ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆ ಕಡೆ ಹೊರಟ ʻಜಯಂʼ ರವಿ; ಈಚೆಗಷ್ಟೇ ʻಹೆಂಡ್ತಿ ಕಿರುಕುಳ ಕೊಡ್ತಾಳೆʼ ಅಂತ ಕಣ್ಣೀರಿಟ್ಟಿದ್ದ ನಟ!
ತಮಿಳು ನಟ ‘ಜಯಂ’ ರವಿ ಪತ್ನಿ ಆರತಿ ಅವರೊಂದಿಗಿನ ದಾಂಪತ್ಯ ಬಿಕ್ಕಟ್ಟು ಮತ್ತು ಮಾನಸಿಕ ಕಿರುಕುಳದ ವಿವಾದದ ನಡುವೆ ಶಬರಿಮಲೆ ಅಯ್ಯಪ್ಪ ವ್ರತ ಕೈಗೊಂಡಿದ್ದಾರೆ. ಪತ್ನಿಯಿಂದಾಗಿ ನೆಮ್ಮದಿ ಕಳೆದುಕೊಂಡಿದ್ದು, ಮಕ್ಕಳನ್ನು ಭೇಟಿಯಾಗಲು ಬಿಡದಿರುವ ಕುರಿತು ರವಿ ಕಣ್ಣೀರಿಟ್ಟಿದ್ದರು.
-
ನಟ ರವಿ ಮೋಹನ್ (ʻಜಯಂʼ ರವಿ) ಅವರು ತಮ್ಮ ಪತ್ನಿ ಆರತಿ ಅವರಿಂದ ದೂರಾಗಿದ್ದು, ಇಬ್ಬರ ದಾಂಪತ್ಯ ಬದುಕಿನ ವಿವಾದ ಈಗ ಬಹಿರಂಗ ಚರ್ಚೆಯ ವಿಷಯವಾಗಿ ಬದಲಾಗಿದೆ. ಇತ್ತೀಚೆಗಷ್ಟೇ ಅತ್ಯಂತ ಭಾವುಕರಾಗಿ ಮಾಧ್ಯಮ ಗೋಷ್ಠಿ ನಡೆಸಿದ್ದ ರವಿ, ಇದೀಗ ಶಬರಿಮಲೆ ವ್ರತವನ್ನು ಕೈಗೊಂಡಿದ್ದಾರೆ. ಪ್ರಸ್ತುತ ಮಾಲೆ ಧರಿಸಿ, ಕಠಿಣ ಉಪವಾಸ ನಿಯಮಗಳನ್ನು ಪಾಲಿಸುವ ಮೂಲಕ ಶಬರಿಮಲೆ ವಾರ್ಷಿಕ ಯಾತ್ರೆಯ ವ್ರತದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.
ಈಚೆಗಷ್ಟೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ರವಿ, ತಮ್ಮ ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ತಾವು ನಟನೆಯಿಂದ ತಾತ್ಕಾಲಿಕ ವಿರಾಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. ಇದು ಅದರ ಮುನ್ಸೂಚನೆಯೇ ಎಂಬ ಪ್ರಶ್ನೆ ಕೇಳಿಬಂದಿದೆ.
ಈಚೆಗಷ್ಟೇ ಮಾಧ್ಯಮಗಳ ಜೊತೆ ಮಾತನಾಡುವಾಗ ತಮ್ಮ ಸಮಸ್ಯಾತ್ಮಕ ವೈವಾಹಿಕ ಜೀವನದ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದ ಅವರು, ತಮ್ಮ ಮಕ್ಕಳನ್ನು ಭೇಟಿಯಾಗಲು ನನಗೆ ಅವಕಾಶ ನೀಡುತ್ತಿಲ್ಲ. ಪತ್ನಿಯಿಂದಾಗಿ ಮಾನಸಿಕ ನೆಮ್ಮದಿ ಕಳೆದುಕೊಂಡಿರುವುದಾಗಿ ಹೇಳಿಕೊಂಡಿದ್ದರು ರವಿ. ದಾಂಪತ್ಯ ಜೀವನದಲ್ಲಿ ಹಣಕಾಸಿನ ವಿಷಯಗಳೂ ಸಹ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದ್ದವು. ಇಬ್ಬರಿಗೂ ಜಂಟಿ ಬ್ಯಾಂಕ್ ಖಾತೆ ಇತ್ತು ಮತ್ತು ಮದುವೆಯಾಗಿದ್ದ ಅವಧಿಯಲ್ಲಿ ನಾನು ಸಣ್ಣ ಮೊತ್ತದ ಹಣ ಡ್ರಾ ಮಾಡಿದರೂ ಅದಕ್ಕೆ ಪ್ರಶ್ನೆ ಎದುರಿಸಬೇಕಾಗುತ್ತಿತ್ತು ಎಂದು ರವಿ ಆರೋಪಿಸಿದ್ದರು.
Jayam Ravi: ಜಯಂ ರವಿ ಈಗ ರವಿ ಮೋಹನ್; ಹೆಸರು ಬದಲಿಸಿಕೊಂಡ ತಮಿಳು ನಟ
ಈ ಮಧ್ಯೆ ರವಿ ಅವರ ಈ ಹೇಳಿಕೆಗಳಿಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿವೆ. ಕೆಲವು ಪುರುಷರ ಹಕ್ಕುಗಳ ಪರ ಹೋರಾಟಗಾರರು ರವಿಗೆ ಬೆಂಬಲ ಸೂಚಿಸಿದ್ದು, ಅವರು ಮಾನಸಿಕ ಕಿರುಕುಳ ಮತ್ತು ಸಾರ್ವಜನಿಕ ನಿಂದನೆಗೆ ಒಳಗಾಗಿದ್ದಾರೆ ಎಂದು ವಾದಿಸಿದ್ದಾರೆ. ಆದರೆ, ಕೆಲವರು ರವಿ ಅವರ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದ್ದು, ಮುಖ್ಯವಾಗಿ ವೈವಾಹಿಕ ಜೀವನದಲ್ಲಿ ಹಣಕಾಸಿನ ನಿಯಂತ್ರಣವನ್ನು ಸ್ತ್ರೀವಾದಕ್ಕೆ ಲಿಂಕ್ ಮಾಡಿ ಅವರು ಆಡಿದ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಯಾವುದೇ ಸೂಕ್ತ ಪುರಾವೆಗಳಿಲ್ಲದೆ ಸಾರ್ವಜನಿಕವಾಗಿ ಇಂತಹ ಆರೋಪಗಳನ್ನು ಮಾಡಿರುವುದನ್ನು ಕೆಲವರು ಪ್ರಶ್ನಿಸಿದ್ದಾರೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಆರತಿ ರವಿ ಅವರು ಈಗಾಗಲೇ ಪ್ರತಿಕ್ರಿಯೆ ನೀಡಿದ್ದು, ಮತ್ತೊಂದೆಡೆ ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಅವರು ಬಹಿರಂಗವಾಗಿಯೇ ಆರತಿ ಪರವಾಗಿ ಧ್ವನಿ ಎತ್ತಿದ್ದಾರೆ. ಇದೀಗ ಇದೆಲ್ಲದರಿಂದ ಕೆಲ ಸಮಯ ದೂರ ಇರಬೇಕೆಂದು ನಿರ್ಧಾರ ಮಾಡಿದಂತಿರುವ ನಟ ಜಯಂ ರವಿ, ಅಯ್ಯಪ್ಪ ಮಾಲೆ ಧರಿಸಿದ್ದಾರೆ ಎನ್ನಲಾಗಿದೆ.
ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ ನಟ ರವಿ
Actor @iam_RaviMohan has begun his Sabarimala fasting by wearing the Maalai, marking a period of devotion, and spiritual reflection.#RaviMohan @ProRekha pic.twitter.com/6P3UkgWOPU
— Ashok Surya (@AshokSuryaOff03) May 20, 2026
ನಿರ್ಮಾಣ ಸಂಸ್ಥೆ ಆರಂಭಿಸಿದ್ದ ರವಿ
ಇನ್ನು ಸಿನಿಮಾಗಳ ವಿಷಯಕ್ಕೆ ಬಂದರೆ, ರವಿ ಅವರು ಕೊನೆಯದಾಗಿ ಸುಧಾ ಕೊಂಗರಾ ನಿರ್ದೇಶನದ, ಶಿವಕಾರ್ತಿಕೇಯನ್ ನಟನೆಯ 'ಪರಾಶಕ್ತಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರೊಂದಿಗೆ ಅವರು 'ಕರಾಟೆ ಬಾಬು', 'ಜೀನಿ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ 'ಆನ್ ಆರ್ಡಿನರಿ ಮ್ಯಾನ್' ಎಂಬ ಸಿನಿಮಾವನ್ನು ತಾವೇ ನಿರ್ದೇಶನ ಮಾಡಲು ರೆಡಿಯಾಗಿದ್ದಾರೆ. ಜೊತೆಗೆ ಸಿನಿಮಾ ನಿರ್ಮಾಣಕ್ಕಾಗಿಯೇ ಹೊಸದೊಂದು ಬ್ಯಾನರ್ ಆರಂಭಿಸಿದ್ದಾರೆ.