ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಾರು ಓವರ್‌ಟೇಕ್‌ ವಿಚಾರಕ್ಕೆ ಕಿರಿಕ್‌: ‘ದುನಿಯಾ’ ವಿಜಯ್ ಪುತ್ರನಿಂದ ವಿದ್ಯಾರ್ಥಿ ಅಪಹರಿಸಿ ಹಲ್ಲೆ ಆರೋಪ, ದೂರು ದಾಖಲು!

ನಟ ʻದುನಿಯಾʼ ವಿಜಯ್‌ ಪುತ್ರ ಸಾಮ್ರಾಟ್ ಕಾರು ಓವರ್‌ಟೇಕ್ ಮಾಡಿದ ವಿಚಾರಕ್ಕೆ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿ, ಚಲಿಸುವ ಕಾರಿನಲ್ಲಿ ಹಲ್ಲೆ ನಡೆಸಿರುವ ಆರೋಪ ಎದುರಿಸುತ್ತಿದ್ದಾರೆ. ‌ವಿದ್ಯಾರ್ಥಿ ಮನೀಶ್ ಗೌಡ ನೀಡಿದ ದೂರಿನನ್ವಯ ಕೆಂಗೇರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

‘ದುನಿಯಾ’ ವಿಜಯ್ ಪುತ್ರ ಸಾಮ್ರಾಟ್‌ನಿಂದ ವಿದ್ಯಾರ್ಥಿ ಮೇಲೆ ಹಲ್ಲೆ ಆರೋಪ!

-

Avinash GR
Avinash GR Sep 1, 2026 8:31 PM

ಕಾರು ಓವರ್‌ಟೇಕ್ ಮಾಡಿದ ಕ್ಷುಲ್ಲಕ ಕಾರಣಕ್ಕೆ ಸ್ಯಾಂಡಲ್‌ವುಡ್ ನಟ ‘ದುನಿಯಾ’ ವಿಜಯ್ ಅವರ ಪುತ್ರ ಸಾಮ್ರಾಟ್ ಹಾಗೂ ಆತನ ಸ್ನೇಹಿತರು ಸೇರಿ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿ, ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಮೈಸೂರು ರಸ್ತೆಯ ಆರ್‌ವಿ ವಿಶ್ವವಿದ್ಯಾಲಯದ ಬಳಿ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಬಿಬಿಎ ಪ್ರಥಮ ವರ್ಷದ ವಿದ್ಯಾರ್ಥಿ ಮನೀಶ್ ಗೌಡ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಾರಿನಲ್ಲಿ ಕೂರಿಸಿಕೊಂಡು ಹಲ್ಲೆ ಮಾಡಿದ ಆರೋಪ

ನಿನ್ನೆ (ಆ.31) ಸಂಜೆ ರಾಜರಾಜೇಶ್ವರಿ ನಗರದಲ್ಲಿ ಸಾಮ್ರಾಟ್ ಮತ್ತು ಆತನ ಸ್ನೇಹಿತರು ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಮನೀಶ್ ಹಾಗೂ ಆತನ ಸ್ನೇಹಿತರು ಐ20 ಕಾರಿನಲ್ಲಿ ತೆರಳಿ ಜಿಪ್ಸಿ ವಾಹನವನ್ನು ಓವರ್‌ಟೇಕ್ ಮಾಡಿದ್ದರು ಎನ್ನಲಾಗಿದೆ. ಈ ಸಣ್ಣ ವಿಚಾರಕ್ಕೆ ಎರಡೂ ಗುಂಪುಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಈ ಗಲಾಟೆಯ ಮುಂದುವರಿದ ಭಾಗವಾಗಿ ಇಂದು (ಸೆ.1) ಮಧ್ಯಾಹ್ನ ಆರ್‌ವಿ ಯೂನಿವರ್ಸಿಟಿ ಆವರಣದ ಹೊರಗಡೆ ನಿಂತಿದ್ದ ಮನೀಶ್‌ನನ್ನು, ಸಾಮ್ರಾಟ್ ಹಾಗೂ ಆತನ ಸಹಪಾಠಿಗಳು ಬಿಳಿ ಬಣ್ಣದ ಕಾರಿನಲ್ಲಿ ಬಂದು ಬಲವಂತವಾಗಿ ಎಳೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ದೂರಿನಲ್ಲಿ ಏನಿದೆ?

ಆರ್‌ವಿ ಕಾಲೇಜಿನಿಂದ ಮಾರ್ಟ್ ಬಳಿಯ ರಾಕ್ ಬಾರ್ ಹಿಂಬದಿಯ ಪಟ್ಟಣಗೆರೆ ಮುಖ್ಯರಸ್ತೆಗೆ ವಿದ್ಯಾರ್ಥಿಯನ್ನು ಕರೆದೊಯ್ದು, ಚಲಿಸುವ ಕಾರಿನಲ್ಲೇ ಮನೀಶ್ ಮೇಲೆ ಸಾಮ್ರಾಟ್ ಮತ್ತು ಆತನ ಸ್ನೇಹಿತರು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಆರೋಪಿಗಳು ಕೈಯಲ್ಲಿದ್ದ ಉಂಗುರಗಳಿಂದ ಮನೀಶ್ ಮುಖ, ಕೆನ್ನೆ, ತಲೆ ಹಾಗೂ ಎದೆಯ ಭಾಗಕ್ಕೆ ಮನಬಂದಂತೆ ಥಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಲ್ಲೆಯಿಂದ ಗಾಯಗೊಂಡಿದ್ದ ಮನೀಶ್‌ ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದಾನೆ.

Duniya Vijay: 'ಪ್ರೀತಿ ಅಪರೂಪ, ಕಳ್ಕೋಬೇಡಿ..'; 'ಸಿಟಿ ಲೈಟ್ಸ್‌' ಬೆಳಕಿನಲ್ಲಿ ಪ್ರೇಮಗೀತೆಗೆ ಹೆಜ್ಜೆ ಹಾಕಿದ ವಿನಯ್‌ ರಾಜ್‌ಕುಮಾರ್‌ - ಮೋನಿಷಾ!

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಕೆಂಗೇರಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಪಹರಣ ನಡೆದ ಜಾಗ ಹಾಗೂ ಹಲ್ಲೆ ನಡೆದ ಸ್ಥಳ ಯಾವ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ಪರಿಶೀಲಿಸುತ್ತಿರುವ ಪೊಲೀಸರು, ತನಿಖೆಯನ್ನು ಮುಂದುವರಿಸಿದ್ದಾರೆ. ದುನಿಯಾ ವಿಜಯ್ ತಮ್ಮ ಪುತ್ರ ಸಾಮ್ರಾಟ್‌ನನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಲು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ.