Actor Chetan Ahimsa: ಡಾ. ರಾಜ್‌ಕುಮಾರ್ ಅಭಿಮಾನಿಗಳಿಂದ ಮುತ್ತಿಗೆ; ಕ್ಷಮೆಯಾಚಿಸಿದ ನಟ ಚೇತನ್
Dr. Rajkumar's memorial: ವರನಟ ಡಾ.ರಾಜ್‌ಕುಮಾರ್ ಅವರ ಸಮಾಧಿಗೆ ಸರ್ಕಾರ ಜಾಗ ನೀಡಿರವ ನಿರ್ಧಾರವನ್ನು ನಟ ಚೇತನ್ ಅಹಿಂಸಾ ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ರಾಜ್‌ಕುಮಾರ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಇಂದು ರಾಜ್‌ಕುಮಾರ್ ಅವರ ಅಭಿಮಾನಿಗಳು ಮನೆಗೆ ಮುತ್ತಿಗೆ ಹಾಕಿ, ಆಕ್ರೋಶ ಹೊರಹಾಕಿದ್ದರಿಂದ ನಟ ಚೇತನ್ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.
ಡಾ.ರಾಜ್‌ಕುಮಾರ್ ಮತ್ತು ಚೇತನ್ ಅಹಿಂಸಾ. -
ಬೆಂಗಳೂರು: ಡಾ.ರಾಜ್‌ಕುಮಾರ್ ಅವರ ಸಮಾಧಿಗೆ 2.50 ಎಕರೆ ಸ್ಥಳ ನೀಡಿರುವ ಸರ್ಕಾರದ ನಿರ್ಧಾರವನ್ನು ಟೀಕೆ ಮಾಡಿದ್ದ ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ವಿರುದ್ಧ ರಾಜ್‌ಕುಮಾರ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಹಲವು ಠಾಣೆಗಳಲ್ಲಿ ನಟ ಚೇತನ್ ಅಹಿಂಸ ವಿರುದ್ಧ ದೂರುಗಳು ದಾಖಲಿಸಲಾಗಿತ್ತು. ಇದೀಗ ರಾಜ್‌ಕುಮಾರ್ ಅವರ ಅಭಿಮಾನಿಗಳ ಆಕ್ರೋಶಕ್ಕೆ ಮಣಿದು ನಟ ಚೇತನ್ ಅಹಿಂಸಾ ಕ್ಷಮೆ ಕೇಳಿದ್ದಾರೆ.
ಶುಕ್ರವಾರ ಸಂಜೆ ವೇಳೆಗೆ ಸಾರಾ ಗೋವಿಂದು, ಕರವೇ ಕಾರ್ಯಕರ್ತರು, ಡಾ.ರಾಜ್ ಅಭಿಮಾನಿಗಳಿಂದ ಚೇತನ್ ಅಹಿಂಸಾ ಮನೆಗೆ ಮುತ್ತಿಗೆ ಹಾಕಲಾಯಿತು. ನಟನ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಲಾಯಿತು. ಕೊನೆಗೆ ಚೇತನ್ ಅಹಿಂಸಾ ಜತೆಗೆ ಹಲವು ಸಂಘಟನೆಗಳ ಮುಖಂಡರು ಮಾತನಾಡಿ, ತಮ್ಮ ಆಕ್ರೋಶ, ಅಸಾಮಾಧಾನವನ್ನು ವ್ಯಕ್ತಪಡಿಸಿದರು. ಈ ವೇಳೆ ಚೇತನ್ ಅಹಿಂಸಾ ಕ್ಷಮೆಯಾಚಿಸಿದ್ದಾರೆ.
"ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ವಿಷಾಧ ವ್ಯಕ್ತಪಡಿಸುತ್ತೇನೆ, ಕ್ಷಮೆ ಯಾಚನೆಯನ್ನೂ ಮಾಡುತ್ತೇನೆ. ಯಾರ ಮನಸ್ಸನ್ನೂ ನೋಯಿಸುವುದು ನನ್ನ ಉದ್ದೇಶ ಅಲ್ಲ. ನಾನೂ ರಾಜ್‌ಕುಮಾರ್ ಅವರ ಅಭಿಮಾನಿ. ಸಮಾಜದ ಜಾಗೃತಿ ಆಗಬೇಕು, ಒಂದು ಉತ್ತಮ ಪ್ರಜಾಪ್ರಭುತ್ವ ಕಟ್ಟಬೇಕು. ರಾಜ್‌ಕುಮಾರ್ ಅವರ ಕನಸಿನ ಚಿತ್ರರಂಗವನ್ನು ಕಟ್ಟಬೇಕು ಎಂಬುದು ನನ್ನ ಉದ್ದೇಶ ಕೂಡ ಎಂದು ನಟ ಚೇತನ್ ಹೇಳಿದ್ದಾರೆ.
ನಟ ಚೇತನ್ ಏನು ಹೇಳಿದ್ದರು?
ಏಪ್ರಿಲ್ 24ರಂದು ಡಾ.ರಾಜ್‌ಕುಮಾರ್ ಅವರ ಜನ್ಮದಿನ ಹಿನ್ನೆಲೆಯಲ್ಲಿ ಅವರ ಸ್ಮಾರಕದ ದರ್ಶನ ಪಡೆಯಲು ಸಾವಿರಾರು ಅಭಿಮಾನಿಗಳು ಬೆಂಗಳೂರಿನ ಕಂಠೀರವ ಸ್ಟುಡಿಯೊ ಆಗಮಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಹಾಸ್ಯನಟ ಸಾಧುಕೋಕಿಲ ಅವರು, ಇದು ಸಮಾಧಿ ಸ್ಥಳ ಅಲ್ಲ, ದೇವಸ್ಥಾನದಂತೆ ಆಗಿದೆ ಎಂದು ಹೇಳಿದ್ದರು. ಸಾಧುಕೋಕಿಲ ಅವರ ಹೇಳಿಕೆಯನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡು ನಟ ಚೇತನ್ ಪೋಸ್ಟ್ ಮಾಡಿದ್ದರು.
ನಾವು ರಾಜಕುಮಾರ್ ಅವರನ್ನು ಒಬ್ಬ ಮಹಾನ್ ಕಲಾವಿದರಾಗಿ ಗೌರವಿಸುತ್ತೇವೆ. ಆದರೆ, ಬೆಂಗಳೂರು ನಗರ ಮಧ್ಯದಲ್ಲಿ 2006ರಲ್ಲಿ ಒಬ್ಬ ನಟನ “ಸಮಾಧಿ ಕಾಂಪ್ಲೆಕ್ಸ್”ಗಾಗಿ 2.5 ಎಕರೆ ಭೂಮಿಯನ್ನು ನೀಡುವುದು ತಿಳಿವಳಿಕೆಯ ನಿರ್ಧಾರವಾಗಿತ್ತೇ ಎಂಬುದನ್ನು ಪ್ರಶ್ನಿಸಬೇಕಾಗಿದೆ. 21ನೇ ಶತಮಾನದ ಭಾರತದಲ್ಲಿ ಪ್ರಮುಖ ಹೋರಾಟವೇ ಭೂಮಿ. ಸರ್ಕಾರವು ಅದನ್ನು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸಾರ್ವಜನಿಕ ಉಪಯೋಗಕ್ಕೆ ತಕ್ಕಂತೆ ಹಂಚಬೇಕು; ಮತಗಳ ಲಾಭದ ಅವಕಾಶವಾದಿ ಉದ್ದೇಶದಿಂದ ಅಲ್ಲ ಎಂದು ನಟ ಚೇತನ್ ಹೇಳಿದ್ದರು. ಈ ಪೋಸ್ಟ್‌ಗೆ ರಾಜ್‌ಕುಮಾರ್ ಅವರ ಅಭಿಮಾನಿಗಳಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು.