷ್ಟವಾಗಿದೆ. ಆದರೆ ಅತ್ಯಂತ ಯಶಸ್ವಿಯಾಗಿ ಬೇರೆ ಬೇರೆ ದೂರದ ದೇಶಗಳಲ್ಲಿ ಆಗಾಗ ಪ್ರಶಸ್ತಿ ಪ್ರದಾನ ಸಮಾರಂಭಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸುತ್ತಿರುವ ವಿಶ್ವೇಶ್ವರ ಭಟ್ಟರು ಅಭಿನಂದನಾರ್ಹರು ಎಂದು ಅವರು ಪ್ರಶಂಸಿಸಿದರು.

ಯುವ ಮುಖಂಡ ಹೂಡಿ ವಿಜಯ ಕುಮಾರ್ ಅವರೂ ತಮ್ಮ ಈ ಪ್ರವಾಸದ ಅನುಭವ ಹಂಚಿಕೊಂಡರು. ಪ್ರಶಸ್ತಿ ವಿಜೇತ ಮಹಿಳೆಯರ ಪರವಾಗಿ ಮಾತನಾಡಿದ ಪುಷ್ಪಲತಾ ಮಂಕಾಳ ವೈದ್ಯ ಅವರು, ಇಂದಿನ ಮಾಧ್ಯಮಗಳಲ್ಲಿ ಮಹಿಳೆಯರ ಸಮಸ್ಯೆಗಳಿಗೆ ಇನ್ನಷ್ಟು ಗಟ್ಟಿ ಧ್ವನಿಯ ಪ್ರಾತಿನಿಧ್ಯ ಸಿಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ವಿಶ್ವವಾಣಿಯ ಸಿ.ಇ.ಒ. ಚಿದಾನಂದ ಕಡಲಾಸ್ಕರ, ಹಿರಿಯ ಪತ್ರಕರ್ತ ರಾಜು ಅಡಕಳ್ಳಿ, ಯುವ ಉದ್ಯಮಿ ಸಿದ್ದೇಶ್ ಹಾರನಹಳ್ಳಿ, ಪ್ರತಿಭಾ ಮಂಜು ಉಪಸ್ಥಿತರಿದ್ದರು. ರಷ್ಯಾದಲ್ಲಿ ಪ್ರೊಫೆಸರ್ ಆಗಿರುವ ಸಾಗರ ತಾಲೂಕಿನ ರಘು ಜಾಣ ಅವರು ಭಾಗವಹಿಸಿದ್ದರು. ವಿಶ್ವವಾಣಿಯ ನಾಗಾರ್ಜುನ ವಂದಿಸಿದರು. ಥ್ರೋ ಬಾಲ್ ಪಟು ಸಂಪೂರ್ಣ ಹೆಗಡೆಯವರು ಕಾರ್ಯಕ್ರಮ ನಿರೂಪಿಸಿದರು. ಫನ್ ಸ್ಟೇ ಸಂಸ್ಥೆಯ ನಿತಿನ್ ಅಗರವಾಲ್, ಜಿ. ಆರ್. ಮಂಜುನಾಥ್ ಅವರು ಈ ಪ್ರವಾಸವನ್ನು ಸಂಯೋಜಿಸುವಲ್ಲಿ ನೆರವಾದರು. ರಷ್ಯಾದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಅನೇಕ ವಿದ್ಯಾರ್ಥಿ- ವಿದ್ಯಾಾರ್ಥಿನಿಯರೂ ವಿಶ್ವವಾಣಿಯ ಈ ಸಮಾರಂಭದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ವಿದ್ಯಾರ್ಥಿಗಳಿಗೆ ವಿದ್ಯಾನಿಧಿ
ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠ ಕೊಡುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪೋತ್ಸಾಹ ವಿದ್ಯಾನಿಧಿಯನ್ನು ರಷ್ಯಾದಲ್ಲಿ ಎಂಬಿಬಿಎಸ್ ಅಭ್ಯಾಸ ಮಾಡುತ್ತಿರುವ ದಾವಣಗೆರೆ ಜಿಲ್ಲೆಯ ಹನುಮಂತಪ್ಪ ಮತ್ತು ಆಶಾ ದಂಪತಿಯ ಪುತ್ರಿ ದಿವ್ಯಾ ಅವರಿಗೆ ವಿಶ್ವವಾಣಿ ಸಹಯೋಗದೊಂದಿಗೆ ಒಂದು ಲಕ್ಷ ರುಪಾಯಿ ಧನ ಸಹಾಯವನ್ನು ಈ ವೇದಿಕೆಯಲ್ಲಿ ವಿತರಿಸಲಾಯಿತು.

ಭಾರತ-ರಷ್ಯಾದ್ದು ಸುಮಧುರ ಬಾಂಧವ್ಯ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವೇಶ್ವರ ಭಟ್ ಅವರು, ರಷ್ಯಾ ಮತ್ತು ಭಾರತದ ನಡುವೆ ಸದಾ ಸುಮಧುರ ಬಾಂಧವ್ಯಗಳಿವೆ. ಈ ಉಭಯ ದೇಶಗಳ ನಡುವೆ ಬಿಕ್ಕಟ್ಟು ಉದ್ಭವವಾದ ಸಂದರ್ಭಗಳಿಲ್ಲ. ಕೆಲವು ರಾಷ್ಟ್ರಗಳಂತೆ ಭಾರತದ ಮೇಲೆ ದಂಡೆತ್ತಿ, ದಾಳಿಗೆ ಬರುವ ಚಾಳಿಯನ್ನು ರಷ್ಯಾ ಯಾವತ್ತೂ ತೋರಿಸಿಲ್ಲ. ಇದರಿಂದಾಗಿ ಎರಡು ದೇಶಗಳ ಭಾವನಾತ್ಮಕ ಸಂಬಂಧ ಹೆಚ್ಚಿದ್ದಲ್ಲದೇ, ತಂತ್ರಜ್ಞಾನ, ವಿಜ್ಞಾನ, ಮಿಲಿಟರಿ, ಇಂಧನ ಮುಂತಾದ ರಂಗಗಳಲ್ಲಿ ಪರಸ್ಪರ ಎರಡೂ ದೇಶಗಳಿಗೆ ಅನುಕೂಲವಾಗುವಂತಾಯಿತು. ದಾಸ್ತೋವಸ್ಕಿ, ಟಾಲ್‌ಸ್ಟಾಯ್ ಅವರಂಥ ರಷ್ಯಾದ ಲೇಖಕರು ಭಾರತದ ಓದುಗರ ಮೇಲೆಯೂ ಗಾಢ ಪ್ರಭಾವ ಬೀರಿದ್ದಾರೆ. ಹಾಗೆಯೇ ಭಾರತದ ಕಲೆ - ಸಂಸ್ಕೃತಿಗಳು ರಷ್ಯನ್ನರ ಮೇಲೆ ಪ್ರಭಾವ ಬೀರಿದ್ದನ್ನು ಗಮನಿಸಬಹುದು. ಈ ಎಲ್ಲಾ ಮಹತ್ವಗಳ ಹಿನ್ನಲೆಯಲ್ಲಿ ‘ವಿಶ್ವವಾಣಿ’ಯ 8ನೇ ಗ್ಲೋಬಲ್ ಅಚೀವರ್ಸ್ ಸಮ್ಮೇಳನವನ್ನು ಈ ಬಾರಿ ಮಾಸ್ಕೋದಲ್ಲಿ ಏರ್ಪಡಿಸಲಾಗಿದೆ ಎಂದು ಹೇಳಿದರು.

ವಿಶ್ವವಾಣಿಯಲ್ಲಿ ಸದಾ ಹೊಸತನ
ಸಮಾರಂಭದಲ್ಲಿ ಭೋವಿ ಗುರು ಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಾಮೀಜಿ ಅವರು ಮಾತನಾಡಿ, ವಿಶ್ವವಾಣಿಯನ್ನು ವಿಶ್ವೇಶ್ವರ ಭಟ್ಟರು ತಮ್ಮ ಪತ್ರಿಕೋದ್ಯಮದ ಆಳ ಅನುಭವದ ಭದ್ರ ಬುನಾದಿಯ ಮೇಲೆ ಕಟ್ಟಿ ಬೆಳೆಸಿದರು. ಭಟ್ಟರು ಇರುವಲ್ಲಿ ಹೊಸತನ ಇದ್ದೇ ಇರುತ್ತದೆ. ಮಾಸ್ಕೋದಲ್ಲಿ ಈಗ ನಡೆಯುತ್ತಿರುವ ಈ ಸಮಾರಂಭವು ಕೂಡ ವಿಶ್ವೇಶ್ವರ ಭಟ್ಟರ ಹೊಸತನದ ಕೊಡುಗೆ. ಕೇವಲ ಪತ್ರಿಕಾ ಚಟುವಟಿಕೆಗಳಿಗೆ ಮಾತ್ರ ತಮ್ಮ ಪತ್ರಿಕಾ ಸಂಸ್ಥೆಯನ್ನು ಸೀಮಿತಗೊಳಿಸದೇ, ಇಂಥ ಅಪರೂಪದ ಕಾರ್ಯಕ್ರಮಗಳನ್ನು ಬೇರೆ ಬೇರೆ ದೇಶಗಳಲ್ಲಿ ನಡೆಸುವ ಮೂಲಕ ಭಟ್ಟರು ತಮ್ಮ ಸಂಘಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ನಮ್ಮ ನಡುವೆ ಇರುವಂತಹ ಅನೇಕ ಸಾಧಕರನ್ನು ಗುರುತಿಸಿ, ಅವರನ್ನು ಹೀಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವಿಸುವುದರಿಂದ ಅವರ ಸಾಧನೆಗೆ ಇನ್ನೂ ಹೆಚ್ಚು ಸ್ಫೂರ್ತಿ ಬರುತ್ತದೆ, ಅಷ್ಟೇ ಅಲ್ಲ, ಇನ್ನೂ ಅನೇಕರಿಗೆ ಇದು ಮಾದರಿಯಾಗುತ್ತದೆ ಎಂದು ಶ್ಲಾಘಿಸಿದರು.

ಶ್ರೀ ಇಮ್ಮಡಿ ಸ್ವಾಮೀಜಿಯವರು ರಚಿಸಿದ ಕಾವ್ಯದ ತುಣುಕು
ವಿಶ್ವವಾಣಿ ಇದು ಸಾಧಕರ ಓಣಿ
ವಿಶ್ವವಾಣಿ ಇದು ಭಾವನೆಗಳ ಗಣಿ
ವಿಶ್ವವಾಣಿ ಇದು ಸತ್ಯದ ಧ್ವನಿ
ವಿಶ್ವವಾಣಿ ಇದು ಓದುಗ ಧಾರಿಣಿ
ವಿಶ್ವವಾಣಿ ಇದು ಅಂಕಣಕಾರರ ಉಗ್ರಾಣಿ
ವಿಶ್ವವಾಣಿ ಇದು ದಿನ ಪತ್ರಿಕಾ ಅಗ್ರಣಿ
ವಿಶ್ವವಾಣಿ ಇದು ಶ್ರೀ ಸಾಮಾನ್ಯನ ಕಣ್ಮಣಿ
ವಿಶ್ವವಾಣಿ ಇದು ವಿಶ್ವೇಶ್ವರರ ಪಾಣಿಗ್ರಹಣಿ
ವಿಶ್ವವಾಣಿ ಇದು ಸೀಮೊಲ್ಲಂತ ದಶ ಸಂವತ್ಸರಾಣಿ

ಭಾರತ ಮತ್ತು ರಷ್ಯಾ ಸಂಬಂಧವೆಂದರೆ ಅದು ರಕ್ತ ಸಂಬಂಧವನ್ನು ಮೀರಿದ ಭಾವನಾತ್ಮಕ ಸಂಬಂಧ. ಈ ರಷ್ಯಾ ನೆಲದಲ್ಲಿ ಭಾರತೀಯರ ಇಂಥ ಚಟುವಟಿಕೆಗಳನ್ನು ನಡೆಸುವುದರಿಂದ ಉಭಯ ದೇಶಗಳ ಜನರ ಮಧ್ಯೆ ಪ್ರೀತಿ ವಿಶ್ವಾಸ ಇನ್ನಷ್ಟು ಹೆಚ್ಚುತ್ತದೆ. ರಷ್ಯಾ ಕೂಡ ಅನೇಕ ಧರ್ಮಗಳಿಗೆ ಆಶ್ರಯ ನೀಡಿದೆ. ತನ್ನ ನೆಲದ ವೈಶಿಷ್ಟ್ಯ ಕಾಪಾಡಿಕೊಳ್ಳುವುದರ ಜತೆಗೆ ಜಗತ್ತಿನಲ್ಲಿಯೇ ಮಾದರಿ ರಾಷ್ಟ್ರವಾಗಿ ಬೆಳೆದಿದೆ. ಕನ್ನಡ ನಾಡಿನಿಂದ ಬಂದ ಈ ನಿಯೋಗಕ್ಕೆ ಇವುಗಳ ಪ್ರತ್ಯಕ್ಷ ದರ್ಶನ ಮಾಡಿಸಿದ ವಿಶ್ವವಾಣಿಯ ಪ್ರಯತ್ನ ನಿಜಕ್ಕೂ ಸಾರ್ಥಕ.
- ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಭೋವಿ ಗುರು ಪೀಠ

ಜ್ಞಾನ ಹೆಚ್ಚಾದರೆ ಅಹಂಕಾರ ಕಡಿಮೆಯಾಗಲಿದೆ
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕುಂಚಿಟಿಗ ಸಂಸ್ಥಾಾನದ ಜಗದ್ಗುರು ಶ್ರೀ ಶಾಂತವೀರ ಸ್ವಾಮೀಜಿ ಮಾತನಾಡಿ, ಮಾತನಾಡದೆ ಸಾಧನೆ ಮಾಡುವವರು ಸಮಾಜದಲ್ಲಿ ತುಂಬಾ ಸಕಾರಾತ್ಮಕ ಪರಿಣಾಮ ಬೀರುತ್ತಾರೆ. ಆದರೆ ಅವರ ಪ್ರಭಾವ ಹೆಚ್ಚು ಜನರನ್ನು ತಲುಪುವಂತಾಗಲು, ಅವರ ಸಾಧನೆಗಳನ್ನು ಅರ್ಥ ಮಾಡಿಸಲು ಇಂಥ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಜ್ಞಾನ ಜಾಸ್ತಿ ಆದರೆ ಅಹಂಕಾರ ಕಡಿಮೆಯಾಗಬೇಕು. ಹಣ ಜಾಸ್ತಿಯಾದರೆ ದಾನ ಧರ್ಮ ಹೆಚ್ಚಾಗಬೇಕು. ಈ ಪರಿಪಾಠ ವಿಶ್ವದಲ್ಲಿ ವ್ಯಾಪಿಸಿದರೆ ಶಾಂತಿ, ಸುಭಿಕ್ಷೆ ಹೆಚ್ಚಲು ಸಾಧ್ಯ. ಆದರೆ ಇಂದು ಈ ವಿಷಯಗಳು ತಲೆಕೆಳಗಾಗಿ ಜಗತ್ತಿನಾದ್ಯಂತ ಅನಾರೋಗ್ಯಕರ ಬೆಳವಣಿಗೆಗಳು ನಡೆಯುತ್ತಿದೆ. ನಮ್ಮಲ್ಲಿಯ ರಾಜಕಾರಣಿಗಳು ಉಳಿದವರಿಗೆ ಮೇಲ್ ಪಂಕ್ತಿ ಹಾಕಿಕೊಡುವಂತೆ ಅವರ ವರ್ತನೆ ಇರಬೇಕಿತ್ತು. ಆದರೆ ಸ್ವತಃ ದುರಾಡಳಿತ ದುಶ್ಚಟ ಭ್ರಷ್ಟಾಚಾರಗಳಿಗೆ ಈಡಾಗಿ ಭಾರತದ ಕೆಲವು ರಾಜಕಾರಣಿಗಳು ಆಡಳಿತ ವ್ಯವಸ್ಥೆಯನ್ನು ಹದಗೆಡಿಸುತ್ತಿದ್ದಾರೆ. ರಷ್ಯಾ,ಜಪಾನ್ ಅಂತ ದೇಶಗಳ ರಾಜಕಾರಣಿಗಳಿಂದ ನಮ್ಮವರು ಕಲಿಯುವುದು ಸಾಕಷ್ಟಿದೆ ಎಂದು ಅವರು ವಿಶ್ಲೇಷಿಸಿದರು.

ದೇಶಭಕ್ತಿ, ಸ್ವಚ್ಛತೆ, ಸಮಯ ಪಾಲನೆ ಮತ್ತು ಶಿಸ್ತು ಈ ಮುಂತಾದ ಅನೇಕ ವಿಷಯಗಳಲ್ಲಿ ನಾವು ರಷ್ಯನ್ನರಿಂದ ಕಲಿಯುವುದು ಸಾಕಷ್ಟಿವೆ. ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ. ಸಾಧನೆಗಳೇ ಮನುಷ್ಯನ ಉನ್ನತಿಗೆ ಕಾರಣ ಎಂಬುದನ್ನು ವಿಶ್ವವಾಣಿಯ ಈ ಸಾಧಕರ ಸಮಾವೇಶ ಸಾಬೀತುಪಡಿಸಿದೆ. ಮನುಷ್ಯನ ಮಾನವನ್ನು ಹೆಚ್ಚಿಸುವ ಸನ್ಮಾನಗಳು ಸಮಾಜದಲ್ಲಿ ಹೀಗೆ ನಡೆದಾಗ ಹೊಸಬರಿಗೂ ಸಾಧನೆಯ ಹಾದಿಯಲ್ಲಿ ಮುಂದುವರಿಯಲು ಹೊಸ ಹುರುಪು ಮೂಡುವಂತಾಗುತ್ತದೆ.
- ಜಗದ್ಗುರು ಶ್ರೀ ಡಾ. ಪುರುಷೋತ್ತಮಾನಂದಪುರಿ ಸ್ವಾಾಮೀಜಿ, ಭಗೀರಥ ಪೀಠ, ಹೊಸದುರ್ಗ
ಸಮಾರಂಭದಲ್ಲಿ ಸೌಹಾರ್ದತೆಯ ಮಂತ್ರ

ಪ್ರಸ್ತುತ ರಷ್ಯಾ ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಕೊನೆಗೊಂಡು ಶಾಂತಿ ಮರುಕಳಿಸಲಿ ಎಂಬ ಶಾಂತಿ ಸಂದೇಶ ಹೊತ್ತು ಬಂದ ಶಾಂತಿದೂತರಂತೆ, ವಿಶ್ವವಾಣಿ ನಿಯೋಗದ ಸದಸ್ಯರು ಮಾಸ್ಕೋದಲ್ಲಿ ನಡೆದ ಗ್ಲೋಬಲ್ ಅಚೀವರ್ಸ್ ಸಮಾರಂಭದಲ್ಲಿ ಸೌಹಾರ್ದತೆಯ ಮಂತ್ರ ಪಠಿಸಿದರು. ಮಾಸ್ಕೋದಲ್ಲಿ ನಾಲ್ಕು ದಿನಗಳ ಕಾಲ ಪ್ರೇಕ್ಷಣೀಯ ಸ್ಥಳಗಳಿಗೆ ಮತ್ತು ಐತಿಹಾಸಿಕ ಸ್ಥಳಗಳಿಗೂ ಭೇಟಿ ನೀಡಿದ ಈ ನಿಯೋಗದ ಸದಸ್ಯರು ಇಂದು ಸೇಂಟ್ ಪೀಟರ್ಸ್ ಬರ್ಗ್ ತಾಣದ ವೀಕ್ಷಣೆಗೆ ತೆರಳಿದರು.

ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಸಂಜೆಯಾದರೆ ಸಾಕು ಚುಮು ಚುಮು ಚಳಿ ಮುತ್ತಿಕ್ಕುತ್ತದೆ. ಸಾಮಾನ್ಯವಾಗಿ ರಸ್ತೆಯ ಒಂದು ಭಾಗದಲ್ಲಿ ಹಸಿರು ಗಿಡ ಮರಗಳ, ಉದ್ಯಾನವನಗಳ ಆಕರ್ಷಣೆಯಾದರೆ ಮತ್ತೊಂದು ಭಾಗದಲ್ಲಿ ತರಹೇವಾರಿ ಕಟ್ಟಡಗಳ ವಿಜೃಂಭಣೆ. ಇದಕ್ಕೆ ಕಾರಣ ಶೇ.60ರಷ್ಟು ಭಾಗವನ್ನು ಇಂದಿಗೂ ಮಾಸ್ಕೋ ನಗರದಲ್ಲಿ ಹಸಿರು ಪರಿಸರ ಕಾಪಾಡಲು ಮೀಸಲಿಟ್ಟಿರುವುದು. ಉಳಿದ ಶೇ.40ರಷ್ಟು ಪ್ರದೇಶಗಳಲ್ಲಿ ಮಾತ್ರ ಕಟ್ಟಡಗಳನ್ನು ಕಟ್ಟಲು ಅವಕಾಶ ಮಾಡಿಕೊಟ್ಟಿರುವುದರಿಂದ ಇಲ್ಲಿ ಸುಂದರ ಹಸಿರು ನೈಸರ್ಗಿಕ ಪರಿಸರ ಉಳಿಸಿಕೊಳ್ಳುವ ಸಾಧನೆ ಸಾಧ್ಯವಾಗಿದೆ.

ಹೀಗಾಗಿ ಇಲ್ಲಿಯ ಪಾರ್ಕುಗಳಲ್ಲಿ ಮುಸ್ಸಂಜೆಯಾದರೆ ಸಾಕು.. ಅಜ್ಜ ಮೊಮ್ಮಗ ಕೈಕೈ ಹಿಡಿದುಕೊಂಡು ವಾಕಿಂಗ್ ಹೋಗುವ ದೃಶ್ಯವನ್ನು ಈಗಲೂ ನೋಡಬಹುದು. ಇಲ್ಲಿ ಬೀಡಾ ಗುಟ್ಕಾ ಹಾಕಿ ಉಗುಳುವವರ ಕಾಟವಿಲ್ಲ . ನಮ್ಮಲ್ಲಿಯಂತೆ ಬ್ಯಾನರ್ ಫ್ಲೆಕ್ಸ್‌ಗಳ ಹಾವಳಿ ಇಲ್ಲ. ಗುಂಡಿ ಬಿದ್ದ ರಸ್ತೆಗಳನ್ನು ತೋರಿಸಲು ಇಲ್ಲಿ ಸಾಧ್ಯವೇ ಇಲ್ಲ. ಆದರೆ ಟ್ರಾಫಿಕ್ ಜಾಮ್‌ನಲ್ಲಿ ಮಾತ್ರ ಬೆಂಗಳೂರನ್ನು ನೆನಪಿಸುವಂತೆ. ಇರುವೆಗಳ ಸಾಲು ಹೋಗುವಂತೆ ಲಕ್ಷುರಿ ಕಾರುಗಳ ಸಂತೆಯ ನೋಟ ಇಲ್ಲಿಯ ಹೆದ್ದಾರಿಗಳಲ್ಲಿ ಮಾಮೂಲು. ಎಲ್ಲ ಕಡೆಗೂ ಬೆಣ್ಣೆ ಮುದ್ದೆ ನೆನಪಿಸುವ ಬಿಳಿ ಬಿಳಿ ಹಾಲುಗಲ್ಲದ ಚೆಲುವ ಚೆಲುವೆಯರು ರಷ್ಯಾದ ವೈಶಿಷ್ಯ. ಪುಟಿನ್ ಅವರ ದೀರ್ಘ ಕಾಲದ, ದಕ್ಷ ಆಡಳಿತದಲ್ಲಿ ರಷ್ಯಾ ಸಮಗ್ರ ಅಭಿವೃದ್ಧಿ ಸಾಧಿಸಿದ್ದಲ್ಲದೆ, ಜಗತ್ತಿನ ದೊಡ್ಡ ಮಿಲಿಟರಿ ಶಕ್ತಿಯಾಗಿಯೂ ಬೆಳೆದಿದೆ. ಹಿಂದೆ ಭಾರತ ಪಾಕ್ ಯುದ್ಧ ನಡೆದಾಗ ಅಮೆರಿಕವು ಪಾಕ್ ಪರ ನಿಂತರೆ, ಆಗಿನ ಸೋವಿಯತ್ ಒಕ್ಕೂಟವು ಭಾರತದ ಪರ ನಿಂತು ಬೆಂಬಲಿಸಿದ್ದನ್ನು ಮರೆಯುವ ಹಾಗಿಲ್ಲ. ಮೋದಿ ಮತ್ತು ಪುಟಿನ್ ಅವರ ಸ್ನೇಹವೂ ಅಷ್ಟೇ ಚೆನ್ನಾಗಿ ಮುಂದುವರಿದುಕೊಂಡು ಬಂದಿದೆ ಎಂಬುದು ಇಲ್ಲಿಯ ಸ್ಥಳೀಯರ ಅಭಿಪ್ರಾಯ.
ಪ್ರಶಸ್ತಿ ಪುರಸ್ಕೃತರು

* ಡಾ.ಲೀಲಾ ಮೋಹನ್ ಪಿವಿಆರ್
* ಬಸವರಾಜ್ ಉಪ್ಪಾರ್- ಅರ್ಥ್ ಸ್ಪೇಸ್
* ಮನೀಶ್ ಹೂಡಿ ವಿಜಯ್ ಕುಮಾರ್
* ಕವಿತಾ ರಾಜ್‌ಗೋಪಾಲ್, ಆರ್ ಜಿ ಯುನಿಕ್ ಸ್ಟ್ರಕ್ಚರ್ ಪ್ರೈವೆಟ್ ಲಿಮಿಟೆಡ್
* ಬಿ.ಸಿ.ಪಾಟೀಲ್
* ಪ್ರಮೋದ್ ಮಧ್ವರಾಜ್
* ಪ್ರತಿಭಾ ಕುಲೈ
* ಡಾ.ನಾಗರಾಜ್.ಎಸ್.ಕೆ
* ರವಿ ಕೃಷ್ಣಪ್ಪ ಪೂಜಾರ್
* ಡಾ.ಪುಷ್ಪಲತಾ ಮಂಕಾಳ ವೈದ್ಯ
* ಗಣಪತಿ ಭಟ್, ಮನುವಿಕಾಸ, ಶಿರಸಿ, ಉತ್ತರ ಕನ್ನಡ
* ಜಯರಾಮ್.ಜಿ.ಕಿಮ್ಮನೆ. ಶಿವಮೊಗ್ಗ
* ಡಾ.ಟಿ.ರಾಮಣ್ಣ . ಅಂತಾರಾಷ್ಟ್ರೀಯ ಥ್ರೋಬಾಲ್ ಪೆಢರೇಷನ್ ಕಾರ್ಯದರ್ಶಿ
* ಡಾ.ವಾಮನ್ ಆಚಾರ್ಯ
* ರಾಘವೇಂದ್ರ ನಾಯಕ್
* ಅಮರನಾಥ ಅಜ್ಜೂರು
* ನಿರಂಜನ್ ಭಟ್, ಯುಕೆ ನೇಚರ್
* ಡಾ.ಪ್ರಸಾದ್ ಹೆಗ್ಡೆ
* ಎಚ್.ದಾಸ್ ಸನ್‌ರೈಸ್ ಮಾರ್ಕೆಟಿಂಗ್
* ಕಾರ್ತಿಕ್ ಶ್ರೀಧರ್, ತಂಬುಳಿ ಮನೆ
* ಶಾಲಿನಿ, ಯುನೈಟೆಡ್ ಪ್ರಾಜೆಕ್ಟ್ಸ್
ಇದನ್ನೂ ಓದಿ: Vishwavani Award: ಮಸ್ಕತ್‌ನಲ್ಲಿ ಮಸ್ತಕಕ್ಕೆ ಚೈತನ್ಯ ನೀಡಿದ ವಿಶ್ವವಾಣಿ