IPL 2025: ರಾಜಸ್ಥಾನ್ ಎದುರು ರೂಪಿಸಿದ್ದ ಬ್ಯಾಟಿಂಗ್ ರಣತಂತ್ರ ರಿವೀಲ್ ಮಾಡಿದ ವಿರಾಟ್ ಕೊಹ್ಲಿ!
Virat Kohli on RCB's Batting Plan: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ತವರು ಅಂಗಣವಾದ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮೊದಲ ಗೆಲುವು ಪಡೆದಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆಲುವು ಪಡೆದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ಆರ್‌ಸಿಬಿಯ ಬ್ಯಾಟಿಂಗ್ ಗೇಮ್ ಪ್ಲ್ಯಾನ್ ಏನೆಂಬುದನ್ನು ರಿವೀಲ್ ಮಾಡಿದ್ದಾರೆ.

ಬ್ಯಾಟಿಂಗ್ ಗೇಮ್ ಪ್ಲ್ಯಾನ್ ತಿಳಿಸಿದ ವಿರಾಟ್ ಕೊಹ್ಲಿ.

ಬೆಂಗಳೂರು: ರಾಜಸ್ಥಾನ್ ರಾಯಲ್ಸ್ ವಿರುದ್ಧದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಅನುಸರಿಸಿದ ಬ್ಯಾಟಿಂಗ್ ಗೇಮ್‌ಪ್ಲ್ಯಾನ್ ಏನೆಂದು ವಿರಾಟ್ ಕೊಹ್ಲಿ (Virat Kohli) ಬಹಿರಂಗಪಡಿಸಿದ್ದಾರೆ. ಒಂದು ತುದಿಯಲ್ಲಿ ಒಬ್ಬರು ದೀರ್ಘಾವಧಿ ಬ್ಯಾಟ್ ಮಾಡಿದರೆ, ಮತ್ತೊಂದು ತುದಿಯಲ್ಲಿ ಆಡುವ ಬ್ಯಾಟ್ಸ್‌ಮನ್ ಆಕ್ರಮಣಕಾರಿಯಾಗಿ ಬ್ಯಾಟ್ ಮಾಡುವುದು ನಮ್ಮ ಯೋಜನೆಯಾಗಿತ್ತು ಎಂದು ಆರ್‌ಸಿಬಿ ಮಾಜಿ ನಾಯಕ ಹೇಳಿಕೊಂಡಿದ್ದಾರೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ 70 ರನ್‌ಗಳನ್ನು ದಾಖಲಿಸಿದ್ದರು. ಆ ಮೂಲಕ ಆರ್‌ಸಿಬಿಯ 11 ರನ್‌ಗಳಿಂದ ಗೆಲುವು ಸಾಧಿಸಿತು.
ಇಲ್ಲಿನ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಆಡಿದ್ದ ಮೂರೂ ಪಂದ್ಯಗಳನ್ನು ಸೋತಿತ್ತು. ಸೋತ ಈ ಮೂರೂ ಪಂದ್ಯಗಳಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿತ್ತು. ಆದರೆ, ಆರ್‌ಸಿಬಿಯಿಂದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಮೂಡಿ ಬಂದಿರಲಿಲ್ಲ. ಆದರೆ, ರಾಜಸ್ಥಾನ್ ರಾಯಲ್ಸ್ ವಿರುದ್ದದ ಪಂದ್ಯದಲ್ಲಿಯೂ ಆರ್‌ಸಿಬಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿತ್ತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ (50) ಅವರ ಅರ್ಧಶತಕಗಳ ಬಲದಿಂದ ಆರ್‌ಸಿಬಿ ತನ್ನ ಪಾಲಿನ 20 ಓವರ್‌ಗಳಲ್ಲಿ 205 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ರಾಜಸ್ಥಾನ್ ರಾಯಲ್ಸ್, ಯಶಸ್ವಿ ಜೈಸ್ವಾಲ್ ಹಾಗೂ ಧ್ರುವ್ ಜುರೆಲ್ ಅವರ ಹೋರಾಟದ ಹೊರತಾಗಿಯೂ ಸೋಲು ಒಪ್ಪಿಕೊಂಡಿತ್ತು.
IPL 2025: ಅರ್ಧಶತಕ ಸಿಡಿಸುವ ಮೂಲಕ ಕ್ರಿಸ್ ಗೇಲ್ ದಾಖಲೆ ಮುರಿದ ವಿರಾಟ್ ಕೊಹ್ಲಿ!
ಪಂದ್ಯದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, "ನಾವು ತವರಿನಲ್ಲಿ ಸರಾಸರಿ ಪಂದ್ಯಗಳನ್ನು ಆಡಿದ್ದೇವೆ. ಬ್ಯಾಟಿಂಗ್ ವಿಭಾಗವಾಗಿ ನಾವು ಕೆಲವು ಸಂಗತಿಗಳನ್ನು ಚರ್ಚೆ ನಡೆಸಿದ್ದೇವೆ. ಸ್ಕೋರ್ ಬೋರ್ಡ್‌ನಲ್ಲಿ ಈ ಮೊತ್ತವನ್ನು ಕಲೆ ಹಾಕಲು ನಾವು ಶ್ರಮಿಸಿದ್ದೇವೆ. ಪಿಚ್ ಫ್ಲ್ಯಾಟ್ ಆಗಿ ಇರಲಿಲ್ಲ. ಎರಡನೇ ಇನಿಂಗ್ಸ್‌ನಲ್ಲಿ ಇಬ್ಬನಿ ಬಂದಿದ್ದರಿಂದ ಚೆಂಡು ಸುಲಭವಾಗಿ ಬ್ಯಾಟ್‌ಗೆ ಬರುತ್ತಿತ್ತು," ಎಂದು ಹೇಳಿದ್ದಾರೆ.
ಬ್ಯಾಟಿಂಗ್ ಗೇಮ್‌ಪ್ಲ್ಯಾನ್ ತಿಳಿಸಿದ ಕೊಹ್ಲಿ
"ಎರಡನೇ ಅವಧಿಯಲ್ಲಿ ನಾವು ಪಿಚ್ ಅನ್ನು ನೋಡಿದ್ದೆವು ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟ್ ಮಾಡುವವರಿಗೆ ಇದರ ಲಾಭ ಸಿಕ್ಕಿದೆ. ನಾವು ಉತ್ತಮ ಪ್ರದರ್ಶನ ತೋರಿ 200 ರನ್‌ಗಳನ್ನು ಕಲೆ ಹಾಕಿದ್ದೇವೆ. ನಮ್ಮ ಬ್ಯಾಟಿಂಗ್ ಗೇಮ್ ಪ್ಲ್ಯಾನ್ ಸರಳವಾಗಿತ್ತು. ಒಬ್ಬ ಬ್ಯಾಟ್ಸ್‌ಮನ್ ಒಂದು ತುದಿಯಲ್ಲಿ ದೀರ್ಘಾವಧಿ ಆಡುವುದು, ಆ ಮೂಲಕ ಇನ್ನೊಂದು ತುದಿಯಲ್ಲಿ ಇತರರಿಗೆ ಆಕ್ರಮಣಕಾರಿಯಾಗಿ ಆಡಲು ಅನುವು ಮಾಡಿಕೊಡುವುದಾಗಿದೆ. ಇದು ನನ್ನ ಯೋಜನೆಯಾಗಿತ್ತು. ದೇವದತ್ ಪಡಿಕ್ಕಲ್ ನಿಜವಾಗಿಗೂ ಉತ್ತಮವಾಗಿ ಆಡಿದ್ದಾರೆ. ಟಿಮ್ ಡೇವಿಡ್ ಉತ್ತಮವಾಗಿ ಇನಿಂಗ್ಸ್ ಅನ್ನು ಮುಗಿಸಿದ್ದಾರೆ. ಇದು ನಮಗೆ ಫಲ ನೀಡಿದೆ," ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
RCB vs RR: ರಾಜಸ್ಥಾನ್‌ಗೆ ನಿರಾಶೆ, ತವರು ಅಂಗಣದಲ್ಲಿ ಮೊದಲ ಜಯ ಸಾಧಿಸಿದ ಆರ್‌ಸಿಬಿ!
ಮಿಂಚಿದ ಜಾಶ್ ಹೇಝಲ್‌ವುಡ್
206 ರನ್‌ಗಳ ಗುರಿಯನ್ನು ಹಿಂಬಾಲಿಸಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಯಶಸ್ವಿ ಜೈಸ್ವಾಲ್ (49) ಸ್ಪೋಟಕ ಆರಂಭ ತಂದುಕೊಟ್ಟಿದ್ದರು. ಕೊನೆಯಲ್ಲಿ ಧ್ರುವ್ ಜುರೆಲ್ (47) ಆರ್‌ಆರ್ ತಂಡವನ್ನು ಗೆಲ್ಲಿಸುವ ಹಾದಿಯಲ್ಲಿದ್ದರು. ಕೊನೆಯ 40 ರನ್ ಅಗತ್ಯವಿದ್ದಾಗ, ಭವನೇಶ್ವರ್ ಕುಮಾರ್ 22 ರನ್‌ಗನ್ನು ನೀಡಿದ್ದರು. ನಂತರ ಕೊನೆಯ ಎರಡು ಓವರ್‌ಗಳಲ್ಲಿ 18 ರನ್ ಅಗತ್ಯವಿದ್ದಾಗ ಜಾಶ್ ಹೇಝಲ್‌ವುಡ್ ಕೇವಲ ಒಂದು ರನ್ ನೀಡಿ ಧ್ರುವ್ ಜುರೆಲ್ ಹಾಗೂ ಜೋಫ್ರಾ ಆರ್ಚರ್ ವಿಕೆಟ್ ಕಿತ್ತಿದ್ದರು. ಆ ಮೂಲಕ ಕೊನೆಯ ಓವರ್‌ನಲ್ಲಿ ಯಶ್ ದಯಾಳ್ ಮೇಲಿನ ಒತ್ತಡವನ್ನು ಕಡಿಮೆ ಮಾಡಿದ್ದರು. 4 ಓವರ್‌ಗಳಿಗೆ 33 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ಜಾಶ್ ಹೇಝಲ್‌ವುಡ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.