ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻಡಾ. ರಾಜ್‌ಕುಮಾರ್ ದಂಪತಿ ಇಲ್ಲದಿರುವುದರಿಂದ ಕನ್ನಡ ಚಿತ್ರರಂಗದ ಪರಿಸ್ಥಿತಿ ಹೀಗಾಗಿದೆʼ; ಎಸ್‌ ವಿ ರಾಜೇಂದ್ರ ಸಿಂಗ್‌ ಬಾಬು ಬೇಸರ

ಎಸ್‌ ವಿ ರಾಜೇಂದ್ರ ಸಿಂಗ್‌ ಬಾಬು ಅವರು ಬೆಂಗಳೂರು ಚಿತ್ರೋತ್ಸವದ ‘ಸುವರ್ಣ ಸಂಭ್ರಮ’ದಲ್ಲಿ ಮಾತನಾಡುತ್ತಾ, ಡಾ. ರಾಜ್‌ಕುಮಾರ್ ಮತ್ತು ಪಾರ್ವತಮ್ಮ ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗ ನಾಯಕನಿಲ್ಲದಂತಾಗಿದೆ ಎಂದು ವಿಷಾದಿಸಿದರು. ಈಗಿನ ನಟರು ಕಾದಂಬರಿ ಆಧಾರಿತ ಚಿತ್ರಗಳಿಗೆ ಆಸಕ್ತಿ ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಕಾಲದ ಹೀರೋಗಳ ಬಗ್ಗೆ ರಾಜೇಂದ್ರ ಸಿಂಗ್‌ ಬಾಬು ಬೇಸರ ಮಾಡಿಕೊಂಡಿದ್ದೇಕೆ?

-

Avinash GR
Avinash GR Feb 6, 2026 5:48 PM

ಬೆಂಗಳೂರು ಅಂತಾರಾಷ್ಟ್ರೀ ಚಿತ್ರೋತ್ಸವದ ಕೊನೆಯ ದಿನವಾದ ಶುಕ್ರವಾರ (ಫೆ.6) ಕನ್ನಡ ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿ, ಅಪಾರ ಸೇವೆ ಸಲ್ಲಿಸಿದ ಹಿರಿಯ ಸಾಧಕರನ್ನು 'ಸುವರ್ಣ ಸಂಭ್ರಮ' ಕಾರ್ಯಕ್ರಮದ ಮೂಲಕ ವಿಶೇಷವಾಗಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಗಿರೀಶ್‌ ಕಾಸರವಳ್ಳಿ, ಹಿರಿಯ ನಿರ್ದೇಶಕ ಎಸ್‌.ವಿ. ರಾಜೇಂದ್ರ ಸಿಂಗ್‌ ಬಾಬು, ನಟಿ, ಮಾಜಿ ಸಚಿವೆ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲಾ, ಅವರನ್ನು ಆತ್ಮೀಯವಾಗಿ ಗೌರಿಸಲಾಯಿತು.

ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಪರವಾಗಿ ಅವರ ಪುತ್ರಿ ಪೂರ್ಣಿಮಾ ರಾಮ್‌ಕುಮಾರ್ ಹಾಗೂ ಛಾಯಾಗ್ರಾಹಕ ಎಸ್. ರಾಮಚಂದ್ರ ಅವರ ಪರವಾಗಿ ಅವರ ಸಹೋದರ ಶಂಕರ್ ಐತಾಳ್ ಅವರನ್ನು ಗೌರವಿಸಲಾಯಿತು. ಈ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಉಪಸ್ಥಿತರಿದ್ದರು. ಅಕಾಡೆಮಿ ವತಿಯಿಂದ ಡಾ. ಸಾಧು ಕೋಕಿಲ ಅವರು ಎಲ್ಲ ಗಣ್ಯರನ್ನು ಸ್ವಾಗತಿಸಿ, ಸನ್ಮಾನಿಸಿದರು.

BIFFes 2026: ʻಮಹಿಳಾ ಪ್ರಧಾನ ಸಿನಿಮಾಗಳೆಲ್ಲವೂ, ಮಹಿಳಾ ಪರ ಸಿನಿಮಾಗಳಾಗಿರುವುದಿಲ್ಲʼ ಎಂದ ಲೇಖಕಿ ಸಂಧ್ಯಾರಾಣಿ

ಕನ್ನಡ ಚಿತ್ರರಂಗ ನಾಯಕನಿಲ್ಲದೆ ಸೊರಗುವಂತಾಗಿದೆ

"ಡಾ. ರಾಜಕುಮಾರ್ ಮತ್ತು ಪಾರ್ವತಮ್ಮ ಅವರ ಅಗಲಿಕೆಯಿಂದಾಗಿ ಇಂದು ಕನ್ನಡ ಚಿತ್ರರಂಗ ನಾಯಕನಿಲ್ಲದೆ ಸೊರಗುವಂತಾಗಿದೆ. ಅಂದು ಚಿತ್ರರಂಗಕ್ಕೆ ಯಾವುದೇ ಸಮಸ್ಯೆ ಎದುರಾದರೂ ಅಣ್ಣಾವ್ರು ಕೆ.ಜಿ. ರಸ್ತೆಗಿಳಿಯುತ್ತಿದ್ದರು. ಅವರ ಜನಪ್ರಿಯತೆ ಎಷ್ಟಿತ್ತೆಂದರೆ, ಸ್ವತಃ ಪೊಲೀಸ್ ಕಮಿಷನರ್ ಅವರೇ ಜನರನ್ನು ನಿಯಂತ್ರಿಸುವುದು ಕಷ್ಟ ಎಂದು ಹೇಳುತ್ತಿದ್ದರು. ಡಾ. ರಾಜ್ ಬಂದ ಕೂಡಲೇ ಸರ್ಕಾರವೇ ಎಚ್ಚೆತ್ತುಕೊಂಡು, ಸಚಿವರೇ ಆದೇಶ ಪ್ರತಿಯನ್ನು ಕೆ.ಜಿ. ರಸ್ತೆಗೆ ತಂದಿದ್ದರು. ಅಣ್ಣಾವ್ರು ಬಂದರೆ ಇಡೀ ರಾಜ್ಯ ನಡುಗುತ್ತಿತ್ತು. ನಾಯಕನಿಲ್ಲದೆ ಇವತ್ತು ಯಾವ ಸ್ಥಿತಿಗೆ ಬಂದಿದ್ದೇವೆ ಎಂದು ಎಲ್ಲರಿಗೂ ಗೊತ್ತಿದೆ" ಎಂದು ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಬೇಸರ ವ್ಯಕ್ತಪಡಿಸಿದರು.

"ಪಾರ್ವತಮ್ಮ ಅವರು ಹೆಚ್ಚಾಗಿ ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದರು. ಆದರೆ, ಈಗ ಯಾವ ಹೀರೋ ಹತ್ತಿರ ಕಾದಂಬರಿಯನ್ನು ತೆಗೆದುಕೊಂಡು ಹೋದರೆ, ನಮ್ಮನ್ನು ಮನೆಗೆ ಸೇರಿಸುವುದಿಲ್ಲ. ನಾವು ನಮ್ಮ ಇತಿಹಾಸ, ಸಂಸ್ಕೃತಿ, ಮಣ್ಣಿನ ವಾಸನೆಯನ್ನು ಮರೆಯುತ್ತಿದ್ದೇವೆ. ಅದೇ ಕಾರಣಕ್ಕೆ ಜನ ಚಿತ್ರಮಂದಿರದತ್ತ ಬರುತ್ತಿಲ್ಲ. ಡಾ. ರಾಜಕುಮಾರ್‌ ಅವರಿದ್ದ ಸಮಯ ಸುವರ್ಣ ಯುಗ. ಅವರಿಲ್ಲದಿರುವುದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಿದೆ. ಪರೀಕ್ಷೆ, ಕ್ರಿಕೆಟ್‌ ಮುಂತಾದ ಬರಗಾಲದಲ್ಲಿ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗುತ್ತಿವೆ. ಮಿಕ್ಕಂತೆ ಸಂಕ್ರಾಂತಿ, ಉಗಾದಿ ಸಂದರ್ಭದಲ್ಲಿ ಚಿತ್ರಮಂದಿರಗಳು ಬೇರೆ ಭಾಷೆಗಳಿಗೆ ಸಿಗುತ್ತಿವೆ" ಎಂದು ರಾಜೇಂದ್ರ ಸಿಂಗ್ ಬಾಬು ಬೇಸರಿಸಿಕೊಂಡರು.

BIFFes: ಕಾರ್ಯಕ್ರಮಕ್ಕೆ ನನ್ನನ್ನ ಕರೆದಿದ್ದು ದೊಡ್ಡ ಗೌರವ! ಸಿನಿಮೋತ್ಸವ ಉದ್ಘಾಟನೆ ವೇಳೆ ರುಕ್ಮಿಣಿ ವಸಂತ್ ಮಾತು

ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಚಿತ್ರೋತ್ಸವ

"ಚಿತ್ರೋತ್ಸವನ್ನು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮಾಡುವಂತಾಗಬೇಕು. ಈ ಮೂಲಕ ಅಲ್ಲಿಯ ಜನರಿಗೂ ಸಿನಿಮಾ ಅಭಿರುಚಿ ಬೆಳೆಯಬೇಕು. ಕನಿಷ್ಠ ವರ್ಷಕ್ಕೆ ಮೂರು ದಿನಗಳಾದರೂ ಬೇರೆ ಊರುಗಳಲ್ಲೂ ಚಿತ್ರೋತ್ಸವ ಮಾಡಬೇಕು. ಇದರ ಜೊತೆಗೆ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಒಂದು ಪ್ರತ್ಯೇಕ ನಿರ್ದೇಶನಾಲಯ ಬೇಕು. ಚಿತ್ರೋತ್ಸವದ ಕೆಲಸಗಳು ವರ್ಷಪೂರ್ತಿ ನಡೆಯುತ್ತಿರಬೇಕು" ಎಂದು ಅವರು ಹೇಳಿದರು. ಇದೆ ವೇಳೆ ಕೆ.ವಿ. ಪ್ರಭಾಕರ್‌ ಅವರ ಮುಖೇನ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಡಾ. ಜಯಮಾಲಾ ಹೇಳಿದ್ದೇನು?

"ಕನ್ನಡ ಚಿತ್ರರಂಗದ ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರು ಸಂಕಷ್ಟದಲ್ಲಿದ್ದು, ಸರ್ಕಾರ ಕೂಡಲೇ ನೆರವಿಗೆ ಧಾವಿಸಬೇಕು. ನಿರ್ಮಾಪಕರಿಗೆ ನೀಡಲಾಗುತ್ತಿರುವ ಸಬ್ಸಿಡಿಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ಜೊತೆಗೆ, ಆರೋಗ್ಯ ರಕ್ಷಣೆಗಾಗಿ 'ಯಶಸ್ವಿನಿ ಕಾರ್ಡ್' ಯೋಜನೆಯನ್ನು ಚಿತ್ರರಂಗದವರಿಗೂ ವಿಸ್ತರಿಸಬೇಕು. ಕನ್ನಡಕ್ಕೆ ಪ್ರತ್ಯೇಕ ಒಟಿಟಿ ವೇದಿಕೆ ಮತ್ತು ಚಿತ್ರರಂಗಕ್ಕೆ ಅಧಿಕೃತವಾಗಿ 'ಉದ್ಯಮ'ದ ಸ್ಥಾನಮಾನವನ್ನು ಶೀಘ್ರವಾಗಿ ನೀಡಬೇಕು. ಬಹುನಿರೀಕ್ಷಿತ ಚಿತ್ರನಗರಿಯ ಶಂಕುಸ್ಥಾಪನೆ ನೆರವೇರಿಸಿ, ಆದಷ್ಟು ಬೇಗ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡಬೇಕು. ಅಲ್ಲದೆ, ಚಿತ್ರನಗರಿಯ ಪಕ್ಕದಲ್ಲೇ ಕಲಾವಿದರು ಮತ್ತು ತಂತ್ರಜ್ಞರ ವಸತಿಗಾಗಿ 50-60 ಎಕರೆ ಜಾಗವನ್ನು ಮೀಸಲಿಡಬೇಕು" ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲಾ ಮನವಿ ಮಾಡಿದ್ದಾರೆ.

ಎಸ್. ರಾಮಚಂದ್ರ ಐತಾಳ್‌ ಬಗ್ಗೆ ಗಿರೀಶ್‌ ಮಾತು

ತಮ್ಮ 8 ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ ಎಸ್. ರಾಮಚಂದ್ರ ಐತಾಳ್‌ ಅವರನ್ನು ನೆನೆದ ಗಿರೀಶ್‌ ಕಾಸರವಳ್ಳಿ, "ರಾಮಚಂದ್ರ ಅವರು ಎಂದೂ ತಮ್ಮ ಅಭಿಪ್ರಾಯವನ್ನು ಮುಚ್ಚಿಟ್ಟುಕೊಳ್ಳುತ್ತಿರಲಿಲ್ಲ. ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಮತ್ತು ಸ್ಪಷ್ಟವಾಗಿ ಹೇಳುತ್ತಿದ್ದರು. ಯಾವುದೇ ವಿಷಯವನ್ನಾದರೂ ನೇರಾನೇರ ಹೇಳುವ ಎದೆಗಾರಿಕೆ ಅವರಿಗಿತ್ತು. ಅವರು ಹೇಳಿದ್ದು ಒಪ್ಪಿಗೆಯಾಗುತ್ತದೋ, ಇಲ್ಲವೋ, ಆ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಇದು ನಿರ್ದೇಶಕರ ಮಾಧ್ಯಮ ಎಂದು ಅವರಿಗೆ ಸ್ಪಷ್ಟವಾಗಿ ಗೊತ್ತಿತ್ತು. ಹಾಗಾಗಿ, ನಿರ್ದೇಶಕರ ನಿರ್ಧಾರಕ್ಕೆ ಅವರು ತಲೆ ಬಾಗುತ್ತಿದ್ದರು. ಅದರ ಜೊತೆಗೆ ತಮಗೆ ಕೆಲವು ವಿಷಯಗಳ ಬಗ್ಗೆ ಸಹಮತವಿಲ್ಲ ಎಂದು ನೇರವಾಗಿ ಹೇಳುತ್ತಿದ್ದರು" ಎಂದರು.