ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗ್ಯಾಸ್‌ ಉಳಿಸಬೇಕೇ? ಹಳೆಯಕಾಲದ ಪಾತ್ರೆಗಳಿದ್ದರೆ ಬಳಸಲು ಇದು ಸಕಾಲ; ಉತ್ತಮ ಆರೋಗ್ಯಕ್ಕೂ ಇವು ಪೂರಕ

Tips to Save Gas: ಮನೆಯಲ್ಲಿರುವ ಅಡುಗೆ ಅನಿಲ ಇನ್ನೆಷ್ಟು ದಿನಕ್ಕೆ ಬರಬಹುದು ಎಂದು ಲೆಕ್ಕ ಹಾಕುವಂತಾಗುತ್ತದೆ. ಇಂಧನ ಬಳಕೆಯನ್ನು ಉಳಿಸಲು ಏನೇನು ಮಾಡಬಹುದು ಎಂದು ಯೋಚಿಸು ವಂತಾಗುತ್ತದೆ. ಎಂಥಾ ಅಡುಗೆಯಿಂದ ಇಂಧನ ಇಳಿಸಬಹುದು ಎನ್ನುವುದರ ಜತೆಗೆ ಎಂತಹ ಪಾತ್ರೆ ಇದಕ್ಕೆ ಸೂಕ್ತ ಎನ್ನುವುದನ್ನೂ ಯೋಚಿಸಬೇಡವೇ?

ಗ್ಯಾಸ್ ಉಳಿಸಲು ಈ ಟಿಪ್ಸ್ ಬಳಸಿ

ಸಾಂದರ್ಭಿಕ ಚಿತ್ರ -

Profile
Pushpa Kumari Mar 12, 2026 3:00 PM

ಬೆಂಗಳೂರು, ಮಾ. 12: ಈ ಸಂಘರ್ಷದ ಕಾಲದಲ್ಲಿ ಪೆಟ್ರೋಲ್, ಗ್ಯಾಸ್‌ ಎನ್ನುತ್ತಾ ಎಲ್ಲವೂ ತುಟ್ಟಿಯೇ. ಕೆಲವೊಮ್ಮೆ ಹೆಚ್ಚಿನ ದುಡ್ಡು ಕೊಡುವುದಕ್ಕೆ ಸಿದ್ಧವಿದ್ದರೂ ವಸ್ತು ದೊರೆಯುವುದಿಲ್ಲ. ಹಾಗೆಂದೇ ಮನೆಯಲ್ಲಿರುವ ಅಡುಗೆ ಅನಿಲ ಇನ್ನೆಷ್ಟು ದಿನಕ್ಕೆ ಬರಬಹುದು ಎಂದು ಲೆಕ್ಕ ಹಾಕುವಂತಾಗುತ್ತದೆ. ಇಂಧನ ಬಳಕೆಯನ್ನು ಉಳಿಸಲು ಏನೇನು ಮಾಡಬಹುದು ಎಂದು ಯೋಚಿಸುವಂತಾಗುತ್ತದೆ (Tips to Save Gas). ಎಂತಹ ಅಡುಗೆಯಿಂದ ಇಂಧನ ಇಳಿಸಬಹುದು ಎನ್ನುವುದರ ಜತೆಗೆ, ಎಂತಹ ಪಾತ್ರೆ ಇದಕ್ಕೆ ಸೂಕ್ತ ಎನ್ನುವುದನ್ನೂ ಯೋಚಿಸಬೇಡವೇ?

ಮನೆಯಲ್ಲಿ ಹಳೆಯ ಕಾಲ ತಾಮ್ರ, ಹಿತ್ತಾಳೆಯಂಥ ಪಾತ್ರೆಗಳಿದ್ದರೆ ತೆಗೆದು ಬಳಸುವುದಕ್ಕಿದು ಸಕಾಲ! ತಮಾಷೆಗಲ್ಲ, ನಿಜಕ್ಕೂ. ಒಮ್ಮೆ ಬಿಸಿಯಾದ ಮೇಲೆ ದೀರ್ಘ ಕಾಲದವರೆಗೆ ಬಿಸಿಯನ್ನು ಕಾಪಿಟ್ಟುಕೊಳ್ಳುವುದಕ್ಕೆ ತಾಮ್ರ, ಹಿತ್ತಾಳೆ, ಕಂಚು, ಕಬ್ಬಿಣದಂಥ ಪಾತ್ರೆಗಳು ಅತಿ ಹೆಚ್ಚು ಪ್ರಯೋಜನಕಾರಿ. ಎಷ್ಟರಮಟ್ಟಿಗೆ ಎಂದರೆ, ಆಹಾರ ಮುಕ್ಕಾಲು ಭಾಗ ಬೇಯುತ್ತಿದ್ದಂತೆ ಉರಿ ಆರಿಸಿದರೂ, ಉಳಿದಷ್ಟು ಭಾಗ ಪಾತ್ರೆಯ ಕಾವಿಗೇ ಬೆಂದಿರುತ್ತದೆ. ಇಂಥ ಪಾತ್ರೆಗಳಲ್ಲಿ ಅಡುಗೆ ಮಾಡುವುದರಿಂದ ಆರೋಗ್ಯಕ್ಕೇನು ಲಾಭ ಎಂಬುದನ್ನೂ ಈಗ ನೋಡೋಣ.

ಪೌಷ್ಟಿಕಾಂಶ ಕಾಪಿಡುತ್ತದೆ: ತಾಮ್ರ, ಕಬ್ಬಿಣ, ಹಿತ್ತಾಳೆಯ ಪಾತ್ರೆಗಳು ಒಮ್ಮೆ ಬಿಸಿಯಾದರೆ ದೀರ್ಘಕಾಲದವರೆಗೆ ಬಿಸಿ ಕಾಯ್ದುಕೊಂಡಿರುತ್ತವೆ. ಮಾತ್ರವಲ್ಲ, ಇಡೀ ಪಾತ್ರೆ ಒಂದೇಸಮ ಬಿಸಿಯಾಗುತ್ತದೆ, ಹೆಚ್ಚು-ಕಡಿಮೆ ಇಲ್ಲದಂತೆ. ಇದರಿಂದ ಇಂಥ ಪಾತ್ರೆಗಳಲ್ಲಿ ಮಾಡುವ ಅಡಿಗೆಗಳನ್ನು ದೀರ್ಘಕಾಲ ಬೆಂಕಿಯಲ್ಲಿ ಇಡುವುದು ಬೇಡ. ಸ್ವಲ್ಪ ಕಾಲ ಉರಿಯಲ್ಲಿಟ್ಟರೂ ಸಾಕು, ಉಳಿದಂತೆ ಪಾತ್ರೆಯ ಶಾಖಕ್ಕೇ ಬೇಯುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ಒಲೆಯ ಕಾವಿನಲ್ಲಿ ಹಾಗೆಯೇ ಬಿಟ್ಟರೆ ದೀರ್ಘಕಾಲದವರೆಗೆ ಬಿಸಿ ಕಾಪಾಡಿಕೊಂಡು, ಮತ್ತೆಮತ್ತೆ ಬಿಸಿ ಮಾಡುವ ಸಮಸ್ಯೆಯನ್ನು ನಿವಾರಿಸುತ್ತದೆ. ಹಾಗಾಗಿ ಪೌಷ್ಟಿಕಾಂಶ ಮತ್ತು ಇಂಧನ- ಎರಡೂ ಉಳಿಯುತ್ತವೆ.

ಸೋಂಕುಗಳಿಗೆ ಕಡಿವಾಣ: ತಾಮ್ರ ಮತ್ತು ಹಿತ್ತಾಳೆಯಲ್ಲಿಟ್ಟ ಆಹಾರದ ಸೇವನೆಯಿಂದ ದೇಹದ ರೋಗನಿರೋಧಕ ಶಕ್ತಿ ವರ್ಧಿಸುತ್ತದೆ. ಅದರಲ್ಲೂ ನೆಗಡಿ-ಕೆಮ್ಮು-ದಮ್ಮಿನಂಥ ಸಮಸ್ಯೆಗಳಿಗೆ ಪದೇಪದೆ ತುತ್ತಾಗುವವರಿಗೆ ಬೆಳ್ಳಿ, ತಾಮ್ರ ಅಥವಾ ಹಿತ್ತಾಳೆ ಪಾತ್ರೆಯಲ್ಲಿಟ್ಟ ನೀರು ಕುಡಿಸುವ ಪದ್ಧತಿ ಹಿಂದಿನಿಂದಲೂ ಜಾರಿಯಲ್ಲಿದೆ. ಹಿತ್ತಾಳೆ ಪಾತ್ರೆಗಳಲ್ಲಿ ಅಡುಗೆ ಮಾಡುವುದರಿಂದ, ರಕ್ತದಲ್ಲಿ ಹಿಮೋಗ್ಲೋಬಿನ್‌ ವೃದ್ಧಿಗೆ ಸಹಾಯಕವಾಗುತ್ತದೆ. ತಾಮ್ರದ ಪಾತ್ರೆಯ ನೀರು ಕುಡಿಯುವುದರಿಂದ ದೇಹದಲ್ಲಿ ಉರಿಯೂತಗಳು ಕಡಿಮೆಯಾಗುತ್ತವೆ. ಕೀಲುನೋವಿನಂಥ ಸಮಸ್ಯೆಗಳಿಗೆ ಇದು ಉಪಯುಕ್ತ.

ಕಬ್ಬಿಣದ ಪಾತ್ರೆಗಳು: ಈಗಿನ ಕಾಲದ ಕಬ್ಬಿಣದ ಪಾತ್ರೆಗಳನ್ನು ಇಂಡಕ್ಷನ್‌ ಒಲೆಗಳ ಮೇಲೂ ಧಾರಾಳವಾಗಿ ಬಳಸಬಹುದು. ಹಾಗಾಗಿ ಬಾಣಲೆ ಮತ್ತು ತವಾಗಳು ಕಬ್ಬಿಣದ್ದಾದರೆ ಸೂಕ್ತ. ದೋಸೆ, ರೊಟ್ಟಿ, ಪಡ್ಡು ಇಂಥ ಕಾವಲಿಗಳು ಮೊದಲಿನಿಂದಲೂ ಕಬ್ಬಿಣದ್ದೇ ಇರುತ್ತಿದ್ದವು. ಹುರಿಯುವ, ಕರಿಯುವ, ಬೇಯಿಸುವ ಪಾತ್ರೆ ಕಬ್ಬಿಣದ್ದಾದರೆ ದೇಹದಲ್ಲಿ ಕಬ್ಬಿಣಾಂಶದ ಕೊರತೆಯನ್ನು ನೀಗಿಸಲು ಸಹಾಯವಾಗಬಹುದು. ರಕ್ತಹೀನತೆಯಂಥ ತೊಂದರೆಗಳು ಗಂಟಿಕ್ಕಿಕೊಳ್ಳದಂತೆ ಕಾಪಾಡಿಕೊಳ್ಳಬಹುದು.

ಚಳಿಗಾಲದಲ್ಲಿ ಮೊಸರು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತಾ?

ತೂಕ ಇಳಿಕೆ: ನಮ್ಮ ದೇಹದ ಜೀರ್ಣಾಂಗವನ್ನು ಚುರುಕುಗೊಳಿಸುವಂಥ ಅಂಶಗಳು ಈ ಲೋಹ ಗಳಿಗಿವೆ. ಹಾಗಾಗಿ ಆಸಿಡಿಟಿ, ಅಜೀರ್ಣ, ವಾಯುಪ್ರಕೋಪ, ಮಲಬದ್ಧತೆಯಂಥ ಸಮಸ್ಯೆಗಳನ್ನು ದೂರಮಾಡಲು ನೆರವಾಗುತ್ತದೆ. ಹೊಟ್ಟೆಯನ್ನು ಸ್ವಚ್ಛವಾಗಿಟ್ಟು, ಪೌಷ್ಟಿಕಾಂಶಗಳನ್ನು ಹೀರಿಕೊಳ್ಳಲು ದೇಹಕ್ಕೆ ನೆರವಾಗುತ್ತದೆ. ಜೀರ್ಣಾಂಗದ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮೂಲಕ, ದೇಹದಲ್ಲಿ ಕೊಬ್ಬು ಶೇಖರವಾಗುವುದನ್ನು ತಡೆದು, ತೂಕ ಇಳಿಸುವುದಕ್ಕೂ ಸಹಕಾರಿಯಾಗುತ್ತದೆ. ಮಾತ್ರವಲ್ಲ, ನಮ್ಮ ಕಣ್ಣು ಮತ್ತು ಚರ್ಮದ ಆರೋಗ್ಯವನ್ನೂ ಉತ್ತಮಪಡಿಸುತ್ತದೆ.

ಹೃದಯಾರೋಗ್ಯ: ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣ ತಾಮ್ರಕ್ಕಿದೆ. ಈ ಲೋಹಗಳನ್ನು ನಿಯಮಿತವಾಗಿ ಬಳಸಿದಲ್ಲಿ ಕೊಲೆಸ್ಟ್ರಾಲ್‌ ಮತ್ತು ರಕ್ತದೊತ್ತಡ ನಿಯಂತ್ರಣಕ್ಕೆ ನೆರವು ದೊರೆತು ಹೃದಯಾರೋಗ್ಯ ಉತ್ತಮಪಡಿಸಲು ಅನುಕೂಲವಾಗಲಿದೆ. ದೇಹಕ್ಕೆ ಅಗತ್ಯವಿರುವ ಸೂಕ್ಷ್ಮ ಪೋಷಕಾಂಶಗಳನ್ನು ಒದಗಿಸಿ, ಆಹಾರದ ಗುಣಮಟ್ಟ ಮತ್ತು ರುಚಿಯನ್ನು ಹೆಚ್ಚಿಸುವಲ್ಲಿ ತಾಮ್ರ ಮತ್ತು ಹಿತ್ತಾಳೆಯ ಪಾತ್ರೆಗಳು ಉತ್ತಮ ಆಯ್ಕೆ.