ನಾಪತ್ತೆಯಾಗಿದ್ದ ದರ್ಶನ್ ಮ್ಯಾನೇಜರ್ ಮಲ್ಲಿಕಾರ್ಜುನ್ ದಿಢೀರ್ ಪ್ರತ್ಯಕ್ಷ; 8 ಕೋಟಿ ರೂಪಾಯಿ ಸಾಲ, 7 ವರ್ಷ ಅಜ್ಞಾತವಾಸ, ಹೊರಬಿತ್ತು ರೋಚಕ ಮಾಹಿತಿ
Darshan Manager Mallikarjun Missing Case: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ 7 ವರ್ಷಗಳ ಅಜ್ಞಾತವಾಸದ ನಂತರ ಪ್ರತ್ಯಕ್ಷವಾಗಿ ಅಚ್ಚರಿಯ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಉದ್ಯಮದಲ್ಲಿ ಆದ 8 ಕೋಟಿ ರೂ. ಸಾಲದಿಂದಾಗಿ ಆತ್ಮಹತ್ಯೆಗೆ ನಿರ್ಧರಿಸಿದ್ದ ಅವರು, ನಂತರ ನಾಪತ್ತೆ ಆಗಿದ್ದರು. ಇದೀಗ ವಾಪಸ್ ಬಂದು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
-
ʻಚಾಲೆಂಜಿಂಗ್ ಸ್ಟಾರ್ʼ ದರ್ಶನ್ ಬಳಿ ಹಲವು ವರ್ಷಗಳಿಂದ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ ಮಲ್ಲಿಕಾರ್ಜುನ್ ಈಗ್ಗೆ ಕೆಲ ವರ್ಷಗಳ ಹಿಂದೆ ನಾಪತ್ತೆ ಆಗಿದ್ದರು. ಸದಾ ದರ್ಶನ್ ಬೆನ್ನಿಗೆ ನಿಂತಿರುತ್ತಿದ್ದ ಮಲ್ಲಿ, ಇದ್ಯಾಕೆ ಹಿಂಗೆ ದಿಢೀರ್ ಅಂತ ನಾಪತ್ತೆ ಆದರೂ ಅನ್ನೋದು ಯಾರಿಗೂ ಗೊತ್ತಿರಲಿಲ್ಲ. ಅಂತಿಮವಾಗಿ ಹಣಕಾಸಿನ ವಿಚಾರಕ್ಕಾಗಿ ಅವರು ಊರು ಬಿಟ್ಟಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತಾದರೂ, ಅವರು ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಏನು ಸಮಸ್ಯೆ ಅನ್ನೋದೆಲ್ಲಾ ಯಾರಿಗೂ ತಿಳಿದಿರಲಿಲ್ಲ.
ಇದೀಗ ಮಲ್ಲಿಕಾರ್ಜುನ್ ದಿಢೀರ್ ಅಂತ ಪ್ರತ್ಯಕ್ಷವಾಗಿ ಹಲವು ರೋಚಕ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. 8 ಕೋಟಿ ರೂಪಾಯಿ ಸಾಲ ಮಾಡಿಕೊಂಡು, ಸಾಲ ಕೊಟ್ಟವರಿಗೆ ಹಣ ಹಿಂತಿರುಗಿಸಲು ಸಾಧ್ಯವಾಗದೇ ಮಲ್ಲಿಕಾರ್ಜುನ್ ಕುಟುಂಬಸಮೇತ ಸಾಯುವ ನಿರ್ಧಾರ ಮಾಡಿದ್ದರು. ಆದರೆ ಕೊನೆಗೆ ಆ ನಿರ್ಧಾರದಿಂದ ಹಿಂದೆ ಸರಿದು ಊರನ್ನೇ ಬಿಟ್ಟುಹೋಗಿದ್ದರು. ಇದೀಗ ವಾಪಸ್ ಬಂದು, ಮಾಧ್ಯಮಗಳ ಎದುರು ಹಲವು ವಿಚಾರಗಳನ್ನು ಮಲ್ಲಿಕಾರ್ಜುನ್ ಹಂಚಿಕೊಂಡಿದ್ದಾರೆ.
Actor Darshan: ರೇಣುಕಾಸ್ವಾಮಿ ಕೊಲೆ ಕೇಸ್; ನಟ ದರ್ಶನ್ ವಿರುದ್ಧ 132 ಪುಟಗಳ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಕೆ
ನಾನು ಸೋತಿದ್ದೇನೆ, ಸತ್ತಿಲ್ಲ!
"ನಾನು ಈಗ ಸೋತಿದ್ದೇನೆ. ಆದರೆ ಸತ್ತಿಲ್ಲ. ನನಗೆ 8 ಕೋಟಿ ರೂ. ಸಾಲವಿದೆ. ಸುಮಾರು 20ಕ್ಕೂ ಅಧಿಕ ಮಂದಿಗೆ ನಾನು ಸಾಲ ವಾಪಸ್ ನೀಡಬೇಕಿದೆ. ಈ ಪ್ರೆಸ್ ಮೀಟ್ ಮಾಡುವುದಕ್ಕೂ ಮುನ್ನ ಅವರನ್ನೆಲ್ಲಾ ಭೇಟಿ ಮಾಡಿ, ಅವರಿಗೆ ಹಣ ವಾಪಸ್ ನೀಡುತ್ತೇನೆ ಎಂದು ಆಶ್ವಾಸನೆ ಕೊಟ್ಟು ಬಂದಿದ್ದೇನೆ. ರಾಯರ ಆಶೀರ್ವಾದ, ಅವರೆಲ್ಲರೂ ನನಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ನನ್ನಿಂದ ಸಾಕಷ್ಟು ಮಂದಿಗೆ ನೋವಾಗಿದೆ. ಅವರೆಲ್ಲರಿಗೂ ನಾನು ಕ್ಷಮೆ ಕೇಳುವೆ. ಹೋಟೆಲ್ ಬ್ಯುಸಿನೆಸ್ ಸೇರಿದಂತೆ ನಾನಾ ಥರದ ವ್ಯವಹಾರಗಳಿಗೆ ಕೈ ಹಾಕಿದೆ. ಎಲ್ಲಾ ಕಡೆ ಲಾಸ್ ಆಯಿತು. ಸಾಲ ಜಾಸ್ತಿ ಆಯಿತು" ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ.
2003ರಲ್ಲಿ ನಾನು ಚಿತ್ರರಂಗಕ್ಕೆ ಬಂದೆ
"ನಾನು ವಾಲ್ಮೀಕಿ ಸಿನಿಮಾದ ಮೂಲಕ 2003ರಲ್ಲಿ ಚಿತ್ರರಂಗಕ್ಕೆ ಬಂದೆ. ಎಂಜಿನಿಯರಿಂಗ್ ಓದಿಕೊಂಡಿದ್ದ ನಾನು, ಸಿನಿಮಾದ ಮೇಲಿನ ಆಸಕ್ತಿಯಿಂದ ಇಲ್ಲಿಗೆ ಬಂದೆ. ಆರಂಭದಲ್ಲಿ ಆಸಿಸ್ಟೆಂಟ್ ಡೈರೆಕ್ಟರ್ ಕೆಲಸ ಮಾಡಿದೆ. ನಂತರ ಕೋ ಡೈರೆಕ್ಟರ್, ಸಿನಿಮಾ ನಿರ್ಮಾಣ, ವಿತರಣೆ ಕೊನೆಗೆ ದರ್ಶನ್ ಅವರ ಮ್ಯಾನೇಜರ್ ಆಗಿಯೂ ಕೆಲಸ ಮಾಡಿದೆ. ತೂಗುದೀಪ ಕುಟುಂಬದ ಅನ್ನ ತಿಂದಿದ್ದೇನೆ, ದರ್ಶನ್ ಅವರು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ತೀರಾ ಸಂಕಷ್ಟ ಎದುರಾದಾಗ ನನಗೆ 1 ಕೋಟಿ ರೂ. ಹಣ ನೀಡಿದ್ದಾರೆ" ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ.
ಸಾಯುವ ನಿರ್ಧಾರ ಮಾಡಿದ್ದ ಮಲ್ಲಿಕಾರ್ಜುನ್ ಕುಟುಂಬ
"ನನ್ನ ಸಾಲ ವಿಪರೀತ ಆಗಿಬಿಟ್ಟಿತ್ತು. ಸುಮಾರು 8 ಕೋಟಿ ರೂ. ಹಣವನ್ನು ನಾನು ವಾಪಸ್ ನೀಡಬೇಕಿತ್ತು. ಆಗ ಅದು ನನ್ನಿಂದ ಸಾಧ್ಯವಿರಲಿಲ್ಲ. ನನ್ನ ಹೆಂಡತಿಗೆ ಇದೆಲ್ಲಾ ಗೊತ್ತಿರಲಿಲ್ಲ. ನಂತರ ಇದೆಲ್ಲಾ ಗೊತ್ತಾದಾಗ ಇಷ್ಟೊಂದು ಸಾಲವನ್ನು ತೀರಿಸಲು ಸಾಧ್ಯವಿಲ್ಲ. ನಾವು ಸಾಯೋಣ ಎಂದು ಹಠ ಹಿಡಿದಳು. ನನ್ನ ಪುಟ್ಟ ಮಗುವನ್ನು ಜೊತೆಗಿಟ್ಟುಕೊಂಡು ಸಾಯೋಕೆ ನನಗೆ ಧೈರ್ಯ ಇರಲಿಲ್ಲ. ನನ್ನ ಒಬ್ನೇ ಮಗ ಎಲ್‌ಕೆಜಿ ಓದ್ತಿದ್ದ. ಮೂರು ದಿನ ನಾವು ಇದರ ಬಗ್ಗೆಯೇ ಯೋಚನೆ ಮಾಡ್ತಾ ಕಣ್ಣೀರಿಟ್ಟಿದ್ದೇವೆ. ಆ ವೇಳೆಗೆ ನನ್ನ ಹೆಂಡತಿ ತಮ್ಮನ ಮದುವೆ ಫಿಕ್ಸ್ ಆಯಿತು. ಅದು ಕೂಡ ಆರೇ ದಿನದಲ್ಲಿ ಮದುವೆ ನಿಶ್ಚಯವಾಗಿತ್ತು. ಇಂತಹ ಸಂದರ್ಭದಲ್ಲಿ ನಾವು ಸತ್ತರ ಆ ಮದುವೆ ನಿಲ್ಲುತ್ತದೆ, ಅವರಿಗೆ ತೊಂದರೆ ಕೊಡುವುದು ಬೇಡ ಎಂದು ನಾವು ಆತ್ಮಹತ್ಯೆಯನ್ನು ಆರು ದಿನ ಮುಂದಕ್ಕೆ ಹಾಕಿದೆವು" ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ.
2018ರ ಜುಲೈ 1ರಂದು ಊರು ಬಿಟ್ಟೆ
"ನಮ್ಮ ಬಾಮೈದನ ಮದುವೆಗಾಗಿ 2018ರ ಜುಲೈ 1ರಂದು ಸಂಜೆ ನಾವು ಬೆಂಗಳೂರಿನಿಂದ ಹೊರಟೆವು. ಎಲ್ಲವನ್ನು ಬಿಟ್ಟು ಹೆಂಡತಿ ಮತ್ತು ಮಗನನ್ನು ಕರೆದುಕೊಂಡು ಹೋದೆ. ಮದುವೆ ಮುಗಿಯುವ ಹೊತ್ತಿಗೆ ನಮ್ಮ ಹಿರಿಯರೊಬ್ಬರಿಗೆ ಇದೆಲ್ಲಾ ಗೊತ್ತಾಗಿ, ಅವರು ನಮ್ಮಿಂದ ಆಣೆ ಪ್ರಮಾಣ ಮಾಡಿಸಿಕೊಂಡರು. ಸಾವೊಂದೇ ಪರಿಹಾರ ಅಲ್ಲ ಎಂದು ಹೇಳಿದರು. ನಂತರ ಮದುವೆ ಎಲ್ಲಾ ಮುಗಿಸಿಕೊಂಡು, ಜುಲೈ 7ರಂದು ನಾನು ಊರಿನಿಂದ ಹೊರಟೆ. ನಾನು ಹೋಗುವಾಗ ನನ್ನ ಹೆಂಡತಿಗೂ ನಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂದು ಹೇಳದೇ ಅಲ್ಲಿಂದ ಹೊರಟುಹೋದೆ. ನಾನು ಯಾರಿಗೆಲ್ಲಾ ಹಣವನ್ನು ವಾಪಸ್ ನೀಡಬೇಕಿತ್ತೋ, ಅವರೆಲ್ಲರಿಗೂ ಮಧ್ಯರಾತ್ರಿ 1 ಗಂಟೆಗೆ ಮೆಸೇಜ್ ಕಳುಹಿಸಿ, ಮೊಬೈಲ್ ಆಫ್ ಮಾಡಿ, ಸಿಮ್‌ನ ಕುಂದಾಪುರದ ನದಿಯೊಂದಕ್ಕೆ ಎಸೆದೆ. ನಂತರ ಸವದತ್ತಿ ಎಲ್ಲಮ್ಮನ ದರ್ಶನ ಮಾಡಿಕೊಂಡು, ನನ್ನ ಪ್ರಯಾಣ ಆರಂಭಿಸಿದೆ" ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ.
ನೇಪಾಳದಲ್ಲಿದ್ದ ಮಲ್ಲಿಕಾರ್ಜುನ್
"ನನ್ನ ಸ್ನೇಹಿತನೊಬ್ಬನಿಗೆ ಕೇಳಿದ್ದಕ್ಕೆ 50 ಸಾವಿರ ರೂ. ಹಣ ನೀಡಿದ. ಇಂದು ಅವನು ಇಲ್ಲ, ತೀರಿಕೊಂಡಿದ್ದಾನೆ. ಎಲ್ಲಾ ಹಣವನ್ನ ಜೋಡಿಸಿಕೊಂಡು, ಸೊಲ್ಲಾಪುರ, ಕೊಲ್ಲಾಪುರ, ಕಾಶಿ, ನಾಂದೇಡ್.. ಹೀಗೆ ಎಲ್ಲಾ ಕಡೆ ತಿರುಗಾಡಿದೆ. ನನಗೆ ಹಿಂದಿ, ಇಂಗ್ಲಿಷ್ ಬರುತ್ತಿದ್ದರಿಂದ ನನಗೆ ಸಮಸ್ಯೆ ಆಗಲಿಲ್ಲ. ಹೋಟೆಲ್ ಕೆಲಸ, ಟೂರಿಸ್ಟ್ ಆಫೀಸ್, ರಿಯಲ್ ಎಸ್ಟೇಟ್, ರೆಸಾರ್ಟ್‌ಗಳಲ್ಲಿ ಕೆಲಸ ಮಾಡಿದೆ.. ಕೊನೆಗೆ ನೇಪಾಳದ ಜನಕ್‌ಪುರದಲ್ಲಿ ನನ್ನ ಸ್ನೇಹಿತನ ರೆಸಾರ್ಟ್‌ನಲ್ಲಿಯೂ ಇದ್ದೆ. ಹೀಗೆ ನಾನಾ ಕಡೆ ಕೆಲಸ ಮಾಡಿದ್ದೇನೆ. ನನ್ನ ಪತ್ನಿಗೆ ಪತ್ರ ಬರೆದು, ನಾನು ಒಂದು ಕಡೆ ಇರುವ ಬಗ್ಗೆ ಮಾಹಿತಿ ನೀಡಿದೆ. 7 ವರ್ಷ ನಾನು ಅಜ್ಞಾತವಾಸ ಅನುಭವಿಸಿದೆ. ನನ್ನ ಬಂಧು-ಬಳಗ, ಆತ್ಮೀಯ ಸ್ನೇಹಿತರನ್ನೆಲ್ಲಾ ನಾನು ಬಿಟ್ಟು ಹೋದೆ. ಅದು ತುಂಬಾ ಕಷ್ಟದ ನಿರ್ಧಾರವಾಗಿತ್ತು" ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ.
ಹೆತ್ತವರು ಸತ್ತರೂ ಬರಲು ಆಗಲಿಲ್ಲ
"ಈ ಮಧ್ಯೆ ನನ್ನ ನನ್ನ ಅಜ್ಜಿ, ತಂದೆ - ತಾಯಿ ತೀರಿಹೋದರು. ಅಂತ್ಯಕ್ರಿಯೆಗೆ ನನ್ನಿಂದ ಬರಲು ಸಾಧ್ಯವಾಗಲಿಲ್ಲ. ನನಗೆ ದುಡ್ಡು ಕೊಟ್ಟಿದ್ದ ಸ್ನೇಹಿತ ಪ್ರವೀಣ್ ಕೂಡ ತೀರಿಕೊಂಡ. ಆಗಲೂ ನನಗೆ ಬರಲಾಗಲಿಲ್ಲ. ಇದೆಲ್ಲಾ ನನಗೆ ಬಹಳ ನೋವು ನೀಡಿತು. ವಾಪಸ್ ಬರುವ ನಿರ್ಧಾರ ಮಾಡಿ, 2025ರಲ್ಲಿ ವಾಪಸ್ ಬಂದೆ. ಈ ಮಧ್ಯೆ ಟಿಬಿ ಸಮಸ್ಯೆ ಆಯಿತು, ಕಿವಿ, ಗಂಟಲು ಸಮಸ್ಯೆ ಬಂತು. ಕಿಡ್ನಿ ಸ್ಟೋನ್ ಆಗಿತ್ತು. ಸ್ಟ್ರೋಕ್ ಕೂಡ ಆಯ್ತು. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಂಡು ವಾಪಸ್ ಬಂದಿದ್ದೇನೆ. ನನಗೆ ಹಣ ನೀಡಿದವರಿಗೆ ವಾಪಸ್ ಕೊಡಬೇಕು ಎಂದುಕೊಂಡಿದ್ದೇನೆ. ನನಗೆ ಬದುಕಿನಲ್ಲಿ ಎರಡನೇ ಇನಿಂಗ್ಸ್ ಆರಂಭಿಸಲು ಎಲ್ಲರ ಸಹಕಾರ ಬೇಕಿದೆ" ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ.