ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತ್ರಿಷಾ ಕುರಿತು ಅಸಭ್ಯ ಹೇಳಿಕೆ ವಿವಾದ; ಉದಯನಿಧಿ ಸ್ಟಾಲಿನ್‌ಗೆ ರಿಲೀಫ್‌: ರಿಲೀಸ್‌ಗೆ ಮದ್ರಾಸ್‌ ಹೈಕೋರ್ಟ್‌ ಸೂಚನೆ

Udhayanidhi Stalin: ನಟಿ ತ್ರಿಷಾ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡಿದ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರಿಗೆ ಮದ್ರಾಸ್‌ ಹೈಕೋರ್ಟ್‌ ರಿಲೀಫ್‌ ನೀಡಿದೆ. ಅವರನ್ನು ವಿಚಾರಣೆ ನಡೆಸಿ ಬಿಡುಗಡೆ ಮಾಡುವಂತೆ ಮದ್ರಾಸ್‌ ಹೈಕೋರ್ಟ್‌ ಆದೇಶಿಸಿದೆ.

ಉದಯನಿಧಿ ಸ್ಟಾಲಿನ್‌ ರಿಲೀಸ್‌ಗೆ ಮದ್ರಾಸ್‌ ಹೈಕೋರ್ಟ್‌ ಸೂಚನೆ

ಉದಯನಿಧಿ ಸ್ಟಾಲಿನ್‌ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Aug 4, 2026 2:44 PM

ಚೆನ್ನೈ, ಆ. 4: ಬಹುಭಾಷಾ ನಟಿ ತ್ರಿಷಾ ಕೃಷ್ಣನ್‌ (Trisha Krishnan) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರಿಗೆ ಮದ್ರಾಸ್‌ ಹೈಕೋರ್ಟ್‌ (Madras High Court) ರಿಲೀಫ್‌ ನೀಡಿದೆ. ಅವರನ್ನು ವಿಚಾರಣೆ ನಡೆಸಿ ಬಿಡುಗಡೆ ಮಾಡುವಂತೆ ಕೋರ್ಟ್‌ ಸೂಚಿಸಿದೆ. ತಮಿಳುನಾಡು ಪೊಲೀಸರು ಮಂಗಳವಾರ (ಆಗಸ್ಟ್‌ 4) ಬೆಳಗ್ಗೆ ಅವರನ್ನು ಮನೆಯಿಂದಲೇ ಬಂಧಿಸಿ ಠಾಣೆಗೆ ಕರೆದೊಯ್ದಿದ್ದರು. ಸೋಮವಾರ ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಆಯೋಜಿಸಲಾಗಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಉದಯನಿಧಿ ಮುಖ್ಯಮಂತ್ರಿ ವಿಜಯ್‌ ವಿರುದ್ಧ ವಾಗ್ದಾಳಿ ನಡೆಸುವಾಗ ನಟಿ ತ್ರಿಷಾ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಟಿವಿಕೆ ಕಾರ್ಯಕರ್ತರು ದೂರು ನೀಡಿದ ಹಿನ್ನೆಲೆಯಲ್ಲಿ ಉದಯನಿಧಿ ಅವರನ್ನು ಬಂಧಿಸಲಾಗಿತ್ತು. ಈ ಬಂಧನವನ್ನು ಪ್ರಶ್ನಿಸಿ ಉದಯನಿಧಿ ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ವಿಚಾರಣೆ ನಡೆಸಿದ ಮದ್ರಾಸ್‌ ಹೈಕೋರ್ಟ್‌ ಉದಯನಿಧಿ ಅವರನ್ನು ಬಿಡುಗಡೆ ಮಾಡಲು ಸೂಚಿಸಿತು. ಜತಗೆ ತ್ರಿಷಾ ಕುರಿತು ಹೇಳಿದ್ದರೆನ್ನಲಾದ ಡಬಲ್‌ ಮೀನಿಂಗ್‌ ಹೇಳಿಕೆಯ ಬಗ್ಗೆ ಪ್ರಶ್ನಿಸುವಂತೆ ಪೊಲೀಸರಿಗೆ ಆದೇಶ ನೀಡಿತು. ಜತೆಗೆ ವಿಚಾರಣೆಗೆ ಸಹಕರಿಸುವಂತೆ ಉದಯನಿಧಿ ಅವರಿಗೆ ನಿರ್ದೇಶನ ನೀಡಿತು. ಉದಯನಿಧಿ ಅವರನ್ನು ಬಂಧಿಸಿದ ತಾಂಜಾವೂರು ಠಾಣೆಯ ಪೊಲೀಸರ ಪರವಾಗಿ ವಾದ ಮಂಡಿಸಿದ ವಕೀಲ ವಿಜಯ್‌ ನಾರಾಯಣ್‌, ಉದಯನಿಧಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ. ವಿಚಾರಣೆ ನಡೆಸಿ ಅವರನ್ನು ಬಿಡುಗಡೆ ಮಾಡುವುದಾಗಿ ಸ್ಪಷ್ಟಪಡಿಸಿದರು.

ಉದಯನಿಧಿ ಸ್ಟಾಲಿನ್ ರಿಲೀಸ್‌ಗೆ ಮದ್ರಾಸ್‌ ಹೈಕೋರ್ಟ್‌ ಸೂಚನೆ:



ಉದಯನಿಧಿ ಅವರನ್ನು ವಶಕ್ಕೆ ಪಡೆಯುತ್ತಿದ್ದಂತೆ ಡಿಎಂಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿತ್ತು. ಬಂಧನಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಉದಯನಿಧಿ, ʼʼತಾಂಜಾವೂರಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ನಾನು ಮುಖ್ಯಮಂತ್ರಿ ವಿಜಯ್‌ ಹೊರತುಪಡಿಸಿ ಬೇರೆ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಹಾಗಿದ್ದರೂ ನನ್ನನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನದ್ದು ಕೋರ್ಟ್‌ ನಿರ್ಧರಿಸುತ್ತದೆʼʼ ಎಂದಿದ್ದರು.

ನಟಿ ತ್ರಿಷಾ ಕುರಿತು ವಿವಾದಾತ್ಮಕ ಹೇಳಿಕೆ; ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಬಂಧನ

ಮಹಿಳೆಯರ ಘನತೆಗೆ ಧಕ್ಕೆ ತರುವ ಪದ ಬಳಕೆ ಸೇರಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಉದಯನಿಧಿ ಅವರನ್ನು ವಶಕ್ಕೆ ಪಡೆಯುತ್ತಿದ್ದಂತೆ ಡಿಎಂಕೆ ಕಾರ್ಯಕರ್ತರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ, ಟಿವಿಕೆ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇನ್ನು ಉದಯನಿಧಿ ಅವರ ಆಕ್ಷೇಪಾರ್ಹ ಹೇಳಿಕೆಯನ್ನು ಬಿಜೆಪಿ ಕೂಡ ಖಂಡಿಸಿದೆ.

ಉದಯನಿಧಿ ಅಲ್ಲ ಅಸಭ್ಯ ನಿಧಿ: ನಟಿ ತ್ರಿಷಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗೆ ಟಿವಿಕೆ ಆಕ್ರೋಶ

ಏನಿದು ಪ್ರಕರಣ?

ಸೋಮವಾರ ತಂಜಾವೂರಿನಲ್ಲಿ ನಡೆದ ಸಮಾವೇಶವೊಂದರಲ್ಲಿ ಕಾವೇರಿ ನೀರಿನ ವಿಚಾರವಾಗಿ ಮಾತನಾಡುತ್ತಿದ್ದಾಗ, ಉದಯನಿಧಿ ಸ್ಟಾಲಿನ್ ಸಿಎಂ ಜೋಸೆಫ್‌ ವಿಜಯ್‌ ಹಾಗೂ ನಟಿ ತ್ರಿಷಾ ಅವರ ಹೆಸರನ್ನು ಪ್ರಸ್ತಾಪಿಸಿ ಡಬಲ್‌ ಮೀನಿಂಗ್‌ ಬರುವ ರೀತಿಯಲ್ಲಿ ಮಾತನಾಡಿದ್ದರು. "ತಮಿಳುನಾಡಿಗೆ ಕಾವೇರಿ ನೀರಿನ ಒಂದು ಹನಿಯೂ ಸಿಗದಿದ್ದರೂ ಮುಖ್ಯಮಂತ್ರಿ ವಿಜಯ್ ಅವರಿಗೆ ಅದರ ಬಗ್ಗೆ ಯಾವುದೇ ಕಾಳಜಿಯಿಲ್ಲ" ಎಂದು ಹೇಳುವಾಗ ಸಭೆಯಲ್ಲಿದ್ದವರು ನಟಿ ತ್ರಿಷಾ ಅವರ ಹೆಸರನ್ನು ಕೂಗಿದ್ದರು. ಈ ವೇಳೆ ಸ್ಟಾಲಿನ್‌ ಅಸಭ್ಯವಾಗಿ ತ್ರಿಷಾ ಕುರಿತು ಮಾತನಾಡಿದ್ದರು ಎಂದು ಆರೋಪಿಸಿ ಟಿವಿಕೆ ದೂರು ನೀಡಿತ್ತು.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.